ಆಪ್ರಿಕಾಟ್ ನಮ್ಮೂರಲ್ಲಿ ಬೆಳೆಯುವ ಹಣ್ಣಲ್ಲವಾದರೂ ಈ ಹಣ್ಣು ಮಾರುಕಟ್ಟೆಯಲ್ಲಿ ಒಣಹಣ್ಣಿನ ರೂಪದಲ್ಲಿ ಸದಾ ದೊರೆಯುವ ಹಣ್ಣೇ. ಆದರೆ, ಇದು ಸಾಮಾನ್ಯ ಹಣ್ಣಲ್ಲವಾದ್ದರಿಂದ, ಇದರ ಬಗ್ಗೆ ನಮಗೆ ತಿಳುವಳಿಕೆ ಅಷ್ಟಿಲ್ವಾದ್ದರಿಂದ ಇದರ ಬಳಕೆ ಬೇರೆ ಒಣ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆಯೇ. ಆದರೆ, ಆಪ್ರಿಕಾಟ್ ಹಣ್ಣಿನ ನಿಜವಾದ ಮಹತ್ವ ತಿಳಿದರೆ ಇದನ್ನು ನೀವು ನಿತ್ಯವೂ ತಿನ್ನಲು ಆರಂಭಿಸುವಿರಿ. ಯಾಕೆ ಗೊತ್ತಾ? ಆಪ್ರಿಕಾಟ್ ಹಣ್ಣಿನಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ. ವಿಟಮಿನ್ ಎ, ಸಿ, ಇ, ಪೊಟಾಶಿಯಂ, ಬೀಟಾ ಕ್ಯಾರೋಟಿನ್ ಹಾಗೂ ಆಂಟಿ ಆಕ್ಸಿಡೆಂಟ್ಗಳು ಹೇರಳವಾಗಿವೆ. ನಾರಿನಂಶವೂ ಬೇಕಾದಷ್ಟಿದೆ. ಉತ್ತಮ ಪ್ರಮಾಣದಲ್ಲಿ ಪ್ರೊಟೀನ್ ಕೂಡಾ ಇದೆ. ಹಾಗೆ ನೋಡಿದರೆ ತಾಜಾ ಆಫ್ರಿಕಾಟ್ಗಿಂತ ಒಣ ಆಪ್ರಿಕಾಟ್ನಲ್ಲಿ ಖನಿಜಾಂಶಗಳು ಹಾಗೂ ಎಲ್ಲ ಬಗೆಯ ಪೋಷಕಾಂಶಗಳು ತುಸು ಹೆಚ್ಚೇ ಇವೆ. ಹಾಗಾಗಿ, ಇವು ಸಾಮಾನ್ಯವಾಗಿ ಸಿಗುವ ಹಣ್ಣಲ್ಲದಿದ್ದರೂ, ಇವನ್ನು ನಿತ್ಯವೂ ಹಾಗೆಯೇ ತಿನ್ನುವ ಮೂಲಕ, ನೆನೆಸಿ ತಿನ್ನುವ ಮೂಲಕ ಅಥವಾ ಮೊಸರಿನ ಜೊತೆಗೆ, ಸಲಾಡ್ಗಳಲ್ಲಿ ಹಾಕಿ ತಿನ್ನುವ ಮೂಲಕವೂ ಹೊಟ್ಟೆ ಸೇರುವಂತೆ ಮಾಡಬಹುದು. ಬನ್ನಿ, ಆಪ್ರಿಕಾಟ್ ನಿತ್ಯವೂ ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು (Apricot benefits) ನೋಡೋಣ.
- ನಿಮ್ಮ ಕಣ್ಣು ದುರ್ಬಲವೋ? ಹಾಗಿದ್ದರೆ ಆಪ್ರಿಕಾಟ್ ನಿಮಗೆ ಒಳ್ಳೆಯದು. ಆಪ್ರಿಕಾಟ್ನಲ್ಲಿ ವಿಟಮಿನ್ ಎ ಹಾಗೂ ಇ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ ಎ ಕಣ್ಣಿನ ತೊಂದರೆಗಳಿದ್ದಾಗ ಸೇವಿಸಲೇಬೇಕಾದ ಪೋಷಕಾಂಶ. ಜೊತೆಗೆ ವಿಟಮಿನ್ ಇ ಪ್ರೀ ರ್ಯಾಡಿಕಲ್ಗಳಿಂದ ಕಣ್ಣಿಗೆ ತೊಂದರೆಗಳಾಗುವುದನ್ನು ತಪ್ಪಿಸುತ್ತದೆ.
- ಅಧಿಕ ರಕ್ತದೊತ್ತಡದ ಸಮಸ್ಯೆ ಇದೆಯಾ? ಹಾಗಿದ್ದರೆ ಆಪ್ರಿಕಾಟ್ ತಿನ್ನಿ. ಆಪ್ರಿಕಾಟ್ನಲ್ಲಿ ಪೊಟಾಶಿಯಂ ಹೇರಳವಾಗಿ ಇರುವುದರಿಂದ ಇದು ರಕ್ತದೊತ್ತಡದ ಸಮಸ್ಯೆಗೆ ಅತ್ಯಂತ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವಲ್ಲಿ ನೆರವಾಗುತ್ತದೆ.
- ಆಗಾಗ ಏನಾದರೊಂದು ತಿನ್ನುವ ಬಯಕೆಯಾಗುತ್ತದೋ? ಆಹಾರದ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲವೋ? ಹಾಗಿದ್ದರೆ ಅಂಥ ಸಂದರ್ಭ ಆಪ್ರಿಕಾಟ್ ತಿನ್ನಿ. ಇದು ನಿಮಗೆ ಎಷ್ಟು ಪೋಷಕಾಂಶ ನೀಡುತ್ತದೆ ಎಂದರೆ, ಮತ್ತೆ ಮಧ್ಯದಲ್ಲಿ ಏನೂ ತಿನ್ನಬೇಕೆನಿಸುವುದಿಲ್ಲ. ಪ್ರಯಾಣ ಮಾಡುವಾಗ, ಕಚೇರಿಯಲ್ಲಿ, ಓಡಾಟ ಇದ್ದಾಗ ಸೇರದಂತೆ ನಿತ್ಯವೂ ಬ್ಯಾಗ್ನಲ್ಲಿ ಇಡಬಹುದಾದ ಆಹಾರ ಎಂದರೆ ಇದು. ಅತಿಯಾಗಿ ಹಸಿವಾದಾಗ ಒಮ್ಮೆ ಅದನ್ನು ತಗ್ಗಿಸಿ, ಹೊಟ್ಟೆಯನ್ನು ಹಸಿವಾಗದಂತೆ ಕೆಲಕಾಲ ಇಡುತ್ತದೆ. ಇದರಿಂದ ಸಿಕ್ಕಸಿಕ್ಕಲ್ಲಿ ಸಿಕ್ಕಿದ್ದನ್ನು ತಿನ್ನುವ ಚಟ ಕಡಿಮೆಯಾಗುತ್ತದೆ.
- ಮಲಬದ್ಧತೆಯೋ? ಹಾಗಿದ್ದರೆ ನಿಮಗೆ ಆಪ್ರಿಕಾಟ್ ಒಳ್ಳೆಯದು. ಆಪ್ರಿಕಾಟ್ ಪಚನಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಭಾರೀ ಒಳ್ಳೆಯದು. ಪಚನಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೆ ಸುಲಭವಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ನಿತ್ಯವೂ ತಿನ್ನುವುದರಿಂದ ಈ ಸಮಸ್ಯೆ ಬಹುತೇಕ ಮಾಯವಾಗುತ್ತದೆ. ಪಿತ್ತಕೋಶಕ್ಕೂ ಇದು ಅತ್ಯಂತ ಒಳ್ಳೆಯದು. ಅತಿಯಾಗಿ ಆಲ್ಕೋಹಾಲ್ ಸೇವನೆಯಿಂದ ಪಿತ್ತಕೋಶವನ್ನು ಹಾನಿ ಮಾಡಿಕೊಂಡ ಮಂದಿಗೂ ಇದು ಒಳ್ಳೆಯದು. ಪಿತ್ತಕೋಶದ ಸಮಸ್ಯೆಯಿರುವ ಮಂದಿ ಇದನ್ನು ನಿತ್ಯವೂ ತಿನ್ನಬಹುದು.
- ಕೂದಲು ಹಾಗೂ ಚರ್ಮದ ಸಮಸ್ಯೆಯೇ? ಆಪ್ರಿಕಾಟ್ ಇವಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿರುವುದರಿಂದ ಇದು ಕೂದಲ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮಕ್ಕೆ ಹಚ್ಚುವ ಆಂಟಿ ಏಜಿಂಗ್ ಕ್ರೀಮುಗಳ ಬದಲು, ಇದನ್ನು ನಿತ್ಯವೂ ತಿಂದರೆ ಸಾಕು, ಫಲ ಕಾಣಬಹುದು. ಜೊತೆಗೆ ಕೂದಲು ಉದುರುವ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯದು. ಕೂದಲು ಉದುರದಂತೆ ತಡೆಯುವ ಜೊತೆಗೆ ಕೂದಲು ಆರೋಗ್ಯಪೂರ್ಣವಾಗಿ ಫಳಫಳ ಹೊಳೆಯುವಂತೆ ಮಾಡುತ್ತದೆ. ಆದರೆ, ಇವನ್ನು ನಿತ್ಯವೂ ಸೇವಿಸುವುದು ಅಗತ್ಯ.
ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು