Site icon Vistara News

Aging factor | ಬೇಗನೆ ವಯಸ್ಸಾದವರಂತೆ ಕಾಣುತ್ತಿದ್ದೀರಾ? ನಿಮ್ಮ ಈ 10 ತಪ್ಪುಗಳೇ ಕಾರಣ!

Aging factor

ಭೂಮಿಯ ಮೇಲಿನ ಯಾವ ಹುಲುಮಾನವರೂ ವಯಸ್ಸಾದವರಂತೆ ಕಾಣಲು ಇಷ್ಟಪಡುವುದಿಲ್ಲ. ತಮ್ಮ ವಯಸ್ಸಿಗಿಂತ ಸ್ವಲ್ಪವಾದರೂ ಚಿಕ್ಕವರಂತೆ ಕಾಣಲಿ ಎಂಬುದು ಎಲ್ಲರ ಬಯಕೆ. ಆದರೆ, ಯಾವಾಗಲೂ ಚಿರಜವ್ವನಿಗರಂತೆ ಕಾಣಲು ನಾವೇನೂ ದೇವಲೋಕದ ಅಮೃತ ಕುಡಿದಿಲ್ಲವಲ್ಲ! ಹಾಗಾದರೆ, ತಮಗಿರುವ ವಯಸ್ಸಿಗಿಂತ ಚಿಕ್ಕವರಾಗಿ ಕಾಣುವುದು ಹೇಗೆ?

ಆಂತರಿಕ ಸೌಂದರ್ಯ ಮುಖ್ಯ, ಬಾಹ್ಯ ಸೌಂದರ್ಯ ಗೌಣ ಎಂದು ಎಷ್ಟೇ ಹೇಳಿದರೂ ಅದು ಬಹಳ ಸಾರಿ ಪುಸ್ತಕದ ಬದನೆಕಾಯಿಯಾಗಿಯೇ ಉಳಿಯುತ್ತದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ಸ್ಪರ್ಧೆಯಾಗಿರುವಾಗ ನಮ್ಮನ್ನು ನಾವು ಇತರರ ಮುಂದೆ ಪ್ರಸ್ತುತಪಡಿಸುವ ರೀತಿ, ನಮ್ಮ ಬಾಹ್ಯ ಸೌಂದರ್ಯ, ಚುರುಕುತನ ಎಲ್ಲವೂ ಮುಖ್ಯವಾಗುತ್ತದೆ. ಆಂತರಿಕ ಸೌಂದರ್ಯವೊಂದೇ ಎಲ್ಲವುಗಳ ಕೀಲಿಕೈಯಾಗಲು ಸಾಧ್ಯವಿಲ್ಲ. ಪ್ರಥಮ ಭೇಟಿಗಳಲ್ಲಿ ಮೊದಲು ಕಾಣುವುದು ಬಾಹ್ಯ ರೂಪವೇ ಆಗಿರುವುದರಿಂದ ಹಾಗೂ ಮೊದಲ ಭೇಟಿಗಳಲ್ಲಿ ಅದೂ ಕೂಡಾ ಬೀರುವ ಪರಿಣಾಮ ದೊಡ್ಡದಿರುವುದರಿಂದ ಪ್ರತಿಯೊಬ್ಬರೂ ತಮ್ಮನ್ನು ತಾವು ಉತ್ತಮ ಪಡಿಸಿಕೊಳ್ಳುವ ಹಾಗೂ ಇನ್ನಷ್ಟು ಚಿಕ್ಕವರಂತೆ ಕಾಣಲು ಸಾಹಸಪಡುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಆಂಟಿ ಏಜಿಂಗ್‌ ಹೆಸರಿನಡಿ ಬರುವ ಕ್ರೀಮುಗಳು, ಸೀರಮ್ಮುಗಳಿಂದ ಹಿಡಿದು ಪಾರ್ಲರುಗಳವರೆಗೆ ಲಕ್ಷಗಟ್ಟಲೆ ದುಡ್ಡು ಸುರಿಯಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ನಮ್ಮ ಸೌಂದರ್ಯದ ರಹಸ್ಯದ ಒಂದಿಷ್ಟು ಭಾಗ ನಮ್ಮ ವಂಶವಾಹಿನಿಗಳಲ್ಲಿದ್ದರೆ, ಇನ್ನೊಂದಿಷ್ಟು ಭಾಗ ನಮ್ಮ ಅಭ್ಯಾಸಗಳು ಹಾಗೂ ನಾವು ಹೇಗೆ ಆರೋಗ್ಯಯುತವಾಗಿ ಬದುಕುತ್ತಿದ್ದೇವೆ ಎಂಬುದರ ಮೇಲೆ ನಿಂತಿದೆ ಎಂಬುದನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ಹಾಗಾದರೆ, ನಮ್ಮ ಚರ್ಮಕ್ಕೇ ಮಾರಕವಾಗುವ ಯಾವ ಅಭ್ಯಾಸಗಳು ನಮ್ಮಲ್ಲಿವೆ? ನಾವು ಯಾವ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ನೋಡೋಣ ಬನ್ನಿ.

