ಬಾದಾಮಿಯ ಸದ್ಗುಣಗಳ ಬಗ್ಗೆ ಬಹಳಷ್ಟು ಕೇಳಿರುತ್ತೇವೆ, ಓದಿರುತ್ತೇವೆ. ಆದರೆ ಅದನ್ನು ತಿನ್ನುವ ಪ್ರಮಾಣ ಎಷ್ಟಿರಬೇಕು ಎಂಬ ಪ್ರಶ್ನೆ ಹಲವರಲ್ಲಿದೆ. ʻಇದಮಿತ್ಥಂʼ ಎನ್ನುವಂಥ ಉತ್ತರ ಇಲ್ಲದಿದ್ದರೂ, ಆಯಾ ವ್ಯಕ್ತಿಗಳ ಅಗತ್ಯಕ್ಕೆ ಅನುಸಾರವಾಗಿ ಕೆಲವು ಮಾರ್ಗಸೂಚಿಗಳನ್ನು ತಜ್ಞರು ನೀಡಿದ್ದಾರೆ. ಯಾರಿಗೆ, ಎಷ್ಟು ಬೇಕು ಮತ್ತು ಸಾಕು ಎಂಬುದನ್ನು ಸರಿಯಾಗಿ ಅರಿತುಕೊಂಡರೆ, ಆರೋಗ್ಯವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬಹುದು.
ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸಿದಾಗ, ಹಲವರಲ್ಲಿ ಜೀರ್ಣಾಂಗದ ಸಮಸ್ಯೆ ಉಂಟಾಗುತ್ತದೆ. ಆದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸಿಯೂ ಜಠರ ಸ್ವಾಸ್ಥ್ಯವನ್ನು ಹಾಳುಗೆಡಹದೆ ಉತ್ತಮಗೊಳಿಸುವ ಬಗ್ಗೆ ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕಿ ಡಾ. ಆಲಿಸ್ ಕ್ರೀಡನ್ ಅಧ್ಯಯನ ನಡೆಸಿದ್ದಾರೆ. ಇದರ ಪ್ರಕಾರ, ನಮ್ಮ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವ ಬ್ಯೂಟರೇಟ್ ಎನ್ನುವ ರಾಸಾಯನಿಕದ ಮಟ್ಟವನ್ನು ಸುಧಾರಿಸಲು ಬಾದಾಮಿ ಸೇವನೆ ಯೋಗ್ಯವಂತೆ. ದಿನಕ್ಕೆ ೬೫ ಗ್ರಾಂನಷ್ಟು, ಅಂದರೆ ಸುಮಾರು ೪೬ ಇಡೀ ಬಾದಾಮಿ ಸೇವನೆಯಿಂದ ನಮ್ಮ ಜಠರದ ಆರೋಗ್ಯವನ್ನು ಸುಧಾರಿಸಲು ಸಾಧ್ಯ ಎನ್ನುತ್ತದೆ ಅವರ ಅಧ್ಯಯನ. ಆದರೆ ಸೇವಿಸುವ ಪ್ರಮಾಣದ ಬಗ್ಗೆ ಭಾರತೀಯ ತಜ್ಞರಿಂದ ಸ್ವಲ್ಪ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದೆ.
