Site icon Vistara News

Benefits Of Onion: ಹಸಿ ಈರುಳ್ಳಿ ತಿಂದರೆ ನಮ್ಮನ್ನು ನಿತ್ಯ ಕಾಡುವ ಇವಿಷ್ಟು ಸಮಸ್ಯೆಗಳು ಮಾಯ!

Benefits Of Onion

ಈರುಳ್ಳಿಯ ಬಗ್ಗೆ ಏನೇನೋ ಕಥೆಗಳಿವೆ. ಅದು ಕಣ್ಣೀರು ಬರಿಸುವ ಕಾರಣಗಳಿಂದ ಹಿಡಿದು ಬಾಯಿ ವಾಸನೆ ತರಿಸುವ ಕಾರಣಗಳವರೆಗೆ ಏನೇನೋ ಅಂತೆ-ಕಂತೆಗಳು. ಆದರೆ ಈರುಳ್ಳಿಯನ್ನು ಬಳಸಿ ಮಾಡಿದ ಖಾದ್ಯಗಳ ರುಚಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಕಥೆಗಳೇ ಬೇಕಿಲ್ಲ, ಎಲ್ಲರೂ ತಿಳಿದಿರುವ ವಿಷಯವದು. ಸಲಾಡ್‌, ರಾಯ್ತಗಳಿಂದ ಹಿಡಿದು, ಸಾಂಬಾರು, ಪಲ್ಯ, ಪಲಾವ್‌, ಪಕೋಡ ಮತ್ತು ಸ್ಯಾಂಡ್‌ವಿಚ್‌ಗಳವರೆಗೆ ಸರ್ವವೂ ಈರುಳ್ಳಿಮಯ. ಈರುಳ್ಳಿಯನ್ನು ಹಸಿಯಾಗಿ, ಬಿಸಿಯಾಗಿ, ಹುರಿದು, ಕರಿದು… ಹೇಗೇ ಆದರೂ ಭಾರತೀಯರ ನಾಲಿಗೆಗಳಿಗೆ ಅದು ಬೇಕು. ರುಚಿಯ ಮಾತನ್ನು ಹೊರತು ಪಡಿಸಿದರೆ, ತನ್ನ ಔಷಧೀಯ ಗುಣಗಳಿಗಾಗಿಯೂ (benefits of onions) ಈರುಳ್ಳಿ ಪ್ರಸಿದ್ಧ.

ಇದರ ಮೂಲ ಎಲ್ಲಿ?

ಸಾವಿರಾರು ವರ್ಷಗಳ ಹಿಂದೆ ಮಧ್ಯ ಏಷ್ಯಾದ ಪ್ರಾಂತ್ಯಗಳಿಂದ ಜಗತ್ತಿಗೆ ಪರಿಚಿತವಾದ ಈ ಘಾಟು ಗಡ್ಡೆಗಳು ಅಡಿಯಿಂದ ಮುಡಿಯವರೆಗೆ ಔಷಧಿಗಾಗಿ ಸಹ ಬಳಕೆಯಾಗುತ್ತಿವೆ. ಬ್ಯಾಕ್ಟೀರಿಯಾ ಸೋಂಕುಗಳಿಗೆ, ನೆಗಡಿ, ಕೆಮ್ಮು, ಅಸ್ತಮಾದಂಥ ಸಮಸ್ಯೆಗಳಲ್ಲಿ, ಹೊಟ್ಟೆಯ ತೊಂದರೆಗಳಲ್ಲಿ, ಮಧುಮೇಹ ಮತ್ತು ರಕ್ತದೊತ್ತಡ ನಿವಾರಣೆಗೆ, ನರ ಸಂಬಂಧಿ ಸಮಸ್ಯೆಗಳಲ್ಲಿ ಮತ್ತು ಕೂದಲಿನ ತೊಂದರೆಗಳಿಗೂ ಈರುಳ್ಳಿ (benefits of onions) ನಾನಾ ರೂಪದಲ್ಲಿ ಬಳಕೆಯಲ್ಲಿದೆ. ಈ ಬಗ್ಗೆ ವಿವರವಾಗಿ ನೋಡುವುದಾದರೆ-

ಮಧುಮೇಹದಲ್ಲಿ ಈರುಳ್ಳಿಯ ಉಪಯೋಗ

ಮಧುಮೇಹಿಗಳಿಗೂ ಈರುಳ್ಳಿಯ ಬಳಕೆಯಿಂದ ಲಾಭವಿದೆ. ಅದರಲ್ಲೂ ಪ್ರಿಡಯಾಬಿಟಿಕ್‌ ಎನ್ನಲಾಗುವ ಮಧುಮೇಹ-ಪೂರ್ವ ಪರಿಸ್ಥಿತಿಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸುವುದು ಲಾಭದಾಯಕ. ಕೆಂಪು ಬಣ್ಣದ ಈರುಳ್ಳಿಯನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ‌ ಉಪವಾಸದಲ್ಲಿನ ಸಕ್ಕರೆಯ (ಫಾಸ್ಟಿಂಗ್‌ ಶುಗರ್) ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತವೆ ಅ‍ಧ್ಯಯನಗಳು.

ಈರುಳ್ಳಿಯಲ್ಲಿರುವ ಕೆರ್ಸೆಂಟಿನ್‌ ಎಂಬ ಅಂಶವು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಸಣ್ಣ ಕರುಳು, ಯಕೃತ್‌, ಮೇದೋಜೀರಕ ಗ್ರಂಥಿ ಮುಂತಾದ ಹಲವಾರು ಅಂಗಗಳೊಂದಿಗೆ ಇದು ಕೆಲಸ ಮಾಡುತ್ತದೆ. ಈರುಳ್ಳಿಯಲ್ಲಿರುವ ಜೀರ್ಣವಾಗದ ನಾರಿನಂಶವು ಜಠರವನ್ನು ಹಾದು, ಕರುಳನ್ನು ಪ್ರಚೋದಿಸುತ್ತದೆ. ಈ ಮೂಲಕ ಜೀರ್ಣಾಂಗದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿ ಮಧುಮೇಹಿಗಳಲ್ಲಿ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತದೆ. ಆದರೆ ಸಲ್ಫರ್‌ ಸಹ ಅಧಿಕ ಪ್ರಮಾಣದಲ್ಲಿ ಇರುವುದರಿಂದ, ಈರುಳ್ಳಿಯನ್ನೇ ಮಿತಿಮೀರಿ ತಿಂದರೆ ಗ್ಯಾಸ್ಟ್ರೈಟಿಸ್‌ ಅಥವಾ ಹುಳಿತೇಗಿನಂಥ ಸಮಸ್ಯೆಗಳು ತಲೆದೋರಬಹುದು.

ಆರ್ಥರೈಟಿಸ್‌ ಉಪಶಮನ

ಕೀಲುಗಳಲ್ಲಿನ ಉರಿಯೂತವನ್ನೇ ಅರ್ಥರೈಟಿಸ್‌ ಎನ್ನಲಾಗುತ್ತದೆ. ಈ ಉರಿಯೂತವನ್ನು ಶಮನ ಮಾಡುವ ಗುಣ ಈರುಳ್ಳಿಯಲ್ಲಿದೆ. ಇದರಲ್ಲಿರುವ ಹಲವು ರೀತಿಯ ಫ್ಲವನಾಯ್ಡ್‌ ಮತ್ತು ಕೆರ್ಸೆಂಟಿನ್‌ ಅಂಶಗಳು ಉರಿಯೂತಕ್ಕೆ ದೇಹ ಪ್ರತಿಕ್ರಿಯಿಸುವ ಸ್ವರೂಪವನ್ನು ಕೊಂಚ ಬದಲಾಯಿಸುತ್ತವೆ. ಈರುಳ್ಳಿಯಲ್ಲಿರುವ ವಿಟಮಿನ್‌ ಸಿ ಮತ್ತು ಆಂಥೋಸಯನಿನ್‌ಗಳು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿವೆ.

ಇತರ ಉಪಯೋಗಗಳು

ಇದರಲ್ಲಿರುವ ಕಬ್ಬಿಣ, ಪೊಟಾಶಿಯಂ, ನಾರು ಮತ್ತಿತರ ಸೂಕ್ಷ್ಮ ಪೋಷಕಾಂಶಗಳು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ. ತೂಕ ಇಳಿಸುವ ಉದ್ದೇಶವಿದ್ದರೆ, ಕಡಿಮೆ ಕ್ಯಾಲರಿಯ ಆದರೆ ಹೆಚ್ಚು ಪೌಷ್ಟಿಕವಿರುವ ಈ ಗಡ್ಡೆ ಉಪಯುಕ್ತವಾದದ್ದು. ಇದರಲ್ಲಿರುವ ನಾರು ಮತ್ತು ಪ್ರಿಬಯಾಟಿಕ್‌ ಅಂಶಗಳು ಜೀರ್ಣಾಂಗದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಸತ್ವಗಳು ದೇಹದ ಚಯಾಪಚಯವನ್ನು ಹೆಚ್ಚಿಸಿ, ಮೂಳೆಗಳನ್ನು ದೃಢಗೊಳಿಸುತ್ತವೆ. ಇದರ ಫೋಲೇಟ್‌ ಅಂಶದಿಂದಾಗಿ ನರಗಳ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಈರುಳ್ಳಿ ಕೆಲವರಿಗೆ ಘಮ ಎನಿಸಿದರೆ ಕೆಲವರಿಗೆ ವಾಸನೆ! ಆದರೆ ಘಮ ಅಥವಾ ವಾಸನೆಗೆ ಕಾರಣವಾಗುವ ಅಂಶವು ಸೋಂಕು ನಿರೋಧಕ ಗುಣವನ್ನು ಹೊಂದಿದೆ. ನೆಗಡಿ, ಕೆಮ್ಮು, ಕಫ, ಅಸ್ತಮಾ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಈರುಳ್ಳಿ ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್‌ ಸತ್ವಗಳಿಂದಾಗಿ ಚರ್ಮ, ಕೂದಲುಗಳ ಆರೋಗ್ಯ ಸುಧಾರಿಸುತ್ತದೆ. ಕೊಲಾಜಿನ್‌ ಉತ್ಪತ್ತಿಯನ್ನು ವೃದ್ಧಿಸುತ್ತದೆ. ಕೂದಲು ಉದುರುತ್ತಿದ್ದರೆ, ಹೊಟ್ಟು, ತುರಿಕೆ ಮುಂತಾದ ಸಮಸ್ಯೆಗಳಿದ್ದರೆ ಈರುಳ್ಳಿ ಲೇಪ ಲಾಭದಾಯಕ.

ಇದನ್ನೂ ಓದಿ: Health Tips: ಈ ನಿಮ್ಮ ಕೆಟ್ಟ ಅಭ್ಯಾಸಗಳಿಂದಾಗಿಯೇ ಶಕ್ತಿಗುಂದಿ ಉದಾಸೀನತೆ ಆವರಿಸುತ್ತದೆ ಗೊತ್ತೇ?

Exit mobile version