Site icon Vistara News

Benefits Of Bajra In Winter: ಚಳಿಗಾಲದಲ್ಲಿ ಸಜ್ಜೆಯ ಪ್ರಯೋಜನಗಳು ಹಲವು

Benefits Of Bajra In Winter

ಕೆಲವು ಆಹಾರಗಳು ಅನಾರೋಗ್ಯಕರ ಎಂಬುದು ತಿಳಿದಿರುತ್ತದೆ. ಆದರೆ ಅವುಗಳನ್ನು ಬಿಟ್ಟು ಆರೋಗ್ಯಕರ ಆಯ್ಕೆಗಳತ್ತ ಹೊರಳುವಾಗ ಯಾವುದು ತಿನ್ನಬೇಕು ಎಂಬುದೇ ಬಗೆಹರಿಯುವುದಿಲ್ಲ. ಉದಾ, ಬೆಳಗಿನ ತಿಂಡಿಗೆ ಪ್ಯಾಕ್‌ನಿಂದ ಸೀರಿಯಲ್‌ ಸುರಿದು ಅದಕ್ಕೆ ಹಾಲೆರೆದುಕೊಂಡು ತಿನ್ನುವುದು ಆರೋಗ್ಯಕ್ಕೆ ಸರಿಯಲ್ಲ ಎಂಬುದು ತಿಳಿದಿರುತ್ತದೆ. ಅದರ ಬದಲಿಗೆ ಅದೇ ಅವಲಕ್ಕಿ, ಉಪ್ಪಿಟ್ಟುಗಳು ಬೋರಾಗಿರುತ್ತವೆ. ದೋಸೆ, ಇಡ್ಲಿಗಳು ಧಿಡೀರ್‌ ಆಗುವಂಥವಲ್ಲ. ಚಪಾತಿ, ರೊಟ್ಟಿಗೆ ಸಮಯ ಬೇಕು… ಹೀಗೆ ಒಂದೊಂದೇ ನೆವಗಳನ್ನು ಕೊಡುತ್ತಾ ಹೋಗುತ್ತೇವೆ. ಹೀಗಿರುವಾದ ಈ ಚಳಿಗಾಲದಲ್ಲಿ ಸಜ್ಜೆಯನ್ನೇಕೆ (bajra or pearl millet) ಪ್ರಯತ್ನಿಸಬಾರದು? ಇದೇ 2023ನೇ ಸಾಲಿನಲ್ಲಿ ದೇಶದೆಲ್ಲೆಡೆ ಸಿರಿ ಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಪ್ರೊಟೀನ್‌ಗಳ ಗುಡಾಣ, ನಾರಿನ ದಾಸ್ತಾನು, ಸೂಕ್ಷ್ಮ ಪೋಷಕಾಂಶಗಳ ಕೋಶ ಮುಂತಾದ ಹಲವು ಬಗೆಯ ಗುಣವಾಚಕಗಳನ್ನು ಹೊತ್ತಿರುವ ಸಿರಿಧಾನ್ಯಗಳು ದೀರ್ಘಕಾಲದಿಂದಲೇ ನಮ್ಮಲ್ಲಿ ಬಳಕೆಯಲ್ಲಿದ್ದವು. ಕ್ರಮೇಣ ಅಕ್ಕಿ, ಗೋದಿ ಮತ್ತಿತರ ಬೆಳೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿದಿದ್ದವು. ಆದರೀಗ ಅವುಗಳನ್ನು ಅರಿತು ಬಳಸುವ ಕಾಲ ಮತ್ತೆ ಬಂದಿದೆ. ಹೀಗಿರುವಾಗ, ಬಾಜ್ರಾ ಎಂದೂ ಕರೆಯಲಾಗುವ ಸಜ್ಜೆಯ ಸದ್ಗುಣಗಳ ಬಗ್ಗೆ, ಚಳಿಗಾಲದಲ್ಲಿ ಅವುಗಳ ಉಪಯೋಗಗಳ (Benefits Of Bajra In Winter) ಬಗ್ಗೆ ಇಲ್ಲಿದೆ ಮಾಹಿತಿ

ಕಡಿಮೆ ನೀರಿನಲ್ಲಿ ಬೆಳೆಯುವ, ಅತ್ಯಧಿಕ ಪೋಷಕಾಂಶಗಳನ್ನು ನೀಡುವ, ದೇಹವನ್ನು ರೋಗಗಳಿಂದ ದೂರ ಮಾಡುವ ಅದ್ಭುತ ಸಾಮರ್ಥ್ಯ ಸಿರಿ ಧಾನ್ಯಗಳದ್ದು. ಸಜ್ಜೆಯೂ ಈ ಪಟ್ಟಿಯಲ್ಲಿದೆ. ಹಿಂದೆಲ್ಲಾ ಬಡವರ ಆಹಾರವೆಂದೇ ಕರೆಯಲಾಗುತ್ತಿದ್ದ ಇವು ಈಗ ದುಬಾರಿಯೆನಿಸಿವೆ. ಕರ್ನಾಟಕದಲ್ಲಿ ರಾಗಿ ಜನಪ್ರಿಯವಿರುವಂತೆ, ಗುಜರಾತ್‌, ರಾಜಸ್ಥಾನಗಳಲ್ಲಿ ಬಾಜ್ರಾ ಪ್ರಚಲಿತವಿರುವ ಆಹಾರ. ಗೋದಿಯ ಅಲರ್ಜಿ ಇರುವವರಿಗೆ, ಮಲಬದ್ಧತೆಯಿಂದ ನರಳುತ್ತಿರುವವರಿಗೆ ಚಯಾಪಚಯದ ಸಮಸ್ಯೆ ಇರುವವರಿಗೆ ಸಜ್ಜೆಯಂಥ ಕಿರು ಧಾನ್ಯಗಳು ಉತ್ತಮ ಪರಿಹಾರ ನೀಡಬಲ್ಲವು.

