Site icon Vistara News

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Allergies During Monsoon

ಮಳೆಗೆ ಬಿಡುವಿಲ್ಲದ (Allergies during Monsoon) ಕಾಲವಿದು. ರಾತ್ರಿಯೆಲ್ಲ ಮಳೆ ಸುರಿದಾಗ, ಬೆಳಗಿನ ಸ್ವಚ್ಛ ಹವೆಯನ್ನು ನೋಡಿದರೆ ಎದೆ ಹಗುರಾಗುವಷ್ಟು ತಾಜಾ ಗಾಳಿಯನ್ನು ಉಸಿರಾಡಬಹುದು ಎನ್ನುವ ಭಾವ ಬರುತ್ತದೆ. ಆದರೆ ಅಸ್ತಮಾ, ಅಲರ್ಜಿ ಇರುವವರಿಗೆ ಮಳೆಗಾಲವೂ ಕಷ್ಟವೇ. ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದರಿಂದಲೇ ಇನ್ನಷ್ಟು ಅಲರ್ಜಿ ಸಮಸ್ಯೆ ಬಿಗಡಾಯಿಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದರಂತೂ ಶ್ವಾಸನಾಳಗಳೂ ಬಿಗಿದು, ಆಷಾಢದ ಗಾಳಿಯಂತೆಯೇ ಶ್ವಾಸಕೋಶವೂ ಶಬ್ದ ಮಾಡಲಾರಂಭಿಸುತ್ತದೆ. ಇವಿಷ್ಟು ಸಾಲದೆಂಬಂತೆ ನಾನಾ ರೀತಿಯ ವೈರಸ್‌ ಸೋಂಕುಗಳು ಅಮರಿಕೊಂಡು, ಸೋಂಕು ಗುಣವಾದ ಮೇಲೂ ಅಲರ್ಜಿ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತವೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ?

ಏಕೆ ಹೆಚ್ಚುತ್ತದೆ?

ಈ ಮಳೆಗೆ, ಒಂದು ಹಿಡಿ ಮಣ್ಣು ಇದ್ದಲ್ಲೂ ಹುಲ್ಲು ಹಸಿರಾಗುತ್ತದೆ. ಈ ಹುಲ್ಲಿನಿಂದ ವಾತಾವರಣ ಸೇರುವ ಅಲರ್ಜಿಕಾರಕಗಳು ಹಲವು ರೀತಿಯವು. ಜೋರು ಗಾಳಿಯಲ್ಲಿ ಇದರ ಹೂವಿನ ಪರಾಗಗಳೆಲ್ಲ ಎಲ್ಲೆಡೆ ಪಸರಿಸುತ್ತವೆ. ಅಲರ್ಜಿಗೆ ಕಾರಣವಾಗುತ್ತವೆ. ತೇವ ಹೆಚ್ಚಿದ್ದಲ್ಲಿ ಫಂಗಸ್‌ ಪ್ರಮಾಣವೂ ಹೆಚ್ಚು. ಜೋರು ಮಳೆಯ ಪರಿಸರದಲ್ಲಿ ಗೋಡೆ, ಬಾಗಿಲುಗಳ ಮೇಲೂ ಫಂಗಸ್‌ ಬೆಳೆದಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಅಸ್ತಮಾ ಸಮಸ್ಯೆ ಬಿಗಡಾಯಿಸಬಹುದು. ಯಾವುದೇ ರೀತಿಯ ಪರಾಗಗಳ ಅಲರ್ಜಿಯೂ ಈಗ ತೊಂದರೆ ಕೊಟ್ಟೀತು. ಜೋರು ಗಾಳಿ ಮತ್ತು ಮೋಡ ಮುಸುಕಿದ ವಾತಾವರಣಗಳೇ ಇದಕ್ಕೆ ಕಾರಣ.

