Site icon Vistara News

Back Acne Problem: ಬೆನ್ನಿನ ಮೇಲಿನ ಮೊಡವೆಗಳ ಸಮಸ್ಯೆಯೇ? ಇಲ್ಲಿವೆ ಸರಳ ಪರಿಹಾರಕ್ಕೆ ಅಷ್ಟಸೂತ್ರಗಳು!

Back Acne Problem

ಮುಖದ ಮೇಲಿನ ಮೊಡವೆಗಳು ಅನೇಕರನ್ನು ಸಮಸ್ಯೆಗಳಾಗಿ ಕಾಡಿದಂತೆ ಬೆನ್ನಿನ ಮೇಲಿನ ಮೊಡವೆಗಳೂ ಕೂಡಾ ಅಷ್ಟೇ ಗಾಢವಾಗಿ ಕಾಡುವುದುಂಟು. ಬೆನ್ನಿನ ಮೇಲಿನ ಮೊಡವೆಯೇ ಎಂದು ಆಶ್ಚರ್ಯ ಪಡಬೇಡಿ. ನಿಮ್ಮಲ್ಲಿ ಅನೇಕರಿಗೆ ಬೆನ್ನಿನ ಮೇಲೆ ಕೆಂಪನೆಯ ಗುಳ್ಳೆಗಳು ಸಹಜವಾಗಿಬಿಟ್ಟಿರುತ್ತದೆ. ಮುಖ್ಯವಾಗಿ ಮಹಿಳೆಯರನ್ನು ಮುಜುಗರಕ್ಕೆ ಈಡು ಮಾಡುವ ಬೆನ್ನಿನ ಮೊಡವೆಗಳು ಬಹಳ ಸಾರಿ ನಿರ್ಲಕ್ಷ್ಯಕ್ಕೊಳಗಾಗುವುದೇ ಹೆಚ್ಚು. ಮುಖದ ಮೊಡವೆಗಳಿಗೆ ಹಲವಾರು ಲೇಪನಗಳು, ಕ್ರೀಮುಗಳು, ಸೀರಂಗಳೆಂದು ದುಡ್ಡು ಸುರಿಯುವ ಎಲ್ಲರೂ ಬೆನ್ನಿನ ವಿಚಾರಕ್ಕೆ ಬಂದಾಗ ಅಷ್ಟು ತಲೆ ಕೆಡಿಸುವುದಿಲ್ಲ ನಿಜವಾದರೂ, ಬೆನ್ನು ಕಾಣುವಂಥ ದಿರಿಸು ಧರಿಸಿದಾಗ, ಸೀರೆ ಉಟ್ಟಾಗ ಇವು ಹಲವರನ್ನು ಬಾಧಿಸುತ್ತದೆ. ಆದರೆ ಇದರಿಂದ ಮುಕ್ತಿ ಹೇಗೆ ಎಂದು ತಿಳಿಯುವುದಿಲ್ಲ. ಮುಖದ ಚರ್ಮದ ಕಾಳಜಿಯಂತೆಯೇ ನೀವು ಬೆನ್ನಿನ ಚರ್ಮದ ಕಾಳಜಿಯನ್ನೂ ಸರಿಯಾಗಿ ಮಾಡಿದಲ್ಲಿ ಇದರಿಂದ ಮುಕ್ತಿ ಹೊಂದಬಹುದು. ಬನ್ನಿ, ಬೆನ್ನಿನ ಮೊಡವೆಯ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು (Back acne problem) ನೋಡೋಣ.

