ಚರ್ಮ ನುಣುಪಾಗಿ ಫಳಫಳ ಹೊಳೆಯುವಂತಿರಬೇಕು (glowing skin) ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ! ಆದರೆ, ಪ್ರತಿಯೊಬ್ಬರಿಗೂ ತಮ್ಮ ತಮ್ಮ ಚರ್ಮದ ಕುರಿತು ಒಂದಲ್ಲ ಒಂದು ಸಮಸ್ಯೆಗಳು. ಚರ್ಮದ ಆರೋಗ್ಯ ಹೆಚ್ಚಿಸಿಕೊಳ್ಳಲು ನಾನಾ ಸರ್ಕಸ್ಸುಗಳನ್ನು ಮಾಡಿಯೂ ನಿರೀಕ್ಷಿತ ಫಲ ಸಿಗದ ಬೇಸರ ಹಲವರಿಗೆ. ಇನ್ನೂ ಕೆಲವರು ಅತ್ಯಂತ ನಿಷ್ಠರಾಗಿ ಕೆಲವು ಆಹಾರ ಕ್ರಮಗಳ ಮೂಲಕ ಚರ್ಮದ ಆರೋಗ್ಯದ ಕಡೆಗೆ ವಿಶೇಷ ಗಮನ ನೀಡಿ ಚರ್ಮವನ್ನು ನುಣುಪಾಗಿ ಇಟ್ಟುಕೊಳ್ಳಲು ಶತಾಯಗತಾಯ ಪ್ರಯತ್ನಗಳನ್ನು ಮಾಡುತ್ತಾರೆ ಕೂಡಾ. ಹಾಗಾದರೆ ಬನ್ನಿ, ಕೆಲವು ತಾಜಾ ನೈಸರ್ಗಿಕ ಪೇಯಗಳ ಮೂಲಕ ನಾವು ನಮ್ಮ ಚರ್ಮದ ಆರೋಗ್ಯವನ್ನು (Beauty Tips) ಹೆಚ್ಚಿಸಿಕೊಂಡು ಫಳಫಳ ಹೊಳೆಯುವಂತೆ ಮಾಡಬಹುದು ಎಂಬುದನ್ನು ನೋಡೋಣ.
1. ಎಳನೀರು: ಎಳನೀರು ನಿಸರ್ಗ ನಮಗೆ ನೀಡಿದ ಉಡುಗೊರೆ. ಎಳನೀರಿನಂತಹ ಅಮೃತ ಇನ್ನೊಂದಿಲ್ಲ. ಇದು ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ನೀಡುವುದಷ್ಟೇ ಅಲ್ಲ, ಇದು ದೇಹದಲ್ಲಿರುವ ಕಳ್ಮಶಗಳನ್ನೂ ಹೊರಕ್ಕೆ ಕಳಿಸಿ ದೇಹವನ್ನು ಡಿಟಾಕ್ಸ್ ಮಾಡಿ ಸಾಕಷ್ಟು ಚರ್ಮದ ತೊಂದರೆಗಳನ್ನು ದೂರ ಮಾಡುತ್ತದೆ. ಇದು ಕೊಲಾಜೆನ್ ಉತ್ಪತ್ತಿಯನ್ನೂ ಹೆಚ್ಚುವಂತೆ ಮಾಡುತ್ತದೆ. ಚರ್ಮಕ್ಕೆ ಬೇಕಾದ ಅಗತ್ಯ ನೀರಿನಂಶವನ್ನು ಇದು ನೀಡುವುದರಿಂದ ಚರ್ಮ ನಯವಾಗಿ ಫಳಪಳನೆ ಕಂಗೊಳಿಸುವಂತೆ ಮಾಡುತ್ತದೆ.
