ಶೀಲಾ ಸಿ ಶೆಟ್ಟಿ, ಬೆಂಗಳೂರು
ಸಿಂಪಲ್ ಆಗಿದ್ದ ಹ್ಯಾಂಡ್‌ಲೂಮ್ ಡಿಸೈನರ್‌ವೇರ್‌ಗಳು ಇದೀಗ ಆಕರ್ಷಕ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಪರಿಸರ ಸ್ನೇಹಿ ಎನ್ನುವ ಕಾರಣದಿಂದಾಗಿ ಹಲವರು ಈ ಹೊಸ ವಿನ್ಯಾಸದ ಉಡುಪುಗಳನ್ನು ತಮ್ಮ ಡ್ರೆಸ್‌ಕೋಡ್‌ಗೆ ಸೇರಿಸಿಕೊಳ್ಳತೊಡಗಿದ್ದಾರೆ. ಕ್ಯಾಶುವಲ್ಸ್ ಹಾಗೂ ಫಾರ್ಮಲ್ಸ್ ಫ್ಯಾಷನಬಲ್ ಉಡುಪುಗಳ ಟ್ರೆಂಡಿ ಫ್ಯಾಷನ್ ನಡುವೆ ನಿಧಾನಗತಿಯಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿವೆ ಎನ್ನುತ್ತಾರೆ ಮಾಡೆಲ್ ಹ್ಯಾರಿ.
ಯುವತಿಯರ ಮನೋಭಿಲಾಷೆಗೆ ತಕ್ಕಂತೆ ಡಿಸೈನ್ಸ್
ಹ್ಯಾಂಡ್‌ಲೂಮ್ ಉಡುಪುಗಳು ಎಂದಾಕ್ಷಣಾ ಗ್ಲಾಮರಸ್‌ರಹಿತ ಉಡುಪುಗಳು ಎಂಬುದು ಎಲ್ಲರ ಮನಸ್ಸಿನಲ್ಲಿತ್ತು. ಆದರೆ, ಇದೀಗ ಇವುಗಳಿಗೂ ನ್ಯೂ ಲುಕ್ ಸಿಕ್ಕಿದೆ. ಗ್ಲಾಮರ್ ಲುಕ್ ನೀಡುವ ಸ್ಪೆಗೆಟಿ, ಸ್ಟ್ರಾಪ್ ಡ್ರೆಸ್, ಸ್ಟ್ರಾಪ್ ಫ್ರಾಕ್ ಹಾಗೂ ಮ್ಯಾಕ್ಸಿಗಳು ಬಿಡುಗಡೆಗೊಂಡಿವೆ. ಇನ್ನು ಎಲ್ಲಾ ವಯೋಮಾನದವರಿಗೆ ಮ್ಯಾಚ್ ಆಗುಂತಹ ಸಿಂಪಲ್ ಕುರ್ತಾ, ಮಿಡಿ, ಲಾಂಗ್ ಮ್ಯಾಕ್ಸಿ, ಸಲ್ವಾರ್ ಕಮೀಝ್‌ಗಳು ಎಂದಿನಂತೆ ಚಾಲ್ತಿಯಲ್ಲಿವೆ. ಅಷ್ಟೇಕೆ! ಇದೀಗ ಭಾರತದ ಬ್ರಾಂಡೆಡ್ ಡಿಸೈನರ್‌ಗಳ ಕೈಗಳಲ್ಲಿ ತಯಾರಾದ ಡಿಸೈನರ್ ಹ್ಯಾಂಡ್‌ಲೂಮ್ ಉಡುಪುಗಳು ವಿದೇಶಿಗರ ವಾರ್ಡ್ರೋಬ್‌ನಲ್ಲೂ ಸ್ಥಾನ ಗಿಟ್ಟಿಸಿಕೊಂಡಿವೆ.
