Site icon Vistara News

Alternative Of Mosquito Repellents: ಸೊಳ್ಳೆ‌ ಕಾಟದಿಂದ ಪಾರುಮಾಡುತ್ತವೆ ಈ ರಾಸಾಯನಿಕ ರಹಿತ ತೈಲಗಳು!

Alternative Of Mosquito Repellents

ಎಲ್ಲರಿಗೂ ಒಂದೊಂದು ಕಾಲ ಇರುವಂತೆ ಸೊಳ್ಳೆಗಳಿಗೂ ಕಾಲವೆಂಬುದಿದೆ. ಹಾಗೆ ನೋಡಿದರೆ ಸೊಳ್ಳೆಗಳ ಕಾಟ ವರ್ಷವಿಡೀ ಇರುವುದಕ್ಕೆ ಸಾಧ್ಯವಿದ್ದರೂ, ಬೇಸಿಗೆಯ ತುದಿ, ಸೋನೆ ಮಳೆಗಾಲ, ಋತು ಬದಲಾಗುವ ಸಮಯ- ಹೀಗೆ ಕೆಲವು ದಿನಗಳಲ್ಲಿ ಸೊಳ್ಳೆ ಕಾಟ ವಿಪರೀತ ಹೆಚ್ಚು. ಇದೇ ಸಮಯದಲ್ಲಿ ಡೆಂಗು, ಮಲೇರಿಯಾದಂಥ ಅನಿಷ್ಟದ ರೋಗಗಳೂ ಗಂಟು ಬೀಳುತ್ತವೆ. ಅದರಲ್ಲೂ ಕಿವಿಯಲ್ಲಿ ಗುಂ…ಯ್ ಹಾಡಿನೊಂದಿಗೆ ಎಲ್ಲೆಂದರಲ್ಲಿ ಕಚ್ಚಿ ಕೆಂಪೇರಿಸುವ ಇವುಗಳನ್ನು ದೂರ ಇಡಲು ಏನೇನೆಲ್ಲಾ ಸಾಹಸಗಳನ್ನು ಮಾಡಬೇಕಾಗುತ್ತದೆ. ಚಕ್ರವ್ಯೂಹದಂಥ (mosquito repellents) ಸೊಳ್ಳೆ ಕಾಯಿಲ್, ಲಿಕ್ವಿಡೇಟರ್, ರೆಪೆಲ್ಲೆಂಟ್ ಸ್ಪ್ರೇ, ಕ್ರೀಮು, ಪ್ಯಾಚ್- ಹೀಗೆ ಸೊಳ್ಳೆಗಳಿಂದ ಮುಕ್ತರಾಗಲು ಮತ್ತು ಡೆಂಘೆ, ಮಲೇರಿಯಾದಂಥ ರೋಗಗಳಿಂದ ದೂರವಾಗಲು ಹಲವು ಮಾರ್ಗಗಳ ಮೊರೆ ಹೋಗುತ್ತೇವೆ. ಆದರೆ ಈ ರಾಸಾಯನಿಕ ಪರಿಹಾರಗಳು (mosquito repellents) ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ನಾಂದಿ ಹಾಡಿದರೇನು ಮಾಡುವುದು? ಇವೆಲ್ಲಾ ಬಳಕೆಗೆ ಸುರಕ್ಷಿತವೇ?

