ಅಸ್ತಮಾ ಎಂಬುದು ಬಹಳ ಸಾಮಾನ್ಯ ಸಮಸ್ಯೆಯಾದರೂ ಬಹಳ ಕಾಡುವಂತಹ ಸಮಸ್ಯೆಯೇ. ಹೆಚ್ಚು ಕೆಲಸ ಮಾಡಲಾಗದ, ಮೇಲೇರಿದರೆ, ಓಡಿದರೆ, ಹೀಗೆ ಏನೇ ಹೆಚ್ಚು ಶ್ರಮ ಬೇಡುವ ಕೆಲಸಗಳನ್ನು ಮಾಡಿದರೆ, ಇದ್ದಕ್ಕಿದ್ದಂತೆ ಒಕ್ಕರಿಸಿಕೊಂಡು ಬಿಡುವ ಈ ಉಸಿರಾಟ ಕಷ್ಟವಾಗುವ ಪರಿಸ್ಥಿತಿ. ಮಲಗಲು ಕಷ್ವೆನಿಸುವ, ಕೂರಲೂ ಕಷ್ಟವೆನಿಸುವ ಈ ಸಮಸ್ಯೆಯನ್ನು ಅರಿತವರಿಗಷ್ಟೇ ಅರ್ಥವಾದೀತು. ಸರಿಯಾಗಿ ಗಮನಿಸಿದರೆ, ಇಂತಹ ಅಸ್ತಮಾ ಎಂಬ ಕಾಯಿಲೆ ಬಹಳಷ್ಟು ಮಂದಿಗೆ ಕೆಲವು ಸಂದರ್ಭಗಳಲ್ಲಿ ಮಾತ್ರ ಬರುತ್ತದೆ!
ಹೌದು. ಕೆಲವರಿಗೆ ಎಲ್ಲ ಕಾಲದಲ್ಲೂ ಅಸ್ತಮಾ ಇರುವುದಿಲ್ಲ. ಕೆಲವು ಸಮಯದಲ್ಲಿ ಮಾತ್ರ ತೊಂದರೆ ಕೊಡುತ್ತದೆ. ಮುಖ್ಯವಾಗಿ ಋತು ಬದಲಾದಾಗ ಕೆಲವರಿಗೆ ವರ್ಷದ ಒಂದೇ ಕಾಲದಲ್ಲಿ ಅಸ್ತಮಾ ಕಾಟ ಕೊಡಲಾರಂಭಿಸುತ್ತದೆ. ಮಳೆಗಾಲ, ಚಳಿಗಾಲದ ಒಣ ಹವೆ ಅಥವಾ ಅತಿಯಾಗಿ ವಾಯುಮಾಲಿನ್ಯವಿದ್ದಾಗ ಈ ಅಸ್ತಮಾ ಬಹಳ ಕಾಡುತ್ತದೆ.
ಋತುಗಳು ಬದಲಾದಾಗ ಇದ್ದಕ್ಕಿದ್ದಂತೆ ಅಲರ್ಜಿಕಾರಕಗಳಿಂದಾಗಿ ಹಾಗೂ ಬದಲಾದ ಹವಾಮಾನಕ್ಕೆ ದೇಹ ಒಗ್ಗಲು ಒಮ್ಮೆಗೆ ಕಷ್ಟವಾದಂತಾಗುವುದರಿಂದ ಉಸಿರಾಟ ಕಷ್ಟವಾಗಲು ಆರಂಭವಾಗುತ್ತದೆ. ಒಂದು ವೇಳೆ ಯಾವುದಾದರೊಂದು ವಸ್ತುವಿಂದ ಅಲರ್ಜಿಯಿದ್ದರೆ ಆ ಅಲರ್ಜಿಯ ವಿರುದ್ಧ ಹೋರಾಡಲು ದೇಹ ಪ್ರತಿರೋಧಕಗಳನ್ನು ಉತ್ಪತ್ತಿ ಮಾಡುತ್ತದೆ. ಈ ಪ್ರತಿರೋಧಕಗಳು ಹಿಸ್ತಾಮಿನ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಈ ಹಿಸ್ತಾಮಿನ್‌ಗಳೇ ಮೂಗಿನಲ್ಲಿ ಕಿವಿಯಲ್ಲಿ ತುರಿಕೆ, ಕಣ್ಣು ತುರಿಕೆ ಹಾಗೂ ಸೀನಿಗೆ ಕಾರಣವಾಗುತ್ತದೆ. ಇದು ಶ್ವಾಸಕೋಶ ಹಾಗೂ ಶ್ವಾಸನಾಳಗಳ ಮೇಲೂ ಪರಿಣಾಮ ಬೀರುವ ಮೂಲಕ ಅಸ್ತಮಾದ ಲಕ್ಷಣಗಳಾದ ಕೆಮ್ಮು, ಉಸಿರಾಟ ಕಷ್ಟವಾಗುವುದು, ಎದೆನೋವು ಕೂಡಾ ತರಬಹುದು.
