Site icon Vistara News

Anger management: ಸಿಟ್ಟನ್ನು ನಿಯಂತ್ರಿಸುವ ಮೂಲಕ ಪಿತ್ತಕೋಶವನ್ನು ಆರೋಗ್ಯವಾಗಿಡಿ!

anger management

ಭಾವನೆಗಳನ್ನು ವ್ಯಕ್ತಪಡಿಸುವುದು ಯಾವತ್ತಿಗೂ ಒಳ್ಳೆಯದು ಎಂಬ ವಾದವಿದೆ. ಸಿಟ್ಟು, ಕೋಪ, ಹತಾಶೆ, ಅಸಹಾಕತೆ, ದುಃಖ ಇವನ್ನೆಲ್ಲ ನಮ್ಮೊಳಗೆ ಕುದಿಯಲು ಬಿಡುವುದರಿಂದ ನಮ್ಮ ಮಾನಸಿಕ ಆರೋಗ್ಯ ಕೆಡುತ್ತದೆ ಎಂಬುದೇನೋ ನಿಜvವಾದರೂ, ದೈಹಿಕ ಆರೋಗ್ಯವೂ ಕೆಡುತ್ತದೆ ಎಂಬುದೂ ಅಷ್ಟೇ ನಿಜ. ಸಿಟ್ಟು ಮಾಡಿಕೊಳ್ಳುವುದು ಹಾಗೂ ಅದನ್ನು ವ್ಯಕ್ತಪಡಿಸುವುದರಿಂದ ನಮ್ಮ ದೇಹದಲ್ಲಿ ರೋಗಗಳಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ. ಭಾವನೆಗಳ ವ್ಯಕ್ತಪಡಿಸುವ ಆಧುನಿಕ ವಾದಗಳೇನೇ ಇರಲಿ, ಆದರೆ ಸಿಟ್ಟೆಂಬುದರ ನಿಯಂತ್ರಣ ಯಾವಾಗಲೂ ಒಳ್ಳೆಯದು.

ನಿಮಗೆ ಗೊತ್ತೇ, ಎರಡು ನಿಮಿಷಗಳ ನಮ್ಮ ಸಿಟ್ಟು, ನಮ್ಮ ದೇಹ ಹಾಗೂ ಮನಸ್ಸನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮತ್ತೆ ಸಮಸ್ಥಿತಿಗೆ ತರಲು ಏಳು ಗಂಟೆಗಳು ಬೇಕಾಗುತ್ತವೆಯಂತೆ. ಹಾಗಿದ್ದರೆ ಸಿಟ್ಟಿನ ಪರಿಣಾಮದ ಬಗ್ಗೆ ಬಗ್ಗೆ ಯೋಚಿಸಿ. ನಮ್ಮ ಸಿಟ್ಟು ಬೇರೆಯವರ ಮೇಲೆ ಬೀರಿದ ಪರಿಣಾಮಕ್ಕಿಂತಲೂ ನಮ್ಮ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಒಮ್ಮೆ ನಿಧಾನವಾಗಿ ತಾಳ್ಮೆಯಿಂದ ಯೋಚಿಸಿ.

ಸಿಟ್ಟಿನಿಂದ ಹೆಚ್ಚು ಕಷ್ಟ ಪಡುವುದು ನಮ್ಮ ದೇಹದ ಪಿತ್ತಕೋಶವಂತೆ. ಸಿಟ್ಟು ಹೆಚ್ಚಾದರೆ, ಪಿತ್ತಕೋಶದ ಸಮಸ್ಯೆಗಳು ಗ್ಯಾರೆಂಟಿ. ಸಿಟ್ಟು, ಹತಾಶೆ, ದ್ವೇಷದ ಭಾವನೆಗಳೆಲ್ಲ ನೇರವಾಗಿ ಪರಿಣಾಮ ಬೀರುವುದು ಪಿತ್ತಕೋಶವನ್ನೇ ಎಂಬ ನಂಬಿಕೆ ಆಯುರ್ವೇದದಲ್ಲಿದೆ.

#image_title

ಹಾಗಾದರೆ, ಸಿಟ್ಟು ಮಾಡಿಕೊಳ್ಳುವುದು ಬೇಡವೇ? ಬಂದ ಸಿಟ್ಟನ್ನು ಕಡಿಮೆಗೊಳಿಸುವುದು ಹೇಗೆ? ಸಾತ್ವಿಕ ಸಿಟ್ಟಾದರೂ ಕೊಂಚ ಬೇಕಲ್ಲವೇ? ಕೆಟ್ಟದ್ದು ನಮ್ಮ ಕಣ್ಣ ಮುಂದೆಯೇ ರಾಚುವಾಗ ಸಿಟ್ಟು ಮಾಡದೆ ಮೌನವಾಗಿ ಸಹಿಸುವುದರಿಂದ ನ್ಯಾಯ ಸಿಗುವುದೇ ಎಂದು ಮೂಗಿನ ತುದಿಯಲ್ಲಿ ಸಿಟ್ಟನ್ನು ಹೊತ್ತೊಕೊಂಡ ಸರದಾರರು ನೂರಾರು ಪ್ರಶ್ನೆಗಳನ್ನು ಕೇಳಬಹುದು. ನಿಜ, ಅನ್ಯಾಯದ ವಿರುದ್ಧ ಮೌನವಾಗಿ ಕೂರಬೇಕಿಲ್ಲ. ನಮ್ಮ ವಿರುದ್ಧ ಏನೋ ನಡೆದರೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಿಟ್ಟು ಬೇಕು. ಆದರೆ, ಸಿಟ್ಟು ತೋರಿಸುವುದರಲ್ಲೂ ಬುದ್ಧಿವಂತಿಕೆಯಿದೆ. ನಮ್ಮ ಸಿಟ್ಟನ್ನು ನಮಗೆ ನಿಯಂತ್ರಿಸಲು ತಿಳಿಯದಿದ್ದರೆ, ಸಿಟ್ಟು ಹಾನಿಕರ, ಬೇರೆಯವರಿಗೆ ಮಾತ್ರವಲ್ಲ, ನಮಗೂ ಕೂಡಾ.

ನಮ್ಮ ಸಿಟ್ಟನ್ನು ಎಲ್ಲಿ, ಹೇಗೆ, ಯಾವಾಗ ಬಳಸಬಹುದು ಎಂಬ ಜಾಣತನ ನಮ್ಮಲ್ಲಿರಬೇಕು. ಸರಿಯಾದ ಪದ ಬಳಕೆ, ಅದನ್ನು ಎಲ್ಲಿ ಯಾವಾಗ ಎಷ್ಟರಮಟ್ಟಿಗೆ ಬಳಸಬಹುದೆಂಬ ಯೋಚನೆ ತಿಳುವಳಿಕೆ ಇದ್ದರೆ ಸಾಕು, ಸಿಟ್ಟಿನ ಸಂದರ್ಭ ನಮ್ಮ ಪದ ಬಳಕೆಯ ಮೇಲೆ ನಮಗೆ ನಿಗಾ ಇದ್ದರೆ ಸಾಕು, ಸಿಟ್ಟು ನಿಮ್ಮ ಕೈಯೊಳಗಷ್ಟೇ ಇದೆ, ಮೀರಿಲ್ಲ ಎಂದು ಅರ್ಥ. ಬದಲಾಗಿ ಸಿಟ್ಟಿನ ಕಪಿಮುಷ್ಠಿಯೊಳಗೆ ಬಂಧಿಯಾದರೆ ನಮಗೆ ನಮ್ಮ ಸಿಟ್ಟಿನ ಮೇಲೆ ಸಾಕಷ್ಟು ವರ್ಕ್‌ಔಟ್‌ ಮಾಡಿಕೊಳ್ಳಬೇಕಿದೆ ಎಂದೇ ಅರ್ಥ.

ಹಾಗಾದರೆ ಸಿಟ್ಟನ್ನು ನಿಯಂತ್ರಿಸುವುದು ಹೇಗೆ ಎಂದರೆ ಕೆಲವು ಸರಳ ಸುಲಭ ಉಪಾಯಗಳು ಇಲ್ಲಿವೆ.

೧. ಸಿಟ್ಟು ಬಂದಾಗ ದೀರ್ಘವಾಗಿ ಉಸಿರೆಳೆದುಕೊಳ್ಳಿ. ನಿಮ್ಮನ್ನು ನೀವು ಶಾಂತಗೊಳಿಸಲು ಪ್ರಯತ್ನಿಸಿ. ನಿಮ್ಮಲ್ಲಿ ಸಿಟ್ಟನ್ನು ಪ್ರಚೋದಿಸಿದ ಅಂಶಗಳನ್ನು ಗುರುತಿಸಲು ಪ್ರಯತ್ನಿಸಿ.

೨. ಸಿಟ್ಟು ಬಂದಿರುವುದು ಹೌದು ಎಂದು ನಿಮಗೆ ನೀವೇ ಒಪ್ಪಿಕೊಳ್ಳಿ. ಅಷ್ಟರ ಮಟ್ಟಿನ ಯೋಚನೆಗೆ ಅವಕಾಶವಿರಲಿ.

೩. ನಿಮ್ಮ ಎದುರಾಳಿ ವ್ಯಕ್ತಿಯ ಸ್ಥಾನದಲ್ಲಿ ನಿಂತು ಪರಿಸ್ಥಿತಿಯ ಬಗ್ಗೆ ಯೋಚಿಸಿ. ಆಗ ಸಿಟ್ಟು ಸ್ವಲ್ಪ ಕಡಿಮೆಯಾಗಬಹುದು.

ಇದನ್ನೂ ಓದಿ: ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

೪. ಸಿಟ್ಟು ಬಂದ ಕೂಡಲೇ ಮಾತನಾಡಬೇಡಿ. ಮನಸ್ಸಿನೊಳಗೆ ಪರಿಸ್ಥಿತಿಯನ್ನು ಅವಲೋಕಿಸಿ, ಮಾತನಾಡುವ ಮೊದಲು ಯೋಚಿಸಿ. ಹೀಗೆ ಮಾತನಾಡುವುದರ ಪರಿಣಾಮ ಏನು ಎಂಬ ಬಗ್ಗೆ ಮೊದಲೇ ಅರಿತುಕೊಂಡು ಮಾತನಾಡಿ. ಬಳಸುವ ಶಬ್ದಗಳ ಬಗ್ಗೆ ನಿಯಂತ್ರಣ ಇರಲಿ.

೫. ಮೊದಲು ರಿಲ್ಯಾಕ್ಸ್‌ ಆಗಲು ಪ್ರಯತ್ನಿಸಿ. ಮನಸ್ಸು ಹಾಗೂ ದೇಹ ಎರಡನ್ನೂ ರಿಲ್ಯಾಕ್ಸ್‌ ಆಗಿಸಲು ಪ್ರಯತ್ನಿಸಿ.

೬. ಸಿಟ್ಟು ಬಂದಿದ್ದೇನೋ ನಿಜ. ಆದರೆ ಈ ಪರಿಸ್ಥಿತಿಗೆ ಪರಿಹಾರ ಹುಡುಕಲು ಪ್ರಯತ್ನಿಸಿ. ಆಗಿ ಹೋಗಿದ್ದರ ಬಗ್ಗೆ ಕೂಗಾಡುವ ಬದಲು, ಏನು ಮಾಡುವುದು ಅಗತ್ಯ ಎಂಬುದರ ಬಗೆಗಿನ ಅವಲೋಕನ ಅಗತ್ಯ.

೭. ಸಿಟ್ಟಿನ ಕ್ಷಣದಲ್ಲಿ ಆದ ಘಟನೆಗಳನ್ನು ಆಧರಿಸಿ ವ್ಯಕ್ತಿಯನ್ನು ಅಳೆಯಬೇಡಿ. ಅದರ ಸೇಡನ್ನು ತೀರಿಸುವುದು ಕೂಡಾ ಬೇಕಿಲ್ಲ ಎಂಬುದು ನೆನಪಿರಲಿ.

೮. ಕ್ಷಮಿಸುವುದನ್ನು ಕಲಿಯಿರಿ. ಒಬ್ಬರನ್ನು ಕ್ಷಮಿಸಿ ನೋಡಿ. ಆಗ ನಿಮಗಾಗುವ ಭಾವನೆಯನ್ನು ಗಮನಿಸಿ.

೯. ಎಂಥ ಗಂಭೀರ ಪರಿಸ್ಥಿತಿಯಲ್ಲೂ ಹಾಸ್ಯ ಪ್ರಜ್ಞೆ ಮೈಗೂಡಿಸಲು ಪ್ರಯತ್ನಿಸಿ. ಪರಿಸ್ಥಿತಿಯನ್ನು ಲಘು ಹಾಸ್ಯದಲ್ಲಿ ಕೊನೆಗೊಳಿಸಲು ಪ್ರಯತ್ನಿಸಿ.

ಇದನ್ನೂ ಓದಿ: Diabetes: ಮಧುಮೇಹದ ಪ್ರಾರಂಭಿಕ ಲಕ್ಷಣಗಳು ಗೊತ್ತೇ?

Exit mobile version