೧. ಸೂರ್ಯನ ಬಿಸಿಲಿನಡಿ ಹೆಚ್ಚು ತಿರುಗಾಡುತ್ತೀರಿ ಎಂದಾದಲ್ಲಿ ಅಥವಾ ಸೂರ್ಯನ ಬಿಸಿಲಿನಡಿ ಹೆಚ್ಚು ಹೊತ್ತು ನಿಂತು ಮಾಡುವ ಉದ್ಯೋಗ ನಿಮ್ಮದಾಗಿದ್ದರೆ, ಚರ್ಮ ಬಹುಬೇಗನೆ ಘಾಸಿಗೊಳಗಾಗುತ್ತದೆ. ಪರಿಣಾಮ ವಯಸ್ಸಾದಂತೆ ಕಾಣತೊಡಗುತ್ತದೆ.

೨. ನಿಮಗೆ ವಿಟಮಿನ್‌ ಡಿ ಕೊರತೆಯಿದ್ದಲ್ಲಿ ಕೂಡಾ ಚರ್ಮ ನಿಸ್ತೇಜವಾಗಿ ವಯಸ್ಸಾದಂತೆ ಕಾಣತೊಡಗುತ್ತದೆ. ಇದಕ್ಕಾಗಿ ಮತ್ತೆ ಬಿಸಿಲಲ್ಲಿ ನಿಲ್ಲುವುದೇ ಅಗತ್ಯ ಎಂದಲ್ಲ. ಬೆಳಗಿನ ಸೂರ್ಯನ ಎಳೆಬಿಸಿಲಿಗೆ ವಾಕಿಂಗ್‌ ಮಾಡಿ. ಜೊತೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿ ತೆಗೆದುಕೊಳ್ಳಿ.

೩. ನಿದ್ರಾವಂಚಿತರು ಕೂಡಾ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ. ಸರಿಯಾಗಿ ನಿದ್ರೆ ಸಿಗದವರು, ತಡವಾಗಿ ನಿದ್ದೆ ಮಾಡುವವರು ಅಥವಾ ಅಗತ್ಯಕ್ಕಿಂತ ಹೆಚ್ಚು ಬಹುಬೇಗನೆ ಏಳುವವರು ಯಾವಾಗಲೂ ಸರಿಯಾದ ನಿದ್ರೆಯಿಂದ ವಂಚಿತರಾಗುತ್ತಾರೆ. ಇಂಥವರ ಚರ್ಮವೂ ಸಾಮಾನ್ಯರಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣತೊಡಗುತ್ತದೆ.

೪. ಚರ್ಮಕ್ಕೆ ಬೇಕಾದ ತೇವಾಂಶ ನೀಡುತ್ತಿಲ್ಲವಾದರೂ ಚರ್ಮ ಬೇಗನೆ ಸುಕ್ಕುಗಟ್ಟುತ್ತದೆ. ಹಾಗಾಗಿ ಪ್ರತಿನಿತ್ಯ ಮಾಯ್‌ಶ್ಚರೈಸರ್‌ ಬಳಸಿ ಚರ್ಮವನ್ನು ನಯವಾಗಿ ಮೃದುವಾಗಿ ಇಟ್ಟುಕೊಳ್ಳಿ.

