Site icon Vistara News

A Beginner’s Guide to Working Out: ವ್ಯಾಯಾಮಕ್ಕೆ ಹೊಸಬರೇ? ನಿಮಗೆಂಥದ್ದು ಬೇಕು?

A Beginner’s Guide to Working Out

ಹೊಸಾ ವರ್ಷ ಬರುತ್ತಿದೆಯಲ್ಲ… ಕಳೆದು ವರ್ಷವೂ ಬಂದಿತ್ತು ಎಂದಿರಾ? ವಿಷಯ ಅದಲ್ಲ, ಇದು ಹೊಸ ಪ್ರತಿಜ್ಞೆಗಳ (A Beginner’s Guide to Working Out)ಕಾಲವೂ ಹೌದು. ಸಕ್ಕರೆ ತಿನ್ನುವುದು ಬಿಡುತ್ತೇನೆ ಎಂಬುದರಿಂದ ಹಿಡಿದು ಹೊಟ್ಟೆ ಕರಗಿಸುತ್ತೇನೆ, ದಿನಕ್ಕೆಂಟು ತಾಸು ನಿದ್ದೆ ಮಾಡುತ್ತೇನೆ ಎನ್ನುವವರೆಗೆ ಪ್ರತಿಜ್ಞೆಗಳು ಏನು ಬೇಕಾದರೂ ಆಗಬಹುದು. ಇವುಗಳ ನಡುವೆ ತೂಕ ಇಳಿಸುವ ಅಥವಾ ವ್ಯಾಯಾಮ ಮಾಡುವಂಥ ಪಣ ತೊಟ್ಟವರು ನೀವಾದರೆ… ವ್ಯಾಯಾಮ ಮಾಡುವುದು ಒಳ್ಳೆಯದೇ, ಅನುಮಾನ ಬೇಡ. ಆದರೆ ಯಾರಿಗೆ ಯಾವ ರೀತಿಯದ್ದು ಸೂಕ್ತ? ವ್ಯಾಯಾಮವನ್ನು ಅತಿ ಸ್ಥೂಲವಾಗಿ ವಿಂಗಡಿಸಬಹುದಾದರೆ ಏರೋಬಿಕ್‌ ಮತ್ತು ಅನರೋಬಿಕ್‌ ಎನ್ನಬಹುದು. ಅಂದರೆ ಏರೋಬಿಕ್‌ ವ್ಯಾಯಾಮಗಳನ್ನು ಕಾರ್ಡಿಯೊ ಮಾದರಿಗಳೆಂದು ಕರೆಯಬಹುದು. ಅಂದರೆ ನಮ್ಮ ಇಡೀ ದೇಹಕ್ಕೆ ರಕ್ತಪರಿಚಲನೆಯನ್ನು ಹೆಚ್ಚಿಸಿ, ಇದಕ್ಕಾಗಿ ಹೆಚ್ಚು ಕೆಲಸ ಮಾಡುವಂತೆ ನಮ್ಮ ಹೃದಯವನ್ನು ಪ್ರೇರೇಪಿಸುತ್ತದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಿ, ಅದಕ್ಕಾಗಿ ದೇಹದೆಲ್ಲ ಅಂಗಗಳೂ ಕ್ರಿಯಾಶೀಲವಾಗಿ ಇರುವಂತೆ ಮಾಡಿ, ಇಡೀ ದೇಹಕ್ಕೆ ಸುಸ್ಥಿರವಾದ ಶಕ್ತಿಯನ್ನು ಪೂರೈಕೆ ಮಾಡುವಂಥ ವ್ಯಾಯಾಮಗಳಿವು. ನಮ್ಮ ಸ್ನಾಯುಗಳು, ಶ್ವಾಸಕೋಶ, ಹೃದಯ ಮುಂತಾದ ಅಂಗಗಳನ್ನು ಬಲಗೊಳಿಸುತ್ತವೆ. ಇದರಲ್ಲಿ ಉಸಿರಾಟದ ರೀತಿಯೂ ಅನರೋಬಿಕ್‌ ವ್ಯಾಯಾಮಕ್ಕಿಂತ ಭಿನ್ನವಾಗಿಯೇ ಇರುತ್ತದೆ.

ಏನು ಹಾಗೆಂದರೆ?

