Site icon Vistara News

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

Baking Soda

ಅಡುಗೆಯಲ್ಲಿ ಆಸಕ್ತಿ ಇರುವ ಮಂದಿಗೆ, ಮೇಲಾಗಿ ಬೇಕಿಂಗ್‌ನಲ್ಲಿ ಅಭಿರುಚಿ ಇರುವ ಮಂದಿಗೆ ಬೇಕಿಂಗ್‌ ಸೋಡಾ (Baking Soda) ಎಂಬ ವಸ್ತು ಅತ್ಯಂತ ಮುಖ್ಯವಾದ ವಸ್ತು. ಮಿದುವಾದ ಸ್ಪಾಂಜೀಯಾಗಿರುವ ಕೇಕ್‌ಗಳನ್ನು ಮಾಡಲು ಬೇಕಿಂಗ್‌ ಸೋಡಾ ಇಲ್ಲದಿದ್ದರೆ ಹೇಗೆ? ಕೇವಲ ಕೇಕ್‌ ಅಂತಲ್ಲ. ಸಾಕಷ್ಟು ಅಡುಗೆಗಳಿಗೆ, ದಿಢೀರ್‌ ತಿಂಡಿಗಳಿಗೆ, ಹುಳಿಬರಿಸುವಷ್ಟು ಸಮಯ ಇಲ್ಲದಾದಾಗ ಮಾಡುವ ಡೋಕ್ಲಾ, ಇಡ್ಲಿ ಮತ್ತಿತರ ಬೆಳಗಿನ ಉಪಾಹಾರಕ್ಕೂ ಬಹಳ ಸಲ ಇಂದಿನ ಧಾವಂತದ ಯುಗದಲ್ಲಿ ಬೇಕಿಂಗ್‌ ಸೋಡಾ ಬೇಕೇ ಬೇಕು. ಹಾಗಾಗಿ ಇದು ಎಲ್ಲರ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ವಸ್ತು.
ಎಲ್ಲ ಆಹಾರ ವಸ್ತುಗಳಂತೆ ಬೇಕಿಂಗ್‌ ಸೋಡಾದ ಬಗೆಯೂ ಹಲವು ಗೊಂದಲಗಳಿವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಬಾವನೆಯೂ ಹಲವರಲ್ಲಿ ಇದೆ. ಸೋಡಾ ಬಳಸಿದರೆ, ಹೊಟ್ಟೆಯುಬ್ಬರ, ಅಸಿಡಿಟಿ ಹೆಚ್ಚಾಗುತ್ತದೆ, ಹುಳಿತೇಗು ಬರುತ್ತದೆ, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುತ್ತದೆ ಎಂಬ ಅಳಲು ಹಲವರದ್ದು. ಇವು ನಿಜವೇ ಆಗಿದ್ದರೂ, ಇದರ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿವೆ. ನಾವು ಅಂದುಕೊಳ್ಳುವಷ್ಟು ಬೇಕಿಂಗ್‌ ಸೋಡಾ ನಿಜಕ್ಕೂ ಕೆಟ್ಟದ್ದೇ? ಎಂಬ ಪ್ರಶ್ನೆ ಕಾಡಿರಬಹುದು. ಹಾಗಾದರೆ ಬನ್ನಿ, ಬೇಕಿಂಗ್‌ ಸೋಡಾದ ಸಾಧಕ ಬಾಧಕಗಳ ಬಗ್ಗೆ ತಿಳಿಯೋಣ.

ಗ್ಯಾಸ್‌ ಸಮತೋಲನಗೊಳಿಸುತ್ತದೆ

ಬೇಕಿಂಗ್‌ ಸೋಡಾ ನೈಸರ್ಗಿಕವಾದ ಎಂಟಾಸಿಡ್‌ನಂತೆ ವರ್ತಿಸುವ ಮೂಲಕ ಹೊಟ್ಟೆಯಲ್ಲಿರುವ ಅತಿಯಾದ ಗ್ಯಾಸ್‌ ಅನ್ನು ಸಮತೋಲನಗೊಳಿಸುತ್ತದೆ. ಇದು ಎದೆಯುರಿ, ಆಸಿಡಿಟಿ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವ ಸಮಸ್ಯೆಯೂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ!

