ಧೂಮಪಾನ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಧೂಮಪಾನ (smoking) ಮಾಡುವವರ ಪಕ್ಕ ಇದ್ದವರೂ ಧೂಮಪಾನ ಮಾಡಿದಂತೆಯೇ ಎಂಬುದೂ ತಿಳಿದಿರುವ ವಿಚಾರವೇ. ಧೂಮಪಾನಿಗಳು ಬಿಟ್ಟ ಹೊಗೆಯನ್ನು ಕುಡಿದ ಮಂದಿಗೂ ಧೂಮಪಾನಿಗಳಷ್ಟೇ ತೊಂದರೆ ಇರುವುದೂ ನಿಜವೇ. ಆದರೆ, ಇದರ ಬೂದಿಯ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಜೋಕೆ. ಯಾಕೆಂದರೆ, ಈ ಸಿಗರೇಟಿಗೆ ಸಂಬಂಧೇ ಇರದ ಮೂರನೇ ವ್ಯಕ್ತಿಗೂ ಸಾಕಷ್ಟು ತೊಂದರೆಗಳಿವೆ! ಅವರ್ಯಾರು ಗೊತ್ತಾ? ಧೂಮಪಾನಿಗಳು ಬಿಟ್ಟ ಹೊಗೆಯಲ್ಲಿ ಪುಟ್ಟ ಪುಟ್ಟ ಸುಟ್ಟ ಕಣಗಳೂ ಗಾಳಿಯಲ್ಲಿ ಹರಡಿ, ಬೆರೆತು ಇನ್ಯಾರದೋ ಮೈಮೇಲೆ, ಬಟ್ಟೆಯ ಮೇಲೆ, ಚರ್ಮದ ಮೇಲೆ ಬೀಳುತ್ತದಲ್ಲ! ಅವರಿಗೂ ಕೂಡಾ ಧೂಮಪಾನಿಗಳಂತೆಯೇ ತೊಂದರೆಯಿದೆಯಂತೆ.
ಬಹಳಷ್ಟು ಸಾರಿ, ನಮಗೆ ಧೂಮಪಾನದಂತಹ ದುಶ್ಚಟಗಳಿಲ್ಲದಿದ್ದರೂ, ನಮ್ಮ ಗೆಳೆಯರ ಜೊತೆ ಹರಟೆ ಹೊಡೆಯುವಾಗಲೋ, ಸಹೋದ್ಯೋಗಿ ಜೊತೆ ಕೆಲಸದ ನಡುವೆ ಸಂಜೆ ಹೊತ್ತು ಬ್ರೇಕ್ ತೆಗೆದುಕೊಂಡು ಪಕ್ಕದ ಕಿರಾಣಿ ಅಂಗಡಿಯಲ್ಲಿ ಒಂದು ಬೈಟೂ ಚಹಾ ತೆಗೆದುಕೊಂಡು ಮಾತನಾಡುತ್ತಿರು ಸಂದರ್ಭ ಪಕ್ಕದವರು ಸೇರುವ ಸಿಗರೇಟಿನ ಹೊಗೆ ಕುಡಿಯುವ ಮೂಲಕವೋ, ದಿನನಿತ್ಯ ಅಡ್ಡಾಡುವಾಗ ಅಪರಿಚಿತರು ಬಿಡುವ ಹೊಗೆಯನ್ನು ಬೇಡಬೇಡವೆಂದರೂ ಉಸಿರಾಡುತ್ತಲೋ ದಿನನಿತ್ಯ ಸಿಗರೇಟಿನ ಧೂಮ ನಮ್ಮ ಶ್ವಾಸಕೋಶದೊಳಕ್ಕೆ ಹೋಗುವುದಂತೂ ನಿಶ್ಚಿತ. ಹೀಗೆ ಪ್ರತಿನಿತ್ಯ ಹೊಗೆ ಕುಡಿದರೆ, ಸಿಗರೇಟು ಸೇದುವವನ ಹಾಗೆಯೇ ಪರೋಕ್ಷವಾಗಿ ಸೇದಿದವನಿಗೂ ತೊಂದರೆ ನಿಶ್ಚಿತ ಎಂಬುದೂ ಗೊತ್ತಿದೆ. ಆದರೆ, ಪಕ್ಕದಲ್ಲಿ ನಿಲ್ಲದೆಯೂ, ಯಾರೋ ಸೇದಿ ಬಿಟ್ಟ ಮೇಲೆ ಬಹಳ ಹೊತ್ತಿನ ತನಕ ವಾತಾವರಣದಲ್ಲಿ ತೇಲುತ್ತಾ ಇರುವ ಸಿಗರೇಟಿನ ಬೂದಿಯ ಕಣಗಳು ನಮ್ಮ ಮೈಮೇಲೆ ನಮಗೆ ಗೊತ್ತೇ ಆಗದಂತೆ ಬೀಳುವ ಮೂಲಕವೂ ತೊಂದರೆಗಳು ಬರಬಹುದು ಎಂಬುದೂ ಇದೀಗ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಈ ವಿಚಾರವನ್ನು ವೈದ್ಯರು ಪತ್ತೆಹಚ್ಚಿದ್ದು, ಧೂಮಪಾನಿಗಳಲ್ಲದಿದ್ದರೂ ಪರೋಕ್ಷವಾಗಿ ಧೂಮಪಾನ ಮಾಡುವವರ ಬಾಧಕಗಳ ವಿವರಗಳನ್ನು ಹೇಳಿದೆ. ಥರ್ಡ್ ಹ್ಯಾಂಡ್ ಸ್ಮೋಕ್ ಮಾಡುವ ವ್ಯಕ್ತಿ ಅಂದರೆ ತಾನು ಸೇದದಿದ್ದರೂ ಪರೋಕ್ಷವಾಗಿ ಧೂಮ ಕುಡಿಯುವ ಮೂಲಕ ಹಾಗೂ ಸಿಗರೇಟಿನ ತುದಿಯಿಂದ ಚಿಮ್ಮುವ ಬೂದಿ ವಾತಾವರಣದಲ್ಲಿ ಹರಡಿಕೊಂಡು ಅದು ಯಾರ ಮೈಮೇಲೆ, ಕೂದಲ ಮೇಲೆ ಬೀಳುತ್ತದೋ ಅಂಥವರು ಯಾವೆಲ್ಲ ತೊಂದರೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ ಎಂಬ ವಿವರಗಳನ್ನು ಈ ಸಂಶೋಧನಾ ವರದಿ ನೀಡಿದೆ. ಇದರ ಪ್ರಕಾರ ಸಿಗರೇಟಿನ ಬೂದಿಯ ಕಣವೂ ಕೂಡಾ ಹಲವು ಬಗೆಯ ಚರ್ಮರೋಗಗಳನ್ನೂ ತರಬಲ್ಲದು ಎಂಬ ಅಂಶ ಪತ್ತೆಯಾಗಿದೆ.
