ಬಹಳಷ್ಟು ಮಂದಿಗೆ ಇಂದು ಸಂಧಿವಾತ (ಆರ್ಥ್ರೈಟಿಸ್) ಸಾಮಾನ್ಯ ತೊಂದರೆ. ವಯಸ್ಸಾಗುತ್ತ ಹೋದಂತೆ ಸಂಧಿವಾತ ಸಾಮಾನ್ಯ. ಕೆಲವರಿಗೆ ಇದು ಅನುವಂಶೀಯವಾದರೆ, ಇನ್ನೂ ಕೆಲವರಿಗೆ ವಯಸ್ಸಾದಂತೆ ಅಂಟಿಕೊಂಡ ಸಮಸ್ಯೆ. ಮೇಲ್ನೋಟಕ್ಕೆ ಇದು ಸಾಮಾನ್ಯ ತೊಂದರೆಯಾದರೂ, ಇದರ ನೋವು ಬಲ್ಲವನೇ ಬಲ್ಲ. ಮೆಟ್ಟಿಲು ಹತ್ತುವುದರಿಂದ ಹಿಡಿದು ಸಣ್ಣ ಸಣ್ಣ ಚಲನೆಯೂ ಅತೀವ ಹಿಂಸೆ ಕೊಡುವ ನೋವಿದು. ಇದಕ್ಕೆ ಸರಿಯಾದ ಗಮನ ಕೊಡದೇ ಹೋದರೆ ದಿನದಿಂದ ದಿನಕ್ಕೆ ನೋವು ಹೆಚ್ಚಾಗುತ್ತಲೇ ಹೋಗುತ್ತದೆ. ಇದನ್ನು ಪೂರ್ತಿಯಾಗಿ ಗುಣಪಡಿಸಲು ಸೂಕ್ತ ಔಷಧಿ ಇಲ್ಲದಿದ್ದರೂ ಇದನ್ನು ನಮ್ಮ ಆಹಾರಶೈಲಿಯಿಂದ (Arthritis Relief) ಕೆಲ ಹಣ್ಣುಗಳ ಸೇವೆಯಿಂದ ಕೊಂಚ ಮಟ್ಟಿಗೆ ಹತೋಟಿಗೆ ತರಬಹುದು. ತೀವ್ರನೋವಿಗೆ ಕೊಂಚ ಆರಾಮದಾಯಕ ಉತ್ತರವೂ ಸಿಕ್ಕೀತು. ಹಾಗಾಗಿ ಬನ್ನಿ, ಯಾವೆಲ್ಲ ಹಣ್ಣುಗಳು ಸಂಧಿವಾತಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.
1. ಸೇಬು: ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಗಾದೆಯನ್ನು ನೀವು ಕೇಳಿರಬಹುದು. ಈ ಮಾತು ಸಂಧಿವಾತಕ್ಕೂ ಅನ್ವಯಿಸುತ್ತದೆ. ಸೇಬು ಹಣ್ಣು ಸಾಕಷ್ಟು ಒಳ್ಳೆಯ ಗುಣಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಸೇಬು ಹಣ್ಣಿನಲ್ಲಿ ಊತದಂತಹ ಸಮಸ್ಯೆಗಳಿಗೆ ಉತ್ತರ ನೀಡುವ ಕ್ವೆರ್ಸೆಟಿನ್ ಎಂಬ ಅಂಶ ಇರುವುದರಿಂದ ಇದು ಸಂಧಿವಾತದಂತಹ ಸಮಸ್ಯೆಗಳು ಬರದಂತೆ ಕಾಯುತ್ತದೆ. ಅಷ್ಟೇ ಅಲ್ಲ, ಸಂಧಿವಾತದ ನೋವನ್ನು ಕೊಂಚ ಮಟ್ಟಿಗೆ ಶಮನಗೊಳಿಸು ಪ್ರಯತ್ನ ಮಾಡುತ್ತದೆ.
