ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯ ಮೂರನೇ ಒಂದು ಭಾಗ ನಿದ್ದೆಯಲ್ಲಿ ಕಳೆಯುತ್ತಾನೆ. ಈ ನಿದ್ದೆಯ ನಾಲ್ಕನೇ ಒಂದು ಪಾಲಿನಲ್ಲಿ ಸಾಮಾನ್ಯ ಮನುಷ್ಯನಿಗೆ ಕನಸುಗಳೂ ಬೀಳುತ್ತವೆ. ಹಾಗಾಗಿ ಸುಮಾರು ೭೩ರ ಆಸುಪಾಸು ವಯಸ್ಸಿನವರೆಗೆ ಬದುಕುವ ಸಾಮಾಣ್ಯ ಮನುಷ್ಯ ತನ್ನ ಜೀವಿತಾವಧೀಯ ಆರು ವರ್ಷಗಳನ್ನು ಕನಸಿನಲ್ಲಿಯೇ ಕಳೆಯುತ್ತಾನೆ! ಹಾಗಾಗಿ ಕನಸಿಗೂ ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ನಾವ್ಯಾಕೆ ಕನಸು ಕಾಣುತ್ತೇವೆ, ನಮಗ್ಯಾಕೆ ಕನಸು ಬೀಳುತ್ತದೆ ಎಂದು ಲೆಕ್ಕಚಾರ ಹಾಕಲು ಶುರು ಮಾಡಿದರೆ, ಕನಸೆಂಬ ದೊಡ್ಡ ಲೋಕವೇ ಬೇರೆ ಇದೆ ಎಂಬ ಸತ್ಯ ಅರಿವಾಗತೊಡಗುತ್ತದೆ!
ಈ ಕನಸಿನ ಲೋಕದ ಒಳ ಹೊಕ್ಕರೆ, ಅನೇಕ ಸತ್ಯಗಳು ಬಿಚ್ಚತೊಡಗುತ್ತದೆ. ಬಹಳಷ್ಟು ಮಂದಿಗೆ ದುಃಸ್ವಪ್ನವೂ ಕಾಡುವುದುಂಟು. ಎಂದಾದರೊಂದು ದಿನ ಕೆಟ್ಟ ಕನಸು ಬಿದ್ದು ರಾತ್ರಿಯಿಡೀ ಆಮೇಲೆ ನಿದ್ದೆ ಮಾಡದೆ ಕಳೆಯುವವರೂ ಇದ್ದಾರೆ. ಇಂಥವರಿಗೆ ಕನಸೆಂದರೆ ಭಯ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕೆಟ್ಟ ಕನಸುಗಳೂ ಬೀಳಬಹುದು. ಆದರೆ ಪದೇ ಪದೇ ಕೆಟ್ಟ ಕನಸುಗಳು ಬೀಳುವುದು ಆರೋಗ್ಯಕರ ಲಕ್ಷಣವಾ? ಕೆಟ್ಟ ಕನಸಿಗೂ ಆರೋಗ್ಯಕ್ಕೂ ಸಂಬಂಧ ಇದೆಯಾ ಎಂತ ನಿಮಗನಿಸಿದರೆ ಇಲ್ಲಿದೆ ಅದಕ್ಕೆ ಉತ್ತರ.
ಹೌದು. ಇತ್ತೀಚೆಗೆ ದಿ ಲ್ಯಾನ್ಸೆಟ್ಸ್ ಕ್ಲಿನಿಕಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರ ವರದಿಯ ಪ್ರಕಾರ ಕನಸಿಗೂ ನಮ್ಮ ಮಿದುಳಿನ ಆರೋಗ್ಯಕ್ಕೂ ಬಹಳಷ್ಟು ಸಂಬಂಧ ಇದೆ. ಕೆಟ್ಟ ಕನಸುಗಳು ಅತಿಯಾಗಿ ಬೀಳುತ್ತಿದೆ ಅಂದರೆ ಅದು ಮರೆವಿನ ಕಾಯಿಲೆ ಡಿಮೆನ್ಶಿಯಾದ ಲಕ್ಷಣವೂ ಆಗಿರಬಹುದು ಎಂಬ ಸತ್ಯ ಬಹಿರಂಗಪಡಿಸಿದೆ.
