ಬಾಳೆಹಣ್ಣನ್ನೂ ಹಾಲನ್ನೂ ಬೆರೆಸುವ ಅಭ್ಯಾಸ ನಿಮಗಿದೆಯೇ? (Milk With Banana Side Effects) ಯಾವಾಗಲೂ ಬಾಳೆಹಣ್ಣಿನ ಸ್ಮೂದಿ, ಮಿಲ್ಕ್ ಶೇಕ್ ಮಾಡಿಕೊಂಡು ಕುಡಿಯುತ್ತೀರಾ? ಅಥವಾ ನಿಮ್ಮ ಮಕ್ಕಳಿಗೂ ಕೊಡುತ್ತೀರಾ? ಹಾಗಾದರೆ ಒಮ್ಮೆ ಇಲ್ಲಿ ಕೇಳಿ. ಬಾಳೆಹಣ್ಣು ಹಾಗೂ ಹಾಲು ಇವೆರಡು ಒಳ್ಳೆಯ ಜೋಡಿ ಎಂದು ನಿಮಗನಿಸಿದ್ದರೆ, ಅದು ಸುಳ್ಳೂ ಆಗಿರಬಹುದು ಎಂಬುದನ್ನು ಒಪ್ಪುತ್ತೀರಾ? ಒಪ್ಪಲೇಬೇಕು. ಬಾಳೆಹಣ್ಣನ್ನೂ ಹಾಲನ್ನೂ ಮಿಕ್ಸಿಯಲ್ಲಿ ಹಾಕಿ ಗರ್ರೆಂದು ತಿರುಗಿಸಿ ಒಂದಿಷ್ಟು ಸಕ್ಕರೆ ಹಾಕಿದರೆ, ಆಹಾ ಎಂಬ ರುಚಿಯೇನೋ ಹೌದು. ಬೇಸಿಗೆಯಲ್ಲಿ ಒಂದೆರಡು ಕ್ಯೂಬ್ ಐಸ್ ಹಾಕಿದರಂತೂ ಹೊಟ್ಟೆ ತಂಪಾದ ಅನುಭವ. ಇಂಥ ರುಚಿಯಾದ ಪಾನೀಯವನ್ನು ಮಧ್ಯದಲ್ಲೆಲ್ಲೋ ಹಸಿವಾದಾಗ ಕುಡಿದರೆ ಹೊಟ್ಟೆ ತುಂಬಿದ ಭಾವ. ಬಾಯಿಗೂ ರುಚಿ. ಹೊಟ್ಟೆಗೂ, ನಮ್ಮ ಆರೋಗ್ಯಕ್ಕೂ ನಾವು ಒಳ್ಳೆಯದನ್ನೇ ಮಾಡಿದ್ದೇವೆ ಎಂಬ ಭಾವ. ಆದರೆ, ನಾವು ಅಂದುಕೊಂಡಿದ್ದೆಲ್ಲ ನಿಜವಾಗಲೇಬೇಕಾಗಿ ಇಲ್ಲವಲ್ಲ!
ಹೌದು. ಬಾಳೆಹಣ್ಣಿನ ಮಿಲ್ಕ್‌ಶೇಕ್ ಬಹಳ ಪ್ರಸಿದ್ಧವೇನೋ ಹೌದಾದರೂ, ಯಾವಾಗಲೂ ಇದರ ಬಗ್ಗೆ ಹೀಗೆ ವಾದವಿವಾದಗಳು ಇದ್ದೀದ್ದೇ. ಒಂದು ವರ್ಗ ಇದನ್ನು ಒಳ್ಳೆಯದು ಎಂದರೆ, ಇನ್ನೊಂದು ವರ್ಗ ಇದು ಒಳ್ಳೆಯದಲ್ಲ ಎನ್ನುತ್ತದೆ. ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬಂತೆ ಈ ವಾದಕ್ಕೆ ಎಂದಿಗೂ ಕೊನೆಯೇ ಇಲ್ಲ. ಹಾಲೂ ಒಳ್ಳೆಯದು, ಬಾಳೆಹಣ್ಣೂ ಒಳ್ಳೆಯದು, ಇವೆರಡನ್ನೂ ಜೊತೆ ಸೇರಿಸಿ ಸ್ಮೂದಿ ಮಾಡಿ ಕುಡಿದರೆ ಯಾಕೆ ಒಳ್ಳೆಯದಲ್ಲ ಎಂಬ ಬಹುತೇಕರ ಪ್ರಶ್ನೆ ಸಹಜವೇ ಆದರೂ, ಯಾಕೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಹೀಗೆ ವಿವರಿಸುತ್ತಾರೆ. ಅವರ ಪ್ರಕಾರ, ಬಾಳೆಹಣ್ಣು ಹಾಗೂ ಹಾಲು ಇವೆರಡರ ಒಳ್ಳೆಯ ಗುಣಗಳನ್ನು ಪಡೆಯಬೇಕಾದರೆ, ಹಾಲು ಕುಡಿದು 20 ನಿಮಿಷಗಳ ಬಳಿಕ ಬಾಳೆಹಣ್ಣು ಸೇವಿಸಬಹುದು. ಇವೆರಡನ್ನೂ ಒಟ್ಟಿಗೆ ಸೇರಿಸಿ ತಿಂದರೆ ಅಥವಾ ಕುಡಿದರೆ, ಅಥವಾ ಬೇರೆಬೇರೆಯಾಗಿಯಾದರೂ ಜೊತೆಯಾಗಿ ಸೇವಿಸಿದಿರಿ ಎಂದರೆ, ನಿಮಗೆ ಜೀರ್ಣಕ್ರಿಯೆ ಸಂಬಂಧೀ ತೊಂದರೆಗಳು ಬರಬಹುದು. ಜೊತೆಗೆ ಇದರಿಂದ ನಿಮ್ಮ ನಿದ್ರೆಗೂ ತೊಂದರೆಯಾಗಬಹುದು (Milk With Banana Side Effects) ಎನ್ನಲಾಗುತ್ತದೆ.
