ಬೇಕಿಂಗ್‌ನಲ್ಲಿ ಆಸಕ್ತಿ ಇರುವ ಎಲ್ಲರ ಮನೆಗಳಲ್ಲೂ ಖಂಡಿತವಾಗಿಯೂ ಅಡುಗೆ ಕೋಣೆಯಲ್ಲಿರುವ ಸಾಮಾನ್ಯ ವಸ್ತು ಎಂದರೆ ಅದರು ಬೇಕಿಂಗ್ ಸೋಡಾ. ಸೋಡಿಯಂ ಬೈಕಾರ್ಬೋನೇಟ್ ಎಂಬ ರಾಸಾಯನಿಕ ನಾಮಧೇಯವನ್ನು ಹೊಂದಿರುವ ಈ ಬೇಕಿಂಗ್ ಸೋಡಾ ಕೇವಲ ಬೇಕಿಂಗ್‌ಗೆ ಮಾತ್ರವಲ್ಲದೆ, ಸಾಕಷ್ಟು ಅಡುಗೆಗಳಲ್ಲೂ, ಅವಸರದ ತಿಂಡಿಗಳಲ್ಲೂ ಬಳಕೆಯಾಗುತ್ತದೆ. ಆದರೆ ಇವಿಷ್ಟೇ ಅಲ್ಲದೆ, ಕೀಟದ ಕಡಿತದಿಂದ ಹಿಡಿತು ಮನೆಯ ಮೂಲೆಗಳ ಕ್ಲೀನಿಂಗ್‌ವರೆಗೆ ಬೇಕಿಂಗ್ ಸೋಡಾ ಹಲವು ಉಪಯೋಗಗಳನ್ನೂ ಹೊಂದಿದೆ. ಹಾಗೆ ನೋಡಿದರೆ, ಮನೆಯ ಹಲವು ವಿಷಯಗಳಿಗೆ ಬೇಕಿಂಗ್ ಸೋಡಾ ತುರ್ತಾಗಿ ಉಪಯೋಗವಾಗಬಲ್ಲ ಒಂದು ಆಪದ್ಭಾಂಧವ. ಬನ್ನಿ, ಅಡುಗೆಯಲ್ಲದೆ, ಬೇಕಿಂಗ್ ಸೋಡಾದ ಕೆಲವು ಅದ್ಭುತ ಉಪಯೋಗಗಳನ್ನು (Baking Soda Benefits) ತಿಳಿಯೋಣ ಬನ್ನಿ.
ಟೂತ್‌ಪೇಸ್ಟ್‌ಗೆ ಪರ್ಯಾಯ!
ಮನೆಯಲ್ಲಿ ಟೂತ್‌ಪೇಸ್ಟ್ ಖಾಲಿಯಾಗಿದೆಯಾ? ತಂದಿಡಲು ಮರೆತೇಬಿಟ್ಟಿರೋ? ಹಾಗಿದ್ದರೆ ಇಲ್ಲಿ ನಿಮ್ಮ ಆಪದ್ಭಾಂಧವ ಇದೇ ಬೇಕಿಂಗ್ ಸೋಡಾ. ಹೌದು. ಸ್ವಲ್ಪ ಬೇಕಿಂಗ್ ಸೋಡಾವನ್ನು ಅರ್ಧ ಚಮಚ ತೆಂಗಿನೆಣ್ಣೆಯೊಂದಿಗೆ ಕಲಸಿಕೊಂಡು ಪೇಸ್ಟ್‌ನ ಹಾಗೆ ಮಾಡಿ ಹಲ್ಲುಜ್ಜಿ. ಹಲ್ಲು ಪಳಪಳನೆ ಹೊಳೆಯುವುದಷ್ಟೇ ಅಲ್ಲ, ಅಲ್ಲ ಕೊಳೆಯೂ ಹಲ್ಲಿನಿಂದ ಹೊರಟುಹೋಗಿ ಹಲ್ಲು ಸ್ವಚ್ಛವಾಗುತ್ತದೆ. ಬಾಯಿಯೂ ಸ್ವಚ್ಛವಾಗುತ್ತದೆ. ಆದರೆ, ಇದನ್ನೇ ನಿತ್ಯವೂ ಮಾಡಬೇಡಿ. ಇದು ವಸಡನ್ನು ಹಾಳು ಮಾಡಬಹುದು. ಅಪರೂಪಕ್ಕೊಮ್ಮೆ ಹಲ್ಲನ್ನು ಫಳಫಳಿಸಲು ಬಳಸಬಹುದು.
