Site icon Vistara News

Benefits of Peaches: ಸಿಹಿ ರಸದ ಪೀಚ್‌ ಹಣ್ಣಿನ ಪ್ರಯೋಜನಗಳು ಹಲವು

Benefits of Peaches

ಬಿಸಿಲಿನ ದಾಹ ತಣಿಸಲೆಂಬಂತೆ, ಬೇಸಿಗೆಯಲ್ಲಿ ತರಹೇವಾರಿ ರಸಭರಿತ ಹಣ್ಣುಗಳು ಬರುತ್ತವೆ. ಕಲ್ಲಂಗಡಿ, ಕರಬೂಜದಿಂದ ಹಿಡಿದು, ಎಪ್ರಿಕಾಟ್‌, ನೆಕ್ಟರೀನ್‌ಗಳವರೆಗೆ ಹತ್ತುಹಲವು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಅಂಥದ್ದೇ ಒಂದು ಹಣ್ಣು ಪೀಚ್.‌ ಸಾಮಾನ್ಯವಾಗಿ ಪೀಚ್‌ ಎಂಬುದನ್ನು ಒಂದು ಬಣ್ಣವಾಗಿ ಬಲ್ಲವರೇ ಹೆಚ್ಚು, ಆ ಹಣ್ಣು ಸವಿದವರ ಸಂಖ್ಯೆ ಕಡಿಮೆಯೆ. ಉಷ್ಣವಲಯದ ಮೂಲ ಪ್ರಭೇದವಾಗಿರುವ ಈ ಹಣ್ಣನ್ನೀಗ ವಿಶ್ವದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಒಳಗೊಂದು ಸ್ವಲ್ಪ ದೊಡ್ಡ ಬೀಜ, ಸುತ್ತೆಲ್ಲ ತಿರುಳು ಹೊಂದಿರುವ ಈ ಹಣ್ಣಿನ ಮೇಲ್ಮೈಯಲ್ಲಿ ತುಪ್ಪಳದಂಥ ಸಣ್ಣ ರೋಮಗಳನ್ನು ಕಾಣಬಹುದು. ಸಿಹಿ ರುಚಿಯ, ರಸಭರಿತವಾದ ಈ ಹಣ್ಣು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ಹಲವಾರು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು, ನಾರು ಸೇರಿದಂತೆ ಹಲವು ರೀತಿಯಲ್ಲಿ ದೇಹಕ್ಕೆ ಪೋಷಣೆ ಒದಗಿಸಬಲ್ಲದು ಈ ಹಣ್ಣು. ಏನಿದರ ಸತ್ವಗಳು (Benefits of Peaches) ಎಂಬುದನ್ನು ತಿಳಿಯೋಣ.

ಪೋಷಕಾಂಶಗಳ ಆಗರ

ಹಲವು ರೀತಿಯ ಜೀವಸತ್ವಗಳು ಪೀಚ್‌ ಹಣ್ಣಿನಲ್ಲಿವೆ. ಅದರಲ್ಲೂ ವಿಟಮಿನ್‌ ಸಿ ಹೇರಳವಾಗಿದ್ದು, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬಹಳಷ್ಟು ಬಗೆಯ ಉತ್ಕರ್ಷಣ ನಿರೋಧಕಗಳು ಇದರಲ್ಲಿವೆ. ಲೂಟಿನ್‌, ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳು ಉರಿಯೂತ ಶಾಮಕಗಳಾಗಿ ಮಾತ್ರವೇ ಅಲ್ಲ, ಕಣ್ಣಿನ ಆರೋಗ್ಯ ರಕ್ಷಣೆಯಲ್ಲೂ ಪ್ರಧಾನ ಭೂಮಿಕೆ ವಹಿಸುತ್ತವೆ. ಬಹಳಷ್ಟು ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳು ಕೂಡಾ ಇದರಲ್ಲಿವೆ.