ತೂಕ ಹೆಚ್ಚಿಸುವುದೆ?
ಇನ್ನೊಂದು ವರ್ಗ ಹೇಳುವ ಪ್ರಕಾರ, ಬಾಳೆಹಣ್ಣು ಹಾಗೂ ಹಾಲು ಸೇವಿಸುವುದು ತೂಕ ಹೆಚ್ಚಿಸಲು ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹೂ ಇಂಟೆನ್ಸಿಟಿ ವರ್ಕೌಟ್ ಮಾಡುವ ಮಂದಿಗೂ ಇದು ಶಕ್ತಿ ನೀಡುವ ಆಹಾರ ಎನ್ನುತ್ತದೆ. ಆದರೆ, ಅಸ್ತಮಾದಂತಹ ಸಮಸ್ಯೆ ಇರುವ ಮಂದಿ ಇದನ್ನು ಹೀಗೆ ಸೇವಿಸುವುದು ಒಳ್ಳೆಯದಲ್ಲ ಎಂದೂ ಹೇಳುತ್ತದೆ.
ಆಯುರ್ವೇದ ಏನು ಹೇಳುತ್ತದೆ?
ಹಾಗಾದರೆ ನಮ್ಮ ಆಯುರ್ವೇದ ಏನು ಹೇಳುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಸಹಜ. ಇದರ ಪ್ರಕಾರ ಹಾಲು ಹಾಗೂ ಬಾಳೆಹಣ್ಣು, ಜೊತೆಯಾಗಿ ತೆಗೆದುಕೊಳ್ಳಬಾರದ ಪಟ್ಟಿಯಲ್ಲಿ ಬರುತ್ತದೆ. ಹಾಲಿನ ಜೊತೆ ಬಾಳೆಹಣ್ಣು ಸೇವಿಸುವುದರಿಂದ, ಇದು ದೇಹದ ಅಗ್ನಿ ಅಂದರ ಜೀರ್ಣಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಇದರ ಪರಿಣಾಮ ನೆಗಡಿ, ಶೀತ, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆ, ಕಫದ ತೊಂದರೆ ಇತ್ಯಾದಿ ಸಮಸ್ಯೆಗಳು ಉದ್ಭವಿಸಬಹುದು. ಇವೆರಡೂ ಸಿಹಿರುಚಿಯನ್ನು ಹೊಂದಿರುವುದರಿಂದ ಹಾಗೂ ತಂಪಿನ ಗುಣಗಳನ್ನು ಹೊಂದಿರುವುದರಿಂದ, ಇದರ ಜೀರ್ಣಾನಂತರದ ಪರಿಣಾಮ ಭಿನ್ನವಾಗಿರುತ್ತವೆ. ಬಾಳೆಹಣ್ಣು ಸ್ವಲ್ಪ ಹುಳಿಯಾಗಿದ್ದರೆ, ಇದರ ಪರಿಣಾಮ ಇನ್ನೂ ಹೆಚ್ಚು. ಕೆಲವರಿಗೆ ಇದು ಬೇದಿ, ವಾಂತಿ ಹಾಗೂ ಅಲರ್ಜಿಯಂತಹ ಸಮಸ್ಯೆಗಳನ್ನೂ ತರಬಹುದು.
ಹಾಗಾದರೆ ಏನು ಮಾಡಬೇಕು?
ಹಾಗಾದರೆ, ಏನು ಮಾಡಬೇಕು ಎಂದು ನೀವು ಕೇಳಬಹುದು. ತಜ್ಞರು ಹೇಳುವಂತೆ, ಇವೆರಡನ್ನೂ ಜೊತೆಯಾಗಿ ತಿನ್ನದಿರುವುದೇ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇಮ. ಅಷ್ಟೇ ಅಲ್ಲ, ಇವೆರಡರ ಎಲ್ಲ ಉತ್ತಮ ಅಂಶಗಳನ್ನೂ ದೇಹ ಪಡೆಯಬೇಕೆಂದಾದಲ್ಲಿ, ಇವೆರಡಕ್ಕೂ ಕನಿಷ್ಟ ಅರ್ಧ ಗಂಟೆಯ ತರ ಕೊಟ್ಟು ಸೇವಿಸುವುದು ಒಳ್ಳೆಯದು. ಪ್ರತ್ಯೇಕವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!