ವಾಸನೆ ಹೀರಿಕೊಳ್ಳುವ ಗುಣ
ಬೇಕಿಂಗ್ ಸೋಡಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ನಿಮ್ಮ ಬಳಿ ಡಿಯೋಡೆರೆಂಟ್ ಖಾಲಿಯಾಗಿದೆ ಎಂದರೆ, ನಿಮ್ಮ ಕಂಕುಳದ ದುರ್ಗಂಧವನ್ನು ಹೋಗಲಾಡಿಸಲು ಈ ಬೇಕಿಂಗ್ ಸೋಡಾ ಸಹಾಯ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ ಬೇಕಿಂಗ್ ಸೋಡಾವನ್ನು ನಿಮ್ಮ ಕಂಕುಳಕ್ಕೆ ಹಚ್ಚಿಕೊಂಡರೆ, ಕೆಟ್ಟ ದುರ್ಗಂಧವನ್ನು ಅದು ಹೀರಿಕೊಂಡು ನೀವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ. ಕೇವಲ ಕಂಕುಳದ ದುರ್ಗಂಧ ಮಾತ್ರವಲ್ಲ, ಶೂ, ಚಪ್ಪಲಿ, ಸಾಕ್ಸ್ ಫ್ರಿಡ್ಜ್, ಮೈಕ್ರೋವೇವ್, ಡ್ರಾವರ್‌ಗಳು ಹೀಗೆ ನಿಮ್ಮ ಬಳಕೆಯ ಯಾವುದೇ ವಸ್ತು ದುರ್ಗಂಧ ಬೀರುತ್ತಿದ್ದರೆ ಸ್ವಚ್ಛಗೊಳಿಸಲು, ದಿಢೀರ್ ಮುಕ್ತಿ ಹೊಂದಲು ಈ ಬೇಕಿಂಗ್ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿಕೊಂಡು ಅದಕ್ಕೆ ಬೇಕಿಂಗ್ ಸೋಡಾ ಬೆರೆಸಿ ನೀವು ಈ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಬಹುದು.
ಅಸಿಡಿಟಿಗೆ ಮದ್ದು
ಅಸಿಡಿಟಿ ಅಥವಾ ಗ್ಯಾಸ್‌ನಿಂದಾಗಿ ಎದೆಯುರಿ, ಹೊಟ್ಟೆಯುಬ್ಬರದಂತಹ ಸಮಸ್ಯೆಯೇ? ಹಾಗಾದರೆ, ತಕ್ಷಣಕ್ಕೆ ನಿಮಗೆ ಸಹಾಯ ಬರುವ ವಸ್ತುಗಳ ಪೈಕಿ ಬೇಕಿಂಗ್ ಸೋಡಾವೂ ಒಂದು. ಹೊಟ್ಟೆಯಲ್ಲಿರುವ ಹೆಚ್ಚುವರಿ ಗ್ಯಾಸ್ ಅನ್ನು ಸಮತೋಲನಗೊಳಿಸುವಲ್ಲಿ ಈ ಬೇಕಿಂಗ್ ಸೋಡಾ ಅಥವಾ ಸೋಡಿಯಂ ಬೈಕಾರ್ಬೋನೇಟ್ ನೆರವಾಗುತ್ತದೆ.
ಅಂಟು ನಿವಾರಣೆಗೆ ಸೂಕ್ತ
ಎಣ್ಣೆಯುಕ್ತ ಅಂಟಾದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ, ಬೇಕಿಂಗ್ ಸೋಡಾ ನಿಮ್ಮ ಸಹಾಯಕ್ಕಿದೆ. ಎಣ್ಣೆ ನಿಮ್ಮ ಕಾರ್ಪೆಟ್/ಸೋಫಾ ಮೇಲೆ ಚೆಲ್ಲಿದರೆ, ಅಥವಾ ಬಟ್ಟೆ ಮೇಲೆ ಚೆಲ್ಲಿಕೊಂಡರೆ, ಅಥವಾ ಯಾವುದೇ ಎಣ್ಣೆ ಕಲೆಯಾದರೂ ಅದನ್ನು ಬೇಕಿಂಗ್ ಸೋಡಾ ಆ ಜಾಗಕ್ಕೆ ಹಾಕುವ ಮೂಲಕ ಸ್ವಚ್ಛಗೊಳಿಸಬಹುದು. ಬೇಕಿಂಗ್ ಸೋಡಾಕ್ಕೆ ಎಣ್ಣೆಯನ್ನು ಹೀರಿಕೊಳ್ಳುವ ಗುಣವಿದೆ.