ಇವೆಲ್ಲವೂ ಕ್ರಿಮಿ-ಕೀಟಗಳನ್ನು ದೂರ ಇರಿಸುವುದು ಹೌದು. ರೆಪೆಲ್ಲೆಂಟ್‌ಗಳು ಬೇಕಾದಾಗ ಬಳಸಿಕೊಳ್ಳಲು ಅನುಕೂಲಿಗಳಾಗಿ ಒದಗಿಬಂದು, ನೆಮ್ಮದಿಯ ನಿದ್ದೆ ನೀಡುವುದೂ ಸುಳ್ಳಲ್ಲ. ಆದರೆ ಇವುಗಳು ವಾತಾವರಣದ ಮೇಲೆ ಮತ್ತು ಬಳಕೆದಾರರ ಆರೋಗ್ಯದ ಮೇಲೆ ಉಂಟುಮಾಡುವ ಅಡ್ಡ ಪರಿಣಾಮಗಳೇನು ಎಂಬುದನ್ನು ಯೋಚಿಸಬೇಡವೇ? ತಜ್ಞರ ಪ್ರಕಾರ, ಮುಚ್ಚಿದ ಕೋಣೆಯಲ್ಲಿ ಒಂದು ದೊಡ್ಡ ಚಕ್ಕುಲಿಯಂಥ ಸೊಳ್ಳೆ ಬತ್ತಿಯನ್ನು ಉರಿಸುವುದು, ನೂರು ಸಿಗರೇಟ್ ಸೇದಿದ ಪರಿಣಾಮಕ್ಕೆ ಸಮ! ಸಿಗರೇಟಿನ ಹಾನಿಕಾರಕ ಪರಿಣಾಮಗಳು ತಿಳಿದಿರುವಂಥದ್ದೇ ಆಗಿರುವುದರಿಂದ, ಸೊಳ್ಳೆ ಬತ್ತಿಗಳನ್ನು ಉಪಯೋಗಿಸುವಾಗಲೂ ಎಚ್ಚರಿಕೆಯಿಂದ ಬಳಸುವುದು ಸೂಕ್ತ.

best mosquito repellents

ತಾಜಾ ಗಾಳಿಗೆ ಆಸ್ಪದವೇ ಇಲ್ಲದಂಥ ಜಾಗದಲ್ಲಿ ಇವುಗಳನ್ನು ಬಳಸಿದಷ್ಟಕ್ಕೂ, ಅಡ್ಡಪರಿಣಾಮದ ಮಟ್ಟ ಹೆಚ್ಚುತ್ತಲೇ ಹೋಗುತ್ತದೆ.

ದೀರ್ಘಾವಧಿಯಲ್ಲಿ ಇವುಗಳನ್ನು ಸತತವಾಗಿ ಬಳಸುವುದು, ಈ ರಾಸಾಯನಿಕಗಳ ಹೊಗೆಗೆ (mosquito repellents) ಸದಾ ಒಡ್ಡಿಕೊಳ್ಳುವುದು ಮುಂತಾದವು ಶ್ವಾಸಕೋಶಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಕೆಲವು ರೆಪೆಲ್ಲೆಂಟ್ ಕ್ರೀಮು ಮತ್ತು ಸ್ಪ್ರೇಗಳು ಚರ್ಮದ ಮೇಲೆ ಅಲರ್ಜಿ ತರುವ ಸಾಧ್ಯತೆಯಿದೆ. ಅವುಗಳು ಸೂಸುವ ಕೃತಕ ಪರಿಮಳಗಳು ನೆಗಡಿ-ಕೆಮ್ಮು ಮತ್ತಿತರ ಅಲರ್ಜಿಗಳನ್ನು ತರುವ ಸಂಭವ ಇಲ್ಲದಿಲ್ಲ.

ಹಾಗಾದರೇನು ಮಾಡಬಹುದು?

ನಮ್ಮ ಆವಾಸಗಳ ಸುತ್ತ ಸೊಳ್ಳೆ ಬೆಳೆಯದಂತೆ, ಬೆಳೆದರೂ ಇಳಿಯದಂತೆ ನೋಡಿಕೊಳ್ಳುವುದು ಮಹತ್ವದ ಸಂಗತಿ. ಸುತ್ತೆಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಮತ್ತು ನೀರು ನಿಲ್ಲುವುದನ್ನು ತಡೆಯಲಾಗದಿದ್ದರೆ ಅದಕ್ಕೆ ಕೀಟನಾಶಕ ಸಿಂಪಡಿಸುವುದು ಅಗತ್ಯ. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವ ಹೊತ್ತಿನಲ್ಲಿ ಕಿಟಕಿ-ಬಾಗಿಲುಗಳನ್ನು ಮುಚ್ಚುವುದು, ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆಗಳನ್ನು ಬಳಸುವುದು ಅಗತ್ಯ.

ಲಾವೆಂಡರ್ ತೈಲ

ಕೆಲವು ನೈಸರ್ಗಿಕ ಉತ್ಪನ್ನಗಳು ನಮ್ಮನ್ನು ಸೊಳ್ಳೆಗಳಿಂದ ದೂರ ಇರಿಸಲು ನೆರವಾಗುತ್ತವೆ. ಕೆಲವು ಹನಿ ಲಾವೆಂಡರ್ ತೈಲವನ್ನು ಅಷ್ಟೇ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಮೈಗೆಲ್ಲಾ ಲೇಪಿಸಿಕೊಳ್ಳಬಹುದು. ಇದರ ಪರಿಮಳವು ಸೊಳ್ಳೆಗಳನ್ನು ದೂರ ಅಟ್ಟಲು ನೆರವಾಗುತ್ತದೆ. ಮಾತ್ರವಲ್ಲ, ಇದರ ಔಷಧೀಯ ಗುಣಗಳು ಮೈ-ಕೈ ನೋವು ಕಡಿಮೆ ಮಾಡಿ, ಚರ್ಮಕ್ಕೂ ಲಾಭ ತರುತ್ತವೆ.

ಸಿಟ್ರೊನೆಲ್ಲ

ಎಸೆನ್ಷಿಯಲ್ ಆಯಿಲ್ ಗಳ ಪಟ್ಟಿಯಲ್ಲಿ ಲಾವೆಂಡರ್ ತೈಲದಂತೆ ಇದೂ ಒಂದು. ಹಲವು ನೈಸರ್ಗಿಕ ವಸ್ತುಗಳ ಮಿಶ್ರಣದಿಂದ ತಯಾರಾಗುವ ಈ ತೈಲ ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ದೂರ ಓಡಿಸುತ್ತದೆ. ಇದರ ತೈಲದಿಂದ ತಯಾರಿಸಲಾದ ಮೋಂಬತ್ತಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದನ್ನು ಮನೆಯ ಒಳ-ಹೊರಗೆ ಸುರಕ್ಷಿತವಾಗಿ ಉಪಯೋಗಿಸಬಹುದು.

ನಿಂಬೆ-ನೀಲಗಿರಿ ತೈಲ

ಇದಂತೂ ನಿಶ್ಚಿತವಾಗಿ ಸೊಳ್ಳೆಗಳಿಂದ ಪರಿಹಾರ ನೀಡುತ್ತದೆ. ಸುಮಾರು 32% ನಷ್ಟು ನಿಂಬೆ-ನೀಲಗಿರಿ ತೈಲದ ಸಾಂದ್ರತೆಯ ಬೇರೆ ಎಣ್ಣೆಗಳನ್ನು ಉಪಯೋಗಿಸಿದಾಗ ಮೂರು ತಾಸುಗಳ ಕಾಲ ಸೊಳ್ಳೆಗಳಿಂದ ರಕ್ಷಣೆ ದೊರೆಯುವುದನ್ನು ಪ್ರಯೋಗಗಳು ಸಿದ್ಧಪಡಿಸಿವೆ. ಇಂಥ ಕೆಲವು ನೈಸರ್ಗಿಕ ಪರಿಹಾರಗಳನ್ನು ಹೆಚ್ಚಿನ ಅಥವಾ ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಬಳಸಿ, ಸೊಳ್ಳೆಕಾಟದಿಂದ ಮುಕ್ತರಾಗಬಹುದು.

ಇದನ್ನೂ ಓದಿ: Health Tips: ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಆಹಾರ ಶೇಖರಣೆ ಮಾಡಬೇಡಿ, ಯಾಕೆ ಗೊತ್ತೇ?

Exit mobile version