ಹಲ್ಲು ಹುಳುಕಾಗುವುದು (Tooth decay) ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಸಾಮಾನ್ಯ ತೊಂದರೆ. ವಯಸ್ಸಿನ ಭೇದವಿಲ್ಲದೆ, ಬಡವ ಶ್ರೀಮಂತನೆಂಬ ಹಂಗಿಲ್ಲದೆ, ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯಿದು. ಆದರೆ, ಅಷ್ಟೇ ನಿರ್ಲಕ್ಷ ವಹಿಸುವ ಆರೋಗ್ಯವೂ ಕೂಡಾ ಇದೇ. ಆದರೆ, ನಿತ್ಯವೂ ಬಾಯಿಯ ಸ್ವಚ್ಛತೆ ಹಾಗೂ ಆಃಆರದ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿಟ್ಟಿರಬಹುದು. ಬನ್ನಿ, ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ.
ಬಾಯಿಯ ಆರೋಗ್ಯದ ಕಾಳಜಿ ಸರಿಯಾಗಿ ಮಾಡದೇ ಇರುವುದು
ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಮಾಡದೆ ಇದ್ದರೆ, ಸರಿಯಾಗಿ ಕಾಳಜಿ ವಹಿಸದಿದ್ದರೆ, ಹಲ್ಲಿನ ಸಮಸ್ಯೆಗಳು ಬಹುಬೇಗನೆ ಬರುತ್ತವೆ. ಹಲ್ಲು ಹುಳುಕಾಗಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದು.
ಸಕ್ಕರೆಯುಕ್ತ ಆಹಾರ ಅಥವಾ ಸಿಹಿತಿಂಡಿಗಳ ಅತಿಯಾದ ಸೇವನೆ
ಎಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಹಲ್ಲು ಬಹುಬೇಗನೆ ಹುಳುಕಾಗುತ್ತದೆ. ಸಕ್ಕರೆಯುಕ್ತ ಆಹಾರಗಳಿಂದ ಬಾಯಿಯಲ್ಲಿ ಬಹಳ ಹೊತ್ತಿನವರೆಗೆ ಬ್ಯಾಕ್ಟೀರಿಯಾ ಇರುವುದರಿಂದ ಹಲ್ಲು ಹುಳುಕಿಗೆ ಕಾರಣವಾಗುತ್ತದೆ.
ಆಗಾಗ ದಂತವೈದ್ಯರನ್ನು ಭೇಟಿಯಾಗದೆ ಇರುವುದು
ಆಗಾಗ ದಂತವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಹಲ್ಲಿನ ಕ್ಲೀನಿಂಗ್ ಇರಬಹುದು, ಸಣ್ಣ ಹುಳುಕಾದಾಗ ಫಿಲ್ಲಿಂಗ್ ಇರಬಹುದು ಅಥವಾ ಆಯಾ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಆಗಾಗ ಕಂಡುಕೊಳ್ಳುವುದರಿಂದ ಮುಂದಿನ ಪರಿಣಾಮ ಘೋರವಾಗಿರುವುದಿಲ್ಲ. ಕ್ಲೀನಿಂಗ್ ಆಗಾಗ ಮಾಡಿಸಿಕೊಳ್ಳುವುದು, ಹಲ್ಲಿನ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರದ ಸಣ್ಣ ತುಣುಕುಗಳನ್ನು ತೆಗೆದು ಕ್ಲೀನ್ ಮಾಡುವುದು ಬಹಳ ಮುಖ್ಯ. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಹುಳುಕು ಹತ್ತಿರ ಸುಳಿಯುವುದಿಲ್ಲ.
ಧೂಮಪಾನ ಹಾಗೂ ತಂಬಾಕಿನ ಸೇವನೆ
ಧೂಮಪಾನಕ್ಕೂ ಹಲ್ಲು ಹುಳುಕಿಗೂ ಏನು ಸಂಬಂಧ ಎಂದು ಯೋಚಿಸಬೇಡಿ. ಹಲ್ಲು ಹುಳುಕಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ ಧೂಮಪಾನ ಹಾಗೂ ತಂಬಾಕಿನ ಬಳಕೆ. ತಂಬಾಕಿನ ಯಾವುದೇ ವಸ್ತುಗಳನ್ನು ಬಳಸಿದರೂ ಕೂಡಾ, ಹಲ್ಲಿನ ಆರೋಗ್ಯ ಹದಗೆಡುತ್ತದೆ. ಹಲ್ಲು, ಸವಡು ಸೇರಿದಂತೆ ಬಾಯಿಯ ಆರೋಗ್ಯ ಹಾಳಾಗುತ್ತದೆ.
ಆಲ್ಕೋಹಾಲ್ ಸೇವನೆ
ಮದ್ಯಪಾನ ಮಾಡುವುದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ಬಾಯಿ ಒಣಗಿದಂತಾಗಿ, ಬಾಯಿಯ ಜೊಲ್ಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಕಡಿಮೆ ಸಲೈವಾ ಉತ್ಪತ್ತಿಯಾದಾಗ ಸಹಜವಾಗಿಯೇ ಹಲ್ಲಿನ ಹುಳುಕು ಹೆಚ್ಚುತ್ತದೆ.
