Site icon Vistara News

Amla Benefits: ನೆಲ್ಲಿಕಾಯಿಯನ್ನು ಮರೆತರೆ ನಿಮ್ಮ ಆರೋಗ್ಯದ ಕಾಳಜಿಯನ್ನೇ ಮರೆತಂತೆ!

indian gooseberry

ಬೆಟ್ಟದ ನೆಲ್ಲಿಕಾಯಿ (Amla, Indian Gooseberry) ಎಂಬುದು ನಮ್ಮ ಪೂರ್ವಜರ ಕಾಲದಿಂದಲೂ ನಾವು ಬಳಸಿಕೊಂಡು ಬಂದ ಆಹಾರ. ಇದರ ಪ್ರಯೋಜನಗಳು (Amla Benefits) ಅನೇಕ. ಆಹಾರವಾಗಿಯೂ ನಾವು ಮೊದಲಿನಿಂದ ಬಳಕೆ ಮಾಡುತ್ತಲೇ ಬಂದರೂ, ಇದರ ಬಳಕೆ ನಿತ್ಯಜೀವನದಲ್ಲಿ ಮಾಡುವವರು ಕಡಿಮೆ. ಆಯುರ್ವೇದದಲ್ಲೂ ನೆಲ್ಲಿಕಾಯಿಗೆ ಮಹತ್ವದ ಸ್ಥಾನವಿದೆ. ಅದು, ನೆಲ್ಲಿಕಾಯಿಯನ್ನು ನಿತ್ಯವೂ ತಿನ್ನುವುದರಿಂದ ಆರೋಗ್ಯವೃದ್ಧಿಯಾಗುತ್ತದೆ ಎನ್ನುತ್ತದೆ. ನೆಲ್ಲಿಕಾಯಿಯಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುವುದಲ್ಲದೆ, ಪಚನಕ್ರಿಯೆಯೂ ಚುರುಕಾಗುತ್ತದೆ. ಮಲಬದ್ಧತೆ ದೂರವಾಗಿ ಚರ್ಮ, ಕೂದಲ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಆಯುಸ್ಸೂ ವೃದ್ಧಿಯಾಗುತ್ತದೆ. ಈ ನೆಲ್ಲಿಕಾಯಿಯ ಉಪಯೋಗಗಳನ್ನು ತಿಳಿಯದವರಿಲ್ಲ. ಆದರೆ, ತಿನ್ನಲು ಮಾತ್ರ ಮನಸ್ಸು ಮಾಡುವುದೂ ಇಲ್ಲ. ಹಾಗಾದರೆ ಬನ್ನಿ, ನೆಲ್ಲಿಕಾಯಿಯನ್ನು ತಿನ್ನುವುದರಿಂದ ಏನೆಲ್ಲ ಉಪಯೋಗಗಳನ್ನು ನಾವು ಪಡೆಯಬಹುದು (Amla health benefits) ಎಂಬುದನ್ನು ನೋಡೋಣ.

1. ನೆಲ್ಲಿಕಾಯಿಯಲ್ಲಿರುವಷ್ಟು ವಿಟಮಿನ್‌ ಸಿ (Vitamin C) ಕಿತ್ತಳೆಯಲ್ಲೂ ಇಲ್ಲ. ಹಾಗಾಗಿ ನೆಲ್ಲಿಕಾಯಿ ನೈಸರ್ಗಿಕವಾಗಿ ಲಭ್ಯವಿರುವ ವಿಟಮಿನ್‌ ಸಿ ಪೋಷಕಾಂಶಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ್ದು. ಹೀಗಾಗಿ ನೆಲ್ಲಿಕಾಯಿಯ ಸೇವನೆಯಿಂದ ವಿಟಮಿನ್‌ ಸಿ ಲಾಭಗಳನ್ನು ಪಡೆಯಬಹುದು. ಇದರಿಂದ ರೋಗ ನಿರೋಧಕತೆ ಹೆಚ್ಚುವುದಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಆರೋಗ್ಯವೂ ಸಾಕಷ್ಟು ವೃದ್ಧಿಸುತ್ತದೆ.

2. ನೆಲ್ಲಿಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳಾದ ಟ್ಯಾನಿನ್‌, ಪಾಲಿಫೀನಾಲ್‌ ಹಾಗೂ ಫ್ಲೇವನಾಯ್ಡ್‌ಗಳು ಇವೆ. ಇವು ದೇಹವು ಫ್ರೀ ರ್ಯಾಡಿಕಲ್‌ಗಳ ಉತ್ಪಾದೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಪರಿಸರದ ಕಲುಷಿತ ವಾತಾವರಣದಿಂದ ದೇಹದ ಮೇಲಾಗುವ ಪರಿಣಾಮಗಳು ಹಾಗೂ ಒತ್ತಡ ಹೆಚ್ಚುವುದನ್ನು ಇವು ತಡೆಯುತ್ತವೆ.

3. ನೆಲ್ಲಿಕಾಯಿಯಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ರೋಗ ನಿರೋಧಕ ಶಕ್ತಿಯ ರಕ್ಷಣಾತ್ಮಕ ಕವಚವನ್ನೇ ನೀಡುತ್ತದೆ. ನೆಲ್ಲಿಕಾಯಿಯನ್ನು ನಿತ್ಯವೂ ಸೇವಿಸುವುದರಿಂದ ದೇಹಕ್ಕೆ ನೆಗಡಿ, ಶೀತ, ಜ್ವರ, ಕೆಮ್ಮು ಇತ್ಯಾದಿ ಸಮಸ್ಯೆಗಳು ಆಗಾಗ ಬರುವುದು ಕಡಿಮೆಯಾಗುತ್ತದೆ. ಮುಖ್ಯವಾಗಿ ಇವುಗಳಿಂದ ಮುಕ್ತಿ ದೊರೆತು ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ.

4. ನೆಲ್ಲಿಕಾಯಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನೆಲ್ಲಿಕಾಯಿಯಲ್ಲಿ ನಾರಿನಂಶ ಇರುವ ಜೊತೆಗೆ ಲ್ಯಾಕ್ಸೇಟಿವ್‌ ಗುಣಗಳೂ ಇರುವುದರಿಂದ ಮಲಬದ್ಧತೆಯಂಥ ಸಮಸ್ಯೆ ಇರುವ ಮಂದಿಗೂ ನೆಲ್ಲಿಕಾಯಿ ಉತ್ತಮ ಪರಿಹಾರ ನೀಡುತ್ತದೆ.

5. ನೆಲ್ಲಿಕಾಯಿ ಕೂದಲುದುರುವಿಕೆಯನ್ನು ತಡೆಗಟ್ಟಿ, ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕೂದಲು ಅಕಾಲದಲ್ಲಿ ಬೆಳ್ಳಗಾಗದಂತೆ ಕಾಪಾಡುವ ಜೊತೆಗೆ, ತಲೆಕೂದಲ ಬುಡದ ಆರೋಗ್ಯ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಚರ್ಮದ ಆರೋಗ್ಯವನ್ನೂ ಇವು ಹೆಚ್ಚಿಸುತ್ತವೆ. ಚರ್ಮದ ಕಾಂತಿಯನ್ನು ಹೆಚ್ಚಿಸಿ, ವಯಸ್ಸಾಗುವಿಕೆಯ ಲಕ್ಷಣಗಳನ್ನು ಮುಂದೂಡುತ್ತದೆ.

6. ನೆಲ್ಲಿಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದಾಗಿ ಇವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ. ಹೀಗಾಗಿ ಮಧುಮೇಹಿಗಳಿಗೆ ನೆಲ್ಲಿಕಾಯಿ ಒಳ್ಲೆಯದು. ಇನ್ಸುಲಿನ್‌ ಉತ್ಪಾದನೆಯನ್ನೂ ಪ್ರಚೋದಿಸುತ್ತದೆ.

7. ನೆಲ್ಲಿಕಾಯಿ ಕೊಲೆಸ್ಟೆರಾಲ್‌ ಅನ್ನೂ ಕೂಡಾ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ, ಹೃದಯದ ಆರೋಗ್ಯ ಹೆಚ್ಚಿಸುವಲ್ಲಿ ನೆಲ್ಲಿಕಾಯಿ ನೆರವಾಗುತ್ತದೆ.

ಇದನ್ನೂ ಓದಿ: Vitamin C Foods: ವಿಟಮಿನ್‌ ಸಿ ಪಡೆಯಲು ಕಿತ್ತಳೆ, ನಿಂಬೆ, ನೆಲ್ಲಿಕಾಯಿಯೇ ಆಗಬೇಕಿಲ್ಲ, ಇವುಗಳಲ್ಲೂ ಇದೆ!

Exit mobile version