ಹಾಲು ಎಂಬುದೇ ಜೀವಜಗತ್ತಿನ ಆಹಾರದ ಒಂದು ವಿಸ್ಮಯ. ಮಗು ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ಸೃಷ್ಟಿಯಾಗುವ ಹಾಲನ್ನು ಮಗು ಜಗತ್ತಿಗೆ ಕಾಲಿಟ್ಟ ಕೂಡಲೇ ಉಣ್ಣತೊಡಗುತ್ತದೆ. ಅಮ್ಮನ ಹಾಲನ್ನೇ ಉಂಡು ಮಗು ಬೆಳೆಯುತ್ತದೆ. ಸಸ್ತನಿಗಳಿಗೆಲ್ಲವಕ್ಕೂ ಹಾಲೆಂದರೆ ಅಮೃತ. ಕೊಂಚ ದೊಡ್ಡವರಾಗುತ್ತಿದ್ದಂತೆ ಅಮ್ಮನ ಹಾಲನ್ನು ಬಿಟ್ಟು ನಿತ್ಯದ ಉಪಯೋಗಕ್ಕಾಗಿ, ಹಸು, ಎಮ್ಮೆಯ ಹಾಲನ್ನು ಬಳಸತೊಡಗುತ್ತೇವೆ. ಕೇವಲ ಕುಡಿಯುವುದಷ್ಟೇ ಅಲ್ಲ, ಡೈರಿ ಉದ್ಯಮ ಇಂದು ಸಾಕಷ್ಟು ಬೆಳೆಯಲು ಕಾರಣ ಹಾಲಿನ ಉತ್ಪನ್ನಗಳೇ ಆಗಿವೆ. ಇಂತಹ ಹಾಲು ನಮ್ಮ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಕ್ಯಾಲ್ಶೀಯಂ ಸೇರಿದಂತೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ ಎಂಬುದು ಬಹುಕಾಲದಿಂದ ಬೆಳೆದುಬಂದಿರುವ ನಂಬಿಕೆ. ಹೌದು ಕೂಡಾ. ಅದಕ್ಕಾಗಿಯೇ, ಮಕ್ಕಳು ಹಾಲು ಬೇಡಬೇಡವೆಂದರೂ ಮಗು ಬೆಳವಣಿಗೆಯಲ್ಲಿ ಹಿಂದೆ ಬೀಳದಿರಲಿ ಎಂದು ತಾಯಂದಿರು ಮಕ್ಕಳಿಗೆ ಹಾಲನ್ನು ಕುಡಿಸುವ ಸಾಹಸವನ್ನೂ ಮಾಡುತ್ತಾರೆ. ಹಲವರು ಹಾಲೆಂದರೆ ಮಾರು ದೂರ ಓಡಿದರೆ, ಇನ್ನೂ ಕೆಲವರಿಗೆ ಹಾಲು ಒಗ್ಗದು. ಆದರೂ, ದೇಹಕ್ಕೆ ನಿತ್ಯವೂ ಅಗತ್ಯ ಬೇಕಾಗಿರುವ ಕ್ಯಾಲ್ಶಿಯಂ ಪೂರೈಕೆ ಎಲ್ಲಿಂದ ಆದೀತು ಎಂದು ತಲೆ ಕೆಡಿಸುತ್ತಿದ್ದರೆ, ಕ್ಯಾಲ್ಶಿಯಂನ ಇತರ ಆಕರಗಳ ವಿವರ ಇಲ್ಲಿದೆ.
೧. ಎಳ್ಳು: ಬೀಜಗಳೆಲ್ಲವೂ ಸೂಪರ್‌ಫುಡ್‌ಗಳೇ. ಅದರಲ್ಲೂ ಗಾತ್ರದಲ್ಲಿ ಪುಟಾಣಿಯಾಗಿ ಕಂಡರೂ ಎಳ್ಳು ಅತ್ತ ಹೆಚ್ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಅಧ್ಯಯನಗಳ ಪ್ರಕಾರ ಹಸುವಿನ ಹಾಲಿಗಿಂತ ಎಳ್ಳಿನಲ್ಲಿ ಎಂಟುಪಟ್ಟು ಅಧಿಕ ಕ್ಯಾಲ್ಶಿಯಂ ಇದೆ. ೧೦೦ ಗ್ರಾಂ ಎಳ್ಳಿನಲ್ಲಿ ೯೭೫ ಮಿಲಿಗ್ರಾಂಗಳಷ್ಟು ಕ್ಯಾಲ್ಶಿಯಂ ಇದೆ. ಹಾಗಾಗಿ, ಪ್ರತಿನಿತ್ಯ ಬೆಳಗ್ಗೆ ಒಂದಿಷ್ಟು ಎಳ್ಳನ್ನು ನಿಮ್ಮ ಬೆಳಗಿನ ತಿಂಡಿಯ ಮೇಲೋ ಅಥವಾ ಸಲಾಡ್ ಮೇಲೋ ಉದುರಿಸಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
೨. ಗಸಗಸೆ ಬೀಜ: ಭಾರತೀಯ ಅಡುಗೆಯಲ್ಲಿ ಗಸಗಸೆಯ ಸ್ಥಾನ ಮುಖ್ಯವಾದದ್ದು. ಗಸಗಸೆಯ ಜ್ಯೂಸ್, ಖೀರ್ ಇತ್ಯಾದಿಗಳ ಮೂಲಕ ಇವು ಹೊಟ್ಟೆ ಸೇರುತ್ತದೆ. ಇದು ಎಲುಬು ಹಾಗೂ ಅಲ್ಲಿನ ಆರೋಗ್ಯಕ್ಕೆ ಅತ್ಯುತ್ತಮ. ಅದಕ್ಕಾಗಿಯೇ, ಇವಿಷ್ಟಲ್ಲದೆ, ನಿತ್ಯಾಹಾರ ಪದ್ಧತಿಯಲ್ಲಿ ಗಸಗಸೆಯನ್ನು ಆಗಾಗ ಬೇರೆ ಬೇರೆ ಮಾದರಿಯಲ್ಲಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಯಾಕೆಂದರೆ, ೧೦೦ ಗ್ರಾಂ ಗಸಗಸೆಯಲ್ಲಿ ೧೪೩೮ ಮಿಲಿಗ್ರಾಂ ಕ್ಯಾಲ್ಶಿಯಂ ಇದೆ!
೩. ದಂಟು ಅಥವಾ ಹರಿವೆ ಸೊಪ್ಪು: ಹರಿವೆ ಅಥವಾ ದಂಟಿನ ಸೊಪ್ಪು ಕೂಡಾ ಕ್ಯಾಲ್ಶಿಯಂನ ಅತ್ಯುತ್ತಮ ಮೂಲ. ಅರ್ಧ ಕಪ್ ಬೇಯಿಸಿದ ದಂಟಿನ ಸೊಪ್ಪಿನಲ್ಲಿ ೩೩೦ ಮಿಲಿಗ್ರಾಂನಷ್ಟು ಕ್ಯಾಲ್ಶಿಯಂ ಇದೆ. ಇತರ ಸೊಪ್ಪು ತರಕಾರಿಗಳಿಗಿಂತ ಹೆಚ್ಚು ಕ್ಯಾಲ್ಶಿಯಂ ಇರುವ ಇದು ಮೂಳೆ ಸವಕಳಿಯ ಕಾಯಿಲೆ ಇರುವ ಮಂದಿಗೆ ಒಳ್ಳೆಯದು.
ಇದನ್ನೂ ಓದಿ: Health tips: ನಮ್ಮ ಭಾವನೆಗಳಿಗೂ ದೇಹದ ಅಂಗಗಳಿಗೂ ನೇರಾನೇರ ಸಂಬಂಧ!
೪. ರಾಗಿ: ರಾಗಿಯಲ್ಲಿ ಪ್ರತಿ ೧೦೦ ಗ್ರಾಂಗೆ ೩೪೪ ಮಿಲಿಗ್ರಾಂನಷ್ಟು ಕ್ಯಾಲ್ಶಿಯಂ ಇದೆ. ಕೇವಲ ಕ್ಯಾಲ್ಶಿಯಂ ಕಾರಣವಷ್ಟೇ ಅಲ್ಲದೆ, ರಾಗಿ ಅನೇಕ ಕಾರಣಗಳಿಗೆ ಅತ್ಯುತ್ತಮ ಆಹಾರ. ಇದು ರಕ್ತದಲ್ಲಿಯ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವ ಶಕ್ತಿಯನ್ನೂ ಹೊಂದಿರುವುದರಿಂದ ಮಧುಮೇಹಿಗಳಿಗೂ ಉತ್ತಮ. ಬೇಸಗೆಯಲ್ಲಿ ದೇಹಕ್ಕೆ ತಂಪಾಗಿರುವ ರಾಗಿಯನ್ನು ದೋಸೆ, ಅಂಬಲಿ, ರೊಟ್ಟಿ, ಕುಕ್ಕೀಸ್, ಮಾಲ್ಟ್ ಇತ್ಯಾದಿಗಳ ಮೂಲಕ ಸೇವಿಸಬಹುದು.
೫. ಮೆಂತ್ಯ ಸೊಪ್ಪು: ಅರ್ಧ ಕಪ್ ಬೇಯಿಸಿದ ಮೆಂತ್ಯ ಸೊಪ್ಪಿನಲ್ಲಿ ೨೭೫ ಮುಲಿಗ್ರಾಂನಷ್ಟು ಕ್ಯಾಲ್ಶಿಯಂ ಇದೆಯಂತೆ. ಇದು ಕೇವಲ ಎಲುಬು ಗಟ್ಟಿಗೊಳಿಸುವುದಷ್ಟೇ ಅಲ್ಲ, ಥೈರಾಯ್ಡ್ ಸಮಸ್ಯೆಗೂ ಉಪಯುಕ್ತ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡುವ ಇದನ್ನು ಹಲವು ಬಗೆಬಗೆಯ ತಿನಿಸು, ಪರಾಠದ ಮೂಲಕ ನಿತ್ಯವೂ ಸೇವಿಸಬಹುದು.
೬. ಹುರುಳಿ ಕಾಳು: ಒಂದು ಕಪ್ ಬೇಯಿಸಿದ ಹುರುಳಿಕಾಳಿನಲ್ಲಿ ೨೭೦ ಗ್ರಾಂ ಕ್ಯಾಲ್ಶಿಯಂ ಇದೆ. ಕಾರ್ಬೋಹೈಡ್ರೇಟ್, ಪ್ರೊಟೀನ್ ಹಾಗೂ ಕಬ್ಬಿಣಾಂಶಗಳಿಂದ ಸಂಪನ್ನವಾದ ಇದು ಎಲುಬಿಗೆ ಶಕ್ತಿ ನೀಡಲು ಅತ್ಯುತ್ತಮ ಆಹಾರ.
ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!