Site icon Vistara News

Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

nonstick utensils

ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದರ ಅರಿವಿದ್ದರೂ ಇಂದು ಬಹಳಷ್ಟು ಮಂದಿಯ ಮನೆಗಳಲ್ಲಿ ನಾನ್‌ಸ್ಟಿಕ್‌ ಪಾತ್ರೆಗಳು ಬಿಡಿಸಲಾಗದ ಬಂಧವಾಗಿ ಮಾರ್ಪಟ್ಟಿದೆ. ಎಣ್ಣೆ ಕಡಿಮೆ ಬಳಸಬೇಕೆಂದೋ, ಬೇಗ ಅಡುಗೆ ಆಗುತ್ತದೆ ಎಂದೋ, ಹೋಟೇಲಿನಂತೆ ತೆಳ್ಳನೆಯ ಕ್ರಿಸ್ಪೀ ದೋಸೆ ಮಾಡಬಹುದೆಂದೋ, ಪಡ್ಡು ಅದ್ಭುತವಾಗಿ ಮಾಡಬಹುದು ಎಂದೋ ನಾನಾ ಕಾರಣಗಳಿಗೆ ನಾನ್‌ಸ್ಟಿಕ್‌ ತವಾ ಸೇರಿದಂತೆ ಅನೇಕ ಪಾತ್ರೆಗಳು ಅಡುಗೆ ಮನೆಯ ಸಾಮಾನ್ಯ ಅಂಶವಾಗಿದೆ. ಆದರೆ, ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸಿದರೆ ಮಾತ್ರ ಸಾಲದು, ಅದನ್ನು ಹೇಗೆ ಬಳಸಬೇಕು ಹೇಗೆ, ತೊಳೆಯಬೇಕು, ಹೇಗೆ ಉಳಿಸಿಕೊಳ್ಳಬೇಕು ಎಂಬಿತ್ಯಾದಿಗಳ ಅರಿವೂ ಇರಬೇಕು. ದುಬಾರಿ ವೆಚ್ಚದ ನಾನ್‌ಸ್ಟಿಕ್‌ ಪಾತ್ರೆಗಳನ್ನು ತಂದು ಹೇಗೆಂದ ಹಾಗೆ ಬಳಸಿ, ಗರಗರನೆ ತಿಕ್ಕಿ ತಿಕ್ಕಿ ತೊಳೆದರೆ ಕೊಟ್ಟ ದುಡ್ಡೂ ದಂಡ, ಅಷ್ಟೇ ಅಲ್ಲ, ನಾನ್‌ಸ್ಟಿಕ್‌ ಪಾತ್ರೆಗಳ ಮೇಲಿನ ಪದರ ಮಾಸಿದರೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾದರೆ, ನಾನ್‌ಸ್ಟಿಕ್‌ ಪಾತ್ರೆಗಳು ಹೆಚ್ಚು ಕಾಲ ಉಳಿಯುವಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನೋಡೋಣ.

1. ನಾನ್‌ಸ್ಟಿಕ್‌ ತವಾ ಅಥವಾ ಪಾತ್ರೆಗೆ ಎಣ್ಣೆಯ ಅಗತ್ಯವಿಲ್ಲ ನಿಜ. ಆದರೆ, ಕೊಂಚ ಎಣ್ಣೆಯನ್ನು ತವಾಕ್ಕೆ ದೋಸೆ ಹುಯ್ಯುವ ಮೊದಲೇ ಮೆತ್ತಗೆ ಲೇಪಿಸಿ, ಟಿಶ್ಯೂ ಪೇಪರ್‌ನಿಂದ ಒರೆಸಿ ತೆಗೆಯುವುದು ಒಳ್ಳೆಯದು. ಆಹಾರವನ್ನು ನೇರವಾಗಿ ಇಂತಹ ತವಾ ಅಥವಾ ಪಾತ್ರೆಯಲ್ಲಿ ಬೇಯಿಸಿದಾಗ ಅದರ ನಾನ್‌ಸ್ಟಿಕ್‌ ಗುಣವುಳ್ಳ ಟೆಫ್ಲಾನ್‌ ಕೋಟಿಂಗ್‌ ಕೂಡಾ ಬಹುಬೇಗನೆ ಹೋಗಬಹುದು. ಟಿಶ್ಯೂನಲ್ಲಿ ಸ್ವಲ್ಪವೇ ಸ್ವಲ್ಪ ಅದ್ದಿದ ಎಣ್ಣೆ, ಬೆಣ್ಣೆ, ತುಪ್ಪ ಯಾವುದೂ ಇದಕ್ಕೆ ಬಳಸಿದರೂ ಒಕೆ.