2. ಚೆರ್ರಿ: ಚೆರ್ರಿ ಹಣ್ಣುಗಳು ಸಂಧಿವಾತಕ್ಕೆ ಹೇಳಿ ಮಾಡಿಸಿದಂತಹ ಹಣ್ಣು. ಚೆರ್ರಿ ಹಣ್ಣಿನಲ್ಲಿ ಆಂಥೋ ಸಯನಿನ್ ಎಂಬ ಅಂಶ ಇದ್ದು, ಇದು ಸಂಧಿವಾತದಂತಹ ನೋವುಗಳಿಗೆ ಉತ್ತಮ ನಿವಾರಕವಾಗಿ ಕೆಲಸ ಮಾಡುತ್ತದೆ. ಚೆರ್ರಿ ಹಣ್ಣು ತಿನ್ನುವುದರಿಂದ ಅಥವಾ ಚೆರ್ರಿ ಜ್ಯೂಸ್ ಕುಡಿಯುವುದರಿಂದ ನೋವಿನಿಂದ ಕೊಂಚ ಮಟ್ಟಿಗೆ ಸಮಾಧಾನ ಪಡೆಯಬಹುದು.
3. ಅನನಾಸು: ಅನನಾಸಿನಲ್ಲಿ ಬೊಮೆಲೈನ್ ಎಂಬ ಎನ್‌ಝೈಮ್ ಇರುವುದರಿಂದ ಇದರಲ್ಲಿರುವ ನೋವುನಾಶಕ ಗುಣ ಸಂಧಿವಾತದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ನಿತ್ಯವೂ ಅನನಾಸು ಸೇವನೆಯಿಂದ ಸಂಧಿವಾತದ ನೋವಿನಲ್ಲಿ ಪರಿಣಾಮಕಾರಿ ಬದಲಾವಣೆ ಗಮನಿಸಬಹುದು. ಗಂಟು ನೋವು, ಊತದಂತಹ ಸಮಸ್ಯೆಗಳೂ ಇದರಿಂದ ಕಡಿಮೆಯಾಗಬಹುದು.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!
4. ಬ್ಲೂಬೆರ್ರಿ: ಬ್ಲೂಬೆರ್ರಿ ಭಾರತದಲ್ಲಿ ಸುಲಭವಾಗಿ ದೊರೆಯದಿದ್ದರೂ ಇದು ಸಾಕಷ್ಟು ಪೋಷಕಾಂಶಗಳನ್ನು ಹೊತ್ತು ತಂದಿರುವ ಪವರ್‌ಹೌಸ್ ಹಣ್ಣು. ಇದರಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಜೊತೆಗೆ ಆಂಥೋಸಯನಿನ್ಗಳೂ ಇರುವುದರಿಂದ ನೋವಿನ ಶಮನಕಾರಿಯಾಗಿ ಕೆಲಸ ಮಾಡುತ್ತದೆ. ಒತ್ತಡದಂತಹ ಸಮಸ್ಯೆಗೂ ಇದು ಒಳ್ಳೆಯ ಆಹಾರ. ಇದರ ಸೇವನೆಯಿಂದ ದೇಹದ ನೋವುಗಳಲ್ಲಿ ಸಾಕಷ್ಟು ಉತ್ತಮ ಪರಿಣಾಮ ಕಾಣಬಹುದು.
5. ಕಿತ್ತಳೆ: ಕಿತ್ತಳೆ ಹಣ್ಣು ಕೇವಲ ತಾಜಾ ಅನುಭೂತಿ ನೀಡಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿರುವ ಸಿ ವಿಟಮಿನ್ ದೇಹಕ್ಕೆ ಅತ್ಯಂತ ಅಗತ್ಯಾದ ಪೋಷಕಾಂಶ. ವಿಟಮಿನ್ ಸಿಗೆ ಸಾಕಷ್ಟು ನೋವುಗಳಿಗೆ, ರೋಗಗಳಿಗೆ ಮದ್ದಾಗುವ ಗುಣವಿದೆ. ಇದು ದೇಹದ ಉರಿಯೂತವನ್ನೂ ಕಡಿಮೆ ಮಾಡುವುದರಿಂದ ಸಂಧಿವಾತದಿಂದ ಉಲ್ಬಣಿಸುವ ಸ್ನಾಯುಸೆಳೆತ, ಗಂಟು ನೋವು, ಬಾವುಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಆಹಾರದಲ್ಲಿ ಶಿಸ್ತು, ಸಂಧಿವಾತಕ್ಕೆ ಪೂರಕ ಆಹಾರ ಸೇವನೆ ಇತ್ಯಾದಿಗಳಿಂದ ಸಂಧಿವಾತದಂತಹ ತೊಂದರೆಯನ್ನು ಕೊಂಚ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