Asian woman having acne , dark and red spots on back, skin problem concept
  1. ವಾಕಿಂಗ್‌, ವ್ಯಾಯಾಮ, ಅಥವಾ ಯಾವುದೇ ಚಟುವಟಿಕೆ ಮಾಡಿ ಮನೆಗೆ ಬಂದ ತಕ್ಷಣ ಬೆವರಿದ್ದರೆ ಕೂಡಲೇ ಸ್ನಾನ ಮಾಡಿ. ಬೆವರನ್ನು ಹಾಗೆಯೇ ಒಣಗಲು ಬಿಡುವುದು, ಬೆವರಿದ್ದಾಗಲೇ ಹಾಗೆಯೇ ಮಲಗುವುದು, ಸುಸ್ತು, ಉದಾಸೀನತೆಯಿಂದ ಹಾಗೆಯೇ ಒಂದೆಡೆ ಕೂತಿರುವುದು ಇತ್ಯಾದಿ ಮಾಡಬೇಡಿ. ಕೂಡಲೇ ಸ್ನಾನ ಮಾಡಿ. ಹೆಚ್ಚು ರಾಸಾಯನಿಕಯುಕ್ತ ಸೋಪಿನಿಂದ ತೊಳೆಯದೆ, ಮಂದವಾದ ಯಾವುದಾದರೂ ಸೋಪಿನಿಂದ ಬೆನ್ನು ಸ್ವಚ್ಛಗೊಳಿಸಿ.
  2. ಚರ್ಮದಲ್ಲಿ ಅಲ್ಲಲ್ಲಿ ಸತ್ತ ಪದರಗಳನ್ನು ಸ್ವಚ್ಛಗೊಳಿಸುತ್ತಿರಿ. ಮುಖಕ್ಕೆ ಹೇಗೆ ನೀವು ಎಕ್ಸ್‌ಫಾಲಿಯೇಟ್‌ ಮಾಡುತ್ತೀರೋ ಅದೇ ರೀತಿಯಲ್ಲಿ ಬೆನ್ನಿನ ಚರ್ಮಕ್ಕೂ ಮಾಡಿ. ಆಗ ಸತ್ತ ಚರ್ಮದ ಪೊರೆಗಳು ಕಳಚಿ ಅದು ಸ್ವಚ್ಛವಾಗುತ್ತದೆ. ಇದು ಚರ್ಮದ ರಂಧ್ರಗಳನ್ನು ಮುಚ್ಚುವುದಿಲ್ಲ. ಸ್ಯಾಲಿಸಿಲಿಕ್‌ ಆಸಿಡ್‌ ಅಥವಾ ಗ್ಲೈಕಾಲಿಕ್‌ ಆಸಿಡ್‌ ಇರುವ ಎಕ್ಸ್‌ಫಾಲಿಯೇಟರ್‌ ಅಥವಾ ಸ್ಕ್ರಬ್‌ನಿಂದ ಚರ್ಮವನ್ನು ಮೆದುವಾಗಿ ಉಜ್ಜಿ ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ಹೀಗೆ ಮಾಡಿ.
  3. ಯಾವಾಗಲೂ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಗಾಳಿಯಾಡಬಲ್ಲ ಹಾಗೂ ನೈಸರ್ಗಿಕ ಮೂಲಗಳಿಂದ ತಯಾರಿಸಿದ ಹತ್ತಿಯಂಥ ಬಟ್ಟೆಗಳನ್ನು ಧರಿಸಿ.
  4. ಬೆನ್ನಿನ ಮೇಲೆ ಮೊಡವೆಗಳಾದಾಗ ಅದನ್ನು ಉಗುರಿನಿಂದ ಚಿವುಟುವುದು ಇತ್ಯಾದಿ ಮಾಡಬೇಡಿ. ಮೊಡವೆಗಳಿಗೆ ಹಚ್ಚುವ ಮುಲಾಮನ್ನು ಅಗತ್ಯವಿದ್ದರೆ ಹಚ್ಚಿ.
  5. ಯಾವಾಗಲೂ ಸ್ವಚ್ಛವಾಗಿರಿ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ. ವ್ಯಾಯಾಮ ಮಾಡಿ. ಕ್ರಿಯಾಶೀಲರಾಗಿರಿ. ನಿಮ್ಮನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಿ.
  6. ಆಗಾಗ ನೀವು ಬಳಸುವ ಬೆಡ್‌ಶೀಟ್‌, ತಲೆದಿಂಬಿನ ಕವರ್‌ ಇತ್ಯಾದಿಗಳನ್ನು ಬದಲಾಯಿಸಿ ಸ್ವಚ್ಛವಾಗಿಟ್ಟುಕೊಳ್ಳಿ.
  7. ಹೆಚ್ಚು ನೀರು ಕುಡಿಯಿರಿ. ನೀರು ಕುಡಿಯುವುದು ಮೊಡವೆಯುಕ್ತ ಚರ್ಮ ಹೊಂದಿರುವ ಮಂದಿಗೆ ಅತ್ಯಂತ ಅಗತ್ಯ. ದಿನಕ್ಕೆ ಕನಿಷ್ಟವೆಂದರೆ ಎಂಟು ಲೋಟಗಳಷ್ಟಾದರೂ ನೀರು ಕುಡಿಯಿರಿ. ಸಕ್ಕರೆ ಹಾಗೂ ಕೆಫೀನ್‌ಗಳಿಂದ ದೂರವಿರಿ.
  8. ಯಾವಾಗಲೂ ಉತ್ತಮ ಆಹಾರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಹಸಿರು ತರಕಾರಿ, ಹಣ್ಣುಗಳು, ಧಾನ್ಯ, ಬೇಳೆ ಕಾಳುಗಳ ಉತ್ತಮ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ. ಎಣ್ಣೆಯುಕ್ತ ಆಹಾರಗಳಿಂದ ಆದಷ್ಟೂ ದೂರವಿರಿ.

ಇದನ್ನೂ ಓದಿ: Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Exit mobile version