ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿಯುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ತಾಜಾ ಸೊಪ್ಪುಗಳು ದೊರೆತರೆ, ಅವುಗಳ ರಸ ಕುಡಿಯುವುದು ಆರೋಗ್ಯಕ್ಕೆ ಒಳಿತು ಮಾಡುವುದು ಸುಳ್ಳೇನಲ್ಲ. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ, ದೇಹಕ್ಕೂ ಹಿತ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಶಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ಇನ್ನೂ ಏನೇನು ಲಾಭಗಳಿವೆ ಪಾಲಕ್ ಸೊಪ್ಪಿನ ರಸ (Benefits Of Spinach Juice) ಕುಡಿಯುವುದರಲ್ಲಿ?
ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ, ಸಮೃದ್ಧವಾಗಿಸುತ್ತವೆ. ಜೊತೆಗೆ, ತ್ವಚೆ ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸಲು ಸಾಧ್ಯವಾಗುತ್ತದೆ. ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ತೂಕ ಇಳಿಕೆಗೂ ನೆರವಾಗಬಹುದಾದ ಪೇಯವಿದು.
ಉತ್ಕರ್ಷಣ ನಿರೋಧಕಗಳು
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತವನ್ನು ಶಮನ ಮಾಡುತ್ತವೆ. ಅದರಲ್ಲೂ ಪಾಲಕ್‌ನಲ್ಲಿರುವ ಫಾಲಿಕ್ ಆಮ್ಲವು ಗರ್ಭಿಣಿಯರಿಗೆ ಪೂರಕವಾದಂಥ ಪೌಷ್ಟಿಕಾಂಶ. ಭ್ರೂಣದ ಬೆನ್ನುಹುರಿ ಮತ್ತು ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಇದು ಒದಗಿಸುತ್ತದೆ. ಬಾಣಂತಿಯರಿಗೆ ಈ ಸೊಪ್ಪನ್ನು ನೀಡುವುದರಿಂದ ಮಗುವಿಗೆ ದೊರೆಯುವ ಹಾಲಿನ ಪ್ರಮಾಣ ವೃದ್ಧಿಯಾಗುತ್ತದೆ. ಇದರಿಂದ ಶಿಶುವಿನ ಬೆಳವಣಿಗೆಯೂ ಚೆನ್ನಾಗಿ ಆಗುವುದಲ್ಲದೆ, ತಾಯಿಯ ದೇಹದ ಅನಗತ್ಯ ಕೊಬ್ಬೂ ಕರಗಲು ಸಹಾಯವಾಗುತ್ತದೆ.
ತ್ವಚೆಯ ಆರೋಗ್ಯ ವೃದ್ಧಿ
ವಿಟಮಿನ್ ಎ ಸಮೃದ್ಧವಾಗಿರುವ ಈ ಸೊಪ್ಪಿನ ಸೇವನೆಯಿಂದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯ. ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಗಟ್ಟಿ, ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಮೊಡವೆ ಮೂಡುವುದನ್ನು ಒಳಗಿನಿಂದ ತಡೆದು, ಶುಭ್ರ ಕಾಂತಿಯನ್ನು ನೀಡಿ, ತಾರುಣ್ಯಭರಿತ ಚರ್ಮವನ್ನು ಹೊಂದಲು ನೆರವಾಗುತ್ತದೆ.
ಜೀರ್ಣಾಂಗಗಳ ಕ್ಷಮತೆ ಹೆಚ್ಚಳ
ನಾರಿನಂಶ ವಿಫುಲವಾಗಿರುವ ಈ ಸೊಪ್ಪಿನ ರಸ ಕುಡಿಯುವುದರಿಂದ ಜೀರ್ಣಾಂಗಗಳ ತೊಂದರೆಗಳನ್ನು ದೂರ ಮಾಡಬಹುದು. ಅಜೀರ್ಣ, ಹೊಟ್ಟೆಯುಬ್ಬರಗಳನ್ನು ನಿವಾರಿಸಿ, ಮಲಬದ್ಧತೆಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಇದರಿಂದ ಸಾಧ್ಯ. ಇದನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದಲೂ ಈ ಲಾಭಗಳನ್ನು ಪಡೆಯಬಹುದು.
ದಟ್ಟ ಕೂದಲು
ಕಪ್ಪಾದ ದಟ್ಟ ಕೇಶರಾಶಿ ಎಲ್ಲರಿಗೂ ಪ್ರಿಯವೇ. ಆದರೆ ಹಾಗಿರುವವರು ಅಪರೂಪ. ಹಲವು ವಿಟಮಿನ್ ಬಿಗಳು ಸಮೃದ್ಧವಾಗಿರುವ ಪಾಲಕ್ ಸೊಪ್ಪು, ಕೂದಲಿನ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲದು. ತಲೆಯ ಚರ್ಮದ ಆರೋಗ್ಯ ಕಾಪಾಡಿ, ಕೂದಲುಗಳ ಬುಡವನ್ನು ಸಶಕ್ತವಾಗಿಸಬಲ್ಲದು. ಕೂದಲು ನಿರ್ಜೀವವಾಗಿ ತುಂಡಾಗುವುದನ್ನು ತಡೆದು, ಕೇಶಗಳ ಬೆಳವಣಿಗೆಯನ್ನೂ ಪ್ರೋತ್ಸಾಹಿಸಬಲ್ಲದು.
ರೋಗಗಳು ದೂರ
ವಿಟಮಿನ್ ಸಿ, ಫ್ಲೆವನಾಯ್ಡ್‌ಗಳು, ಲೂಟೆನ್, ಕ್ಲೊರೊಫಿಲ್‌ನಂಥ ಉತ್ಕರ್ಷಣ ನಿರೋಧಕಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯವೂ ವೃದ್ಧಿಸುತ್ತದೆ. ಜೊತೆಗೆ, ಮಧುಮೇಹ, ಕ್ಯಾನ್ಸರ್‌ನಂಥ ರೋಗಗಳನ್ನು ತಡೆಯಲು ನೆರವು ನೀಡುತ್ತದೆ.
ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