ಹಲ್ಲನ್ನು ಉಪಕರಣವಾಗಿ ಬಳಸುವುದರಿಂದ
ಹಲ್ಲು ಗಟ್ಟಿಯಾಗಿದೆ ಎಂದುಕೊಂಡು ಗಟ್ಟಿ ಕವಚವಿರುವ ಬೀಜಗಳನ್ನು ಒಡೆಯಲು, ಯಾವುದಾದರೂ ಪ್ಯಾಕೆಟ್ಟನ್ನು ಬಿಡಿಸಲು ಹಲ್ಲಿನಿಂದ ಕಚ್ಚುವ ಮೂಲಕ ಹಲ್ಲಿನ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಇದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹಲ್ಲಿನ ಆರೋಗ್ಯ ಹೆಚ್ಚಿಸಲು ಏನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ದಿನಕ್ಕೆ ಎರಡು ಬಾರಿ ಹಲ್ಲಿಜ್ಜಿ
ಇದು ಹಲ್ಲು ಹುಳುಕಾಗಿಸುವುದನ್ನು ತಪ್ಪಿಸುತ್ತದೆ. ಹಲ್ಲಿನ ಸಂದಿನಲ್ಲಿ ಸೇರಿದ ಕೊಳೆ ಹೊರಟು ಹೋಗಿ, ಹಲ್ಲು ಆರೋಗ್ಯಪೂರ್ಣವಾಗಿ ಇರುತ್ತದೆ. ಹಲ್ಲುಜ್ಜಲು ಯಾವಾಗಲೂ ಫ್ಲೋರೈಡ್ ಟೂತ್‌ಪೇಸ್ಟ್ ಹಾಗೂ ಮೆತ್ತಗಿನ ಬ್ರಷ್ ಅನ್ನು ಬಳಸುವುದು ಒಳ್ಳೆಯದು.
ಹಲ್ಲನ್ನು ಆಗಾಗ ಫ್ಲಾಸ್ ಮಾಡುವುದು ಒಳ್ಳೆಯದು
ಟೂತ್ ಬ್ರಷ್‌ನಿಂದ ತೆಗೆಯಲು ಸಾಧ್ಯವಾಗದ, ಹಲ್ಲಿನ ಸಂದಿಯಲ್ಲಿ ಸೇರಿಕೊಂಡಿರುವ ಆಹಾರ ಹಳೆಯ ತುಣುಕುಗಳುಫ್ಲಾಸ್ ಮಾಡುವ ಮೂಲಕ ಮಾತ್ರ ತೆಗೆಯಬಹುದು.
ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ
ಅಸಿಡಿಕ್ ಹಾಗೂ ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ. ಸೋಡಾಗಳು, ಹಣ್ಣಿನ ಜ್ಯೂಸ್‌ಗಳು, ಕ್ಯಾಂಡಿ ಇತ್ಯಾದಿಗಳನ್ನು ತಿಂದಾಗ ಅಥವಾ ಕುಡಿದಾಗ ಬಾಯಿಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
ಜಗಿಯುವ ಅಭ್ಯಾಸ ಬಿಡಿ
ಆಗಾಗ ಏನಾದರೊಂದು ಜಗಿಯುತ್ತಿರುವ ಅಭ್ಯಾಸವಿದ್ದರೆ ಬಿಡಿ. ಆಗಾಗ ಏನಾದರೂ ತಿನ್ನುವುದರಿಂದ ಬಾಯಿಯಲ್ಲಿ ಆಹಾರಗಳು ಹಾಗೆಯೇ ಉಳಿದುಹೋಗುತ್ತವೆ. ಈ ತುಣುಕುಗಳು ಹಲ್ಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.
ಚ್ಯೂಯಿಂಗ್ ಗಮ್ ಬಿಡಿ
ಚ್ಯೂಯಿಂಗ್ ಗಮ್ ತಿನ್ನುವ ಮೂಲಕ ಬಾಯಿಯನ್ನು ಫ್ರೆಶ್ ಆಗಿರಿಸಬಹುದು. ಆದರೆ, ಸಿಹಿಯಾದ ಚ್ಯೂಯಿಂಗ್‌ಗಮ್ ಒಳ್ಳೆಯದಲ್ಲ. ಪುದಿನಯುಕ್ತ ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ಯಾವಾಗಲಾದರೊಮ್ಮೆ ಅಗತ್ಯ ಬಿದ್ದಾಗ ಬಳಸಬಹುದು.
ದಂತ ವೈದ್ಯರನ್ನು ಭೇಟಿಯಾಗಿ
ಆಗಾಗ ದಂತವೈದ್ಯರನ್ನು ಭೇಟಿಯಾಗಿ ಹಲ್ಲಿನ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯ ಬಿದ್ದಾಗ ಕ್ಲೀನಿಂಗ್ ಮಾಡಿಸಿಕೊಳ್ಳಿ.
ಇದನ್ನೂ ಓದಿ: World Sleep Day: ಇಂದು ವಿಶ್ವ ನಿದ್ರಾ ದಿನ; ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು?