Site icon Vistara News

Immunity Boosting Foods: ಕೋವಿಡ್‌ ಭೀತಿಯೆ?: ಪ್ರತಿರೋಧಕತೆ ಹೆಚ್ಚಿಸುವ ಆಹಾರ ಸೇವಿಸಿ

Immunity Boosting Foods

ಕೋವಿಡ್‌ನ ಉಪತಳಿಗಳು ಎಲ್ಲೆಡೆ ಆತಂಕ ಮೂಡಿಸುತ್ತಿವೆ. ಚಳಿಗಾಲದ ಫ್ಲೂ ವೈರಸ್‌ ಮಾದರಿಯಲ್ಲೇ ಎಲ್ಲೆಡೆ ಹರಡುತ್ತಿರುವ ಈ ವೈರಸ್‌ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಉಳಿದೆಲ್ಲ ಉಪಕ್ರಮಗಳ ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಸಶಕ್ತಗೊಳಿಸುವುದು ಮಹತ್ವದ್ದು. ಕೇವಲ ಕೋವಿಡ್‌ ಎಂದೇ ಅಲ್ಲ, ಯಾವುದೇ ರೋಗಗಳನ್ನು ದೂರ ಇರಿಸುವಲ್ಲಿ ದೇಹದ ಪ್ರತಿರೋಧಕ ಶಕ್ತಿ ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ನಾವೇನು ತಿನ್ನುತ್ತೇವೆ, ಎಷ್ಟು ನೀರು, ನಿದ್ದೆ, ವ್ಯಾಯಾಮ ದೇಹಕ್ಕೆ ದೊರೆಯುತ್ತದೆ ಎಂಬುದೆಲ್ಲ ಪ್ರಾಮುಖ್ಯತೆ ಪಡೆಯುತ್ತವೆ. ಅದರಲ್ಲೂ ಪ್ರೊಟೀನ್‌, ವಿಟಮಿನ್‌ಗಳು, ನಾರು ಮತ್ತು ಖನಿಜಯುಕ್ತ ಸಮತೋಲಿತ ಆಹಾರ ಸೇವಿಸುವುದು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಅತಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಹಾಗಾದರೆ ಹೊಂಚುಹಾಕುತ್ತಿರುವ ವೈರಸ್‌ಗಳನ್ನು ದೂರ ಅಟ್ಟಲು, ಅವುಗಳೊಂದಿಗೆ ಹೋರಾಡಲು ನಮ್ಮ ದೇಹಕ್ಕೆ ಅಗತ್ಯವಾದ ಆಹಾರಗಳು ಯಾವುವು?

ಸಿಟ್ರಸ್‌ ಹಣ್ಣುಗಳು

ಈಗ ನಿಂಬೆ, ದ್ರಾಕ್ಷಿ, ಕಿತ್ತಳೆಯಂಥ ಸಿಟ್ರಸ್‌ ಹಣ್ಣುಗಳ ಋತುವೂ ಹೌದು. ಇವೆಲ್ಲವುಗಳಲ್ಲಿ ಹೇರಳವಾಗಿ ದೊರೆಯುವುದು ವಿಟಮಿನ್‌ ಸಿ ಸತ್ವ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಿ ವಿಟಮಿನ್‌ ವಹಿಸುವ ಪಾತ್ರ ಅತಿ ಹೆಚ್ಚಿನದ್ದು. ಸೋಂಕುಗಳೊಂದಿಗೆ ಹೋರಾಡುವಂಥ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವುದಕ್ಕೆ ಸಿ ಜೀವಸತ್ವ ಬೇಕೆಬೇಕು. ಹಾಗಾಗಿ ವಿಟಮಿನ್‌ ಸಿ ಹೆಚ್ಚಿರುವಂಥ ಆಹಾರಗಳು ಹೆಚ್ಚಿರಲಿ ಈ ದಿನಗಳಲ್ಲಿ.

ಹಸಿರು ತರಕಾರಿಗಳು

ಖನಿಜಗಳು ಮತ್ತು ಜೀವಸತ್ವಗಳು ರೋಗಗಳನ್ನು ದೂರ ಮಾಡುವುದಕ್ಕೆ ಅಗತ್ಯ ಇರುವಂತೆಯೇ, ಉತ್ಕರ್ಷಣ ನಿರೋಧಕಗಳು ಸಹ ಈ ನಿಟ್ಟಿನಲ್ಲಿ ನೆರವಾಗುತ್ತವೆ. ಹಾಗಾಗಿ ಫೋಲೇಟ್‌ ಸೇರಿದಂತೆ ಹಲವು ರೀತಿಯ ಬಿ ವಿಟಮಿನ್‌ಗಳು, ಎ, ಸಿ ಮತ್ತು ಕೆ ಜೀವಸತ್ವಗಳು, ನಾರು, ಕಬ್ಬಿಣ, ಪೊಟಾಶಿಯಂನಂಥ ಖನಿಜಗಳು ವಿಫುಲವಾಗಿ ದೊರೆಯುವಂಥ ಹಸಿರು ಸೊಪ್ಪು ಮತ್ತು ತರಕಾರಿಗಳ ಸೇವನೆ ಆವಶ್ಯಕ.

