Site icon Vistara News

Arthritis Pain: ಸಂಧಿವಾತ ಕೆಲವೊಮ್ಮೆ ಸಣ್ಣ ತಲೆನೋವಿನಿಂದಲೂ ಆರಂಭವಾಗಬಹುದು, ಗೊತ್ತೇ?

arthritis pain

ವಯಸ್ಸಾಗುತ್ತಿದ್ದಂತೆ, ನಮ್ಮ ಮೂಳೆಗಳ ಸಂಧಿಗಳಲ್ಲಿ ಆಗುವ ಬದಲಾವಣೆಗಳಿಂದ ಸಮಸ್ಯೆಯಾಗಿ ಬಹುತೇಕರ ವೃದ್ಧಾಪ್ಯವನ್ನು ಕಾಡುವುದು ಈ ಸಂಧಿವಾತ (arthritis pain) ಹಾಗೂ ಮೂಳೆ ಸವೆತಗಳೆಂದ ಖಾಯಿಲೆಗಳು. ಇದು ಅತ್ಯಂತ ನೋವಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಆದರೆ, ಇದು ವಯಸ್ಸಾದಂತೆ ಸಾಮಾನ್ಯ ಎಂದು ಬಿಂಬಿಸಲಾಗಿರುವುದರಿಂದ ಇದರ ನೋವಿನ ಆಳ ಅರ್ಥವಾಗದು. ಬಹಳ ಮಂದಿ ನೋವು ನುಂಗಿಕೊಂಡು ಕೊನೆಯವರೆಗೂ ತಾಳಿಕೊಂಡು ಬಾಳಿದರೆ, ಇನ್ನೂ ಕೆಲವರು, ಹಲವಾರು ಔಷಧಿಗಳನ್ನೂ ನುಂಗಿಕೊಂಡು ಜೊತೆಗೆ ನೋವನ್ನೂ ನುಂಗಿಕೊಂಡಿರುತ್ತಾರೆ. ಯಾಕೆಂದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದೇ ಇಲ್ಲ. ಆದರೆ, ಚುರುಕಾಗಿರುವುದು, ನಡೆದಾಡುವುದು, ನಿಯಮಿತ ವ್ಯಾಯಾಮ, ತೂಕವನ್ನು ಕಡಿಮೆಗೊಳಿಸುವುದು, ಆಹಾರ ಸೇವನೆ ಹಾಗೂ ಜೀವನಕ್ರಮದಲ್ಲಿ ಬದಲಾವಣೆ ಇತ್ಯಾದಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸುತ್ತಾ ಬಂದಲ್ಲಿ, ಈ ಸಮಸ್ಯೆಯ ನೋವಿಗೆ ಕೊಂಚ ಮಟ್ಟಿನ ಪರಿಹಾರ ಕಾಣಬಹುದು. ಅದರ ಜೊತೆಗೆ ಕೆಲವು ಪರ್ಯಾಯ ಔಷಧಿ ಪದ್ಧತಿಗಳೂ ಗಂಟುಗಳನ್ನು ಕೊಂಚ ಸಡಿಲವಾಗುವಂತೆ ಮಾಡುವ ಜೊತೆಗೆ ಉರಿಯೂತ, ನೋವಿನ ಪ್ರಮಾಣ ಇತ್ಯಾದಿಗಳನ್ನು ಕಡಿಮೆ ಮಾಡಬಹುದು. ಆದರೂ, ಇದು ಸಂಪೂರ್ಣವಾಗಿ ಗುಣಮುಖವಾಯಿತು ಎಂದು ಹೇಳುವಂತಿಲ್ಲ. ಯಾಕೆಂದರೆ, ಪೂರ್ತಿಯಾಗಿ ವಾಸಿಯಾಗುವ ಕಾಯಿಲೆ ಇದಲ್ಲ.

ಆದರೆ, ಆರಂಭದ ಹಂತದಲ್ಲಿ ಈ ಸಂಧಿವಾತದ ಲಕ್ಷಣಗಳು ಗಂಟುಗಳಲ್ಲಿ ನೋವೇ ಇರಬೇಕೆಂದಿಲ್ಲ. ತಲೆನೋವಿನಿಂದಲೂ ಶುರುವಾಗಬಹುದು ಎಂದರೆ ನೀವು ನಂಬಲೇಬೇಕು. ಈ ಸಂಧಿವಾತದ ಸಮಸ್ಯೆ ಕೆಲವರಲ್ಲಿ ಆರಂಭವಾಗುವುದು ಬೆನ್ನೆಲುಬಿನ ಮೇಲ್ಭಾಗದಿಂದ ಆರಂಭವಾಗುತ್ತದೆ. ಇದು ಬೆನ್ನುಹುರಿಯ ಕೆಲವೆಡೆಗೂ ರವಾನೆಯಾಗುತ್ತದೆ. ಬೆನ್ನುಹುರಿಯಲ್ಲಿ ಅಸಾಧ್ಯ ನೋವಿನಿಂದ ತಲೆನೋವು ಶುರುವಾಗುತ್ತದೆ. ಕುತ್ತಿಗೆ, ತಲೆ ಹಾಗೂ ದವಡೆಯಲ್ಲೂ ಕೆಲವರಿಗೆ ವಿಪರೀತ ನೋವುಂಟಾಗಬಹುದು.

ಸರ್ವಿಕೋಜೆನಿಕ್‌ ತಲೆನೋವು ಎಂಬ ಹೆಸರಿನಿಂದ ಕರೆಯಲಪಡುವ ಈ ತಲೆನೋವು ತಲೆಯ ಹಿಂಭಾಗ, ಕುತ್ತಿಗೆಯಿಂದಲೇ ಆರಂಭಾವಾಗುತ್ತದೆ. ವೈದ್ಯರ ಪ್ರಕಾರ ಈ ಬಗೆಯ ಸಂಧಿವಾತದಲ್ಲಿ ಕುತ್ತಿಗೆಯ ಸುತ್ತಮುತ್ತ ಅಲುಗಾಡಿಸಲು ಕಷ್ಟವಾಗುವುದು, ಕುತ್ತಿಗೆಯ ಚಲನೆಯೇ ಕಡಿಮೆಯಾಗುವುದು ಅಥವಾ ಚಲಿಸಿದರೆ ನೋವಾಗುವುದು ಇತ್ಯಾದಿಗಳಿಂದ ಆರಂಭವಾಗಬಹುದು.

ಈ ಸರ್ವಿಕೋಜೆನಿಕ್‌ ತಲೆನೋವಿನ ಅತಿ ದೊಡ್ಡ ಸಮಸ್ಯೆ ಎಂದರೆ ಇದು ಮೈಗ್ರೇನ್‌ ತಲೆನೋವು ಎಂಬುದಾಗಿ ಬಹಳಷ್ಟು ಮಂದಿ ಅಂದುಕೊಳ್ಳುವುದು. ಈ ತಲೆನೋವಿನ ಕಾರಣ ಆರಂಭದಲ್ಲಿ ಪತ್ತೆಯಾಗದೆ ಇರುವುದರಿಂದ ಅನೇಕರಿಗೆ ಸಂಧಿವಾತ ಆರಂಭವಾಗಿದ್ದು ಗೊತ್ತೇ ಆಗದು. ಅಷ್ಟೇ ಅಲ್ಲ, ಇದು ಯಾವುದೆಂದು ಕಂಡುಹಿಡಿಯುವುದೂ ಕೂಡಾ ಕಷ್ಟವಾದ ಪರಿಸ್ಥಿತಿಯ ಕಾಲ.

ಮೂಳೆಯಲ್ಲಿ ಸವೆತ ಹಾಗೂ ಸಂಧಿವಾತ ಅತ್ಯಂತ ನೋವಿನ ರೋಗವಾಗಿದ್ದು, ಇದು ಆರಂಭದಲ್ಲಿ ಬಹಳ ಸಾರಿ ಗೊತ್ತೇ ಆಗದು. ಮೂಳೆಗಳು ಜೊತೆಗೂಡುವ ಸಂಧಿಗಳಲ್ಲಿ ಸವೆಯಲು ಆರಂಭವಾದಾಗ ಇದು ಸುತ್ತಮುತ್ತಲ ನರಗಳ ಮೇಲೆ ಪರಿಣಾಮ ಬೀರುತ್ತದೆ. ಅವುಗಳಿಗೆ ಕಿರಿಕಿರಿ ಮಾಡತೊಡಗುತ್ತದೆ. ಇದರಿಂದ ನರಗಳ ಮೂಲಕವಾಗಿ ತಲೆನೋವು ಆರಂಭವಾಗುತ್ತದೆ. ಇದು ಸಾಮಾನ್ಯವಾಗಿ ತಲೆಬುರುಡೆಯ ಕೆಳಭಾಗದಿಂದ ಆರಂಭವಾಗುತ್ತದೆ. ಹಾಗಾಗಿ ತಲೆನೋವು ಹಿಂಭಾಗದಿಂದ ಆರಂಭವಾಗಿ ಇಡೀ ತಲೆಯಲ್ಲಿ ನೋವು ಆರಂಭವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಲೂ ಬಹುದು ಎಂದು ವೈದ್ಯರು ಹೇಳುತ್ತಾರೆ.

ಹೀಗಾಗಿ, ಮೈಗ್ರೇನ್‌ ತಲೆನೋವು ಎಂದು ತಲೆನೋವನ್ನು ನಿರ್ಲಕ್ಷ್ಯ ಮಾಡಬೇಡಿ. ಪದೇ ಪದೇ ತಲೆನೋವಾಗುತ್ತಿದ್ದರೆ, ವೈದ್ಯರನ್ನು ಕಂಡು ಸಲಹೆ ಪಡೆಯಿರಿ!

ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version