Site icon Vistara News

Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Balancing Hormones Naturally

ಈಗಿನ ದಿನಗಳಲ್ಲಿ ಅನಾರೋಗ್ಯ ಇಲ್ಲದವರೇ ಅಪರೂಪ ಎನ್ನುವಂತಾಗಿದೆ. ಮತ್ತೇನು ಸಮಸ್ಯೆ ಇಲ್ಲದಿದ್ದರೂ ದಿನಕ್ಕೊಂದು ಥೈರಾಯ್ಡು, ಸಕ್ಕರೆ ಕಾಯಿಲೆ ಅಥವಾ ಇನ್ನೊಂದು ಮಾತ್ರೆಯನ್ನು ತಿನ್ನುವಂತಾಗುವುದು ಸಾಮಾನ್ಯ. ಈ ಹಾರ್ಮೋನುಗಳು ಏರುಪೇರಾದರೆ ದೇಹದಲ್ಲಿ ಆಗುವಂಥ ಸಮಸ್ಯೆ ಅಷ್ಟಿಷ್ಟೇ ಅಲ್ಲ. ಒಂದರಿಂದ ಇನ್ನೊಂದು ಎಂಬಂತೆ ರೋಗಗಳ ಸಂಖ್ಯೆ ದೇಹದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಈ ಚೋದಕಗಳನ್ನು ಸಮತೋಲನದಲ್ಲಿ ಇಡುವುದಕ್ಕೆ (Balancing hormones naturally) ಕೆಲವೊಮ್ಮೆ ಜೀವನಶೈಲಿಯ ಸುಧಾರಣೆಯಿಂದಲೂ ಸಾಧ್ಯವಿದೆ.
ಅಂದರೇನು! ನಮ್ಮದೆಲ್ಲ ಬದುಕುವ ರೀತಿ ಹಾಳೇ? ತಪ್ಪೇ? ಎಂಬ ಪ್ರಶ್ನೆಗಳು ಸಹಜವಾಗಿ ಬರಬಹುದು. ವಿಷಯ ಹಾಗಲ್ಲ. ಉದಾ, ಬೆಳಗಿನ ತಿಂಡಿಯನ್ನು ಸರಿಯಾದ ರೀತಿಯಲ್ಲಿ ತಿಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಳಿತ ಆಗುವುದನ್ನು ತಪ್ಪಿಸಬಹುದು. ಈ ಮೂಲಕ ಇನ್ಸುಲಿನ್‌ ಚೋದಕದ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು. ಇಂಥದ್ದೇ ಇನ್ನೂ ಕೆಲವು ಹಾರ್ಮೋನುಗಳಿಗೆ ಅನ್ವಯಿಸಬಹುದು. ಅಂದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?
ಬೆಳಗಿನ ಆಹಾರದಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೊಟೀನ್‌ಗಳ ಜೋಡಿ ಬಹಳಷ್ಟು ಸಮಸ್ಯೆಗಳಿಗೆ ಉಪಶಮನ ನೀಡಬಲ್ಲದು. ಜೊತೆಗೆ, ಸಂಕೀರ್ಣ ಪಿಷ್ಟಗಳು, ನಾರು, ವಿಟಮಿನ್‌ ಹಾಗೂ ಮಿನರಲ್‌ಗಳ ಸಾಹಚರ್ಯ ಅಗತ್ಯವಾಗುತ್ತದೆ. ಇಂಥ ಆಹಾರಗಳು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳು ಹತ್ತಿರ ಬಾರದಂತೆ ನಮ್ಮನ್ನು ಕಾಪಾಡಬಲ್ಲವು. ಹಾಗಾದರೆ ಯಾವೆಲ್ಲ ಆಹಾರಗಳು ಹೆಚ್ಚು ಅನುಕೂಲ ತರುತ್ತವೆ?

ಪ್ರೊಟೀನ್‌ಭರಿತ

ಹಾರ್ಮೋನುಗಳ ಸ್ರವಿಸುವಿಕೆಗೆ ಅಗತ್ಯವಾದ ಅಮೈನೋ ಆಮ್ಲಗಳು ಪ್ರೊಟೀನ್‌ಗಳಿಂದಲೇ ದೊರೆಯುವುದು. ಹೆಚ್ಚಿನ ಅಮೈನೊ ಆಮ್ಲಗಳನ್ನು ನಾವು ಆಹಾರಗಳಿಂದಲೇ ಪೂರೈಸಬೇಕೆ ಹೊರತು ಅವುಗಳನ್ನು ಶರೀರ ತನ್ನಷ್ಟಕ್ಕೇ ಸಿದ್ಧ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಆಹಾರದಲ್ಲಿ ಪ್ರೊಟೀನ್‌ ಸಾಂದ್ರತೆ ಹೆಚ್ಚಾಗಿ ಬೇಕು. ಮೊಟ್ಟೆ, ಗ್ರೀಕ್‌ ಮೊಸರು, ಕಿನೊವಾ ಮುಂತಾದ ಪ್ರೊಟೀನ್‌ ಸಾಂದ್ರ ಆಹಾರಗಳು ಬೆಳಗಿನ ಹೊತ್ತು ದೇಹಕ್ಕೆ ಬೇಕಾದ ಪ್ರೊಟೀನ್‌ ಶಕ್ತಿಯನ್ನು ಪೂರೈಸುತ್ತವೆ.

ಆರೋಗ್ಯಕರ ಕೊಬ್ಬು

ಹಾರ್ಮೋನುಗಳ ಉತ್ಪಾದನೆಗೆ ಆರೋಗ್ಯಕರ ಕೊಬ್ಬಿನ ಅಗತ್ಯವೂ ಇದೆ. ಬೆಣ್ಣೆ ಹಣ್ಣು, ನೀರಲ್ಲಿ ನೆನೆಸಿದ ಬಾದಾಮಿಯಂಥ ಬೀಜಗಳು, ಕೊಬ್ಬರಿಯಂಥ ಎಣ್ಣೆ ನೀಡುವಂಥ ಕಾಯಿಗಳು- ಇವೆಲ್ಲ ಉತ್ತಮ ಕೊಬ್ಬಿಗೆ ಉದಾಹರಣೆಗಳು. ಇವು ತಿನ್ನುವುದಕ್ಕೆ ರುಚಿ ಮಾತ್ರವಲ್ಲ, ನಮ್ಮ ಮೆದುಳಿನ ಕ್ಷಮತೆಯನ್ನು ನೇರವಾಗಿ ಹೆಚ್ಚಿಸುವಂಥವು. ನಮ್ಮ ಮೆದುಳಿಗೆ ಮತ್ತು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಿ, ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು.

ಶರ್ಕರಪಿಷ್ಟ

ಇವುಗಳಲ್ಲಿ ಹೆಚ್ಚು ಬಣ್ಣಗಳಿದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಬೇರೆಬೇರೆ ಬಣ್ಣಗಳ ತರಕಾರಿಗಳು ಮತ್ತು ಹಣ್ಣುಗಳು ನಿಮ್ಮ ತಟ್ಟೆಯಲ್ಲಿರಲಿ. ಇವುಗಳ ಮೂಲಕ ದೇಹ ಸೇರುವ ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶ ಇನ್ಸುಲಿನ್‌ನಂಥ ಚೋದಕಗಳಿಗೆ ಬುದ್ಧಿ ಕಲಿಸಬಲ್ಲವು. ಮಾತ್ರವಲ್ಲ, ಇಡೀ ದೇಹಕ್ಕೆ ಇದರಿಂದ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ.

ನೀರು

ಇದೂ ಒಂದು ವಿಷಯವೇ? ಎಂದು ಬಿಟ್ಟೀರಿ! ಆದರೆ ನೀರಿನ ಕೊರತೆಯೆಂಬುದು ದೇಹದಲ್ಲಿ ಚೋದಕಗಳ ಸ್ರವಿಸುವಿಕೆಯನ್ನು ತೀವ್ರವಾಗಿ ಏರಿಳಿತ ಮಾಡಬಲ್ಲದು. ಅದರಲ್ಲೂ ಎಂಡೋಕ್ರೈನ್‌ ಗ್ರಂಥಿಗಳ ಮೇಲೆ ನಿರ್ಜಲೀಕರಣವೆಂಬುದು ಅತೀವ ಪರಿಣಾಮ ಬೀರಬಲ್ಲದು. ಹಾಗಾಗಿ ದಿನದ ಆರಂಭಕ್ಕೆ ಒಂದಿಡೀ ಗ್ಲಾಸು ನೀರಿರಲಿ. ನಂತರವೂ ದೇಹದಲ್ಲಿ ನೀರಿನ ಪ್ರಮಾಣ ಸಾಕಷ್ಟಿರುವಂತೆ ಗಮನ ನೀಡಿ.

ತಿನ್ನುವುದೇನು?

ಇದನ್ನು ಮೈಂಡ್‌ಫುಲ್‌ನೆಸ್‌ ಎಂದು ಕರೆಯಲಾಗುತ್ತದೆ. ಅಂದರೆ ನಾವು ಮಾಡುತ್ತಿರುವ ಕೆಲಸದ ಮೇಲೆ ಶ್ರದ್ಧೆ, ಗಮನವನ್ನು ಕೇಂದ್ರೀಕರಿಸುವುದು ಎಂದರ್ಥ. ಏನು ತಿನ್ನುತ್ತಿದ್ದೀರಿ, ಅದರ ರುಚಿ ಹೇಗಿದೆ, ಬಣ್ಣ, ಘಮಗಳೆಲ್ಲ ನಿಮಗಿಷ್ಟವೇ, ಅದನ್ನು ಎಷ್ಟು ತಿನ್ನುತ್ತಿದ್ದೀರಿ, ಅಷ್ಟು ಸಾಕೇ-ಬೇಕೇ… ಇಂಥ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಬೇಕು. ಆಗ ತಿನ್ನುವ ಆಹಾರ ಶರೀರಕ್ಕೆ ದಕ್ಕುತ್ತದೆ.

ಇದನ್ನೂ ಓದಿ: Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು!

Exit mobile version