Site icon Vistara News

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

Allergic Asthma

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Exit mobile version