ನೆಲ ಸ್ವಚ್ಛಗೊಳಿಸಲು
ನೆಲವನ್ನು ಸ್ವಚ್ಛಗೊಳಿಸಲು ಬೇಕಿಂಗ್ ಸೋಡಾ ಅತ್ಯಂತ ಒಳ್ಳೆಯ ಕ್ಲೀನರ್‌ನಂತೆ ವರ್ತಿಸುತ್ತದೆ. ಸ್ವಲ್ಪವೇ ಸ್ವಲ್ಪ ಬೇಕಿಂಗ್ ಸೋಡಾವನ್ನು ಬಿಸಿನೀರಿನೊಂದಿಗೆ ಸೇರಿಸಿ ಒರೆಸಿದರೆ ನೆಲ ಸ್ವಚ್ಛವಾಗುತ್ತದೆ.
ತಳ ಹಿಡಿದ ಪಾತ್ರೆ ಸ್ವಚ್ಛತೆಗೆ
ತಳಹಿಡಿದ ಪಾತ್ರೆಗಳನ್ನು ತೊಳೆಯುವುದು ತಲೆನೋವಿನ ಕೆಲಸವೇ? ಹಾಗಿದ್ದರೆ ಅಲ್ಲಿಯೂ ಈ ಬೇಕಿಂಗ್ ಸೋಡಾ ನೆರವಿಗೆ ಬರುತ್ತದೆ. ಸ್ವಲ್ಪ ಬೇಕಿಂಗ್ ಸೋಡಾವನ್ನು ಪಾತ್ರೆಗೆ ಹಾಕಿ ಬಿಸಿ ನೀರನ್ನು ಹಾಕಿಟ್ಟು ಅದಕ್ಕೆ ಸ್ವಲ್ಪ ಡಿಶ್‌ವಾಶರ್ ಲಿಕ್ವಿಡ್ ಹಾಕಿಟ್ಟು ಸ್ವಲ್ಪ ಹೊತ್ತು ನೆನೆಯಲು ಬಿಟ್ಟು ನಂತರ ತೊಳೆದರೆ ಕಪ್ಪಗಾದ ಪಾತ್ರೆಗಳು ಲಕಲಕನೆ ಹೊಳೆಯುತ್ತವೆ.
ಸೌಂದರ್ಯ ಸಾಧನ
ಬೇಕಿಂಗ್ ಸೋಡಾವನ್ನು ಸೌಂದರ್ಯ ಸಾಧನವಾಗಿಯೂ ಬಳಸಬಹುದು. ಬೇಕಿಂಗ್ ಸೋಡಾ ಅತ್ಯುತ್ತಮ ಎಕ್ಸ್‌ಫಾಲಿಯೇಟರ್ ಆಗಿಯೂ ವರ್ತಿಸುತ್ತದೆ. ಮುಖದ ಚರ್ಮದ ಡೆಡ್ ಸ್ಕಿನ್ ತೆಗೆದು ಹಾಕಲು ಸ್ಕ್ರಬ್ ಮಾಡಲು ಬೇಕಿಂಗ್ ಸೋಡಾ ಬಳಸಿ ತಾಜಾ ಹೊಳಪಾದ ಚರ್ಮ ಪಡೆಯಬಹುದು.
ಹಿಮ್ಮಡಿಯ ಸಮಸ್ಯೆಗೆ ಪರಿಹಾರ
ಕಾಲಿನ ಚರ್ಮವನ್ನು ನಾವು ಅತ್ಯಂತ ಕಡೆಗಣಿಸುತ್ತೇವೆ. ಬಿರುಸಾದ, ಒಡೆಯುವ ಹಿಮ್ಮಡಿಯ ಸಮಸ್ಯೆಗಳೂ ಸೇರಿದಂತೆ ಕಾಲಿನ ಚರ್ಮ ಕೊಳೆಯುಕ್ತವಾಗಿರುತ್ತದೆ. ಬೇಕಿಂಗ್ ಸೋಡಾವನ್ನು ಕಾಲಿಗೂ ಎಕ್ಸ್‌ಫಾಲಿಯೇಟರ್ ಆಗಿ ಬಳಸುವ ಮೂಲಕ ಕಾಲಿನ ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಕೊಳೆ ತೊಲಗಿಸಿ, ನುಣುಪಾದ ಬಿರುಕುಗಳಿಂದ ಮುಕ್ತವಾಗಿರುವಂತೆ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!