ಯಾವೆಲ್ಲಾ ವ್ಯಾಯಾಮಗಳನ್ನು ಏರೋಬಿಕ್‌ ಅಥವಾ ಕಾರ್ಡಿಯೊ ಮಾದರಿಯದ್ದೆಂದು ಕರೆಯಬಹುದು? ನಡಿಗೆ,ಜಾಗಿಂಗ್‌, ಈಜು, ಸೈಕ್ಲಿಂಗ್‌ ಮತ್ತು ಮಧ್ಯಮ ತೀವ್ರತೆಯ ಬಹುತೇಕ ವ್ಯಾಯಾಮಗಳು ಏರೋಬಿಕ್‌ ಎನಿಸಿಕೊಳ್ಳುತ್ತವೆ. ರಕ್ತದ ಒತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ, ದೇಹದ ಶಕ್ತಿ ವರ್ಧನೆಗೆ, ಸ್ನಾಯುಗಳ ಸಾಮರ್ಥ್ಯ ಹೆಚ್ಚಳಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು- ಹೀಗೆ ಹಲವಾರು ಪ್ರಯೋಜನಗಳು ಈ ವ್ಯಾಯಾಮಗಳಿಗೆ ಇವೆ. ಮಧುಮೇಹಿಗಳು, ಹೃದ್ರೋಗಿಗಳು, ಯಾವುದೇ ವಯಸ್ಸಿನವರು, ಅಲ್ಪಸ್ವಲ್ಪ ತೂಕ ಇಳಿಸುವ ಉದ್ದೇಶದವರು, ಸುಮ್ಮನೆ ದೇಹವನ್ನು ಚಟುವಟಿಕೆಯಲ್ಲಿ ಇರಿಸಬಯಸುವವರು – ಹೀಗೆ ಯಾವುದೇ ಉದ್ದೇಶಕ್ಕೆ ವ್ಯಾಯಾಮ ಮಾಡುವವರಿಗೂ ಹೊಂದುವಂಥ ವ್ಯಾಯಾಮಗಳನ್ನು ಏರೋಬಿಕ್‌ ವಿಭಾಗದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಅನರೋಬಿಕ್‌ ಎಂದರೇನು?

ಇಷ್ಟೆಲ್ಲಾ ಪ್ರವರಗಳು ಏರೋಬಿಕ್‌ ವ್ಯಾಯಾಮಗಳಿಗಿದ್ದರೆ, ಅನರೋಬಿಕ್‌ ವ್ಯಾಯಾಮಗಳ ವಿಶೇಷವೇನು? ಇವುವಾಕಿಂಗ್‌, ಜಾಗಿಂಗ್‌ನಂತಲ್ಲದೆ ಹೆಚ್ಚು ತೀವ್ರತೆಯ ವ್ಯಾಯಾಮಗಳು. ಕಡಿಮೆ ಸಮಯದಲ್ಲಿ ದೇಹದಿಂದ ಹೆಚ್ಚು ಶಕ್ತಿಯನ್ನು ಖರ್ಚು ಮಾಡಿಸುವ ಈ ಕಸರತ್ತುಗಳು ಆಮ್ಲಜನಕದ ಮೇಲೆ ಕೆಲಸ ಮಾಡುವವಲ್ಲ. ಬದಲಿಗೆ, ನೇರವಾಗಿ ದೇಹದಲ್ಲಿರುವ ಗ್ಲೂಕೋಸ್‌ ಮೇಲೆ ಕೆಲಸ ಮಾಡುತ್ತವೆ, ಅಂದರೆ ದೇಹದಿಂದ ಹೆಚ್ಚು ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಇಂದು ತಾಸು ವಾಕಿಂಗ್‌ ಮಾಡಿದಂತೆ ಇವುಗಳನ್ನು ಒಂದು ತಾಸು ಸತತ ಮಾಡಲು ಸಾಧ್ಯವಿಲ್ಲ. ದೇಹವನ್ನು ಚೆನ್ನಾಗಿ ದಂಡಿಸಿ, ಸುಸ್ತು ಮಾಡಿಸುತ್ತವೆ.

