ರಾತ್ರಿ ಕೂತು ಕೆಲಸ ಮಾಡುವ ಬಹಳಷ್ಟು ಮಂದಿಯನ್ನು ಕಾಡುವ ಸಮಸ್ಯೆ ಎಂದರೆ ಏನಾದರೂ ತಿನ್ನಬೇಕೆಂಬ ಬಯಕೆ! ಊಟ ಮುಗಿದಿರುತ್ತದೆ. ಜಾಸ್ತಿ ಊಟ ಮಾಡಬಾರದೆಂಬ ಯೋಚನೆಯಲ್ಲಿ ಹೊಟ್ಟೆ ಹಗುರವಾಗಿ ತುಂಬಿರುತ್ತದೆ. ಮನೆಯ ಎಲ್ಲ ಕೆಲಸಗಳ್ನೂ ಒಂದೊಂದಾಗಿ ಮುಗಿಸಿ, ಅಡುಗೆ ಕೋಣೆಯನ್ನು ಓರಣವಾಗಿಟ್ಟು ಗ್ಯಾಸ್ ಆಫ್ ಮಾಡಿ ಬೆಡ್ ರೂಂನತ್ತ ಮುಖ ಮಾಡುವ ಮೊದಲು ಒಂದಿಷ್ಟು ಹೊತ್ತು ಕಚೇರಿಗೆ ಸಂಬಂಧಿಸಿ ಕೆಲಸವೋ ಅಥವಾ ಯಾವುದಾದರೊಂದು ಸಿನೆಮಾ, ಸೀರೀಸ್ ನೋಡುವ ಅಂತಲೋ ಟಿವಿಯೋ, ಮೊಬೈಲೋ ಆನ್ ಮಾಡಿದರೆ ಮುಗೀತು, ಕೆಲ ಹೊತ್ತಿನಲ್ಲಿ ಹೊಟ್ಟೆಗೇನಾದರೂ ಹಾಕೋಣ ಎಂದು ಮತ್ತೆ ಕಿಚನ್ ಹತ್ತಿರ ಬಂದು ಫ್ರಿಡ್ಜ್ ಬಾಗಿಲು ತೆರೆದಿರುತ್ತೀರಿ, ಅಥವಾ ಡಬ್ಬದಲ್ಲಿ ಕೈಹಾಕಿ ಏನೋ ಹುಡುಕಾಡುತ್ತಿರುತ್ತೀರಿ. ಛೇ, ನಾನ್ಯಾಕೆ ಹೀಗೆ ತಿನ್ನುತ್ತೇನೆ, ಬೇಡ ಅಂದರೂ ಏನಾದರೂ ಬಾಯಿಗೆ ಹಾಕೋಣ ಎನಿಸುವುದ್ಯಾಕೆ ಅಂತ ಗೊತ್ತಿದ್ದರೂ, ಬಾಯಾಡಿಸಿಯೇ ತೀರುತ್ತೀರಿ. ಈ ಸಮಸ್ಯೆಗೆ ಪರಿಹಾರವೇನು? ಹೀಗೆ ತಿನ್ನುವುದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ಇಲ್ಲಿ ನೋಡೋಣ.
೧. ರಾತ್ರಿ ಹೊತ್ತು ತಿನ್ನುವುದರಿಂದ ಆಗಬಹುದಾದ ಸಮಸ್ಯೆ ಎಂದರೆ ಹಾರ್ಮೋನ್ ವೈಪರೀತ್ಯ. ರಾತ್ರಿ ತಡವಾಗಿ ತಿನ್ನುವುದರಿಂದ ಹಂಗರ್ ಹಾರ್ಮೋನಿನ ಮಟ್ಟ್ ಏರುವುದಷ್ಟೇ ಅಲ್ಲ, ಲೆಪ್ಟಿನ್‌ನ ಮಟ್ಟ ಇಳಿಯುತ್ತದೆ. ಇದರಿಂದ ಮರುದಿನವೂ ತಡರಾತ್ರಿ ಹಸಿವಾದಂತೆ ಅನಿಸತೊಡಗುತ್ತದೆ. ಹೆಚ್ಚು ಹೆಚ್ಚು ತಿನ್ನುವುದನ್ನು ಇದು ಪ್ರೇರೇಪಿಸುತ್ತದೆ.
೨. ಸಂಶೋಧನೆಗಳ ಪ್ರಕಾರ, ತಡರಾತ್ರಿ ತಿನ್ನುವ ಮಂದಿಗೂ ಬೊಜ್ಜಿಗೂ ಹಾಗೂ ಜೀರ್ಣಕ್ರಿಯೆ ಸಿಂಡ್ರೋಮ್‌ಗೂ ಸಂಬಂಧವಿದೆಯಂತೆ. ಲೇಟಾಗಿ ತಿನ್ನುವುದರಿಂದ ಹೃದಯದ ಸಮಸ್ಯೆ, ಮಧುಮೇಹ, ಪಾರ್ಶ್ವವಾಯು ಇತ್ಯಾದಿಗಳ ಸಮಸ್ಯೆಗಳೂ ಒಂದೊಂದಾಗಿ ಉದ್ಭವಿಸುವ ಸಾಧ್ಯತೆ ಇದೆ. ಜೊತೆಗೆ ತಡರಾತ್ರಿ ಹೆಚ್ಚು ಕೊಬ್ಬಿನ ಹಾಗೂ ಕಡಿಮೆ ಪೋಷಕಾಂಶಯುಕ್ತ ಆಹಾರ ತಿನ್ನುವ ಸಾಧ್ಯತೆಯೇ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸಿಂಡ್ರೋಮ್ ಕೂಡಾ ಉಂಟಾಗಬಹುದು.
೩. ರಾತ್ರಿ ತಡವಾಗಿ ತಿನ್ನುವ ಅಭ್ಯಾಸ ಉಳ್ಳವರನ್ನು ಕಾಡಬಹುದಾದ ಇನ್ನೊಂದು ಸಮಸ್ಯೆ ಎಂದರೆ ಮಧುಮೇಹ. ರಕ್ತದಲ್ಲಿ ಸಕ್ಕರೆಯ ಅಂಶ ಏರುಪೇರಾಗುವ ಸಂಭವ ಇವರಲ್ಲಿ ಹೆಚ್ಚು.
೪. ನಿದ್ರಾಹೀನತೆ: ತಡವಾಗಿ ತಿಂದು ತಡವಾಗಿ ನಿದ್ರೆಗೆ ಜಾರುವುದರಿಂದ ಕಾಲಕ್ರಮೇಣ ಇದೇ ಸಮಸ್ಯೆಯಾಗಿ ತಲೆದೋರಬಹುದು. ಎಷ್ಟು ಹೊತ್ತಾದರೂ ನಿದ್ರೆ ಬರದಿರುವುದು,, ಪದೇ ಪದೇ ಎಚ್ಚರವಾಗುವುದು ಇಂಥವರನ್ನು ಕಾಡಬಹುದಾದ ಸಮಸ್ಯೆ.
ರಾತ್ರಿ ಮಲಗುವುದಕ್ಕಿಂತ ಬಹಳ ಮೊದಲೇ ಅಂದರೆ ಕನಿಷ್ಟ ಎರಡು ಗಂಟೆಗಳಾದರೂ ಮೊದಲು ಉಣ್ಣುವುದು ಒಳ್ಳೆಯದು ಎಂಬ ಸತ್ಯ ಗೊತ್ತಿದೆ ನಿಜ. ಆದರೆ, ಹಲವರಿಗೆ ಇಲ್ಲಿ ಸಮಸ್ಯೆಯಾಗುವುದು ರಾತ್ರಿ ಬೇಗ ಊಟ ಮಾಡಿದರೆ, ಹಸಿವೆಯಾಗಿ ನಿದ್ರೆ ಬರದಂತಾಗುತ್ತದೆ, ಇದಕ್ಕೇನು ಮಾಡುವುದು ಎಂಬುದು. ಇದಕ್ಕೂ ಇಲ್ಲಿ ಉಪಾಯವಿದೆ. ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ಅರಿತುಕೊಂಡು ಆ ಬಗ್ಗೆ ಶಿಸ್ತನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮ ಕೈಯಲ್ಲೇ ಇದೆ.
ಇದನ್ನೂ ಓದಿ: Health tips: ನಮ್ಮ ಭಾವನೆಗಳಿಗೂ ದೇಹದ ಅಂಗಗಳಿಗೂ ನೇರಾನೇರ ಸಂಬಂಧ!
೧. ರಾತ್ರಿ ಮಲಗುವ ಮುನ್ನ ಕಾಫಿ, ಚಹಾ, ಚಾಕೋಲೇಟು ಮತ್ತಿತರ ಕೆಫೀನ್ ಇರುವ ಪೇಯಗಳನ್ನು ಕುಡಿಯಬೇಡಿ. ಇದು ರಾತ್ರಿ ಬೇಗ ನಿದ್ದೆ ಮಾಡಲು ಬಿಡುವುದಿಲ್ಲ.
೨. ಮಸಾಲೆಯುಕ್ತ ತಿನಿಸುಗಳನ್ನು ರಾತ್ರಿ ತಿನ್ನಬೇಡಿ. ಇದು ಎದೆಯುರಿಯನ್ನು ಹೆಚ್ಚು ಮಾಡುತ್ತದೆ. ಇದು ನಿಮ್ಮ ನಿದ್ರೆಯನ್ನು ಕಸಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.
೩. ಅತ್ಯಂತ ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಹಾಗೂ ಸಕ್ಕರೆ ಹೆಚ್ಚಿರುವ ತಿನಿಸನ್ನು ರಾತ್ರಿಯ ಊಟದ ಜೊತೆ ತಿನ್ನಬೇಡಿ. ಬ್ರೆಡ್, ಪಾಸ್ತಾ, ಸಂಸ್ಕರಿಸಿದ ಆಹಾರ ಇತ್ಯಾದಿಗಳನ್ನು ರಾತ್ರಿ ತಿನ್ನಬೇಡಿ.
೪. ರಾತ್ರಿ ಮಲಗುವ ಮುನ್ನ ಮದ್ಯಪಾನ ಮಾಡುವ ಅಭ್ಯಾಸವಿದ್ದರೆ ಅದು ಖಂಡಿತಾ ಒಳ್ಳೆಯದಲ್ಲ. ಇದೂ ಕೂಡಾ ನಿದ್ದೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!