ಸೇವಿಸಬೇಕಾದ ಬಾದಾಮಿಯ ಪ್ರಮಾಣ ನಿರ್ಧಾರವಾಗುವುದು ಆಯಾ ವ್ಯಕ್ತಿಗಳ ಆರೋಗ್ಯ ಸ್ಥಿತಿ, ಆಹಾರ ಪದ್ಧತಿ ಮತ್ತು ಪ್ರಾದೇಶಿಕ ಹವಾಮಾನಗಳ ಮೇಲೆ. ಚಳಿ ದೇಶಗಳಲ್ಲಿ ಸೇವಿಸುವಷ್ಟು ಬಾದಾಮಿಗಳ ಸೇವನೆ ಉಷ್ಣವಲಯದ ದೇಶಗಳಲ್ಲಿ ಅಗತ್ಯವಿಲ್ಲ. “ಇಡಿಯಾದ ಒಣ ಬಾದಾಮಿಗಳು ಭಾರತದಂಥ ಉಷ್ಣವಲಯದ ಹವಾಮಾನಗಳಲ್ಲಿ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗಾಗಿ ಅವುಗಳನ್ನು ನೀರು ಅಥವಾ ಹಾಲಿನಲ್ಲಿ ರಾತ್ರಿಡೀ ನೆನೆಸಿ, ಬೆಳಗ್ಗೆ ಸೇವಿಸುವುದು ಕ್ಷೇಮ. ಸಾಮಾನ್ಯ ವ್ಯಕ್ತಿಗೆ ಬೆಳಗಿನ ಉಪಾಹಾರದೊಂದಿಗೆ, ನೆನೆಸಿದ ಏಳೆಂಟು ಬಾದಾಮಿಗಳು ಸಾಕಾಗಬಹುದು. ಆದರೆ ಕಠಿಣ ದೇಹಶ್ರಮದ ಕೆಲಸ ಮಾಡುವ ಯುವಜನರಿಗೆ ೨೦-೨೨ ಬಾದಾಮಿಗಳವರೆಗೂ ಬೇಕಾಗಬಹುದು. ತಮಗೆಷ್ಟು ಬೇಕು ಎಂಬುದನ್ನು ಆಯಾ ವ್ಯಕ್ತಿಗಳೇ ನಿರ್ಧರಿಸಿಕೊಳ್ಳಬಹುದು” ಎನ್ನುತ್ತಾರೆ ಆಹಾರ ತಜ್ಞೆ ಉಷಾಕಿರಣ್ ಸಿಸೋಡಿಯ.
ಈ ಪ್ರಯೋಗಕ್ಕಾಗಿ ೮೭ ವಯಸ್ಕ ಆರೋಗ್ಯವಂತರನ್ನು ಪರಿಗಣಿಸಲಾಗಿತ್ತು. ೧೮ರಿಂದ ೪೫ ವರ್ಷಗಳ ವಯೋಮಾನದ ಇವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ನಾಲ್ಕು ವಾರಗಳ ಅವಧಿಯಲ್ಲಿ ನಡೆಸಲಾಗಿದ್ದ ಈ ಪ್ರಯೋಗದಲ್ಲಿ, ಎರಡು ಗುಂಪುಗಳಿಗೆ ನಿಗದಿತ ಪ್ರಮಾಣದ ಬಾದಾಮಿಯನ್ನು ಸೇವಿಸಲು ಸೂಚಿಸಲಾಗಿತ್ತು. ಮೂರನೇ ಗುಂಪಿಗೆ ಬಾದಾಮಿಯ ಬದಲು, ಅಷ್ಟೇ ಕ್ಯಾಲರಿ ನೀಡುವ ಮಫಿನ್ ಸೇವಿಸುವಂತೆ ತಿಳಿಸಲಾಗಿತ್ತು. ಪ್ರಯೋಗದ ಅವಧಿಯ ನಂತರ, ಅವರ ಜೀರ್ಣಾಂಗದಲ್ಲಿನ ಬ್ಯೂಟರೇಟ್ ಅಂಶಗಳನ್ನು ಗಮನಿಸಿದಾಗ, ಮಫಿನ್ ಸೇವಿಸಿದ ಗುಂಪಿಗಿಂತ ಉಳಿದೆರಡು ಗುಂಪುಗಳಲ್ಲಿ ಈ ರಾಸಾಯನಿಕದ ಅಂಶ ಉತ್ತಮ ಪ್ರಮಾಣದಲ್ಲಿ ವೃದ್ಧಿಸಿದ್ದು ಗೋಚರಿಸಿತ್ತು.
ಇದನ್ನೂ ಓದಿ |Healthy food | ಒಳ್ಳೆಯ ಬಾದಾಮಿಯಿಂದ ಕೆಟ್ಟ ಪರಿಣಾಮವೂ ಇದೆ ಅಂದರೆ ನಂಬ್ತೀರಾ?
ದಿನದಲ್ಲಿ ಹಸಿವಾದಾಗ ಸಿಕ್ಕಿದ್ದನ್ನು ಬಾಯಿಗೆ ಹಾಕುವ ಬದಲು, ಒಂದಿಷ್ಟು ಬಾದಾಮಿಗಳನ್ನು ಬಾಯಾಡುವುದು ಎಲ್ಲಾ ಲೆಕ್ಕದಲ್ಲೂ ಸೂಕ್ತವಾದದ್ದು. ಹೆಚ್ಚಿನ ಬಾದಾಮಿಗಳ ಸೇವನೆಯಿಂದ ನಮ್ಮ ಜಠರದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವ ಬ್ಯೂಟರೇಟ್‌ನಿಂದ ದೇಹಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಜೀರ್ಣಾಂಗದಿಂದ ನಮ್ಮ ರಕ್ತವನ್ನು ಪ್ರವೇಶಿಸುವ ಈ ರಾಸಾಯನಿಕದಿಂದ ಶ್ವಾಸಕೋಶ, ಯಕೃತ್ತು ಮತ್ತು ಮೆದುಳಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮಾತ್ರವಲ್ಲ, ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ಪರಿಚಲನಾ ವ್ಯವಸ್ಥೆ ಪ್ರವೇಶಿಸುವುದನ್ನು ತಡೆಯುವ ಬ್ಯೂಟರೇಟ್, ಹೊಟ್ಟೆಯ ಉರಿಯೂತವನ್ನೂ ಶಮನಗೊಳಿಸುತ್ತದೆ.
ಇನ್ನು ಬಾದಾಮಿಯ ಪೌಷ್ಟಿಕಾಂಶಗಳ ಬಗ್ಗೆ ಹೇಳುವುದಾದರೆ, ವಿಟಮಿನ್ ಇ, ವಿಟಮಿನ್ ಬಿ೧, ಥಿಯಮಿನ್, ವಿಟಮಿನ್ ಬಿ೩, ಫೋಲೇಟ್, ವಿಟಮಿನ್ ಬಿ೯, ಪ್ರೊಟೀನ್, ನಾರು, ಮೆಗ್ನೀಶಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಪ್ರಧಾನವಾಗಿವೆ. ಕೆಲವು ಸೂಕ್ಷ್ಮ ಪೋಷಕಾಂಶಗಳು ಸಹ ಇದರಿಂದ ದೊರೆಯುತ್ತವೆ. ಇದರಿಂದ ಮೂಳೆಗಳ ಸಾಂದ್ರತೆ ಬಲಗೊಳ್ಳುತ್ತದೆ, ಕೆಂಪು ರಕ್ತಕಣಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ, ಸ್ನಾಯುಗಳು ಸದೃಢವಾಗುತ್ತವೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಹೃದ್ರೋಗಿಗಳು ಮತ್ತು ಮಧುಮೇಹಿಗಳು ಸಹ ಸೇವಿಸಬಹುದಾದ ಆಹಾರವಿದಾಗಿದ್ದು, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೀರ್ಣಾಂಗದ ಕ್ಯಾನ್ಸರ್ ತಡೆಗಟ್ಟಲು ನೆರವಾಗುವ ಈ ಪುಟ್ಟ ಬೀಜಗಳು, ಅಲ್ಜೈಮರ್ಸ್ ಉಲ್ಭಣಿಸುವುದನ್ನು ತಡೆಯಲು ಸಹಕಾರಿ.
ಇದನ್ನೂ ಓದಿ | ವಾಯು ಮಾಲಿನ್ಯ | ನಿಮ್ಮ ಚರ್ಮ, ಕೂದಲನ್ನು ರಕ್ಷಿಸಿಕೊಳ್ಳಲು 6 ದಾರಿ
ಇದನ್ನು ನೆನೆಸಿಯೇ ತಿನ್ನಬೇಕೆಂದೇನೂ ಇಲ್ಲ. ತೆಂಗಿನ ಹಾಲಿನಂತೆ ಬಾದಾಮಿಯ ಹಾಲು ಸಹ ಲಭ್ಯವಿದೆ. ಮಾತ್ರವಲ್ಲ, ಬಾದಾಮಿ ಎಣ್ಣೆ ಮತ್ತು ಬಾದಾಮಿ ಬೆಣ್ಣೆ (ಪೀನಟ್ ಬಟರ್‌ನಂತೆ) ಸಹ ದೊರೆಯುತ್ತವೆ. ಬಾದಾಮಿಯನ್ನು ನಾನಾ ರೀತಿಯ ಸೌಂದರ್ಯವರ್ಧಕಗಳಲ್ಲೂ ಉಪಯೋಗಿಸಲಾಗುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುವುದೇ ಅಲ್ಲದೆ, ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.