ಸಾಮಾನ್ಯವಾಗಿ, ಒಂದಿಲ್ಲೊಂದು ಕನಸುಗಳು ಬಹುತೇಕ ಎಲ್ಲರಿಗೂ ಬೀಳುತ್ತದೆ. ಕನಸು ಕಾಣದ ಮಂದಿಯೇ ಇರಲಾರರು. ಕೆಲವೊಮ್ಮೆ ಚೆಂದನೆಯ ಕನಸುಗಳು ಹಿತವಾದ ಅನುಭವ ನೀಡಿದರೆ, ಇನೂ ಕೆಲವೊಮ್ಮೆ ಕೆಟ್ಟ ಕನಸುಗಳು ನಮಗೆ ಭಯ ತರಿಸುತ್ತವೆ. ಆದರೆ ಕೆಲ ಸಮಯದ ನಂತರ ಎಲ್ಲ ಮರೆತು ಸಹಜ ಸ್ಥಿತಿಗೆ ಬಂದಿರುತ್ತೇವೆ. ಇವೆಲ್ಲ ಅತ್ಯಂತ ಸಹಜ ಸಾಮಾನ್ಯ ಕೂಡಾ. ಕೆಲವು ಕನಸುಗಳು ಅತ್ಯಂತ ಕೆಟ್ಟ ಅನುಭವ ನೀಡುವುದಲ್ಲದೆ, ಕನಸಿನ ನಂತರ ಎಚ್ಚರವಾಗಿ ಆಮೇಲೆ ನಿದ್ದೆ ಮಾಡಲಾರದಂತಹ ಸ್ಥಿತಿ ಪದೇ ಪದೇ ಆಗುತ್ತಿದ್ದರೆ ಆಗ ನಿರ್ಲಕ್ಷ್ಯ ಮಾಡುವುದು ಸಲ್ಲದು. ಇದು ಮಿದುಳು ಸಹಜ ಸ್ಥಿತಿಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ ಎನ್ನುತ್ತದೆ ಈ ವರದಿ.
ಇದನ್ನೂ ಓದಿ | Back Pain | ವರ್ಕ್ ಫ್ರಂ ಹೋಂ ತಂದಿಟ್ಟ ಬೆನ್ನುನೋವಿಗೆ ಪರಿಹಾರಗಳೇನು?
ಯುಎಸ್‌ನಲ್ಲಿ ೩೫ರಿಂದ ೬೪ರೊಳಗಿನ ವಯಸ್ಸಿನ ಸುಮಾರು ೬೦೦ ಮಂದಿ ಹಾಗೂ ೭೯ ವಯಸ್ಸಿಗೆ ಮೇಲ್ಪಟ್ಟ ಸುಮಾರು ೨,೬೦೦ ಮಂದಿಯ ಮೇಲೆ ಈ ಅಧ್ಯಯನ ನಡೆದಿದ್ದು, ಈ ವರದಿ ಅವರ ಅನುಭವಗಳನ್ನು ಆಧರಿಸಿದ್ದಾಗಿದೆ. ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದು ಇದು ಈ ವರದಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಈ ವರದಿಯ ಪ್ರಕಾರ ವಯಸ್ಸಾದ ಮಂದಿಗೆ ಪ್ರತಿ ವಾರದಲ್ಲೊಮ್ಮೆ ದುಃಸ್ವಪ್ನಗಳು ಬಿದ್ದಿವೆ. ವಯಸ್ಸಾದ ಆದರೆ ಕೆಟ್ಟ ಕನಸುಗಳು ಬೀಳದೆ ಇರುವ ಮಂದಿಗಿಂತ ಕೆಟ್ಟ ಕನಸಿನ ಅನುಭವವಾದ ಮಂದಿಗೆ ಡಿಮೆನ್ಶಿಯಾ ಕಾಯಿಲೆ ಬರುವ ಸಂಭವ ಐದು ಪಟ್ಟು ಹೆಚ್ಚಿರುತ್ತದೆ ಎನ್ನಲಾಗಿದೆ. ಆದರೆ ಮಹಿಳೆಯರಲ್ಲಿ ಹಾಗೂ ಸಣ್ಣ ವಯಸ್ಸಿನ ಮಂದಿಯಲ್ಲಿ ಈ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಹಾಗಾಗಿ, ಮಹಿಳೆಯರಿಗಿಂತಲೂ ಕೆಟ್ಟ ಕನಸು ಹಾಗೂ ಡಿಮೆನ್ಶಿಯಾ ಸಮಸ್ಯೆಯ ಒಂದಕ್ಕೊಂದು ಸಂಬಂಧ ಹೆಚ್ಚು ಗೋಚರಿಸಿದ್ದು ಪುರುಷರಲ್ಲಿಯೇ ಎಂದೂ ಈ ವರದಿ ಹೇಳಿದೆ.
ಪ್ರಮುಖವಾಗಿ ಪುರುಷರಲ್ಲಿ, ಕೆಟ್ಟ ಕನಸುಗಳು ಪದೇ ಪದೇ ಬೀಳುತ್ತಿದ್ದರೆ ಅದು ಡಿಮೆನ್ಶಿಯಾ ಕಾಯಿಲೆಯ ಆರಂಭದ ಲಕ್ಷಣಗಳು ಎಂಬುದನ್ನು ಎಚ್ಚರಿಕೆಯ ಗಂಟೆಯಾಗಿ ತೆಗೆದುಕೊಳ್ಳಬೇಕು ಎಂದೂ ಅದು ಹೇಳಿದೆ. ಆದರೆ, ಮಧ್ಯ ವಯಸ್ಕರಲ್ಲಿ ಪದೇ ಪದೇ ಕೆಟ್ಟ ಕನಸುಗಳ ಸಮಸ್ಯೆ ಕಂಡು ಬಂದಿದ್ದರೆ, ಅದನ್ನು ಭವಿಷ್ಯದ ಮರೆವಿನ ಕಾಯಿಲೆಯ ಸೂಚಕವಾಗಿಯೂ ಪರಿಗಣಿಸಬೇಕಾಗುತ್ತದೆ ಎಂದೂ ಅದು ವಿವರಿಸಿದೆ.
ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು