ಅಸಿಡಿಟಿ ಎಂಬ ಸಮಸ್ಯೆ (acidity problem) ಕೆಲವರನ್ನು ಬಾಧಿಸುವಷ್ಟು ಯಾವ ಸಮಸ್ಯೆಯೂ ಬಾಧಿಸುವುದಿಲ್ಲ. ಏನಾದರೂ ತಿಂದರೂ ಎದೆಯುರಿ, ಹೊಟ್ಟೆಯುಬ್ಬರ, ತಿನ್ನದೆ ಇದ್ದರೂ ಎದೆಯುರಿ. ಅನ್ನನಾಳದ ಮೂಲಕ ಪ್ರವಹಿಸುವ ರಸಗಳು ನಾಳದ ಹೊರಮೈಯನ್ನು ಕೆರಳಿಸುತ್ತದೆ. ಇದರಿಂದ ಕೆಳ ಎದೆಯ ಭಾಗದಲ್ಲಿ ಉರಿಯಂತಹ ಅನುಭವ ಉಂಟಾಗುತ್ತದೆ. ಅಷ್ಟೇ ಅಲ್ಲ, ಆಹಾರ ಅನ್ನನಾಳದ ಮೂಲಕ ಸಾಗುವಾಗ, ಅದು ಸಾಗಿದ ಕೂಡಲೇ ಮುಚ್ಚಬೇಕಾದ ಸುತ್ತಲಿನ ಮಾಂಸಖಂಡಗಳು ಮುಚ್ಚದೆ ಇರುವುದರಿಂದ ಹೊಟ್ಟೆಯ ಭಾಗದಲ್ಲಿ ಉತ್ಪತ್ತಿಯಾಗುವ ರಸಗಳೂ ಕೂಡಾ ಮೇಲ್ಮುಖವಾಗಿ ಪ್ರವಹಿಸುತ್ತದೆ. ಇದರಿಂದ ವಾಂತಿ ಬಂದಂತಾಗುವುದು, ನಾಲಿಗೆಯಲ್ಲಿ ಆಸಿಡ್‌ನಂತಹ ರುಚಿ ಉಂಟಾಗುವುದು, ಎದೆನೋವು, ಎದೆಯುರಿ, ಹೊಟ್ಟೆಯುಬ್ಬರ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು (gastric problem) ಆರಂಭವಾಗುತ್ತದೆ. ಇದು ಬಹುಬೇಗನೆ ಗುಣವಾಗಿಬಿಡುವ ಸಮಸ್ಯೆಯಂತೂ ಅಲ್ಲ. ಆಗಾಗ ತೊಂದರೆ ಕೊಡುತ್ತಲೇ ಇರುವ ಬಹಳ ಕಾಲ ಇರುವ ಸಮಸ್ಯೆ.
ಇಂತಹ ಸಮಸ್ಯೆ ಇರುವ ಮಂದಿಗೆ ಸಮಸ್ಯೆಗಿಂತಲೂ ಒಂದು ಬಗೆಯ ಒತ್ತಡ ಸದಾ ಕಾಡುತ್ತಿರುತ್ತದೆ. ಹೆಚ್ಚು ಆಸಿಡ್ ಉತ್ಪತ್ತಿ ಮಾಡುವ ಆಹಾರಗಳಿಂದ ದೂರವಿರಬೇಕಾದ ಸಮಸ್ಯೆ, ಸರಿಯಾದ ಸಮಯಕ್ಕೆ ತಿನ್ನದೆ ಇರುವದರಿಂದ ಆಗುವ ಸಮಸ್ಯೆ ಇತ್ಯಾದಿಗಳಿಂದ ಮಾನಸಿಕವಾಗಿಯೂ ಸಾಕಷ್ಟು ಒತ್ತಡ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಎಲ್ಲರನ್ನೂ ಒಂದೇ ರೀತಿಯಲ್ಲಿ ಬಾಧೀಸುವ ಸಮಸ್ಯೆಯೂ ಇದಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಸಮಸ್ಯೆಯಿದು. ಈ ಎದೆಯುರಿಯನ್ನು ಕೆಲವು ಹರ್ಬಲ್ ಚಹಾಗಳ ಮೂಲಕ, ಶುಂಠಿ ಕಷಾಯ, ಜೀರಿಗೆ ಹಾಗೂ ಕೊತ್ತಂಬರಿ ಕಷಾಯ, ಸೋಂಪು ನೀರು, ಎಳನೀರು, ಮಜ್ಜಿಗೆಗಳಂತಹ ಸಾಂಪ್ರದಾಯಿಕ ಮನೆಮದ್ದುಗಳ ಮೂಲಕ ತಕ್ಕಮಟ್ಟಿಗೆ ಆಯಾ ಕಾಲಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳಬಹುದಾದರೂ ಇದರಿಂದ ಅನುಭವಿಸುವ ಮಾನಸಿಕ ಒತ್ತಡಕ್ಕೂ ಕೆಲವು ಹಣ್ಣುಗಳ ಸೇವನೆಯಿಂದ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು. ಬನ್ನಿ ಯಾವೆಲ್ಲ ಹಣ್ಣುಗಳ ಸೇವನೆ ಅಸಿಡಿಟಿ ನಿವಾರಣೆಗೆ ಪೂರಕ (acidity relief) ಎಂಬುದನ್ನು ನೋಡೋಣ.
1. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟಾಶಿಯಂ, ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಸಾಕಷ್ಟು ನಾರಿನಂಶವೂ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ, ಅಸಿಡಿಟಿಯಂತಹ ಸಮಸ್ಯೆಯ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.
2. ಪಪ್ಪಾಯಿ: ಪಪ್ಪಾಯಿಯೆಂಬ ಸಿಹಿಯಾದ ಹಣ್ಣಿನಿಂದ ಅನೇಕ ಲಾಭಗಳಿವೆ. ಇದರಿಂದ ಹೃದಯದ ಸಮಸ್ಯೆಗಳು, ಮಧುಮೇಃ, ಕ್ಯಾನ್ಸರ್, ಅಸ್ತಮಾದಂತಹ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಿದೆ. ಎಲುಬಿನ ಆರೋಗ್ಯಕ್ಕೂ ಇದು ಒಳ್ಳೆಯದು. ಇದರಲ್ಲಿ ವಿಟಮಿನ್ ಕೆ, ಬೀಟಾ ಕೆರೋಟಿನ್, ವಿಟಮಿನ್ ಎ ಹಾಗೂ ಕ್ಯಾಲ್ಶಿಯಂ ಕೂಡಾ ಇದೆ. ಪಪ್ಪಾಯಿಯಲ್ಲಿ ಪಪೈನ್ ಎಂಬ ಎನ್‌ಝೈಮ್ ಕೂಡಾ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ವೃದ್ಧಿಸಿ ಎದೆಯುರಿಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Remedies For Acidity | ಆಸಿಡಿಟಿಯ ಸಮಸ್ಯೆಯೇ? ಸರಳ ಪರಿಹಾರಗಳಿವು!
3. ಕಲ್ಲಂಗಡಿ: ಆಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ವಿಟಮಿನ್ ಎ ಹಾಗೂ ಅಮೈನೋ ಆಸಿಡ್‌ಗಳಿರುವ ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಗೆ ಒಳ್ಳೆಯದು. ಇದರಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ದೇಹವನ್ನು ಸದಾ ನೀರಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಆಸಿಡ್‌ನ ಪ್ರಭಾವ ಕಡಿಮೆಯಾಗಿ ಅಸಿಡಿಟಿ ತೊಂದರೆ ಕಡಿಮೆಯಾಗುತ್ತದೆ.
4. ಅಂಜೂರ: ಅಂಜೂರದಲ್ಲಿ ಸಾಕಷ್ಟು ಖನಿಜಾಂಶಗಳು, ಪೊಟಾಶಿಯಂ, ಕ್ಯಾಲ್ಶಿಯಂ, ಕಬ್ಬಿಣಾಂಶಗಳೂ ಇವೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಮಲಬದ್ಧತೆಯಂತಹ ತೊಂದರೆಯೂ ನಿವಾರಣೆಯಾಗುತ್ತದೆ.
5. ಸೇಬು: ಸೇಬಿನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಿದೆ. ಇದರಲ್ಲಿ ವಿಟಮಿನ್ ಎ, ಸಿ, ಡಿ, ಬಿ ೧೬ ಹಾಗೂ ಬಿ ೧೨, ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಮೆಗ್ನೀಶಿಯಂ ಇವೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಇದು ಹೊಟ್ಟೆಯಲ್ಲಿನ ಆಸಿಡ್ ಕಡಿಮೆಗೊಳಿಸುವುದಷ್ಟೇ ಅಲ್ಲ, ಅದನನು ಶಾಂತಗೊಳಿಸುತ್ತದೆ.
ಇದನ್ನೂ ಓದಿ: Acidity Problem | ಹುಳಿತೇಗಿನ ಸಮಸ್ಯೆಯೆ? ಹೀಗೆ ಮಾಡಿ