ಯಾವೆಲ್ಲಾ ವ್ಯಾಯಾಮಗಳು ಈ ಪಟ್ಟಿಯಲ್ಲಿವೆ ಎಂದರೆ

ಸ್ಕಿಪ್ಪಿಂಗ್‌, ಜಂಪಿಂಗ್‌, ಭಾರ ಎತ್ತುವುದು, ಸ್ಪ್ರಿಂಟಿಂಗ್‌, ಪುಷಪ್‌ ಅಥವಾ ಪುಲಪ್‌ಗಳು ಮುಂತಾದವು. ದೊಡ್ಡ ಪ್ರಮಾಣದಲ್ಲಿ ತೂಕ ಇಳಿಸುವವರಿಗೆ ಇದು ಸೂಕ್ತ. ಕಾರಣ, ವ್ಯಾಯಾಮ ಮುಗಿದ ಮೇಲೂ ದೇಹ ತನ್ನ ಶಕ್ತಿ ಕರಗಿಸುವ ಪ್ರಕ್ರಿಯೆಯನ್ನು ಕೆಲವು ಕಾಲ ಜಾರಿಯಲ್ಲಿ ಇಡಬೇಕಾಗುತ್ತದೆ. ಕ್ರೀಡಾ ಪಟುಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಬೇಕಾಗುವ ವ್ಯಾಯಾಮಗಳಿವು. ಆದರೆ ಇವುಗಳನ್ನು ಎಲ್ಲರೂ ಮಾಡುವ ಮುನ್ನ ಸೂಕ್ತ ಮಾರ್ಗದರ್ಶನ ಬೇಕಾಗುತ್ತದೆ. ಸರಿಯಾದ ವೈದ್ಯರು, ಫಿಸಿಯೊ ಅಥವಾ ಟ್ರೇನರ್‌ ಸಲಹೆಯನ್ನು ತೆಗೆದುಕೊಳ್ಳದೆ ಅನರೋಬಿಕ್‌ ವ್ಯಾಯಾಮಗಳು ಮಾಡುವುದು ಸರಿಯಲ್ಲ.

ಪ್ರಾರಂಭಿಸುವ ಮುನ್ನ

ಇಷ್ಟೆಲ್ಲಾ ವಿವರಗಳನ್ನು ತಿಳಿದಿದ್ದಾಯ್ತು. ಬೇಕಾದ್ದೇ ಗೊತ್ತಾಗದಿದ್ದರೆ, ಎಷ್ಟು ಓದಿದರೇನು ಬಂತು- ಪುಸ್ತಕದಬದ್ನೆಕಾಯಿ! ಮೊದಲಿಗೆ ದೇಹಕ್ಕೆ ಸಾಕಷ್ಟು ನೀರು ಕೊಡಿ. ನೀರಿಲ್ಲದೆ ವ್ಯಾಯಾಮ ಮಾಡಿದರೆ ಅಪಾಯ ತಪ್ಪಿದ್ದಲ್ಲ. ವ್ಯಾಯಾಮದ ನಂತರವೂ ದೇಹಕ್ಕೆ ಬೇಕಷ್ಟು ನೀರುಣಿಸಿ. ಆಹಾರದಲ್ಲಿ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ಅಂದರೆ ಹೆಚ್ಚು ತಿನ್ನಿ ಎಂದಲ್ಲ, ಸತ್ವಯುತ ಆಹಾರಗಳನ್ನೇ ತಿನ್ನಿ. ವ್ಯಾಯಾಮಕ್ಕಿಂತ ಮೊದಲು ದೇಹವನ್ನು ಸಿದ್ಧಪಡಿಸಲು ವಾರ್ಮ್‌ಅಪ್‌ ಅಗತ್ಯ. ವ್ಯಾಯಾಮದ ನಂತರ ಚೆನ್ನಾಗಿ ಸ್ಟ್ರೆಚ್‌ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ, ದೇಹ ಹೇಳುವುದನ್ನು ಆಲಿಸಿ. ತನ್ನಿಂದ ಯಾವುದು ಸಾಧ್ಯ- ಯಾವುದಿಲ್ಲ ಎಂಬುದನ್ನು ದೇಹ ಸ್ಪಷ್ಟವಾಗಿ ಸೂಚಿಸುತ್ತದೆ. ಅದನ್ನು ಗಮನಿಸಿ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version