Site icon Vistara News

Peanuts Benefits: ಚಳಿಗಾಲದಲ್ಲಿ ಬಿಸಿ ಬಿಸಿ ನೆಲಗಡಲೆ ತಿಂದರೆ ಆಗುವ ಪ್ರಯೋಜನಗಳಿವು

Peanuts Benefits

ಗರ್ಮಾಗರಂ ಹುರಿದ ಅಥವಾ ಉಪ್ಪಿನಲ್ಲಿ ಬೇಯಿಸಿದ ಬಿಸಿಬಿಸಿಯಾದ ಶೇಂಗಾ (Peanuts Benefits) ಬಗ್ಗೆ ಮಾತ್ರವೇ ಹೇಳುತ್ತಿಲ್ಲ ಇಲ್ಲಿ. ಚಳಿಗಾಲದಲ್ಲಿ ಪ್ರಕೃತಿ ನೀಡುವ ಆಹಾರಗಳು ದೇಹದ ಶಾಖವನ್ನು ಹೆಚ್ಚಿಸುವಂಥವು. ಹೃದಯಕ್ಕೆ ಅಗತ್ಯವಾದಂಥ ಉತ್ತಮ ಕೊಬ್ಬು ಹೊಂದಿದ ಶೇಂಗಾ, ಹೊರಗಿನ ಚಳಿ ಹೆಚ್ಚಿದಂತೆ ದೇಹವನ್ನು ಬೆಚ್ಚಗಿಡುವ ಸಾಮರ್ಥ್ಯ ಹೊಂದಿದೆ.

ಬಡವರ ಬಾದಾಮಿ ಎಂದೇ ಖ್ಯಾತವಾಗಿರುವ ಕಡಲೆಕಾಯಿ ಅಥವಾ ಶೇಂಗಾ ಈಗ ಮಾರುಕಟ್ಟೆಯಲ್ಲಿ ತಾಜಾ ದೊರೆಯುತ್ತದೆ. ಚಳಿಗಾಲದಲ್ಲಿ ಹೆಚ್ಚು ಸಂಕೀರ್ಣ ಪಿಷ್ಟಗಳಿರುವ ಫಲಗಳನ್ನೇ ನಿಸರ್ಗ ನಮಗೆ ಒದಗಿಸುವುದು. ಕಡಲೆಬೀಜಗಳಂತೂ ಪಿಷ್ಟದ ಜೊತೆಗೆ ಉತ್ಕೃಷ್ಟ ಪ್ರೊಟೀನ್‌, ಉತ್ತಮ ಕೊಬ್ಬು ಮತ್ತು ಖನಿಜಗಳನ್ನೂ ದೇಹಕ್ಕೆ ಒದಗಿಸಬಲ್ಲವು. ಹಾಗಾಗಿ ಚಳಿಗಾಲದಲ್ಲಿ ಇವುಗಳನ್ನು ಅಗತ್ಯವಾಗಿ ಸೇವಿಸಬೇಕು. ಆದರೆ ಯಾಕೆ?

ಬೆಚ್ಚಗಿನ ತಿನಿಸು

ಅಂದರೆ ಗರ್ಮಾಗರಂ ಹುರಿದ ಅಥವಾ ಉಪ್ಪಿನಲ್ಲಿ ಬೇಯಿಸಿದ ಬಿಸಿಬಿಸಿಯಾದ ಶೇಂಗಾ ಬಗ್ಗೆ ಮಾತ್ರವೇ ಹೇಳುತ್ತಿಲ್ಲ ಇಲ್ಲಿ. ಚಳಿಗಾಲದಲ್ಲಿ ಪ್ರಕೃತಿ ನೀಡುವ ಆಹಾರಗಳು ದೇಹದ ಶಾಖವನ್ನು ಹೆಚ್ಚಿಸುವಂಥವು. ಹೃದಯಕ್ಕೆ ಅಗತ್ಯವಾದಂಥ ಉತ್ತಮ ಕೊಬ್ಬು ಹೊಂದಿದ ಶೇಂಗಾ, ಹೊರಗಿನ ಚಳಿ ಹೆಚ್ಚಿದಂತೆ ದೇಹವನ್ನು ಬೆಚ್ಚಗಿಡುವ ಸಾಮರ್ಥ್ಯ ಹೊಂದಿದೆ. ಅಂದಹಾಗೆ, ಶೇಂಗಾ ಜೊತೆಗೆ ಸಾಂಗತ್ಯವಿಲ್ಲದಿದ್ದರೂ ದೇಹ ಬಿಸಿಯಿರುತ್ತದೆ ಎನ್ನುವುದು ಮದಿರಾಪ್ರಿಯರಿಗೂ ಅನ್ವಯಿಸುತ್ತದೆ!

ಸುಸ್ಥಿರ ಶಕ್ತಿ ಮೂಲ

ಚಳಿಗಾಲದಲ್ಲಿ ಜಡತ್ವ, ಶಕ್ತಿಯಿಲ್ಲದ ಭಾವ ಸಾಮಾನ್ಯ. ಯಾವುದಕ್ಕೂ ಏಳದಂತೆ ಬೆಚ್ಚಗೆ ಕೂತಿರೋಣ ಎನಿಸುವುದೇ ಅಧಿಕ. ಇಂಥ ದಿನಗಳಲ್ಲಿ ಶೇಂಗಾ ತಿನ್ನುವುದರಿಂದ ಶರೀರಕ್ಕೆ ಅಗತ್ಯವಾದ ಶಕ್ತಿ ಸುಸ್ಥಿರವಾಗಿ ದೀರ್ಘಕಾಲದವರೆಗೆ ದೇಹಕ್ಕೆ ದೊರೆಯುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಡಲೆಕಾಯಿಯಲ್ಲಿರುವ ಉತ್ಕೃಷ್ಟವಾದ ಪ್ರೊಟೀನ್‌. ಇದು ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ದೀರ್ಘಕಾಲದವರೆಗೆ ಒದಗಿಸುತ್ತದೆ

ಪ್ರತಿರೋಧಕತೆ ಹೆಚ್ಚಳ

ನೆಗಡಿ, ಕೆಮ್ಮು, ಜ್ವರಕ್ಕೂ ಇದೇ ಕಾಲವೇ ಬೇಕು. ಇವು ಸಾಲದೆಂಬಂತೆ ನಾನಾ ರೀತಿಯ ಅಲರ್ಜಿಗಳು ಸಹ ಕಾಡುತ್ತವೆ. ಶೇಂಗಾದಲ್ಲಿ ವಿಟಮಿನ್‌ ಇ ಸಾಂದ್ರವಾಗಿದೆ. ಇದು ಒಳ್ಳೆಯ ಉತ್ಕರ್ಷಣ ನಿರೋಧಕ. ಹಾಗಾಗಿ ದೇಹದಲ್ಲಿ ಅಲರ್ಜಿಯಿಂದಾಗುವ ಉರಿಯೂತ ತಡೆಯುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ದೇಹದ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಚರ್ಮದ ಆರೈಕೆ

ಇದರಲ್ಲಿರುವ ಬಯೋಟಿನ್‌ ಅಂಶವು ಚರ್ಮದ ಮೇಲೆ ಪೂರಕ ಪರಿಣಾಮ ಬೀರುತ್ತದೆ. ಇದಲ್ಲದೆ, ಉತ್ತಮ ಕೊಬ್ಬು ಮತ್ತು ಪ್ರೊಟೀನ್‌ ಸಹ ತ್ವಚೆಯ ಆರೈಕೆಯಲ್ಲಿ ಅಗತ್ಯವಾದವು. ಇವೆಲ್ಲವುಗಳ ನೆರವಿನಿಂದ ಚಳಿಗಾಲದ ಶುಷ್ಕತೆಯನ್ನು ದೂರ ಇರಿಸಿ, ಮೃದುವಾದ ಮತ್ತು ಕಾಂತಿಯುಕ್ತ ತ್ವಚೆಯನ್ನು ಹೊಂದಲು ಶೇಂಗಾ ಸಹಕಾರ ನೀಡುತ್ತದೆ

ಖನಿಜಗಳು

ಚಳಿಗಾಲದಲ್ಲಿ ಮೂಳೆ ಮತ್ತು ಕೀಲುಗಳ ಆರೋಗ್ಯ ಸ್ವಲ್ಪ ನಾಜೂಕಾಗುವ ಸಾಧ್ಯತೆ ಹೆಚ್ಚು. ಆದರೆ ಮೆಗ್ನೀಶಿಯಂ, ಫಾಸ್ಫರಸ್‌, ಜಿಂಕ್‌ನಂಥ ಖನಿಜಗಳು ಶೇಂಗಾದಲ್ಲಿದ್ದು, ಮೂಳೆಗಳನ್ನು ಬಲಗೊಳಿಸುತ್ತವೆ. ಹಾಗಾಗಿ ಕಡಲೆಬೀಜದ ಸೇವನೆಯಿಂದ ಚಳಿಗಾಲದಲ್ಲೂ ಸದೃಢವಾದ ಮೂಳೆಗಳನ್ನು ಹೊಂದಬಹುದು.

ಮೂಡ್‌ ಸುಧಾರಣೆ

ಚಳಿಗಾಲದಲ್ಲಿ ಬೋರೋಬೋರು ಎಂದು ಬೊಬ್ಬೆ ಹಾಕುವವರ ಸಂಖ್ಯೆ ಕಡಿಮೆಯಿಲ್ಲ. ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ದೇಹದಲ್ಲಿ ಸೆರೋಟೋನಿನ್‌ ಮಟ್ಟ ಕುಸಿದು ಈ ಸಮಸ್ಯೆ ಉಂಟಾಗುತ್ತದೆ. ಆದರೆ ಕಡಲೆಕಾಯಿಯಲ್ಲಿರುವ ಟ್ರಿಪ್ಟೊಫ್ಯಾನ್‌ ಅಂಶವು ಶರೀರದಲ್ಲಿ ಸೆರೋಟೋನಿನ್‌ ಉತ್ಪತ್ತಿ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದ ಚಳಿಗಾಲದಲ್ಲಿ ಕೆಟ್ಟ ಮೂಡ್‌ನಿಂದ ಒದ್ದಾಡುವ ಬದಲು ಶೇಂಗಾ ತಿನ್ನಿ, ಖುಷಿಯಾಗಿರಿ.

ಮಧುಮೇಹ ಹತೋಟಿ

ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದ್ದು, ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಳಿತ ಆಗದಂತೆ ಕಾಪಾಡುತ್ತದೆ. ಹಾಗಾಗಿ ಮಧಮೇಹಿಗಳು ಮಿತ ಪ್ರಮಾಣದಲ್ಲಿ ಇದನ್ನ ತಿನ್ನಬಹುದಾಗಿದೆ. ಆದರೆ ಕೊಬ್ಬಿನಂಶ ಹೆಚ್ಚಿರುವುದರಿಂದ, ಇದನ್ನು ಅತಿಯಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಶೇಂಗಾ ಮಿತವಾಗಿ ತಿನ್ನಿ, ಚಳಿಗಾಲದಲ್ಲಿ ಬೆಚ್ಚಗಿರಿ.

ಇದನ್ನೂ ಓದಿ: Healthy Homemade Chips: ಈ ಚಳಿಗೆ ಈ ಬಗೆಯ ಗರಿಗರಿ, ಬಿಸಿಬಿಸಿ ಚಿಪ್ಸ್‌ ಮನೆಯಲ್ಲೇ ಮಾಡಿ ತಿನ್ನಿ!

Exit mobile version