ಪುರುಷರ ಕುರ್ತಾಗಳಿಗೆ ಹೆಚ್ಚು ಬೇಡಿಕೆ
ಇನ್ನು ಪುರುಷರ ಉಡುಪುಗಳಲ್ಲಿ ಹ್ಯಾಂಡ್‌ಲೂಮ್ ಫ್ಯಾಬ್ರಿಕ್‌ನಲ್ಲಿ ತಯಾರಾದ ಕುರ್ತಾಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಜುಬ್ಬಾ ಪೈಜಾಮಗಳಿಗಿಂತ ನಾನಾ ಬಗೆಯ ಕುರ್ತಾಗಳು ಮತ್ತಷ್ಟು ಹೊಸ ಲುಕ್‌ನೊಂದಿಗೆ ಪುರುಷರನ್ನು ಸೆಳೆಯುತ್ತಿವೆ. ಮೊದಲೆಲ್ಲಾ ಬೇಡಿಕೆಯಲ್ಲಿದ್ದ ಸಾದಾ ಕುರ್ತಾ ಸೈಡಿಗೆ ಸರಿದಿದ್ದು, ಇದೀಗ ಪ್ರಿಂಟ್ಸ್‌ನವು ಫ್ಯಾಷನ್‌ನಲ್ಲಿದೆ. ಜೀನ್ಸ್ ಮೇಲೆ ಧರಿಸಬಹುದಾದ ಶಾರ್ಟ್ ಕುರ್ತಾಗಳು ಯುವಕರನ್ನು ಹೆಚ್ಚು ಸವಾರಿ ಮಾಡತೊಡಗಿವೆ.
ಸೂಕ್ತ ನಿರ್ವಹಣೆ
ಯಾವುದೇ ಹ್ಯಾಂಡ್‌ಲೂಮ್ ಉಡುಪು ಕೊಂಡಲ್ಲಿ ಮೊದಲೇ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ. ಬಹಳಷ್ಟು ಹ್ಯಾಂಡ್‌ಲೂಮ್ ಉಡುಪುಗಳನ್ನು ಮೆಷಿನ್‌ನಲ್ಲಿ ವಾಶ್ ಮಾಡುವಂತಿರುವುದಿಲ್ಲ. ನೆರಳಲ್ಲಿ ಒಣಗಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.
ಹ್ಯಾಂಡ್‌ಲೂಮ್ ಪ್ರಿಯರಿಗೆ ಒಂದಿಷ್ಟು ಸಲಹೆ:
- ಸ್ಲಿಮ್ ಇರುವವರಿಗೆ ಎಲ್ಲಾ ಬಗೆಯ ಹ್ಯಾಂಡ್‌ಲೂಮ್ ಉಡುಪುಗಳು ಹೊಂದುತ್ತವೆ.
- ಪ್ಲಂಪಿಯಾಗಿರುವವರು ಆದಷ್ಟು ಸಿಲ್ಕ್ ಮಿಕ್ಸ್ ಆಗಿರುವ ಸಾಫ್ಟ್ ಫ್ಯಾಬ್ರಿಕ್ನದ್ದು ಆಯ್ಕೆ ಮಾಡಿ.
- ಇವು ಕಂಪ್ಲೀಟ್ ದೇಸಿ ಲುಕ್ ನೀಡುವುದು ಗ್ಯಾರಂಟಿ.
- ಜೀನ್ಸ್ ಮೇಲೂ ಹ್ಯಾಂಡ್‌ಲೂಮ್ ಫ್ಯಾಬ್ರಿಕ್ನ ಟಾಪ್ಗಳು ಚೆನ್ನಾಗಿ ಕಾಣುತ್ತವೆ.
- ಹ್ಯಾಂಡ್‌ಲೂಮ್ ಉಡುಪುಗಳಿಗೆ ದೇಸಿ ಸ್ಯಾಂಡಲ್ಸ್ ಮ್ಯಾಚ್ ಆಗುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Before buying a handloom saree