೫. ಪ್ರತಿನಿತ್ಯ ವ್ಯಾಮಾಮ ಮಾಡದಿದ್ದವರ ಚರ್ಮವೂ ಬೇಗನೆ ಸುಕ್ಕಾಗಿ ಜೋತು ಬೀಳುತ್ತದೆ. ವ್ಯಾಯಾಮ ದೇಹದ ಎಲ್ಲ ಅಂಗಗಳನ್ನೂ ಚುರುಕಾಗಿಡುವುದಲ್ಲದೆ, ಬೊಜ್ಜನ್ನು ಕಡಿಮೆಗೊಳಿಸುತ್ತದೆ. ವ್ಯಾಯಾಮ ಮಾಡುವುದರಿಂದ ಕೂದಲು ಹಾಗೂ ಚರ್ಮದ ಆರೋಗ್ಯವೂ ವೃದ್ಧಿಸುತ್ತದೆ.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

೬. ಬದುಕಿನಲ್ಲಿ ಹೊರಲಾಗದಂಥ ಒತ್ತಡಗಳನ್ನು ಹೊರುವುದರಿಂದಲೂ ಹೀಗಾಗುತ್ತದೆ. ಅಂದರೆ, ವೃತ್ತಿ ಹಾಗೂ ಕುಟುಂಬದ ಅತೀವ ಕೆಲಸಗಳ ಒತ್ತಡ, ದೇಹ ಹಾಗೂ ಚರ್ಮದ ಆರೋಗ್ಯಕ್ಕೆ ಮಾರಕ.

೭. ಹೆಚ್ಚು ಜಂಕ್‌ ತಿನ್ನುವುದರಿಂದಲೂ ವಯಸ್ಸಾಗುವಿಕೆಯನ್ನು ಉತ್ತೇಜಿಸಿದಂತಾಗುತ್ತದೆ. ಚರ್ಮದ ಆರೋಗ್ಯ ಕ್ಷೀಣಿಸುತ್ತದೆ.

೮. ಯಾವಾಗಲೂ ಪಾರ್ಟಿ, ಗೆಳೆಯರು ಎಂದು ಆಲ್ಕೋಹಾಲ್‌ ಸೇವಿಸುತ್ತಿದ್ದರೂ ಕೂಡಾ ನಿಮ್ಮ ಚರ್ಮಕ್ಕೆ ಬೇಗ ವಯಸ್ಸಾಗುತ್ತದೆ. ಕುಡಿತ ಅಭ್ಯಾಸವಾಗಿಬಿಟ್ಟರೆ ಬಹುಬೇಗನೆ ವಯಸ್ಸಾದವರಂತೆ ಕಾಣುತ್ತಾರೆ.

೯. ಧೂಮಪಾನ ಕೇವಲ ಶ್ವಾಸಕೋಶಕ್ಕೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಮಾರಕ. ಪ್ರತಿನಿತ್ಯ ಧೂಮಪಾನದ ಚಟಕ್ಕೆ ಅಂಟಿದಂತವರ ಚರ್ಮ ಬೇಗನೆ ಒಣಕಲಾದಂತೆ ಕಾಣುತ್ತದೆ. ತುಟಿ ಕಪ್ಪಾಗುತ್ತದೆ. ಚರ್ಮಕ್ಕೆ ಹಾನಿಯಾಗುತ್ತದೆ.

೧೦. ನೀವು ನೀರು ಹೆಚ್ಚು ಕುಡಿಯದೆ ಇದ್ದರೂ ಚರ್ಮ ಒಣಗಿದಂತಾಗುತ್ತದೆ. ಬಿರುಕುಗಳು, ಸುಕ್ಕುಗಳು, ಕಪ್ಪು ಕಲೆಗಳು ಅಧಿಕವಾಗುತ್ತದೆ. ಹಾಗಾಗಿ ವಯಸ್ಸಾದವರ ಹಾಗೆ ಕಾಣತೊಡಗುತ್ತಾರೆ. ಕಲೆರಹಿತ, ಬಿಗಿಯಾದ, ಕಳೆಕಳೆಯಾದ ಚರ್ಮ ಬೇಕೆಂದರೆ ಹೆಚ್ಚು ಹೆಚ್ಚು ನೀರು ಕುಡಿವ ಅಭ್ಯಾಸ ಬೆಳೆಸಿ. ಆ ಮೂಲಕ ದೇಹದ ಕಲ್ಮಶಗಳೆಲ್ಲ ಹೊರಗೆ ಹೋಗಿ ಚರ್ಮ ಇನ್ನಷ್ಟು ಮತ್ತಷ್ಟು ಹೊಳಪಾಗುತ್ತದೆ, ಯುವಕಾಂತಿಯಿಂದ ಕಂಗೊಳಿಸುತ್ತದೆ.

ಇದನ್ನೂ ಓದಿ | Beauty awareness | ಟೀನೇಜ್‌ ಸುಕೋಮಲ ತ್ವಚೆಯ ಬ್ಲೀಚ್‌ಗೆ ನೋ ಎನ್ನಿ!

Exit mobile version