Site icon Vistara News

Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

wash hand

ಕೋವಿಡ್‌ 19 ಪ್ರಪಂಚದಾದ್ಯಂತ ಹರಡಿದ ಮೇಲೆ ಜಗತ್ತಿನಲ್ಲಿ ಶುಚಿತ್ವದ ಬಗ್ಗೆ ಹೆಚ್ಚು ಅರಿವು ಮೂಡಿದೆ. ಜನ ಸಾಮಾನ್ಯರು ಕೈಗಳನ್ನು ತಿಕ್ಕಿ ತಿಕ್ಕಿ ತೊಳೆಯುವ (washing hands) ಅಭ್ಯಾಸ, ಸೋಪು, ಹ್ಯಾಂಡ್‌ವಾಷ್‌ಗಳ ಬಳಕೆ, ಮುಖ್ಯವಾಗಿ ಸ್ಯಾನಿಟೈಸರ್‌ಗಳನ್ನು (sanitizers) ಬಳಸುವ ಪ್ರಮಾಣ ಬಹಳವೇ ಹೆಚ್ಚಾಗಿತ್ತು. ಈಗಲೂ ಹಲವೆಡೆ ಅದು ಮುಂದುವರಿದಿದ್ದರೂ, ತಕ್ಕಮಟ್ಟಿಗೆ ಸ್ಯಾನಿಟೈಸರ್‌ಗಳ ಬಳಕೆ ಮತ್ತೆ ಕಡಿಮೆಯಾಗಿದ್ದು, ಜನರು ಯಥಾ ಸ್ಥಿತಿಗೆ ಮರಳಿದ್ದಾರೆ. ಯಾವುದೂ ಅತಿಯಾಗಬಾರದು ಎಂಬ ಮಾತಿದೆ. ಅತಿಯಾದ ಶುಚಿತ್ವವೂ (hand hygiene practice) ಕೂಡಾ ಕೆಲವೊಮ್ಮೆ ಸಮಸ್ಯೆಯನ್ನೇ ತಂದೊಡ್ಡುತ್ತದೆ. ಕೈಗಳನ್ನು ಅತಿಯಾಗಿ ತೊಳೆಯುವುದರಿಂದಲೂ ಕೂಡಾ ಚರ್ಮದ ಸಮಸ್ಯೆಗಳು (Skin diseases) ಬರುವ ಅಪಾಯವಿದೆ ಎಂಬ ಸಂಗತಿಯೂ ಅಧ್ಯಯನಗಳಿಂದ ತಿಳಿದುಬಂದಿವೆ.

ಅಧ್ಯಯನವೊಂದರ ಪ್ರಕಾರ, ಅತಿಯಾಗಿ ಯಾರು ತಮ್ಮ ಕೈಗಳನ್ನು ತೊಳೆಯುತ್ತಲೇ ಇರುತ್ತಾರೋ ಅಂಥವರ ಕೈಗಳು ಅತಿಯಾಗಿ ಒಣಗುತ್ತವೆ. ಚರ್ಮಕ್ಕೆ ಅಗತ್ಯವಾಗಿ ಬೇಕಾದ ತೇವಾಂಶ, ಎಣ್ಣೆಯಂಶವೂ ಕೈಯಿಂದ ತೊಳೆದು ಹೋಗಲ್ಪಟ್ಟು ಚರ್ಮ ಒಡೆಯುತ್ತದೆ. ಬಿರುಕು ಬಿರುಕಾಗುತ್ತದೆ. ಒಣ ಚರ್ಮ ಪಕಳೆಗಳಂತೆ ಎದ್ದು ಬರುವಂತಹ ಸಮಸ್ಯೆಗಳೂ ಬರಬಹುದು ಎನ್ನಲಾಗಿದೆ. ತುರಿಕೆ, ಕಜ್ಜಿ, ಚರ್ಮದಲ್ಲಿ ಅಲ್ಲಲ್ಲಿ ಬಣ್ಣ ಬದಲಾಗುವುದು, ಹಾಗೂ ಎಕ್ಸಿಮಾದಂತಹ ಚರ್ಮದ ತೊಂದರೆಗಳೂ ಬರುವ ಸಂಭವ ಇವೆ ಎಂದು ಚರ್ಮವೈದ್ಯರು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.

ಎಕ್ಸಿಮಾ (Eczema) ಎಂಬ ಚರ್ಮದ ಸಮಸ್ಯೆ ಬಹಳಷ್ಟು ಮಂದಿಯನ್ನು ಈಗಾಗಲೇ ಕಾಡುತ್ತಿರುವ ಬಹಳ ಸಾರಿ ಮಾರಣಾಂತಿಕವೂ ಆಗಬಲ್ಲ ಸಮಸ್ಯೆ. ಚರ್ಮದಲ್ಲಿ ಕೆಂಪಗಾಗಿ, ಕಜ್ಜಿ ತುರಿಕೆಗಳಾಗಿ ಅಲ್ಲಲ್ಲಿ ದದ್ದುಗಳಾದಂತೆ ಚರ್ಮ ಪಕಳೆ ಪಕಳೆಯಾಗಿ ಎದ್ದು ಹೋಗುವ ಈ ಕಾಯಿಲೆ, ಒಮ್ಮೆ ಬಂದರೆ ಜೀವನಪೂರ್ತಿ ಕಾಡುತ್ತದೆ. ತುರಿಕೆ, ಅಲರ್ಜಿ ಇದರಲ್ಲಿ ಹೆಚ್ಚು. ಹಲವು ಆಹಾರ ಪದಾರ್ಥಗಳೂ ಕೂಡಾ ಇದಕ್ಕೆ ಆಗಿ ಬರುವುದಿಲ್ಲ. ಶಿಸ್ತಾಗಿ ಚರ್ಮದ ರಕ್ಷಣೆಯನ್ನು ಮಾಡಬೇಕಾಗುವುದರಿಂದ ಈ ಸಮಸ್ಯೆಯನ್ನು ಹೊಂದಿರುವ ಮಂದಿ ಅನುಭವಿಸುವ ಕಷ್ಟ ಒಂದೆರಡಲ್ಲ.

ಕೈ ತೊಳೆಯುವುದು ಹೇಗೆ?: ಹಾಗಾದರೆ, ಕೈ ತೊಳೆಯುವುದೂ ಕೂಡಾ ತಪ್ಪೇ ಎಂಬ ಸಂದೇಹ ನಿಮಗೆ ಬರಬಹುದು. ನಿಜ ಕೂಡಾ. ನಿತ್ಯವೂ ಏನಾದರೊಂದು ಕೆಲಸ ಮಾಡಿದ ಮೇಲೆ, ಅಥವಾ, ಎಲ್ಲೋ ಹೊರಗೆ ಹೋಗಿ ಬಂದು, ಅಥವಾ ಪ್ರತಿಯೊಂದು ಕೆಲಸದ ನಂತರ ದಿನಕ್ಕೆ ಹತ್ತಾರು ಬಾರಿ ಕೈ ತೊಳೆಯುವ ಅಭ್ಯಾಸ ನಮ್ಮಲ್ಲನೇಕರಿಗೆ ಇದೆ. ಆದರೆ, ಕೈ ತೊಳೆಯುವುದರಲ್ಲೂ ಸಾಕಷ್ಟು ಬಗೆಗಳಿವೆ. ನೀರಿಗೆ ಕೈಯೊಡ್ಡಿ ತೊಳೆದುಕೊಳ್ಳುವುದು, ಬೆಚ್ಚಗಿನ ನೀರಿನಲ್ಲಿ ಕೈತೊಳೆಯುವುದು, ಸೋಪು ಹಾಕಿ ತಿಕ್ಕಿ ತಿಕ್ಕಿ ಕೈತೊಳೆಯುವುದು, ಅಥವಾ ಸ್ಯಾನಿಟೈಸರ್‌ ಮಾಡಿಕೊಳ್ಳುವುದು ಹೀಗೆ ತೊಳೆಯುವುದರಲ್ಲೂ ಹಲವು ವಿಧ. ಆದರೆ, ಪ್ರತಿ ಬಾರಿಯೂ ಒಂದೇ ಬಗೆಯಲ್ಲಿ ತೊಳೆಯಬೇಕಿಲ್ಲ. ಜೊತೆಗೆ ಆದಷ್ಟೂ ಬಹಳ ಮೆದುವಾದ ಸೋಪು ಅಥವಾ ಹ್ಯಾಂಡ್‌ವಾಷ್‌ ಬಳಸಿ. ಬಿಸಿಬಿಸಿಯಾದ ನೀರನಲ್ಲಿ ಕೈ ತೊಳೆಯಬೇಡಿ. ಉಗುರು ಬೆಚ್ಚಗಿನ ಅಥವಾ ತಣ್ಣಿರಿನಲ್ಲಿ ಕೈತೊಳೆಯಿರಿ. ಪ್ರತಿ ಬಾರಿಯೂ, ಅಗತ್ಯವಿಲ್ಲದಿದ್ದರೆ, ಸೋಪು ಬಳಸಬೇಡಿ. ಕೈಗಳನ್ನು ಒಂದಕ್ಕೊಂದು ರಪರಪನೆ ಗಡುಸಾಗಿ ಉಜ್ಜಿಕೊಂಡು ಕೈತೊಳೆಯಬೇಡಿ. ಬೆರಳುಗಳನ್ನು ಬಳಸಿಕೊಂಡು ಸಂದಿಗಳ ಮೂಲಕ ಮೆದುವಾಗಿ ಉಜ್ಜಿಕೊಂಡು ಕೈತೊಳೆದರೆ ಸಾಕು. ನೀರಿನಿಂದ ಚೆನ್ನಾಗಿ ಸೋಪಿನ ಅಂಶಗಳು ಉಳಿಯದಂತೆ ತೊಳೆದುಕೊಂಡು ಮೆತ್ತಗಿನ ಬಟ್ಟೆಯಲ್ಲಿ ಕೈಗಳನ್ನು ಹಗುರವಾಗಿ ಉಜ್ಜಿಕೊಳ್ಳಿ.

ಎಕ್ಸಿಮಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎಕ್ಸಿಮಾ ಸುಲಭವಾಗಿ ಹೋಗದಾದರೂ, ಅದು ಹೆಚ್ಚಾಗದಂತೆ, ಯಾವ ತೊಂದರೆಯನ್ನೂ ಮಾಡದಂತೆ ಅದನ್ನು ಸಮತೋಲನದಲ್ಲಿ ಇಡಲು ಸಾಧ್ಯವಿದೆ. ಸರಿಯಾಗಿ ವೈದ್ಯರು ಕೊಡುವ ಮುಲಾಮುಗಳನ್ನು ಹಚ್ಚುತ್ತಾ, ಎಣ್ಣೆತಿಂಡಿಗಳಿಂದ ದೂರವಿದ್ದುಕೊಂಡು ಸಮತೋಲನದ ಆಹಾರಗಳನ್ನು ತಿನ್ನುತ್ತಾ ಇದರ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಕೇವಲ ಎಕ್ಸಿಮಾ ಮಾತ್ರವಲ್ಲ, ಯಾವುದೇ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!

Exit mobile version