2. ಮಜ್ಜಿಗೆ: ಮಜ್ಜಿಗೆ ಎಂಬ ಸಾಂಪ್ರದಾಯಿಕ ಪೇಯ ಹಲವು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಬಂದಿದೆ. ಇದು ದೇಹದ ಜೀರ್ಣಕ್ರಿಯೆಯನ್ನು ಚುರುಕಾಗಿಸುವುದಲ್ಲದೆ, ತೂಕ ಕಡಿಮೆಗೊಳಿಸುವುದು, ಎಲುಬನ್ನು ಗಟ್ಟಿಗೊಳಿಸುವುದು ಇತ್ಯಾದಿಗಳಿಗೂ ನೆರವಾಗುತ್ತದೆ. ಅಷ್ಟೇ ಅಲ್ಲ, ಮಜ್ಜಿಗೆ ಚರ್ಮದ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ ಬೀರುತ್ತದೆ. ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆ ಕಲೆ ಇತ್ಯಾದಿಗಳನ್ನು ದೂರ ಮಾಡಿ ಚರ್ಮಕ್ಕೆ ಅಗತ್ಯ ನೀರಿನಂಶವನ್ನೂ ಒದಗಿಸುತ್ತದೆ. ಇದರಿಂದ ಚರ್ಮ ಒಣಗದೆ, ನಿಸ್ತೇಜವಾಗಿ ಕಾಣದೆ, ನುಣುಪಾಗಿ ಕಾಂತಿಯುಕ್ತವಾಗಿ ಕಂಗೊಳಿಸುತ್ತದೆ.
ಇದನ್ನೂ ಓದಿ: Collagen foods | ಚರ್ಮದ ಆರೋಗ್ಯದ ಕೀಲಿಕೈ ಕೊಲಾಜೆನ್: ಈ ಐದು ಆಹಾರಗಳಲ್ಲಿದೆ ನೋಡಿ
3. ಹುಣಸೆ ಶರಬತ್ತು: ಹುಣಸೆ ಹಣ್ಣು ಎಂಬ ನೈಸರ್ಗಿಕ ಹುಳಿ ನಮ್ಮ ಚರ್ಮದ ಮೇಲೆ ಮ್ಯಾಜಿಕ್ ಮಾಡಬಲ್ಲುದು ಎಂಬುದು ಗೊತ್ತೇ? ಹೌದು, ಇದರಲ್ಲಿರುವ ವಿಟಮಿನ್ ಸಿ ಹಾಗೂ ತಂಪಾಗಿಸುವ ಗುಣದಿಂದಾಗಿ ಇದನ್ನು ನಾವು ನಮ್ಮ ಅಹಾರದಲ್ಲಿ ಸೇರಿಸುಕೊಳ್ಳುವುದು ಬಹಳ ಮುಖ್ಯ. ಹುಣಸೆ ಹಣ್ಣನ್ನು ಕಿವುಜಿ ಮಾಡುವ ಶರಬತ್ತು ದೇಹವನ್ನು ತಂಪಾಗಿಸುವುದಷ್ಟೇ ಅಲ್ಲ, ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ.
4. ಬೀಟ್‌ರೂಟ್ ಜ್ಯೂಸ್: ಬೀಟ್‌ರೂಟ್ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬ ಸತ್ಯ ಗೊತ್ತಿದ್ದರೂ, ನಮ್ಮ ಚರ್ಮದ ಆರೋಗ್ಯಕ್ಕೂ ಇದರ ಕೊಡುಗೆ ಇದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಬೀಟ್‌ರೂಟ್‌ನಲ್ಲೂ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಹೇರಳವಾಗಿ ಇರುವುದರಿಂದ ಚರ್ಮದ ಕಾಂತಿಯಲ್ಲಿ ಇದೂ ಕೂಡಾ ಮಹತ್ವದ ಕಾಣಿಕೆ ನೀಡಬಲ್ಲದು. ಮೊಡವೆ, ಕಪ್ಪು ಕಲೆಗಳನ್ನು ದೂರವಿಟ್ಟು, ಹೊಳಪು ಹೆಚ್ಚಾಗುವಂತೆ ಮಾಡುತ್ತದೆ.
5. ಸೋರೆಕಾಯಿ ಜ್ಯೂಸ್: ಚರ್ಮದ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಇನ್ನೊಂದು ಜ್ಯೂಸ್ ಎಂದರೆ ಅದು ಸೋರೆಕಾಯಿ ಜ್ಯೂಸ್. ಸೋರೆಕಾಯಿಯಲ್ಲಿ ವಿಟಮಿನ್ ಸಿ, ಝಿಂಕ್ ಇರುವುದರಿಂದ ಇದು ಸುಕ್ಕು, ಮೊಡವೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಸೋರೆಕಾಯಿ ಜ್ಯೂಸ್ ಮಾಡುವುದಿದ್ದರೆ, ಇತರ ತರಕಾರಿಗಳೊಂದಿಗೆ ಬೆರೆಸಿ ಜ್ಯೂಸ್ ಮಾಡದೆ, ತಾಜಾ ಆಗಿ ಕೇವಲ ಸೋರೆಕಾಯಿಯನ್ನು ಪ್ರತ್ಯೇಕವಾಗಿ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