Site icon Vistara News

Benefits Of Black Raisins: ರಕ್ತದೊತ್ತಡ, ಕೊಲೆಸ್ಟ್ರಾಲ್‌ ನಿಯಂತ್ರಿಸಬೇಕೆ? ಕಪ್ಪು ಒಣದ್ರಾಕ್ಷಿ ನೆನೆಸಿ ತಿನ್ನಿ

Benefits Of Black Raisins

ಒಣ ಹಣ್ಣುಗಳನ್ನು ಮೆಲ್ಲುವುದನ್ನು ಇಷ್ಟಪಡದವರು ವಿರಳ. ಸುಮ್ಮನೆ ಕೂತಿದ್ದಾಗಲೂ ನಾಲ್ಕು ಒಣ ದ್ರಾಕ್ಷಿ ಕೈಗಿತ್ತರೆ ಬಾಯಿಗೆ ಒಗೆದುಕೊಳ್ಳಲು ಯಾರಿಗೂ ಬೇಸರವಿರುವುದಿಲ್ಲ. ಹಲ್ಲಿಲ್ಲದ ಬಾಯಲ್ಲಿ ಒತ್ತರಿಸಿಟ್ಟುಕೊಳ್ಳುವ ವೃದ್ಧರಿಂದ ಹಿಡಿದು, ಹಲ್ವಾ, ಪಾಯಸದಲ್ಲಿ ಹೆಕ್ಕಿ ತಿನ್ನುವ ಮಕ್ಕಳವರೆಗೆ ಒಣ ದ್ರಾಕ್ಷಿ ಎಲ್ಲರಿಗೂ ಮೆಚ್ಚು. ಸಾಮಾನ್ಯವಾಗಿ ಬಳಸುವ ಹೊಂಬಣ್ಣದ ದ್ರಾಕ್ಷಿಗಳ ಬದಲಿಗೆ ಕಪ್ಪು ದ್ರಾಕ್ಷಿಗಳ ಬಗ್ಗೆ ಇವತ್ತಿನ ನಮ್ಮ ಗಮನ. ಏನಿವುಗಳ ವಿಶೇಷತೆ?
ಒಣ ದ್ರಾಕ್ಷಿಯನ್ನು ನೆನೆಸಿ ತಿನ್ನಬೇಕೆನ್ನುತ್ತದೆ ಪರಂಪರಾಗತ ವೈದ್ಯ ಶಾಸ್ತ್ರ. ಯಾವುದೇ ಒಣ ಹಣ್ಣು, ಬೀಜಗಳನ್ನು ನೆನೆಸಿ ತಿನ್ನುವುದೇ ಶ್ರೇಷ್ಠ ಎಂಬುದನ್ನು ಆಹಾರ ತಜ್ಞರೂ ಅನುಮೋದಿಸುತ್ತಾರೆ. ಇದು ಒಣ ದ್ರಾಕ್ಷಿಯ ಮಟ್ಟಿಗೂ ನಿಜ. ಹಸಿರು, ಹೊಂಬಣ್ಣದ್ದು, ಕಪ್ಪು- ಹೀಗೆ ದ್ರಾಕ್ಷಿಯ ಬಣ್ಣ ಯಾವುದೇ ಇದ್ದರೂ, ಅವುಗಳ ಲಾಭಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕೆಂದರೆ ನೆನೆಸಿ ತಿನ್ನುವುದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮೆಲ್ಲುವುದು ಇನ್ನೂ ಉತ್ತಮ. ಏನಿದೆ ಇದನ್ನು ತಿನ್ನುವುದರ (benefits of black raisins) ಪ್ರಯೋಜನಗಳು?

ಜೀರ್ಣಾಂಗಗಳು ಸುಸೂತ್ರ

ನಾರಿನಂಶ ಹೆಚ್ಚಿರುವ ಈ ಹಣ್ಣುಗಳನ್ನು ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಆಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಯನ್ನು ತಹಬಂದಿಗೆ ತರುತ್ತದೆ.

ಮೂಳೆಗಳು ಸದೃಢ

ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಮತ್ತು ಪೊಟಾಶಿಯಂ ಅಂಶಗಳು ವಿಫುಲವಾಗಿವೆ. ಇದರಿಂದ ಸಣ್ಣ ಪ್ರಮಾಣದಲ್ಲೇ ಆದರೂ, ನಿಯಮಿತ ಸೇವನೆಯಿಂದ ಈ ಖನಿಜಗಳು ದೇಹಕ್ಕೆ ಸದಾ ದೊರೆಯುವಂತೆ ನೋಡಿಕೊಳ್ಳಬಹುದು. ಹೀಗೆ ನಿರಂತರವಾಗಿ ಈ ಪೋಷಕಗಳು ದೊರೆತರೆ, ಕ್ರಮೇಣ ಮೂಳೆಗಳು ಗಟ್ಟಿಯಾಗುತ್ತವೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಮತ್ತು ವೃದ್ಧರಿಗೆ ಮೂಳೆ ಸಬಲವಾಗಿರಬೇಕಾದರೆ ಇಂಥ ಆಹಾರಗಳು ಅಗತ್ಯವಾಗುತ್ತವೆ.

