ಎಲ್ಲಾದರೂ ಪ್ರವಾಸ ಹೋದಾಗ, ಏನೇನೋ ಸಿಕ್ಕಸಿಕ್ಕದ್ದು ತಿಂದಾಗ, ಯಾವುದೋ ಮದುವೆಗೋ, ಮುಂಜಿಗೋ ಹೋಗಿ ಗಡದ್ದಾಗಿ ಹೊಟ್ಟೆ ತುಂಬ ತಿಂದು ಬಂದಾಗ ಹೊಟ್ಟೆ ಬಿರಿಯ ತಿಂದ ಅನುಭವದಿಂದಾಗಿಯೋ, ಅಥವಾ ಹೊಟ್ಟೆಗೆ ಹಿತವಾಗಿದ್ದು ತಿನ್ನದೆ ಇದ್ದುದರಿಂದಲೋ, ಹೊಟ್ಟೆ ಭಾರವಾದ ಅನುಭವವಾಗುತ್ತದೆ. ಹೊಟ್ಟೆ ಕೆಟ್ಟು ಹೊಟ್ಟೆನೋವು, ಉಬ್ಬರಿಸಿದ ಅನುಭವವಾಗದಿದ್ದರೂ, ಕೆಲವೊಮ್ಮೆ, ತಿಂದಿದ್ದು ಸಾಕಪ್ಪಾ ಎಂಬ ಭಾವ. ಏನಾದರೂ, ಹಿತಮಿತವಾಗಿ ತಿನ್ನೋಣ, ಬೇರೇನೂ ಬೇಡ, ಹೊಟ್ಟೆ ಆರಾಮವಾಗಿರಲಿ ಎಂಬ ಭಾವ ಕಾಡುತ್ತದೆ. ಆಗೆಲ್ಲ, ಬಹುತೇಕರಿಗೆ, ಅದರಲ್ಲೂ ದಕ್ಷಿಣ ಭಾರತೀಯರಿಗೆ ನೆನಪಾಗುವ ಆಪದ್ಬಾಂಧವ ಎಂದರೆ ಅದು ಮೊಸರನ್ನ. ಮೊಸರನ್ನ ತಿಂದರೆ ಹೊಟ್ಟೆಯಲ್ಲೇನೋ ಸುಖವಾದ ಅನುಭವ. ಅಮೃತವೇ ತಿಂದಂತ ಖುಷಿ. ಇಂತಹ ಸರಳ, ಸುಲಭ, ಹಿತಕರ ಆಹಾರವಾದ ಮೊಸರನ್ನ. ಈ ಮೊಸರನ್ನ ಹೊಟ್ಟೆಗೆ ಹಿತವಾಗುವುದಷ್ಟೇ ಅಲ್ಲ, ದೇಹಕ್ಕೂ ಹಿತ. ಮಕ್ಕಳಿಂದ ಹಿಡಿದು ಮುದುಕರವರೆಗೆ ಮೊಸರನ್ನ ಅಚ್ಚುಮೆಚ್ಚು. ಬನ್ನಿ, ಮೊಸರನ್ನ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳನ್ನು (Health Benefits Of Curd Rice) ತಿಳಿಯೋಣ.
- ಮೊಸರನ್ನದಲ್ಲಿ ಪ್ರೊಬಯಾಟಿಕ್ ಗುಣಗಳಿವೆ. ಮೊಸರಿನಲ್ಲಿ ಈ ಗುಣವಿರುವುದರಿಂದ ಇದು ಹೊಟ್ಟೆಯೊಳಗೆ ಆರೋಗ್ಯಕರ ಬ್ಯಾಕ್ಟೀರಿಯಾ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುವಂತೆ ಪ್ರೇರೇಪಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ. ಹೆಚ್ಚು ಕಷ್ಟವಾಗದೆ, ಸುಲಭವಾಗಿ ಜೀರ್ಣವಾಗುವ, ಹೊಟ್ಟೆಯನ್ನು ಹಗುರವಾಗಿರಿಸುವ ಸಂಪೂರ್ಣ ಆಹಾರವಿದು.
- ಮೊಸರಿನಲ್ಲಿ ತಂಪುಕಾರಕ ಗುಣವಿದೆ. ಹಾಗಾಗಿ ಇದು ದೇಹವನ್ನು ತಂಪಾಗಿ ಇರಿಸುತ್ತದೆ. ಮುಖ್ಯವಾಗಿ ಬೇಸಿಗೆಯಲ್ಲಿ, ಹೊರಗೆ ಸುತ್ತಾಡಿ ಬಂದಾಗ, ಹೊಟ್ಟೆಗೇನೋ ಲಘುವಾದ ಆಹಾರ ಬೇಕಾದಾಗ, ಹೊಟ್ಟೆ ತಂಪಾಗಿರಲಿ ಎಂದು ಮನಸ್ಸು ಬಯಸುವಾಗ ಈ ಮೊಸರನ್ನ ಒಳ್ಳೆಯದು.
- ಮೊಸರಿನಲ್ಲಿ ಕ್ಯಾಲ್ಶಿಯಂ ಶ್ರೀಮಂತವಾಗಿದೆ. ಹಾಗಾಗಿ ಎಲುಬುಗಳು ಗಟ್ಟಿಯಾಗಲು, ಹಲ್ಲು ಗಟ್ಟಿಯಾಗಿ ಆರೋಗ್ಯವಾಘಿರಲು ಮೊಸರನ್ನ ಅತ್ಯಂತ ಒಳ್ಳೆಯದು. ಮಕ್ಕಳ ಬೆಳವಣಿಗೆಗೂ ಒಳ್ಳೆಯದು. ಮುದುಕರು ಗಟ್ಟಿಯಾಗಿರಲು, ಸಾಮರ್ಥ್ಯ ಪಡೆಯಲು ಕೂಡಾ ಇದು ಒಳ್ಳೆಯದು. ದೇಹಕ್ಕೆ ನಿತ್ಯವೂ ಬೇಕಾಗುವ ಕ್ಯಾಲ್ಶಿಯಂ ಅನ್ನು ಇದು ನೀಡುತ್ತದೆ.
- ಮೊಸರಿನಲ್ಲಿ ಪ್ರೊಟೀನ್ ಸಾಕಷ್ಟಿದೆ. ಅನ್ನದಲ್ಲೂ ಪ್ರೊಟೀನ್ ಇರುವುದರಿಂದ ಎರಡರ ಪ್ರೊಟೀನ್ ದೇಹಕ್ಕೆ ನಿತ್ಯವೂ ಸಿಕ್ಕಿ, ಆರೋಗ್ಯವಾಗಿರಬಹುದು. ಮುಖ್ಯವಾಗಿ ಸಸ್ಯಾಹಾರಿಗಳಿಗೆ ಅತ್ಯಂತ ಒಳ್ಳೆಯ ಪ್ರೊಟೀನ್ ಮೂಲವಿದು.
- ಮೊಸರನ್ನದಲ್ಲಿರುವ ಪ್ರೊಬಯಾಟಿಕ್ ಗುಣದಿಂದಾಗಿ, ಆಹಾರದಲ್ಲಿರುವ ಪೋಷಕಾಂಶಗಳು ನಷ್ಟವಾಗದೆ, ದೇಹದೊಳಕ್ಕೆ ಸರಿಯಾಗಿ ಹೀರಲ್ಪಡುತ್ತದೆ. ಹಾಗಾಗಿ ಮೊಸರನ್ನದ ಜೊತೆಗೆ ಸೇವಿಸಿದ ಆಹಾರಗಳಲ್ಲಿರುವ ಎಲ್ಲ ಪೋಷಕಾಂಶಗಳೂ ದೇಹಕ್ಕೆ ಸಮರ್ಪಕವಾಗಿ ಸೇರುತ್ತದೆ. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
- ಮೊಸರನ್ನ ತಿಂದರೆ ಹೊಟ್ಟೆ ತುಂಬಿದ, ಸಂತೃಪ್ತಿಯ ಅನುಭವವಾಗುತ್ತದೆ. ಇದರಿಂದ ಬಹಳ ಹೊತ್ತಿನ ತನಕ, ಆರಾಮವವಾಗಿ, ಹಸಿವಾಗದೆ ಇರಬಹುದು. ಹೀಗಾಗಿ, ಏನೇನೋ ಮಧ್ಯದಲ್ಲಿ ತಿನ್ನುವುದು ತಪ್ಪುತ್ತದೆ. ಆಹಾರ ಸಮತೋಲನದಲ್ಲಿದ್ದು ತೂಕವೂ ಸಮತೋಲನದಲ್ಲಿರುತ್ತದೆ.
- ಮೊಸರನ್ನದಲ್ಲಿ ವಿಟಮಿನ್ಗಳಾದ ಬಿ೧೨, ಬಿ೫ ಹಾಗೂ ರೈಬೋಫ್ಲೇವಿನ್ಗಳು ಇವೆ. ಇವು ದೇಹದಲ್ಲಿ ಶಕ್ತಿ ಹೆಚ್ಚಿಸಲು ಅತ್ಯಂತ ಮುಖ್ತವಾಗಿ ಬೇಕಾಗುವ ಪೋಷಕಾಂಶಗಳು.
- ಕೆಲವು ಸಂಶೋಧನೆಗಳ ಪ್ರಕಾರ, ಮೊಸರಿನಲ್ಲಿರುವ ಪ್ರೊಬಯಾಟಿಕ್ ಗುಣಗಳು ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನಗೊಳಿಸುವಲ್ಲಿಯೂ ನೆರವಾಗುತ್ತದೆ. ಇದರಿಂದಾಗಿ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು
ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?