2. ನಾನ್‌ಸ್ಟಿಕ್‌ ಪಾತ್ರೆಯಲ್ಲಿ ತವಾದಲ್ಲಿ ಅಡುಗೆ ಮಾಡುವಾಗ ಮರದ ಅಥವಾ ಸಿಲಿಕಾನ್‌ ಸೌಟು ಅಥವಾ ಸ್ಪಾಟ್ಯುಲಾ ಬಳಸಿ. ಲೋಹದ, ಬಹಳ ಹರಿತವಾದ ಮೊನೆಗಳಿರುವ ಸೌಟನ್ನು ಬಳಸಬೇಡಿ. ಆಹಾರ ಹೇಗೂ, ನಾನ್‌ಸ್ಟಿಕ್‌ನಲ್ಲಿ ತಳ ಹಿಡಿಯುವ ತೊಂದರೆ ಇಲ್ಲದಿರುವುದರಿಂದ ಹರಿತವಾದ, ನಿಮ್ಮ ಸಾಮಾನ್ಯ ಪಾತ್ರೆಗಳಲ್ಲಿ ಬಳಸುವ ಸೌಟನ್ನು ಬಳಸಿದರೆ ನಾನ್‌ಸ್ಟಿಕ್‌ ತವಾ, ಪಾತ್ರೆಯಿಂದ ಬಹುಬೇಗನೆ ಟೆಫ್ಲಾನ್‌ ಕೋಟಿಂಗ್‌ ಎದ್ದು ಬರುತ್ತದೆ.

ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!

3. ನಾನ್‌ಸ್ಟಿಕ್‌ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಅತ್ಯಂತ ಗಮನದಲ್ಲಿ ಇಡಬೇಕಾದ ಅಂಶ ಎಂದರೆ ಒಲೆಯ ಉರಿಯನ್ನು ಸದಾ ಮಧ್ಯಮದಲ್ಲಿಡಬೇಕು. ಬೇಗ ಆಗಬೇಕೆಂದು ಹೆಚ್ಚು ಉರಿಯಲ್ಲಿ ದೋಸೆ ಬೇಯಿಸಿದರೆ, ಅಥವಾ ಆಹಾರ ಪದಾರ್ಥ ಬೇಯಿಸಿದರೆ ಇದರ ಟೆಫ್ಲಾನ್‌ ಕೋಟಿಂಗ್‌ ಬಹುಬೇಗನೆ ಎದ್ದು ಹೋಗುತ್ತದೆ. ಹಾಗೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ, ಪಾತ್ರೆ ಅಥವಾ ದೋಸೆ ತವಾವನ್ನು ಹೆಚ್ಚು ಬಿಸಿ ಮಾಡದೆ ಇರುವುದು ಒಳ್ಳೆಯದು. ಬಿಸಿಯಾದ ಕಾವಲಿ ಮೇಲೆ ಬೆಣ್ಣೆ ತುಂಡೊಂದು ಹಾಕಿದರೆ ಅದು ಕೂಡಲೇ ಕುದಿದು ಕಂದು ಬಣ್ಣಕ್ಕೆ ತಿರುಗಿದರೆ ಕಾವಲಿ ಹೆಚ್ಚು ಬಿಸಿಯಾಗಿದೆ ಎಂದು ಅರ್ಥ. ಆಗ ಉರಿಯನ್ನು ಕಡಿಮೆ ಮಾಡಿ.

4. ನಾನ್‌ಸ್ಟಿಕ್‌ ಪಾತ್ರೆಯನ್ನು ಕ್ಲೀನ್‌ ಮಾಡುವ ಕ್ರಮ ಎಲ್ಲಕ್ಕಿಂತ ಮುಖ್ಯ. ಯಾವತ್ತಿಗೂ ಅಡುಗೆ ಮಾಡಿ ಮುಗಿಸಿದ ಬಿಸಿ ತವಾ ಅಥವಾ ಪಾತ್ರೆಯನ್ನು ಕೂಡಲೇ ತಣ್ಣಗಿನ ನೀರಿಗೆ ಹಿಡಿಯಬೇಡಿ. ಪಾತ್ರೆ ಸಾಮಾನ್ಯ ಉಷ್ಣತೆಗೆ ಮರಳಲಿ. ಹೆಚ್ಚು ಕೆಮಿಕಲ್‌ ಇಲ್ಲದ ಮೆದುವಾದ ಲಿಕ್ವಿಡ್‌ ತೊಳೆಯಲು ಬಳಸಿ. ತೊಳೆಯಲು ಬೇರೆ ಪಾತ್ರೆ ತಿಕ್ಕುವ ಒರಟಾದ ವಸ್ತುವನ್ನು ಬಳಸಬೇಡಿ. ಮೆದುವಾದ ಸ್ಪಾಂಜ್‌ ಬಳಸಿ ಉಜ್ಜಿ ನೀರಲ್ಲಿ ತೊಳೆಯಿರಿ.

5. ನಾನ್‌ಸ್ಟಿಕ್‌ ಪಾತ್ರೆಗಳನ್ನು ತವಾವನ್ನು ಬೇರೆ ಪಾತ್ರೆಗಳ ಜೊತೆ ಇಕ್ಕಟ್ಟಾದ ಜಾಗದಲ್ಲಿ ಇಡಬೇಡಿ. ಬೇರೆ ಪಾತ್ರೆಯ ಬದಿ ಇದಕ್ಕೆ ತಾಗದಂತೆ ಸಾಕಷ್ಟು ಸ್ಥಳಾವಕಾಶ ಇರುವೆಡೆಯಲ್ಲಿ ಇಡಲು ಜಾಗ ಮಾಡಿ. ಜಾಗರೂಕತೆಯಿಂದ ನಾನ್‌ಸ್ಟಿಕ್‌ ಪಾತ್ರೆಗಳನ್ನು ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ಬಳಸಿದರೆ ಇದರ ಸದುಪಯೋಗ ಪಡೆದು, ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸಬಹುದು.

ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ

Exit mobile version