ರಕ್ತದೊತ್ತಡ ನಿಯಂತ್ರಣ

ಕಪ್ಪು ದ್ರಾಕ್ಷಿಯಲ್ಲಿರುವ ಪೊಟಾಶಿಯಂ ಅಂಶವು ರಕ್ತದಲ್ಲಿರುವ ಸೋಡಿಯಂ ಅಂಶವನ್ನು ತಗ್ಗಿಸುವ ಕೆಲಸವನ್ನು ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಏರಿಳಿತವಾಗದಂತೆ ನಿರ್ವಹಿಸುವುದು ಸುಲಭವಾಗುತ್ತದೆ. ಇದರಲ್ಲಿರುವ ಕರಗದಿರುವ ನಾರಿನಂಶವು ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕರಗಿಸುವುದಕ್ಕೂ ಅಳಿಲುಸೇವೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣ

ಶರೀರದಲ್ಲಿ ಕೊಲೆಸ್ಟ್ರಾಲ್‌ ಜಮೆಯಾದರೆ ಆಗುವಂಥ ಸಮಸ್ಯೆಗಳು ಒಂದೆರಡೇ ಅಲ್ಲ. ರಕ್ತನಾಳಗಳಲ್ಲಿ ಜಮೆಯಾಗುವ ಕೊಬ್ಬು ಕ್ರಮೇಣ ಹೃದಯಕ್ಕೆ ಅಳಿಸಲಾಗದ ಬರೆಯನ್ನೇ ಹಾಕಿಬಿಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವಂಥ ಆಹಾರಗಳಿಗೆ ಆದ್ಯತೆ ನೀಡುವುದು ಜಾಣತನ. ಕಪ್ಪು ಒಣದ್ರಾಕ್ಷಿಯಲ್ಲಿರುವ ಪಾಲಿಫೆನಾಲ್‌ಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬು ಕಡಿಮೆ ಮಾಡುವ ಗುಣವಿದೆ. ಜೊತೆಗೆ ರಕ್ತದೊತ್ತಡವನ್ನೂ ಇದು ಕಡಿಮೆ ಮಾಡುವುದರಿಂದ, ಹೃದಯದ ಸ್ನೇಹಿತ ಎನಿಸುತ್ತದೆ ಕಪ್ಪು ದ್ರಾಕ್ಷಿ.

ಹಲ್ಲುಗಳ ಆರೋಗ್ಯ ಸುಧಾರಣೆ

ಕಪ್ಪುದ್ರಾಕ್ಷಿಯಲ್ಲಿರುವ ಫೈಟೊ ಕೆಮಿಕಲ್‌ಗಳು ಹಲ್ಲುಗಳಲ್ಲಿ ಹುಳುಕಾಗುವುದನ್ನು ತಪ್ಪಿಸುತ್ತವೆ. ಒಸಡಿನ ಆರೋಗ್ಯವನ್ನೂ ಕಾಪಾಡಿ, ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡುತ್ತವೆ. ನೆನೆಸಿದ ಕಪ್ಪು ದ್ರಾಕ್ಷಿಗಳನ್ನು ಜಗಿದು ತಿನ್ನುವುದರಿಂದ, ಹಲ್ಲುಗಳ ಎನಾಮಲ್‌ ಹೊದಿಕೆಯನ್ನು ಕ್ಷೇಮವಾಗಿ ಇರಿಸಬಹುದು.

ರಕ್ತಹೀನತೆ ದೂರ

ದ್ರಾಕ್ಷಿಯಲ್ಲಿ ಕಬ್ಬಿಣದಂಶ ಅಧಿಕವಾಗಿದೆ. ದೇಹದಲ್ಲಿ ಅಗತ್ಯ ಹಿಮೋಗ್ಲೋಬಿನ್‌ ಮಟ್ಟವನ್ನು ಕಾಯ್ದುಕೊಂಡು, ಆಮ್ಲಜನಕದ ಪ್ರಮಾಣದ ಕಡಿಮೆಯಾಗದಂತೆ ನಿರ್ವಹಿಸಲು ಕಬ್ಬಿಣದಂಶ ಅಗತ್ಯ. ಒಂದೊಮ್ಮೆ ಇದು ಕೊರತೆಯಾದರೆ ರಕ್ತಹೀನತೆ ಕಾಡುತ್ತದೆ. ಹಾಗಾಗಿ ನಿಯಮಿತವಾಗಿ ಕಪ್ಪು ದ್ರಾಕ್ಷಿಗಳನ್ನು ಸೇವಿಸುವುದರಿಂದ ಅಗತ್ಯ ಕಬ್ಬಿಣದಂಶವನ್ನು ಪೂರೈಸಿ, ರಕ್ತಹೀನತೆಯನ್ನು ದೂರ ಮಾಡಬಹುದು.

ಕೂದಲು, ಕಣ್ಣುಗಳಿಗೆ ಒಳ್ಳೆಯದು

ಇದರಲ್ಲಿರುವ ವಿಟಮಿನ್‌ ಸಿ ಮತ್ತು ಪಾಲಿಫೆನಾಲ್‌ ಅಂಶಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇವುಗಳ ಜೊತೆಗೆ, ಉಳಿದ ಉತ್ಕರ್ಷಣ ನಿರೋಧಕಗಳೂ ಸೇರಿ, ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತವೆ. ಇದರಿಂದ ಕೂದಲಿನ ಆರೋಗ್ಯವನ್ನೂ ಸುಧಾರಿಸಲು ಸಾಧ್ಯವಿದೆ. ಕೂದಲು ಉದುರುವುದು, ಬೆಳ್ಳಗಾಗುವುದು, ಸೀಳುಗೂದಲು ಮುಂತಾದವನ್ನು ಕಡಿಮೆ ಮಾಡಲು ಅನುಕೂಲ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Exit mobile version