ಪ್ರೊಬಯಾಟಿಕ್‌

ನಮ್ಮ ಆರೋಗ್ಯ ರಕ್ಷಣೆಯಲ್ಲಿ ಜೀರ್ಣಾಂಗಗಳು ವಹಿಸುವ ಪಾತ್ರವನ್ನು ಅಲಕ್ಷ್ಯ ಮಾಡುವುದೇ ಹೆಚ್ಚು. ಆದರೆ ದೇಹದ ಪ್ರತಿರೋಧಕತೆಗೂ ಹೊಟ್ಟೆಯ ಆರೋಗ್ಯಕ್ಕೂ ನೇರವಾದ ಸಂಬಂಧವಿದೆ. ಮೊಸರು, ಮಜ್ಜಿಗೆಯಂಥ ಹುದುಗು ಬರುವ ಪದಾರ್ಥಗಳು, ಮೊಳಕೆ ಕಾಳುಗಳು ಮುಂತಾದವುಗಳಲ್ಲಿ ಪ್ರೊಬಯಾಟಿಕ್‌ ಅಂಶಗಳು ಹೇರಳವಾಗಿವೆ. ಇದರಿಂದ ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸಿ, ದೇಹವನ್ನು ಸಶಕ್ತಗೊಳಿಸಬಹುದು.

ಶುಂಠಿ, ಬೆಳ್ಳುಳ್ಳಿ

ಉತ್ತಮ ಉತ್ಕರ್ಷಣ ನಿರೋಧಕಗಳಿಂದ ಶುಂಠಿ ಮತ್ತು ಬೆಳ್ಳುಳ್ಳಿಗಳಿಗೆ ವೈರಸ್‌ ವಿರೋಧಿ ಗುಣಗಳಿವೆ. ಇವುಗಳನ್ನು ನಿತ್ಯದ ಅಡುಗೆಯಲ್ಲಿ ನಿಯಮಿತವಾಗಿ ಬಳಸುವುದು, ಕಷಾಯಗಳ ರೂಪದಲ್ಲಿ ಸೇವಿಸುವುದು ದೇಹಕ್ಕೆ ಹಿತ ನೀಡುತ್ತದೆ; ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಸೋಂಕು ವಿರೋಧಿಸುವ ಮತ್ತು ಉರಿಯೂತ ನಿವಾರಿಸುವ ಗುಣಗಳಿಗಾಗಿಯೇ ಈ ಎರಡು ವಸ್ತುಗಳು ಪರಂಪರಾಗತ ಔಷಧಿಯಲ್ಲೂ ಸ್ಥಾನ ಪಡೆದಿವೆ.

ಬೀಜಗಳು

ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬನ್ನು ಒದಗಿಸುವ ಕಾಯಿ ಮತ್ತು ಬೀಜಗಳು, ಪ್ರತಿರೋಧಕ ಶಕ್ತಿಯನ್ನೂ ಬಲಗೊಳಿಸುತ್ತವೆ. ಬಾದಾಮಿ, ವಾಲ್‌ನಟ್‌, ಅಗಸೆ, ಚಿಯಾ ಮುಂತಾದ ಬೀಜಗಳಲ್ಲಿ ವಿಟಮಿನ್‌ ಮತ್ತು ಖನಿಜಗಳ ಭಂಡಾರವೇ ಇದೆ. ಜೊತೆಗೆ ಪ್ರೊಟೀನ್‌ ಸಹ ಪೂರೈಕೆಯಾಗಿ ದೇಹವನ್ನು ಬಳಲದಂತೆ ಕಾಪಾಡುತ್ತದೆ. ಈ ಎಲ್ಲವುಗಳು ಒಟ್ಟಾರೆ ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳಲು ನೆರವು ದೊರೆಯುತ್ತದೆ.

ಅರಿಶಿನ

ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉರಿಯೂತ ತಗ್ಗಿಸುವಂಥ ಕರ್ಕುಮಿನ್‌ ಅಂಶ ಅರಿಶಿನದಿಂದ ಪ್ರಮುಖವಾಗಿ ದೊರೆಯುತ್ತದೆ. ಹಾಗಾಗಿ ಅರಿಶಿನದ ಸೇವನೆ ಅಗತ್ಯವಾಗಿ ಬೇಕು. ಅಡುಗೆಯಲ್ಲಿ ನಿಯಮಿತವಾಗಿ ಉಪಯೋಗಿಸಬಹುದು. ಹಾಲಿನೊಂದಿಗೆ ಅಥವಾ ಕಷಾಯದಂತೆಯೂ ಸೇವಿಸಬಹುದು. ಹಸಿಯಾದ ಗೊನೆ ಅರಿಶಿನದಿಂದ ಹಲವು ರೀತಿಯ ವ್ಯಂಜನಗಳನ್ನು ತಯಾರಿಸಲಾಗುತ್ತದೆ.

ಗ್ರೀನ್‌ ಟೀ

ಕಡಿಮೆ ಪ್ರಮಾಣದ ಕೆಫೇನ್‌ ಹೊಂದಿರುವ ಇದನ್ನು ಮಾಮೂಲಿ ಚಹಾ ಅಥವಾ ಕಾಫಿ ಬದಲಿಗೆ ನಿತ್ಯವೂ ಸೇವಿಸಬಹುದು. ಇದು ದೇಹದ ಚಯಾಪಚಯ ಹೆಚ್ಚಿಸುವುದೇ ಅಲ್ಲದೆ ಪ್ರತಿರೋಧಕತೆಯನ್ನು ಪ್ರಚೋದಿಸುತ್ತದೆ. ಉತ್ಕರ್ಷಣ ನಿರೋಧಕಗಳು ಇದರಲ್ಲಿ ಇರುವುದರಿಂದ ಸೋಂಕು ಸಂಬಂಧಿತ ಉರಿಯೂತಗಳ ಶಮನಕ್ಕೆ ನೆರವು ದೊರೆಯುತ್ತದೆ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version