ಲಕ್ಷಣಗಳು

ಅಲರ್ಜಿ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು- ಸೀನುಗಳ ಸರಮಾಲೆ, ಮೂಗು ಸೋರುವುದು, ಒಣ ಕೆಮ್ಮು, ಉಸಿರಾಡಲು ಕಷ್ಟವಾಗುವುದು, ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಪುಪ್ಪುಸಗಳಿಂದ ಶಬ್ದ ಬರುವುದು, ಸುಸ್ತು-ಆಯಾಸ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ತುರಿಕೆ, ಕಣ್ಣು ಊದಿಕೊಂಡು ನೀರು ಬರುವುದು, ತಲೆನೋವು, ಮೈ ಮೇಲೆ ಗುಳ್ಳೆಗಳು ಬಂದು ಕೆಂಪಾಗುವುದು… ಇತ್ಯಾದಿ.

ಏನು ಮಾಡಬೇಕು?

ಅಸ್ತಮಾ, ಅಲರ್ಜಿ ತೊಂದರೆಯಿದೆ ಎಂದಾದರೆ ವೈದ್ಯರು ಹೇಳಿದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಅಲರ್ಜಿ ನಿಯಂತ್ರಣಕ್ಕೆ ಸರಿಯಾದ ಚಿಕಿತ್ಸಾ ವಿಧಾನವನ್ನು ಪಾಲಿಸುವುದು ಅತ್ಯಗತ್ಯ. ಪಫ್‌ಗಳನ್ನು ತೆಗೆದುಕೊಳ್ಳಬೇಕು ಎಂದಾದರೆ, ದಿನದ ಲೆಕ್ಕವನ್ನು ಪಕ್ಕಾ ಇರಿಸಿಕೊಳ್ಳಿ. ಸೋಂಕುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯ ಎಂದಾದಲ್ಲಿ ಫ್ಲೂ ಲಸಿಕೆ ಪಡೆಯಿರಿ. ಯಾವೆಲ್ಲ ಆಹಾರಗಳು ಅಲರ್ಜಿ ತರುತ್ತವೆ ನಿಮಗೆ ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚಿನ ನೆರವನ್ನು ನೀಡಬಹುದು. ಮನೆಯೊಳಗೆ ಹೆಚ್ಚಿನ ತೇವ ನಿಲ್ಲದಂತೆ ಜಾಗ್ರತೆ ಮಾಡಿ. ಸಾಕಷ್ಟು ಗಾಳಿ-ಬೆಳಕು ಆಡುವಂತಿರಲಿ. ಮಳೆ ಇಲ್ಲದ ಸಮಯದಲ್ಲಿ, ಬಿಸಿಲಿದ್ದಾಗ ಕಿಟಕಿಗಳನ್ನು ತೆರೆದಿಡುವುದು ಸಹಕಾರಿ. ಹಾಗಿಲ್ಲದಿದ್ದರೆ ಎಕ್ಸಾಸ್ಟ್‌ ಫ್ಯಾನ್‌ಗಳನ್ನು ಅಳವಡಿಸಿಕೊಳ್ಳಿ. ಮನೆಯೊಳಗೆ ದೂಳು, ಕಸ ಉಳಿಯದಿರಲಿ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ, ಅವುಗಳ ಕೂದಲಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. ಹಾಸಿಗೆ-ಹೊದಿಕೆಯ ವಸ್ತ್ರಗಳನ್ನು ಕಪಾಟಿನಿಂದ ನೇರವಾಗಿ ತೆಗೆದು ಉಪಯೋಗಿಸಬೇಡಿ. ಅವುಗಳನ್ನು ಬಿಸಿಲಿಗೆ ಆರಲು ಬಿಡಿ ಅಥವಾ ಡ್ರೈಯರ್‌ಗೆ ಹಾಕಿ. ಅದಿಲ್ಲದಿದ್ದರೆ ಇಸ್ತ್ರಿ ಮಾಡಿ ಉಪಯೋಗಿಸಿ. ಇದರಿಂದ ಮೈಟ್‌ಗಳ ಉಪಟಳವನ್ನು ತಪ್ಪಿಸಬಹುದು.
ಮನೆಯಿಂದ ಹೊರಗೆ ಹೋಗುವಾಗ ಬೆಚ್ಚಗಿನ ವಸ್ತ್ರಗಳು ಅಗತ್ಯ. ಗಾಳಿ ಹೆಚ್ಚಿದ್ದರೆ ಮುಖಕ್ಕೆ ಮಾಸ್ಕ್‌ ಹಾಕಿ. ಕಟುವಾದ ಪರಿಮಳಗಳು ನಿಮಗೆ ಹೇಳಿಸಿದ್ದಲ್ಲ. ನಿಮ್ಮ ವೈಯಕ್ತಿಕ ಶುಚಿತ್ವದ ವಸ್ತುಗಳಾದ ಸೋಪು, ಶಾಂಪು, ಕ್ರೀಮ್‌ಗಳಿಗೆ ಕಟುವಾದ ಘಮವಿದ್ದರೆ, ಅದನ್ನು ಬದಲಾಯಿಸಿ. ಪರ್ಫ್ಯೂಮ್‌ಗಳು ಸಹ ತೊಂದರೆ ತಂದಾವು, ಜೋಕೆ. ಮಳೆ-ಚಳಿ ಏನೇ ಆದರೂ ದಿನವೂ ಸ್ನಾನ ಮಾಡಿ. ಹೊರಗಿನಿಂದ ಬಂದಾಕ್ಷಣ ಆ ಬಟ್ಟೆಗಳನ್ನು ಬದಲಿಸಿ, ಕೈ-ಕಾಲು ತೊಳೆದುಕೊಳ್ಳಿ. ಇದರಿಂದ ಸೋಂಕು ಮತ್ತು ಅಲರ್ಜಿಕಾರಕಗಳನ್ನು ನಿಯಂತ್ರಿಸಬಹುದು. ಉಗುರುಗಳನ್ನು ಕತ್ತರಿಸಿ, ಸ್ವಚ್ಛ ಮಾಡಿಕೊಳ್ಳಿ.