ಈ ಮೊದಲು ಈ ಸಂಶೋಧನೆಯನ್ನು ಪ್ರಾಣಿಗಳ ಮೇಲೆ ಮಾಡಲಾಗಿದ್ದು, ಇಂತಹ ಮಾಲಿನ್ಯ ಕಾರಕಗಳಿಂದ ಚರ್ಮರೋಗಗಳೂ ಬರುತ್ತವೆ ಎಂಬುದು ಪತ್ತೆಯಾಗಿತ್ತು. ಈ ಕಾರಣದಿಂದ ಇದನ್ನು ಎರಡನೇ ಹಂತವಾಗಿ ಮನುಷ್ಯರ ಮೇಲೂ ಪ್ರಯೋಗ ಮಾಡಲಾಗಿದ್ದು, ಒಂದು ಪುಟ್ಟ ಗುಂಪನ್ನು ಈ ಸಂಶೋಧನೆಗೆ ಬಳಸಲಾಗಿತ್ತು. ಆದರೆ, ಬೂದಿ ಕೂಡಲೇ ಯಾವುದೇ ಪರಿಣಾಮ ಬೀರದಿದ್ದರೂ ಇದರಿಂದ ಡರ್ಮಾಟೈಟಿಸ್, ಸೋರಿಯಾಸಿಸ್ ಹಾಗೂ ಇತರ ಚರ್ಮದ ಕಾಯಿಲೆಗಳಿಗೆ ಕಾರಣವಾಗುವ ಸಂಭವ ಹೆಚ್ಚು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಈ ಸಂಶೋಧನಾ ವರದಿ ಹೇಳಿದೆ.
ಸುಮಾರು ೨೨ರಿಂದ ೪೫ ವರ್ಷದೊಳಗಿನ ೧೦ ಮಂದಿಯ ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಸಿಗರೇಟಿನ ಬೂದಿಯ ಕಣಗಳಿರುವ ಬಟ್ಟೆಯನ್ನು ಹಾಕಿಕೊಳ್ಳಲು ಹೇಳಲಾಗಿತ್ತು. ಜೊತೆಗೆ ಬೆವರಿಳಿಸುವ ಸಂದರ್ಭ ಇವುಗಳು ನೇರವಾಗಿ ದೇಹಕ್ಕೆ ಸಂಪರ್ಕಕ್ಕೆ ಬರುವುದರಿಂದ, ಈ ಸಮೀಕ್ಷೆಗೆ ಒಳಪಟ್ಟವರನ್ನು ೧೫ ನಿಮಿಷ ಥ್ರೆಡ್‌ಮಿಲ್ ಬಳಸಲು ಹೇಳಲಾಗಿತ್ತು. ನಂತರ ನಡೆಸಿದ ಪರೀಕ್ಷೆಗಳ ಪ್ರಕಾರ, ಡಿಎನ್‌ಎಯಲ್ಲಿ ಆಕ್ಸಿಡೇಟಿವ್ ಡ್ಯಾಮೇಜ್‌ಗಳು ಕಂಡು ಬಂದಿದ್ದು, ರಕ್ತದ ಪ್ರೊಟೀನ್ ಮಟ್ಟದಲ್ಲೂ ವ್ಯತ್ಯಾಸ ಕಂಡುಬಂದಿದೆ. ಸಿಗರೇಟಿನ ಬೂದಿ ದೇಹಕ್ಕೆ ಮೆತ್ತಿಕೊಂಡ ೨೨ ಗಂಟೆಗಳ ನಂತರ ಈ ಬದಲಾವಣೆಗಳು ಕಂಡು ಬಂದಿವೆ.
ಇದನ್ನೂ ಓದಿ: Quit Smoking: ಧೂಮಪಾನದ ತೆಕ್ಕೆಯಿಂದ ಬಿಡಿಸಿಕೊಳ್ಳಲು 6 ಮಾರ್ಗಗಳು!