ಬೆಣ್ಣೆ ಹಣ್ಣು ಎಂದು ಸ್ಥಳೀಯವಾಗಿ ಕರೆಸಿಕೊಳ್ಳುವ ಅವಕಾಡೊಗಳು ಪೌಷ್ಟಿಕಾಂಶಗಳ ಆಗರ. ಇತ್ತೀಚೆಗಷ್ಟೇ ಜನಪ್ರಿಯವಾಗುತ್ತಿರುವ ಇವು, ಬಹಳ ಕಾಲದವರೆಗೆ ʻಒಗರು ಮತ್ತು ರುಚಿಯಿಲ್ಲದ ಹಣ್ಣುʼ ಎಂದೇ ಮೂಲೆಗೆ ಒತ್ತಲ್ಪಟ್ಟಿದ್ದವು. ಈ ಆರೋಗ್ಯಕ್ಕೆ ಆಪ್ಯಾಯಮಾನವಾದ ಈ ಹಣ್ಣುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸತ್ವಗಳ ಖನಿ: ವಿಟಮಿನ್ ಸಿ, ಇ, ಕೆ ಮತ್ತು ಬಿ೬ ಗಳ ಗಣಿಯಿದ್ದಂತೆ ಈ ಹಣ್ಣು. ಇದಲ್ಲದೆ, ಮೆಗ್ನೀಶಿಯಂ, ಪೊಟಾಶಿಯಂ, ಬೀಟಾ ಕ್ಯಾರೊಟೀನ್ ಮತ್ತು ಒಮೇಗಾ ೩ ಫ್ಯಾಟಿ ಆಮ್ಲಗಳ ಆಗರ. ಅತಿ ಕಡಿಮೆ ಶರ್ಕರಪಿಷ್ಟಗಳನ್ನು ನೀಡಿ, ಹೆಚ್ಚಿನ ಪ್ರಮಾಣದ ನಾರಿನಂಶವನ್ನು ಉಣಿಸುವ ಹಣ್ಣಿದು.
ಇದರಲ್ಲಿರುವ ಸತ್ವಗಳಿಂದಾಗಿ ಸಹಜವಾಗಿ ಶರೀರದ ಕಲ್ಮಶಗಳನ್ನು ಹೊರದೂಡುವ ಗುಣವನ್ನು ಇದು ಹೊಂದಿದೆ. ಹೆಚ್ಚಿನ ನಾರಿನಂಶ ಹೊಂದಿರುವುದರಿಂದ ನಮ್ಮ ಜೀರ್ಣಾಂಗವನ್ನು ಸುಸ್ಥಿತಿಯಲ್ಲಿಟ್ಟು, ಉರಿಯೂತವನ್ನು ಶಮನ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುವುದೇ ಅಲ್ಲದೆ, ಕರುಳಿನ ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.
ಬೆಣ್ಣೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೋಲೇಟ್ ಲಭ್ಯವಿದೆ. ನಮ್ಮ ಶರೀರದಲ್ಲಿ ಇರಬಹುದಾದ ಫೋಲೇಟ್ ಪ್ರಮಾಣ ಮತ್ತು ಖಿನ್ನತೆಗೆ ನೇರ ನಂಟಿದೆ ಎನ್ನುತ್ತದೆ ವಿಜ್ಞಾನ. ಹಾಗಾಗಿ ಬೆಣ್ಣೆ ಹಣ್ಣು ಖಿನ್ನತೆಗೂ ಮದ್ದಾಗಬಲ್ಲದು. ಮಾತ್ರವಲ್ಲ, ಗರ್ಭಿಣಿಯರು ನಿಗದಿತ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ, ಹೊಟ್ಟೆಯಲ್ಲಿರುವ ಕೂಸಿಗೂ ಫೋಲೇಟ್ ಪ್ರಯೋಜನಕಾರಿ.
ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ
ಕಣ್ಣಿನ ಆರೋಗ್ಯಕ್ಕೆ ಬೆಣ್ಣೆಹಣ್ಣಿನಲ್ಲಿರುವ ಲೂಟಿನ್ ಅನುಕೂಲಕಾರಿಯಂತೆ. ಅದರಲ್ಲಿರುವ ಫ್ಯಾಟಿ ಆಮ್ಲಗಳಿಂದಾಗಿ ಬೀಟಾ ಕ್ಯಾರೋಟೀನ್‌ನಂಥ ಸತ್ವಗಳನ್ನು ಹೀರಿಕೊಳ್ಳುವುದು ಶರೀರಕ್ಕೆ ಸುಲಭ. ಹಾಗಾಗಿ ದೃಷ್ಟಿಯ ಆರೋಗ್ಯಕ್ಕೂ ಇದು ಲಾಭದಾಯಕ.
ಶರೀರದ ಮೂಳೆಗಳನ್ನು ಸದೃಢವಾಗಿರಿಸುವ ವಿಟಮಿನ್ ಕೆ ಜೀವಸತ್ವ ಹೇರಳವಾಗಿರುವ ಈ ಹಣ್ಣಿನಲ್ಲಿ ಆಸ್ಟಿಯೋಪೊರೋಸಿಸ್ ತಡೆಯುವ ಗುಣವಿದೆ. ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವಲ್ಲಿ ವಿಟಮಿನ್ ಕೆ ಪ್ರಯೋಜನಕಾರಿ. ಇದರಲ್ಲಿರುವ ಅತ್ಯುತ್ತಮ ನಾರಿನಂಶದಿಂದಾಗಿ ಹೃದಯದ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದ ಆಹಾರವಿದು.
ಒಂದಲ್ಲ, ಹಲವು ರೀತಿಯ ಕ್ಯಾನ್ಸರ್ ತಡೆಗಟ್ಟುವಲ್ಲಿ ಬೆಣ್ಣೆ ಹಣ್ಣು ಪರಿಣಾಮಕಾರಿ ಎನ್ನುತ್ತದೆ ಆಹಾರ ವಿಜ್ಞಾನ. ಇದರಲ್ಲಿರುವ ಫೋಲೇಟ್ ಅಂಶ ಕರುಳು, ಜಠರ, ಯಕೃತ್ತು ಮತ್ತು ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ. ಇದರಲ್ಲಿರುವ ಫೈಟೋಕೆಮಿಕಲ್ಸ್ ಮತ್ತು ಕೆರೋಟಿನಾಯ್ಡ್‌ಗಳು ಈಗಾಗಲೇ ಇರುವ ಕ್ಯಾನ್ಸರ್ ಮುಂದುವರಿಯದಂತೆ ಮಾಡುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ, ಸ್ತನ, ಬಾಯಿ ಮತ್ತು ಗಂಟಲು ಕ್ಯಾನ್ಸರ್ ತಡೆಗೂ ಇದು ಪರಿಣಾಮಕಾರಿ ಎನ್ನಲಾಗಿದೆ.
ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!