ಇದನ್ನೂ ಓದಿ: Fatty Liver Problem: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಮೂರು ಪೇಯಗಳಿಂದ ಎಂದೆಂದಿಗೂ ದೂರವಿರಿ

ಆಹಾರ

ಸಮತೋಲಿತ ಮತ್ತು ಸತ್ವಭರಿತ ಆಹಾರವನ್ನು ಸೇವಿಸುವುದು ಹೆಚ್ಚಿನ ತೊಂದರೆಯನ್ನು ಬುಡದಲ್ಲೇ ತಪ್ಪಿಸುತ್ತದೆ. ಒಮೇಗಾ 3 ಕೊಬ್ಬಿನಾಮ್ಲ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದೀಗ ಬೆಣ್ಣೆ ಹಣ್ಣು ಅಥವಾ ಅವಕಾಡೊಗಳ ಕಾಲ. ಒಮೇಗಾ 3 ಕೊಬ್ಬಿನಾಮ್ಲ ಹೇರಳವಾಗಿರುವ ಅವುಗಳನ್ನು ಮನಸೋಇಚ್ಛೆ ತಿನ್ನಿ. ಜೊತೆಗೆ ವಿಟಮಿನ್‌ ಸಿ ಹೆಚ್ಚಿರುವ ಕಿತ್ತಳೆ, ಬೆರ್ರಿಗಳು, ಪಾಲಕ್‌ ಸೊಪ್ಪು, ಕ್ಯಾಪ್ಸಿಕಂನಂಥವು ನಿಮಗೆ ಬೇಕು. ಚೆನ್ನಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಬಾಯಾರಿಕೆಯೇ ಆಗುವುದಿಲ್ಲ ಎಂಬ ನೆವ ಹೇಳಬೇಡಿ. ಹರ್ಬಲ್‌ ಚಹಾಗಳು, ಸೂಪ್‌ಗಳನ್ನು ಯಥೇಚ್ಛ ಕುಡಿಯಿರಿ.

Exit mobile version