ಭಾರತದಲ್ಲಿ ೩೦ ಮಿಲಿಯನ್ ಮಂದಿಗೆ ಅಸ್ತಮಾ ಇದೆ. ಇವರಲ್ಲಿ ಶೇ.೭೦ ಮಂದಿಗೆ ಇದು ಇದು ತೀವ್ರಸ್ವರೂಪದಲ್ಲಿದೆ. ಆದರೂ ಭಾರತದಲ್ಲಿ ಬಹಳಷ್ಟು ಮಂದಿಗೆ ಉಸಿರಾಟದ ತೊಂದರೆ ಇದ್ದರೂ, ಅಸ್ತಮಾದ ಲಕ್ಷಣಗಳಿದ್ದರೂ ವರ್ಷಗಟ್ಟಲೆ ಯಾವುದೇ ಔಷಧಿ ಅಥವಾ ವೈದ್ಯರ ಮುಖ ನೋಡದೆ, ಕೇವಲ ಋತುವಿನ ಬದಲಾವಣೆಯಿಂದಾದ ಸಾಮಾನ್ಯ ಶೀತ ಎಂದು ತಪ್ಪು ತಿಳಿದು ಬದುಕು ಸಾಗಿಸುವ ಪ್ರಕರಣಗಳೇ ಹೆಚ್ಚಿವೆ.
ಹಾಗಾದರೆ, ಋತು ಬದಲಾದಾಗ ಅಸ್ತಮಾದ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನೋಡೋಣ. ಇಂತಹ ಲಕ್ಷಣಗಳು ಕಂಡುಬಂದಾಗ ಮೊದಲು ವೈದ್ಯರನ್ನು ಕಾಣಬೇಕು. ಇದು ಕೇವಲ ಸಾಮಾನ್ಯ ಶೀತ, ನೆಗಡಿ ಎಂದು ಸುಮ್ಮನೆ ಕೂತರೆ ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳೂ ಇವೆ. ವೈದ್ಯರು ಇದಕ್ಕೆ ಇನ್‌ಹೇಲರ್ ನೀಡಿದರೆ ಅದನ್ನು ಬಳಸುವುದು ಬಹಳ ಮುಖ್ಯ. ಇನ್‌ಹೇಲರ್‌ಗೆ ಅಭ್ಯಾಸವಾದರೆ, ಮುಂದೆ ಕಷ್ಟ ಎಂಬಂಥ ನಂಬಿಕೆಗಳಿಗೆ ಜೋತು ಬೀಳಬೇಡಿ. ಪ್ರತಿನಿತ್ಯ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲವೆಂದು ವೈದ್ಯರು ಹೇಳಿದ್ದರೂ, ತುರ್ತು ಸಂದರ್ಭಕ್ಕಾಗಿ ವೈದ್ಯರು ಹೇಳಿದ ಔಷಧಿಯನ್ನು ಸದಾ ಜೊತೆಯಲ್ಲೇ ಇಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಇದು ಯಾವಾಗ ಬೇಕಾದರೂ ಇದ್ದಕ್ಕಿದ್ದಂತೆ ಅಗತ್ಯ ಬೀಳಬಹುದು.
– ನಿಮಗೆ ಯಾವುದು ಅಲರ್ಜಿ ಕಾರಕ ಎಂಬುದನ್ನು ಪತ್ತೆಹಚ್ಚಿ. ಆದಷ್ಟು ಅವುಗಳಿಂದ ದೂರವಿರಿ.
– ಬಿಸಿಯಾದ ಪಾನೀಯ, ಬಿಸಿನೀರು ಇತ್ಯಾದಿ ಯಾವಾಗಲು ಬಿಸಿಯಾಗಿರುವುದನ್ನೇ ಕುಡಿಯಿರಿ. ಇದರಿಂದ ಅಷ್ಟು ಸುಲಭವಾಗಿ ಈ ತೊಂದರೆಗಳು ಆಗಾಗ ಮರುಕಳಿಸುವುದಿಲ್ಲ. ಜೊತೆಗೆ ಗಂಟಲಿಗೆ ಹಿತವಾಗಿರುತ್ತದೆ.
– ಯಾವಾಗಲೂ ಆರೋಗ್ಯಕರ ಆಹಾರವನ್ನೇ ಅಭ್ಯಾಸ ಮಾಡಿಕೊಳ್ಳಿ. ಹೆಚ್ಚು ತರಕಾರಿ, ಹಣ್ಣುಹಂಪಲು ಒಳ್ಳೆಯದು ಎಂಬುದನ್ನು ಸದಾ ನೆನಪಿನಲ್ಲಿಡಿ.
– ಆಗಾಗ ಹಬೆಯನ್ನು ತೆಗೆದುಕೊಳ್ಳಬಹುದು. ಇದು ಶೀತದಂತಹ ತೊಂದರೆಗಳಾದಾಗ ಅದು ಉಸಿರಾಟದ ತೊಂದರೆಯಾಗಿ ಬದಲಾಗುವುದನ್ನು ತಪ್ಪಿಸುತ್ತದೆ.
– ವಿಟಮಿನ್ ಸಿ ಹಾಗೂ ಇ ಹೆಚ್ಚಿರುವ ಪದಾರ್ಥಗಳು, ಹಣ್ಣುಗಳು ಒಳ್ಳೆಯದು. ಮುಖ್ಯವಾಗಿ ವೈದ್ಯರನ್ನು ಆಗಾಗ ಭೇಟಿಯಾಗಿ ಅವರ ಸಲಹೆಯಂತೆ ಮುನ್ನಡೆಯಿರಿ.