Site icon Vistara News

Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

walking

walking

ಬೆಂಗಳೂರು: ಪ್ರತಿದಿನ 20-25 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ನಡೆಸಿದರೆ, ದಿಢೀರ್‌ ಎಂದು ಕಾಣಿಸಿಕೊಳ್ಳುವ ಹೃದಯಾಘಾತದಿಂದ ಪಾರಾಗಿ ಅಕಾಲಿಕ ಮರಣವನ್ನು ತಪ್ಪಿಸಬಹುದು ಎಂದು ಇತ್ತೀಚೆಗಿನ ಸಂಶೋಧನೆಯೊಂದು ತಿಳಿಸಿದೆ. ಜೀವನಶೈಲಿಯ ಬಗ್ಗೆ ಅಧ್ಯಯನ ನಡೆಸಿದ ಬ್ರಿಟನ್‌ನ ಸಂಸ್ಥೆಯೊಂದು ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಯಸ್ಕರು ಸಾಮಾನ್ಯವಾಗಿ ಉದ್ಯೋಗದ ವೇಳೆ 9ರಿಂದ 10 ಗಂಟೆಗಳ ಕಾಲ ಕೂತಿರುತ್ತಾರೆ. ಈ ರೀತಿಯ ಜಡ ಜೀವನ ಶೈಲಿ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅದು ತಿಳಿಸಿದೆ (Health Tips).

ದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಎದುರಾಗುವ ಅಪಾಯವನ್ನು ಸಂಶೋಧನೆ ತಿಳಿಸುತ್ತದೆ. ದೈಹಿಕ ಚಟುವಟಿಕೆಯ ಪ್ರಯೋಜನಗಳ ಬಗ್ಗೆ ಈ ಹಿಂದೆ ಪ್ರಕಟವಾದ ಹೆಚ್ಚಿನ ಸಂಶೋಧನೆಗಳು ಒಟ್ಟುಗೂಡಿಸಿದ ಡೇಟಾವನ್ನು ವಿಶ್ಲೇಷಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ. ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಯಾವ ರೀತಿಯ ದೈಹಿಕ ಚಟುವಟಿಕೆ ನಡೆಸಬಹುದು ಎನ್ನುವುದರ ಬಗ್ಗೆ ಅಧ್ಯಯನ ಗಮನ ಹರಿಸಿದೆ. ಕುಳಿತುಕೊಳ್ಳುವ ಸಮಯವು ಯಾವ ರೀತಿ ಅಪಾಯಕಾರಿ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ವೈಯಕ್ತಿಕ ಡೇಟಾವನ್ನು ಸಂಗ್ರಹಿಸಿದ್ದಾರೆ.

ನಾರ್ವೇಜಿಯನ್ ಟ್ರಾಮ್ಸೊ ಅಧ್ಯಯನ, 2012-19ರ ಸ್ವೀಡಿಷ್ ಹೆಲ್ತಿ ಏಜಿಂಗ್ ಇನಿಶಿಯೇಟಿವ್ (HAI), 2008-09ರ ನಾರ್ವೇಜಿಯನ್ ರಾಷ್ಟ್ರೀಯ ದೈಹಿಕ ಚಟುವಟಿಕೆ ಸಮೀಕ್ಷೆ (NNPAS) ಮತ್ತು 2003-06ರ ಯುಎಸ್ ನ್ಯಾಷನಲ್ ಹೆಲ್ತ್ ಅಂಡ್ ನ್ಯೂಟ್ರಿಷನ್ ಎಕ್ಸಾಮಿನೇಷನ್ ಸರ್ವೇ (NHANES)ಗಳ ವರದಿ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಕನಿಷ್ಠ 50 ವರ್ಷ ವಯಸ್ಸಿನ 12,000 ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅವರು ತಿಂಗಳಿಗೆ ಕನಿಷ್ಠ 4 ದಿನಗಳ 10 ದೈನಂದಿನ ಗಂಟೆಗಳ ಚಟುವಟಿಕೆ ಹೊಂದಿದ್ದರು. ಸುಮಾರು 2 ವರ್ಷಗಳ ಕಾಲ ಅವರ ದಿನಚರಿಯನ್ನು ಗಮನಿಸಲಾಯಿತು. ಅವರ ಲಿಂಗ, ಶೈಕ್ಷಣಿಕ ಮಟ್ಟ, ತೂಕ, ಎತ್ತರ, ಧೂಮಪಾನದ ಇತಿಹಾಸ, ಆಲ್ಕೋಹಾಲ್ ಸೇವನೆ, ಅವರಿಗೆ ಪ್ರಸ್ತುತ ಅಥವಾ ಹಿಂದಿನ ಹೃದಯ ರಕ್ತನಾಳದ ಕಾಯಿಲೆಯ ಇತಿಹಾಸ, ಕ್ಯಾನ್ಸರ್ ಅಥವಾ ಮಧುಮೇಹವಿದೆಯೇ ಎನ್ನುವ ಅಂಶವನ್ನೂ ಅಧ್ಯಯನದಲ್ಲಿ ಅಳವಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: Oral Health: ಬಾಯಿ ಸ್ವಚ್ಛವಾಗಿದ್ದರೆ ಸಾಕು, ಅನಾರೋಗ್ಯಕ್ಕೆ ಬ್ರೇಕು!

5,943 ಜನರು ಪ್ರತಿದಿನ 10.5 ಗಂಟೆಗಳಿಗಿಂತ ಕಡಿಮೆ ಕುಳಿತುಕೊಂಡರೆ, 6,042 ಜನರು 10.5 ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ತಿಳಿದುಬಂದಿದೆ. ಆಕ್ಟಿವಿಟಿ ಟ್ರ್ಯಾಕ್ಟರ್‌ ಡೇಟಾದ ವಿಶ್ಲೇಷಣೆಯು, ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಚಟುವಟಿಕೆ ರಹಿತರಾಗಿರುವವರಿಗೆ ಸಾವಿನ ಅಪಾಯ ಶೇ. 38ಕ್ಕಿಂತ ಹೆಚ್ಚು ಎಂದಿದೆ. ಅಂದರೆ ಪ್ರತಿದಿನ 22 ನಿಮಿಷಗಳಿಗಿಂತ ಕಡಿಮೆ ಮಧ್ಯಮ ಮತ್ತು ತೀವ್ರವಾದ ದೈಹಿಕ ಚಟುವಟಿಕೆಯನ್ನು ಮಾಡುವವರಿಗೆ ಅಪಾಯ ಎದುರಾಗುವ ಸಾಧ್ಯತೆ ಅಧಿಕ. ಪ್ರತಿದಿನ 22 ನಿಮಿಷಗಳಿಗಿಂತ ಹೆಚ್ಚು ಮಧ್ಯಮ ಅಥವಾ ತೀವ್ರವಾದ ದೈಹಿಕ ಚಟುವಟಿಕೆ ನಡೆಸುವವರಿಗೆ ಸಾವಿನ ಅಪಾಯ ಕಡಿಮೆ ಎಂದು ಅಧ್ಯಯನ ತಿಳಿಸಿದೆ. ಆದರೆ ಆಹಾರ ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳಂತಹ ಪ್ರಭಾವಶಾಲಿ ಅಂಶಗಳನ್ನು ಅಧ್ಯಯನ ಗಣನೆಗೆ ತೆಗೆದುಕೊಂಡಿಲ್ಲ.

ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆಯಿಂದ ಮರಣದ ಅಪಾಯವನ್ನು ತಪ್ಪಿಸಬಹುದು. ಅದರಲ್ಲೂ ಪ್ರತಿ ದಿನ 20 ನಿಮಿಷಗಳಷ್ಟು ಚಟುವಟಿಕೆ ನಡೆಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಸಂಶೋಧನೆ ನಿಗಮನಕ್ಕೆ ಬಂದಿದೆ.

Exit mobile version