ಹಣ್ಣು ತರಕಾರಿಗಳು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು ಎಂಬ ಪಾಠವನ್ನೇ ಕೇಳುತ್ತಾ ಬಂದಿದ್ದೇವೆ. ಉತ್ತಮ ಆರೋಗ್ಯ, ಸರಿಯಾದ ತೂಕ ಕಾಪಾಡಿಕೊಂಡು ಬರುವ ಮಂದಿಯ ಹಿಂದಿರುವ ಗುಟ್ಟು ಹಣ್ಣು ತರಕಾರಿಗಳೇ ಆಗಿವೆ. ಆದರೂ, ಬಾಳೆಹಣ್ಣು ಮಾತ್ರ ಸದಾ ಈ ವಿಚಾರದಲ್ಲಿ ಕೊಂಚ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ ಎಂದು ಒಂದು ವರ್ಗ ಬಾಳೆಹಣ್ಣನ್ನು ತಿನ್ನದೆ ದೂರ ಇಟ್ಟರೆ, ಕೆಲವರು ಬಾಳೆಹಣ್ಣನ್ನು ವ್ಯಾಯಾಮಕ್ಕೆ ಮೊದಲು ಪ್ರತಿದಿನವೂ ತಿಂದು ಫಿಟ್ ಆಗಿಯೇ ಇರುತ್ತಾರೆ!
ಬಾಳೆಹಣ್ಣು ಹಾಗೂ ಹಾಲು ದಿನವೂ ಜೊತೆಗೇ ಸೇವಿಸುತ್ತಾ ಬಂದಲ್ಲಿ ತೂಕ ಕಡಿಮೆ ಮಾಡಬಹುದು ಎಂಬ ವಾದವೂ ಇದೆ. ಕ್ರೀಡಾಪಟುಗಳಿಗೆ ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದಕ್ಕೆ ಹೇಳುತ್ತಾರೆ ಕೂಡಾ. ಜೊತೆಗೆ, ಬೆಳಗ್ಗಿನ ವರ್ಕ್‌ಔಟ್ ಮಾಡುವ ಸಂದರ್ಭ ವ್ಯಾಯಾಮಕ್ಕೂ ಮೊದಲು ಶಕ್ತಿ ಚೈತನ್ಯವನ್ನು ಹೆಚ್ಚಿಸಲು ಬಾಳೆಹಣ್ಣು ತಿನ್ನುವುದೂ ಒಳ್ಳೆಯದು ಹಲವರಿಗೆ ಗೊತ್ತಿರುವ ಸತ್ಯವೇ ಆಗಿದೆ. ಆದರೂ, ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ, ತಿನ್ನುವುದು ಒಳ್ಳೆಯದಲ್ಲ ಎಂಬಂತಹ ಮಾತುಗಳು ಬರುವುದ್ಯಾಕೆ ಎಂಬುದು ಹಲವರ ಜಿಜ್ಞಾಸೆ.
ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಬಹಳಷ್ಟಿವೆ. ಕಡಿಮೆ ಖರ್ಚಿನ, ಬೇಗ ಹೊಟ್ಟೆ ತುಂಬಬಹುದಾದ, ಅತಿ ಸುಲಭವಾಗಿ ಹಾಗೂ ಶೀಘ್ರವಾಗಿ ಶಕ್ತಿ ನೀಡಬಲ್ಲ ಆಹಾರ. ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ತೂಕ ಕಡಿಮೆಗೊಳಿಸುವಲ್ಲೂ ಇದು ನೆರವಾಗುತ್ತದೆ ಎಂಬುದು ಬಲ್ಲವರ ಮಾತು. ಹಾಗೂ ಬೇರೆ ಆಹಾರಗಳ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಳ್ಳುವುದನ್ನು ಇದು ಕಡಿಮೆಗೊಳಿಸುತ್ತದೆ. ಹೆಚ್ಚು ಪೊಟಾಶಿಯಂ ಇರುವುದೂ ಕೂಡಾ ಬಿಎಂಐ ಹಾಗೂ ತೂಕ ಕಡಿಮೆಗೊಳಿಸುವಲ್ಲಿ ಸಹಕಾರ ನೀಡುತ್ತದೆ. ಹಾಗಾದರೆ, ಪ್ರಶ್ನೆಯೇನೆಂದರೆ, ಬಾಳೆಹಣ್ಣಿನಿಂದ ತೂಕ ಹೆಚ್ಚಾಗುತ್ತದೋ, ಕಡಿಮೆಯಾಗುತ್ತದೋ?
ಸಂಶೋಧನೆಗಳ ಪ್ರಕಾರ, ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ. ಇದನ್ನು ಮಿತವಾಗಿ ತಿಂದರೆ ತೂಕ ಇಳಿಸುವಲ್ಲಿ ಅಥವಾ ಇರುವ ತೂಕವನ್ನು ಹಾಗೆಯೇ ಇರಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಬಾಳೆಹಣ್ಣು ಹೆಚ್ಚು ಕ್ಯಾಲರಿ ಇರುವ ಹಣ್ಣು. ಹಾಗಾಗಿ ಹೊಟ್ಟೆ ತುಂಬುವಷ್ಟು ತಿನ್ನುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಪ್ರತಿದಿನ ಸಾಮಾನ್ಯ ಗಾತ್ರದ ಒಂದು ಬಾಳೆಹಣ್ಣು ಸ್ನ್ಯಾಕ್ ಟೈಮಿನಲ್ಲಿ ತೆಗೆದುಕೊಂಡರೆ ಒಳ್ಳೆಯದು.
ಬಾಳೆಕಾಯಿ ಹಾಗೂ ಹಣ್ಣಿನಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಇರುವುದರಿಂದ ಅದು ಬೊಜ್ಜು ಶೇಖರವಾಗುವುದನ್ನು ತಡೆಯುತ್ತದೆ. ಹಣ್ಣಿನಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳು ಹೆಚ್ಚಿದ್ದು ಗ್ಲಿಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ತೂಕ ಇಳಿಕೆಯಲ್ಲಿ ನೆರವಾಗುತ್ತದೆ.
ಹಾಗಾಗಿ ತೂಕ ಇಳಿಸಬೇಕೆಂದಾದಲ್ಲಿ ಬಾಳೆಹಣ್ಣನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ನಮಗೆ ಗಮನವಿರಬೇಕು. ಮುಖ್ಯವಾಗಿ ವ್ಯಾಯಾಮಕ್ಕಿಂತ ಮೊದಲು ಬಾಳೆಹಣ್ಣನ್ನು ತಿಂದರೆ, ಅದು ಶಕ್ತಿಯಾಗಿ ಬದಲಾಗಿ, ಕೂಡಲೇ ನಮಗೆ ವ್ಯಾಯಾಮಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ಭರಪೂರವಾಗಿ ನೀಡುತ್ತದೆ. ಈ ಸಂದರ್ಭ ಇದು ತೂಕ ಇಳಿಸುವಲ್ಲಿ ನೆರವಾಗುತ್ತದೆ.
ಇದನ್ನೂ ಓದಿ | Pollen allergy | ಪರಿಮಳಭರಿತ ಹೂವೇ ಮುಳ್ಳಾದಾಗ!
ಹಾಗಾದರೆ ತೂಕ ಏರಿಸಲು ಬಾಳೆಹಣ್ಣನ್ನು ಹೇಗೆ ಬಳಸಬೇಕು ಎಂಬುದೂ ಕೂಡಾ ಗೊತ್ತಿರುವುದು ಅತ್ಯಗತ್ಯ. ಬಾಳೆಹಣ್ಣಿನಲ್ಲಿ ಕ್ಯಾಲರಿ ಅತೀ ಹೆಚ್ಚಿರುವುದರಿಂದ ಬಹಳ ಹಿಂದಿನ ಕಾಲದಿಂದಲೂ ಇದು ತೂಕ ಏರಿಕೆಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಬೆಳೆದುಬಂದಿದೆ. ತೂಕ ಏರಿಕೆಯ ಮೇಲೆ ಗಮನ ಇದ್ದರೆ, ಬಾಳೆಹಣ್ಣಿನ ಸ್ಮೂದಿ, ಮಿಲ್ಕ್‌ಶೇಕ್‌ಗಳನ್ನು ಮಾಡಿ ಕುಡಿಯಬಹುದು. ಇವೆಲ್ಲಕ್ಕಿಂತ ಬಾಳೆಹಣ್ಣಿನಲ್ಲಿರುವ ಪೋಷಕಾಂಶದ ಮಹತ್ವದ ಅರಿವೂ ಇರುವುದು ಅಗತ್ಯ.
ಬಾಳೆಹಣ್ಣಿನಲ್ಲಿರುವ ಪೆಕ್ಟಿನ್ ಹಾಗೂ ರೆಸಿಸ್ಟೆಂಟ್ ಸ್ಟಾರ್ಚ್ ದೇಹದಲ್ಲಿ ಗ್ಲೂಕೋಸ್ ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪಚನಕ್ರಿಯೆ ಸುಲಭವಾಗಲೂ ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ಹೃದಯವನ್ನು ರಕ್ಷಿಸುವುದಲ್ಲದೆ, ವಯಸ್ಸಾದವರಲ್ಲಿ ಲಕ್ವ ಹೊಡೆಯದಂತೆ ತಡೆಯುತ್ತದೆ. ಆದರೂ ಮಧುಮೇಹಿಗಳು, ಹೃದಯ ಸಂಬಂಧೀ ಸಮಸ್ಯೆಯಿರುವ ಮಂದಿ, ಮುಖ್ಯವಾಗಿ ವಯಸ್ಸಾದವರು ಬಾಳೆಹಣ್ಣು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ಇದನ್ನೂ ಓದಿ | Fried food | ಅತಿಯಾಗಿ ಎಣ್ಣೆತಿಂಡಿ ತಿಂದಿರಾ? ಹಾಗಾದರೆ ಹೀಗೆ ಮಾಡಿ!