Site icon Vistara News

Benefits Of Carrots: ಕ್ಯಾರೆಟ್‌ ತಿನ್ನುವುದಕ್ಕೆ ಇದು ಸಕಾಲ!

Carrots

ಚಳಿಯೆನ್ನುವಾಗ ಬಿಸಿಯಾದ ಕ್ಯಾರೆಟ್‌ ಹಲ್ವಾ, ಕ್ಯಾರೆಟ್‌ ಖೀರು, ಸುಡುವ ಕ್ಯಾರೆಟ್‌ ಸೂಪು, ಗರ್ಮಾಗರಂ ಕ್ಯಾರೆಟ್‌ ಪರಾಟಾ ಮುಂತಾದ ರುಚಿಕಟ್ಟಾದ ತಿನಿಸುಗಳನ್ನು ಕೊಟ್ಟರೆ ತಿನ್ನದವರಾರಿದ್ದಾರೆ? ಕೊಂಚವೇ ಸಿಹಿ ರುಚಿಯ ಈ ಗಡ್ಡೆ-ತರಕಾರಿ ಮಕ್ಕಳಿಂದ ವೃದ್ಧರವರೆಗೂ ಅಚ್ಚುಮೆಚ್ಚು. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ನಾರು ತುಂಬಿದ ಈ ಗಜ್ಜರಿ ಗಡ್ಡೆ ಸತ್ವಗಳ ಖಜಾನೆ ಎಂಬ ಹೆಸರನ್ನೂ ಪಡೆದಿದೆ. ಚಳಿಗಾಲದಲ್ಲಿ ಮುಖ್ಯವಾಗಿ ಗಡ್ಡೆ-ಗೆಣಸುಗಳ ಸೇವನೆ ಒಳ್ಳೆಯದು ಎನ್ನುವುದು ಹೌದಾದರೂ, ಕ್ಯಾರೆಟ್‌ ವರ್ಷವಿಡೀ ದೊರೆಯುತ್ತದೆ. ಅದಕ್ಕಾಗಿ ಕೇವಲ ಚಳಿಗಾಲವನ್ನೇ ಕಾಯುವುದು ಬೇಕಿಲ್ಲವಾದರೂ, ಚಳಿಯಲ್ಲಿ ಇದನ್ನು ಸವಿಯಲು ತೊಡಕಿಲ್ಲವಲ್ಲ. ಇದನ್ನು ತಿನ್ನುವುದರ (benefits of carrots) ಉಪಯೋಗವೇನು?

ನಾರುಭರಿತ

ಗಜ್ಜರಿಯಲ್ಲಿ ನಾರು ಹೇರಳವಾಗಿದೆ. ಒಂದು ದೊಡ್ಡ ಸರ್ವಿಂಗ್‌ ಕ್ಯಾರೆಟ್‌ನಿಂದ ದಿನದ ನಾರಿನ ಶೇ. ೫೦ರಷ್ಟು ಅಗತ್ಯವನ್ನು ಪೂರೈಸಬಹುದು. ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡಿಕೊಂಡು, ಮಲಬದ್ಧತೆಯನ್ನು ದೂರ ಮಾಡುವುದಕ್ಕೆ ನಾರು ಅಗತ್ಯವಾಗಿ ಬೇಕು. ಜೊತೆಗೆ ಕೊಲೆಸ್ಟ್ರಾಲ್‌ ಸಮಸ್ಯೆ, ಮಧುಮೇಹದಂಥ ರೋಗಗಳನ್ನು ದೂರ ಇರಿಸಲು ಹೆಚ್ಚಿನ ನಾರು ಆಹಾರದ ಮೂಲಕ ದೇಹ ಸೇರುವುದು ಅಗತ್ಯ. ಕೊಂಚ ಸಿಹಿ ರುಚಿಯದ್ದಾದರೂ ಮಧುಮೇಹಿಗಳು ಮಿತ ಪ್ರಮಾಣದಲ್ಲಿ ಇದನ್ನು ಖಂಡಿತಾ ಸೇವಿಸಬಹುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಕ್ಯಾರೆಟ್‌ನಲ್ಲಿ ಅಪಾರ ಪ್ರಮಾಣದಲ್ಲಿ ಬೀಟಾ ಕ್ಯಾರೊಟಿನ್‌ ಇದ್ದು, ದೇಹದಲ್ಲಿ ವಿಟಮಿನ್‌ ಎ ಕೊರತೆಯನ್ನು ನೀಗಿಸುತ್ತದೆ. ನಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಉತ್ಕರ್ಷಣ ನಿರೋಧಕಗಳಲ್ಲಿ ವಿಟಮಿನ್‌ ಎ ಸಹ ಒಂದು. ಚಳಿಗಾಲದ ಎಲ್ಲಾ ಸೋಂಕುಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಬೇಡವೇ?