ಬೇಗನೆ ಬೇಯುತ್ತದೆ

ಬೇಕಿಂಗ್‌ ಸೋಡಾ ಆಹಾರದಲ್ಲಿರುವ ಪೋಷಕಾಂಶಗಳನ್ನು ಕೊಲ್ಲುವುದಿಲ್ಲ. ಚಿಟಿಕೆಯಷ್ಟು ಬೇಕಿಂಗ್‌ ಸೋಡಾವನ್ನು ಧಾನ್ಯಗಳು ಹಾಗೂ ಬೇಳೆಕಾಳುಗಳು ಬೇಯುವಾಗ ಹಾಕಿದರೆ ಅದು ಬೇಗನೆ ಬೇಯುತ್ತದೆ.
ಇವೆರಡು ಲಾಭಗಳು ಬೇಕಿಂಗ್‌ ಸೋಡಾದಿಂದ ಇವೆಯಾದರೂ, ಇದರಿಂದಾಗುವ ಸಮಸ್ಯೆಗಳೂ ಇವೆ. ಬನ್ನಿ, ಬೇಕಿಂಗ್‌ ಸೋಡಾದ ಅತಿಯಾದ ಬಳಕೆಯಿಂದ ನಾವು ನಮಗೇ ಅರಿವಿಲ್ಲದೆ ಯಾವ ಸಮಸ್ಯೆಗಳನ್ನು ಆಹ್ವಾನಿಸಬಹುದು ಎಂಬುದನ್ನು ನೋಡೋಣ.

ಹೈಪರ್‌ಟೆನ್ಶನ್‌ ಸಮಸ್ಯೆ

ಬೇಕಿಂಗ್‌ ಸೋಡಾದಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ, ಇದರ ಹೆಚ್ಚಿನ ಸೇವನೆಯಿಂದ ದೇಹದಲ್ಲಿ ನೀರಿನಂಶ ಶೇಖರಣೆಯಾಗುವುದು, ಎಲೆಕ್ಟ್ರೋಲೈಟ್‌ ಅಸಮತೋಲನ, ಹೈಪರ್‌ಟೆನ್ಶನ್‌ನಂತಹ ಸಮಸ್ಯೆಗಳು ಉಂಟಾಗಬಹುದು.

ವಾಂತಿ, ತಲೆಸುತ್ತುವಿಕೆ

ಪ್ರತಿದಿನವೂ ಬೇಕಿಂಗ್‌ ಸೋಡ ಸೇವಿಸುವುದರಿಂದ ಕೆಲವು ಮಂದಿಗೆ ಅಲ್ಕಲೋಸಿಸ್‌ ಎಂಬ ಸಮಸ್ಯೆ ಬರಬಹುದು. ಇದು ದೇಹದ ಆಸಿಡ್‌ ಸಮತೋಲನವನ್ನೇ ಹದಗೆಡಿಸಿ, ವಾಂತಿ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸೆಳೆತ, ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾಂಸಖಂಡಗಳ ಸೆಳೆತ

ಅತೀ ಕಡಿಮೆ ಮಂದಿಯಲ್ಲಿ ಈ ಬೇಕಿಂಗ್‌ ಸೋಡಾ ಇನ್ನೂ ಒಂದು ಸಮಸ್ಯೆ ಹುಟ್ಟುಹಾಕಬಹುದು. ಹೈಪೋಕಲೇಮಿಯಾ ಎಂಬ ಈ ಸಮಸ್ಯೆಯಲ್ಲಿ ದೇಹದ ಪೊಟಾಶಿಯಂ ಮಟ್ಟವೇ ಇಳಿಯುತ್ತದೆ. ಪೊಟಾಶಿಯಂ ಮಟ್ಟದ ಇಳಿಕೆಯಿಂದ ಮಾಂಸಖಂಡಗಳ ಸೆಳೆತ, ದುರ್ಬಲತೆ, ಪಾರ್ಶ್ವವಾಯು, ದೇಹದಲ್ಲಿ ಅಲ್ಲಲ್ಲಿ ನೋವುಗಳು ಇತ್ಯಾದಿ ಸಮಸ್ಯೆಗಳು ಬರಬಹುದು. ಇದು ಕೆಲವೊಮ್ಮೆ ಮಾರಣಾಂತಿಕ ಸಮಸ್ಯೆಯಾಗಿಯೂ ಪರಿಣಮಿಸಬಹುದಾದ್ದರಿಂದ ವೈದ್ಯರ ನೆರವು ಅತ್ಯಗತ್ಯ.
ಆದರೆ, ಬೇಕಿಂಗ್‌ ಸೋಡಾವನ್ನು ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Exit mobile version