Site icon Vistara News

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Aloe Vera face mask

ಬೇಸಿಗೆಯಲ್ಲಿ ಸೆಕೆಗೆ ಮುಖವೆಲ್ಲ ಕೆಂಪಾಗಿ, ಬೆವರುಸಾಲೆಯಾಗಿ ಒದ್ದಾಡುವವರೇ ಹೆಚ್ಚು. ದುಬಾರಿ ಬೆಲೆಯ ಕ್ರೀಮುಗಳನ್ನು ಹಣ ತೆತ್ತು ತಂದು ಉಪಯೋಗಿಸಿದರೂ, ಪ್ರಯೋಜನ ಕಾಣದಿದ್ದಾಗ… ಹೊಸದನ್ನು ಹುಡುಕುತ್ತೇವೆ. ಇವೆಲ್ಲ ಸರ್ಕಸ್‌ ಮಾಡುವ ಬದಲು, ಸರಳವಾಗಿ ಅಲೋವೇರಾ ಅಥವಾ ಲೋಳೆಸರ ಉಪಯೋಗಿಸಿ ನೋಡಬಹುದು. ಸಾವಿರಾರು ವರ್ಷಗಳಿಂದ ಸೌಂದರ್ಯವರ್ಧಕವಾಗಿ ಇದು ಬಳಕೆಯಲ್ಲಿದೆ. ಹಲವು ರೀತಿಯ ವಿಟಮಿನ್‌ಗಳು, ಅಮೈನೊ ಆಮ್ಲಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಲೋಳೆಸರವನ್ನು ಉಪಯೋಗಿಸಿಕೊಂಡು ಹಲವು ರೀತಿಯ ಫೇಸ್‌ ಮಾಸ್ಕ್‌ಗಳನ್ನು ಮಾಡಬಹುದು. ಬಿಸಿಲಿನಲ್ಲಿ ಸುಟ್ಟ ಬದನೆಕಾಯಿಯಂತಾಗುವ ಚರ್ಮಕ್ಕೆ ಹೊಸ ಕಾಂತಿಯನ್ನು ತುಂಬಬಹುದು. ಇಲ್ಲಿವೆ (Aloe Vera Benefits) ವಿವರಗಳು.

ಲೋಳೆಸರವೇ ಏಕೆ?

ಇದಕ್ಕೆ ಚರ್ಮವನ್ನು ತಂಪಾಗಿಸುವ ಮತ್ತು ತೇವ ಹೆಚ್ಚಿಸುವ ಗುಣಗಳಿವೆ. ಹಾಗಾಗಿಯೇ ಹಲವಾರು ಸ್ಕಿನ್‌ಕೇರ್‌ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಿಸಿಲಿಗೆ ಸುಟ್ಟಂತಾದರೆ, ಮೊಡವೆಯ ತೊಂದರೆಗೆ, ಸೋರಿಯಾಸಿಸ್‌ ಮತ್ತು ಎಕ್ಸಿಮಾದಂಥ ಚರ್ಮರೋಗಗಳಲ್ಲಿ ಇದು ಔಷಧಿಯಾಗಿ ಬಳಕೆಯಾಗುತ್ತಿದೆ. ಇದರೊಳಗಿರುವ ನೈಸರ್ಗಿಕ ಜೆಲ್‌ನಂಥ ವಸ್ತುವನ್ನು ಬಹಳಷ್ಟು ಔಷಧಿಗಳಲ್ಲಿ ಬಳಸಲಾಗುತ್ತದೆ. ಈ ಜೆಲ್‌ ಉಪಯೋಗಿಸಿಕೊಂಡು ಹಲವು ಫೇಸ್‌ಮಾಸ್ಕ್‌ಗಳನ್ನು ನಾವೇ ಮಾಡಿಕೊಳ್ಳಬಹುದು.

ಲೋಳೆಸರ-ಸೌತೇಕಾಯಿ ಮಾಸ್ಕ್‌

ಎರಡು ಚಮಚದಷ್ಟು ಲೋಳೆಸರ್‌ ಜೆಲ್‌ಗೆ ಒಂದು ಚಮಚದಷ್ಟು ಸೌತೇಕಾಯಿ ರಸ ಸೇರಿಸಿ. ಅರ್ಧ ಚಮಚ ಜೇನುತುಪ್ಪವನ್ನೂ ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್‌ನಂತೆ ಲೇಪಿಸಿ. ೨೦ ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗಿದ್ದರೆ, ಇದು ತ್ವರಿತವಾಗಿ ಆರಾಮ ನೀಡುತ್ತದೆ.

ಲೋಳೆಸರ-ನಿಂಬೆ ಮಾಸ್ಕ್‌

ಎರಡು ಚಮಚ ಅಲೋವೇರ ಜೆಲ್‌, ಆರೆಂಟು ಹನಿಗಳಷ್ಟು ನಿಂಬೆ ರಸ, ಚಿಟಿಕೆ ಅರಿಶಿನ, ಒಂದು ಚಮಚದಷ್ಟು ಹಾಲಿನ ಕೆನೆ. ಇದನ್ನು ಚೆನ್ನಾಗಿ ಕಲೆಸಿ, ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ಬೆವರಿನಿಂದ ಕಳೆಗುಂದಿದ್ದಂಥ ಚರ್ಮಕ್ಕೆ ಈ ಮಾಸ್ಕ್‌ ಹೊಸ ಕಳೆಯನ್ನು ನೀಡುತ್ತದೆ.

ಮೊಸರು-ಅಲೋವೇರ ಮಾಸ್ಕ್‌

2 ಚಮಚ ಅಲೋವೇರ ಜೆಲ್‌ನೊಂದಿಗೆ ಒಂದು ಚಮಚ ಮೊಸರು, ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ, ಮುಖಕ್ಕೆ ಲೇಪಿಸಿ. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಬಿಸಿಲು ಅತಿಯಾಗಿ ಸೋಕಿದಾಗ ಚರ್ಮ ಸುಕ್ಕಾದಂತಿದ್ದರೆ, ಈ ಮಾಸ್ಕ್‌ ಸುಕ್ಕು ನಿವಾರಣೆಗೆ ನೆರವಾಗುತ್ತದೆ.

ಮುಲ್ತಾನಿ ಮಿಟ್ಟಿ ಜೊತೆಗೆ

2 ಚಮಚ ಅಲೇವೇರದ ಜೊತೆಗೆ ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿ, ಕೆಲವು ಹನಿಗಳಷ್ಟು ಟೀಟ್ರೀ ತೈಲವನ್ನು ಬೆರೆಸಿ ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದು ಮುಖದಲ್ಲಿ ಬೆವರಿನಿಂದ ಜಮೆಯಾದ ಕೊಳೆಯನ್ನು ತೆಗೆದು, ಚರ್ಮ ಉಸಿರಾಡುವಂತೆ ಮಾಡುತ್ತದೆ.

ಅಲೋವೇರ-ಪುದೀನಾ ಮಾಸ್ಕ್‌

ಅರ್ಧ ಚಮಚ ಪುದೀನಾ ಪೇಸ್ಟ್‌ಗೆ 2 ಚಮಚ ಅಲೋವೇರ ಜೆಲ್‌ ಸೇರಿಸಿ. ಇದಕ್ಕೆ ಒಂದು ಚಮಚ ಗುಲಾಬಿ ಜನ ಬೆರೆಸಿ, ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಮುಖವನ್ನು ತಾಜಾ ಆಗಿಸಿ, ತ್ವಚೆಗೆ ಹೊಸ ಕಾಂತಿಯನ್ನಿದು ನೀಡುತ್ತದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Exit mobile version