ಚರ್ಮದ ಆರೋಗ್ಯಕ್ಕೆ ಪೂರಕ

ನಳನಳಿಸುವ, ಕಾಂತಿಯುಕ್ತ ತ್ವಚೆ ಬೇಕೆ? ಹಾಗಾದರೆ ದಿನವೂ ಕ್ಯಾರೆಟ್‌ ಸಲಾಡ್‌, ಕೋಸಂಬರಿ ಅಥವಾ ಕ್ಯಾರೆಟ್‌ ಜ್ಯೂಸ್‌ ಇರಲಿ ನಿಮ್ಮ ಆಹಾರದಲ್ಲಿ. ಹೀಗೆಯೇ ತಿನ್ನಬೇಕು ಎಂದಲ್ಲ, ಯಾವುದಾದರೂ ಒಂದು ರೀತಿಯಲ್ಲಿ ಕ್ಯಾರೆಟ್‌ ಸೇವನೆಯನ್ನು ರೂಢಿಸಿಕೊಳ್ಳಿ. ಇದರಿಂದ ವಿಟಮಿನ್‌ ಎ ಅಂಶ ದೇಹ ಸೇರಿ, ಚರ್ಮದ ಆರೋಗ್ಯ ವೃದ್ಧಿಸುತ್ತದೆ.

ಹೃದಯಾರೋಗ್ಯ ವೃದ್ಧಿ

ಕ್ಯಾರೆಟ್‌ನಲ್ಲಿರುವ ಪೊಟಾಶಿಯಂ ಅಂಶವು ಹೃದಯದ ಆರೋಗ್ಯಕ್ಕೆ ಪೂರಕ. ರಕ್ತದೊತ್ತಡ ಏರಿಳಿತವಾಗದಂತೆ ನಿರ್ವಹಿಸುವಲ್ಲಿ ಪೊಟಾಶಿಯಂ ಸತ್ವ ಮಹತ್ವದ ಪಾತ್ರ ವಹಿಸುತ್ತದೆ. ಸ್ಥಿರವಾದ ರಕ್ತದೊತ್ತಡದಿಂದ ಹೃದಯದ ಆರೋಗ್ಯ ವೃದ್ಧಿಸುವುದಕ್ಕೆ ಸಾಧ್ಯ. ಹಾಗಾಗಿ ಹೃದಯ ತುಂಬಿ ಬರುವಷ್ಟು ಕ್ಯಾರೆಟ್‌ ತಿನ್ನಿ

ಕಣ್ಣಿಗೂ ಒಳ್ಳೆಯದು

ಗಜ್ಜರಿಯಲ್ಲಿರುವ ಲ್ಯೂಟಿನ್‌ ಸತ್ವವು ಕಣ್ಣಿನ ಹಿತ ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ವಯಸ್ಸಾದಂತೆ ಕಾಡುವ ದೃಷ್ಟಿಹೀನತೆಯಂಥ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಸಾಧ್ಯವಿದೆ. ಇದರ ಕೆರೊಟಿನಾಯ್ಡ್‌ಗಳು ಕಣ್ಣಿನ ರಕ್ಷಣೆಯಲ್ಲಿ ಎತ್ತಿದ ಕೈ.
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್‌ ಜ್ಯೂಸ್‌ ಸೇವಿಸುವುದರಿಂದ ಡಿಟಾಕ್ಸ್‌ ಕೆಲಸ ಸಹ ನೆರವೇರುತ್ತದೆ. ಇನ್ನು ಯಾವುದೇ ರೀತಿಯ ಅಡುಗೆಗೆ ಹೊಂದಿಕೊಳ್ಳುವಂಥ ತರಕಾರಿ ಇದಾಗಿದ್ದು, ಹಸಿಯಾಗಿ- ಬಿಸಿಯಾಗಿ ಹೇಗಾದರೂ ಸೇವಿಸಬಹುದು. ಹಾಗಾಗಿ ಚಳಿಗಾಲದ ನೆವಕ್ಕೆ ಹೆಚ್ಚು ಕ್ಯಾರೆಟ್‌ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version