ಜೀರ್ಣಾಂಗಗಳ ಮಿತ್ರ

ಇದರಲ್ಲಿರುವ ನಾರಿನಂಶ ಪಚನಾಂಗಗಳ ಆರೋಗ್ಯಕ್ಕೆ ಪೂರಕ. ಪೀಚ್‌ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ, ಇದರ ಕರಗಬಲ್ಲ ನಾರುಗಳು ಮಲಬದ್ಧತೆಯನ್ನು ದೂರ ಮಾಡುತ್ತವೆ. ಕರುಳಿನ ಬ್ಯಾಕ್ಟೀರಿಯಗಳ ಸಮತೋಲವನ್ನು ವೃದ್ಧಿಸಿ, ಪಚನಾಂಗಗಳ ಆರೋಗ್ಯವನ್ನು ವರ್ಧಿಸಬಹುದು. ನಾರಿನಂಶ ಸತತವಾಗಿ ದೊರೆಯುತ್ತಿದ್ದಾಗಲೇ ಜೀರ್ಣಾಂಗಗಳು ಆರೋಗ್ಯಯುತವಾಗಿ ಇರುತ್ತವೆ.

ತೂಕ ಇಳಿಕೆ

ಇಷ್ಟೊಂದು ಪೌಷ್ಟಿಕವಾದ ಹಣ್ಣಿನಲ್ಲಿರುವ ಕ್ಯಾಲರಿಗಳು ಕಡಿಮೆಯೆ. ಅದರಲ್ಲೂ ಕೊಬ್ಬಿನಂಶ ಕಡಿಮೆ ಇರುವುದರಿಂದ ತೂಕ ಇಳಿಕೆಯ ಉದ್ದೇಶ ಉಳ್ಳವರಿಗೆ ಇದು ಸೂಕ್ತವಾದ ಹಣ್ಣು. ಇದರಲ್ಲಿ ನಾರು ಹೆಚ್ಚಿರುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವ ನೀಡುವುದಲ್ಲದೆ, ಬೇಗ ಹಸಿವೂ ಆಗುವುದಿಲ್ಲ. ಇದರಿಂದ ಒಟ್ಟಾರೆಯಾಗಿ ತಿನ್ನುವ ಕ್ಯಾಲರಿಯ ಪ್ರಮಾಣ ಕಡಿಮೆಯಾಗಿ, ತೂಕ ಇಳಿಸುವುದಕ್ಕೆ ನೆರವಾಗುತ್ತದೆ.

ಹೊಳಪಿನ ತ್ವಚೆ

ಪೀಚ್‌ನಲ್ಲಿರುವ ಬೀಟಾ ಕ್ಯಾರೊಟಿನ್‌ ಅಂಶಗಳು ದೇಹದಲ್ಲಿ ವಿಟಮಿನ್‌ ಎ ಅಂಶವಾಗಿ ಪರಿವರ್ತನೆಯಾಗುತ್ತವೆ. ಎ ಜೀವಸತ್ವವು ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯನ ಬಿಸಿಲಿಗೆ ಆಗುವ ಹಾನಿಯಿಂದ ಹಿಡಿದು, ಚರ್ಮದಲ್ಲಿ ಕೊಲಾಜಿನ್‌ ಉತ್ಪಾದನೆಯವರೆಗೆ ಹಲವು ರೀತಿಯಲ್ಲಿ ಇದು ನೆರವಾಗಬಲ್ಲದು.

ಹೃದಯದ ಸ್ನೇಹಿತ

ಪೀಚ್‌ನಲ್ಲಿ ಬಹಳಷ್ಟು ಬಗೆಯ ಫ್ಲೆವನಾಯ್ಡ್‌ಗಳು ಮತ್ತು ಫೆನೊಲಿಕ್‌ ಆಮ್ಲಗಳಿವೆ. ಈ ಸಂಯುಕ್ತಗಳು ಹೃದಯದ ಆರೋಗ್ಯ ಸುಧಾರಿಸುವಲ್ಲಿ ನೆರವು ನೀಡುವುದಾಗಿ ಅಧ್ಯಯನಗಳು ಹೇಳುತ್ತವೆ. ಇವು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತವೆ; ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತವೆ; ರಕ್ತದ ಪರಿಚಲನೆಗೂ ಸಹಾಯ ಮಾಡುತ್ತವೆ. ಈ ಹಣ್ಣಿನ ಪೊಟಾಶಿಯಂ ಸತ್ವವು ರಕ್ತದ ಏರಿಳಿತವಾಗದಂತೆ ಕಾಪಾಡಬಲ್ಲದು. ಹಾಗಾಗಿ ಹೃದಯದ ಆರೋಗ್ಯ ಕಾಪಾಡುವಂಥ ಗುಣಗಳು ಪೀಚ್‌ ಹಣ್ಣಿನಲ್ಲಿವೆ.

Exit mobile version