ಚಳಿಗಾಲದಲ್ಲಿ ಇದರ ಬಳಕೆ

ಚಳಿಗಾಲದಲ್ಲಿ ಸೋಂಕುಗಳ ಕಾಟ ಹೆಚ್ಚು. ಇದಕ್ಕೆ ಪ್ರತಿಯಾಗಿ ದೇಹಕ್ಕೆ ಭರಪೂರ ಪೋಷಕಾಂಶಗಳನ್ನು ಒದಗಿಸಿ, ವೈರಸ್‌ ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಬೇಕಾಗುತ್ತದೆ. ಪ್ರೊಟೀನ್‌, ನಾರು, ಸಂಕೀರ್ಣ ಪಿಷ್ಟಗಳ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿಣ, ಫಾಸ್ಫರಸ್‌, ಪೊಟಾಶಿಯಂ, ಮೆಗ್ನೀಶಿಯಂನಂಥ ಸತ್ವಗಳು ಸಜ್ಜೆಯಲ್ಲಿ ಹೇರಳವಾಗಿವೆ. ಇವುಗಳಿಂದ ದೇಹದ ಸ್ವಾಸ್ಥ್ಯವನ್ನು ಸುಲಭವಾಗಿ ವೃದ್ಧಿಸಬಹುದು. ಆದರೆ ಇದರ ಬಳಕೆ ಹೇಗೆ ಎನ್ನುವುದು ಹಲವರ ಪ್ರಶ್ನೆ.
ಈ ಧಾನ್ಯವನ್ನು ಅಕ್ಕಿಯಂತೆಯೆ ಬಳಸಬಹುದು. ರೊಟ್ಟಿ, ಚಪಾತಿ, ದೋಸೆ, ಇಡ್ಲಿ, ಖಿಚಡಿ, ಭಾತ್‌ಗಳು, ಖೀರು, ಹಲ್ವಾ… ಅಂತೂ ಅಕ್ಕಿಯಲ್ಲಿ ಮಾಡಲಾಗುವ ಸಾಧಾರಣ ಎಲ್ಲಾ ಅಡುಗೆಗಳನ್ನೂ ಸಜ್ಜೆಯಲ್ಲಿ ಮಾಡಬಹುದು. ಪೌಷ್ಟಿಕ ಮಾತ್ರವಲ್ಲ ಸ್ವಾದಿಷ್ಟವಾಗಿಯೂ ಇರುವ ಇದನ್ನು ಚಳಿಗಾಲದಲ್ಲಿ ಬಳಸದೆ ಇರುವುದಕ್ಕೆ ನೆವಗಳನ್ನು ಹೇಳುವ ಪ್ರಮೇಯವೇ ಇಲ್ಲ.

ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಳ

ಚಳಿಗಾಲದ ಹಲವು ಸಮಸ್ಯೆಗಳ ಪೈಕಿ ಮಲಬದ್ಧತೆಯೂ ಒಂದು. ಚಳಿಯೆಂಬ ನೆವವನ್ನೊಡ್ಡಿ ಸರಿಯಾಗಿ ನೀರು ಕುಡಿಯದೆ ಇರುವುದು, ಸಾಕಷ್ಟು ನಾರು ತಿನ್ನದೆ ಇರುವುದು ಇದಕ್ಕೆ ಮುಖ್ಯ ಕಾರಣ. ಕರಗದಿರುವ ಮತ್ತು ಕರಗುವ ನಾರುಗಳು ಸಜ್ಜೆಯಲ್ಲಿ ಧಾರಾಳವಾಗಿವೆ. ಇದರಿಂದ ಕರಳಿನ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯೂ ವೃದ್ಧಿಸುತ್ತದೆ. ಜೊತೆಗೆ ಮಲಬದ್ಧತೆ ದೂರ ಮಾಡಲೂ ನೆರವಾಗುತ್ತದೆ.
ಶ್ವಾಸಕೋಶಗಳು ಸಶಕ್ತ: ಚಳಿಗಾಲದಲ್ಲಿ ಬಾಧಿಸುವ ಸೋಂಕುಗಳಲ್ಲಿ ಹೆಚ್ಚಿನವು ಗುರಿಯಾಗಿಸಿಕೊಳ್ಳುವುದು ಶ್ವಾಸಕೋಶಗಳನ್ನು. ಸಜ್ಜೆಯಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಶ್ವಾಸಕೋಶಗಳನ್ನು ಬಲಪಡಿಸುತ್ತವೆ. ಇದರಿಂದ ಅಸ್ತಮಾದಂಥ ಉರಿಯೂತ ಜನ್ಯ ರೋಗಗಳನ್ನು ನಿಯಂತ್ರಿಸಲೂ ಸಾಧ್ಯವಿದೆ.

ಮಧುಮೇಹ ಹತೋಟಿ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣವೂ ಕೆಲವೊಮ್ಮ ಚಳಿಗಾಲದಲ್ಲಿ ಕೈಕೊಡುತ್ತದೆ. ಸಜ್ಜೆಯ ಸೇವನೆಯು ಮಧುಮೇಹಿಗಳಿಗೆ ಉತ್ತಮ ಫಲಿತಾಂಶವನ್ನು ನೀಡಬಲ್ಲದು. ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದ್ದು, ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನೆರವಾಗುತ್ತದೆ. ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ತೂಕ ನಿಯಂತ್ರಣಕ್ಕೂ ಉಪಯುಕ್ತವಾಗಿದೆ.

ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!

Exit mobile version