Site icon Vistara News

Benefits of Summer Fruits: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ನಾವು ತಿನ್ನಲೇಬೇಕು!

Summer Fruits

ರಸಭರಿತ ಹಣ್ಣುಗಳನ್ನು (Benefits of summer fruits) ಮನಸೋಇಚ್ಛೆ ಮೆಲ್ಲುವುದಕ್ಕಾದರೂ ಬೇಸಿಗೆ ಇರಬೇಕು. ಕೆಂಪು, ಕೇಸರಿ, ಹಳದಿ, ಹಸಿರು ಮುಂತಾದ ತರಹೇವಾರಿ ಬಣ್ಣಗಳ, ಹುಳಿ, ಸಿಹಿ, ಒಗರಿನಂಥ ನಾನಾ ರುಚಿಗಳ ಹಣ್ಣುಗಳನ್ನು ತಿನ್ನುತ್ತಿದ್ದರೆ ಎಂಥಾ ಬಿರುಬೇಸಿಗೆಯೂ ತಂಪಾಗಬೇಕು! ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗಿರುವ ಈ ದಿನಗಳಲ್ಲಿ ಎಂಥ ಹಣ್ಣುಗಳು ನಮ್ಮ ಆಹಾರದ ತಟ್ಟೆಯಲ್ಲಿರಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿಯಿದು. ಕೇವಲ ಈ ಹಣ್ಣುಗಳನ್ನೇ ತಿಂದುಕೊಂಡು ಬದುಕಬೇಕೆಂದಲ್ಲ, ಆದರೆ ನಿತ್ಯವೂ ಇದರಲ್ಲಿನ ಒಂದೆರಡು ಹಣ್ಣುಗಳಾದರೂ ಹೊಟ್ಟೆ ಸೇರಿದರೆ, ನಮ್ಮ ಶರೀರ ನಮಗೆ ಧನ್ಯವಾದ ಹೇಳಬಹುದು.

ಕಲ್ಲಂಗಡಿ

ಈ ಹಣ್ಣಿನ ಬಹುಭಾಗ ನೀರೇ ಆಗಿರುವುದರಿಂದ ದಾಹ ತಣಿಸಿಕೊಳ್ಳಲು ನಿಸರ್ಗವೇ ನಮಗಿತ್ತ ಸಿಹಿನೀರ ಮೂಲವೆಂದುಕೊಳ್ಳಬಹುದು. ವಿಟಮಿನ್‌ ಸಿ ಮತ್ತು ಲೈಕೊಪೇನ್‌ನಂಥ ಅತ್ಯುತ್ತಮ ಉತ್ಕರ್ಷಣ ನಿರೋಧಕಗಳು ಇದರಲ್ಲಿದ್ದು, ದೇಹಸ್ವಾಸ್ಥ್ಯವನ್ನು ಹೆಚ್ಚುಸುತ್ತವೆ. ಇದಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುವಂಥ ಖನಿಜವಾದ್ದರಿಂದ ಹೃದಯವನ್ನು ಕ್ಷೇಮವಾಗಿ ಇರಿಸುತ್ತದೆ. ಕೈ-ಕಾಲು ಜುಮ್ಮೆನ್ನುವಂಥ ನರಗಳ ಸಮಸ್ಯೆಯಿದ್ದರೆ ಅದರ ಪರಿಹಾರಕ್ಕೂ ಕಲ್ಲಂಗಡಿ ಹಣ್ಣಿನ ರಸ ಒಳ್ಳೆಯದು. ವಿಟಮಿನ್‌ ಎ ಸಹ ಸಮೃದ್ಧವಾಗಿರುವುದರಿಂದ ಚರ್ಮ ಮತ್ತು ಕಣ್ಣುಗಳ ಆರೋಗ್ಯಕ್ಕೆ ಪೂರಕ

ಮಾವಿನಹಣ್ಣು

ಮಾವಿನ ಹಣ್ಣಿನ ಹೆಸರಿನಲ್ಲಿ ಆಣೆ-ಭಾಷೆ ಮಾಡುವಷ್ಟು ಇದರ ಭಕ್ತರಿದ್ದಾರೆ ಎಂದರೆ ಅಚ್ಚರಿಯಿಲ್ಲ! ಉಷ್ಣವಲಯದ ಈ ಹಣ್ಣಿನ ಘಮ ಮತ್ತು ರುಚಿಯ ಮುಂದೆ ಸ್ವರ್ಗಸುಖವನ್ನೂ ನಿವಾಳಿಸಬೇಕು. ಇದರಲ್ಲಿ ನಾರಿನಂಶ ಭರಪೂರವಾಗಿದ್ದು, ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಇದರ ವಿಟಮಿನ್‌ ಎ ಅಂಶ ಕಣ್ಣುಗಳ ಆರೋಗ್ಯ ರಕ್ಷಣೆಗೆ ಅಗತ್ಯ. ವಿಟಮಿನ್‌ ಸಿ ಸಾಕಷ್ಟಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿದ್ದು, ಶರೀರವನ್ನು ಆಂತರಿಕವಾಗಿ ಸದೃಢಗೊಳಿಸುತ್ತದೆ.

ಸ್ಟ್ರಾಬೆರಿ

ನೋಡುವುದಕ್ಕೆ ಆಕರ್ಷಕವಾದ ಈ ಹಣ್ಣಿನಲ್ಲಿ ಪಾಲಿಫೆನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ತುಂಬಿವೆ. ದೇಹವನ್ನು ಕಾಡುವ ಹಲವು ರೀತಿಯ ಮಾರಕ ರೋಗಗಳನ್ನು ಈ ಅಂಶಗಳು ದೂರ ಮಾಡುತ್ತವೆ. ಹುಳಿಮಿಶ್ರಿತ ಈ ಹಣ್ಣಿನಲ್ಲಿ ಗ್ಲೈಸೆಮಿಕ್‌ ಸೂಚಿ ಕಡಿಮೆ ಇದ್ದು, ಮಧುಮೇಹಿಗಳು ಸೇವಿಸಬಹುದಾದ ಗುಣವನ್ನು ಹೊಂದಿದೆ. ಇದರ ವಿಟಮಿನ್‌ ಸಿ ಸತ್ವವು ಸೋಂಕುಗಳೊಂದಿಗೆ ಹೋರಾಡಿ, ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಇದರ ಪೊಟಾಶಿಯಂ ಅಂಶವು ರಕ್ತನಾಳಗಳನ್ನು ಹಿಗ್ಗಿಸಿ, ರಕ್ತದೊತ್ತಡ ಏರದಂತೆ ತಡೆಯಬಲ್ಲದು

ಕರಬೂಜ

ಹೆಚ್ಚು ಸತ್ವಗಳನ್ನು ನೀಡುವ ಈ ಹಣ್ಣು ಕಡಿಮೆ ಕ್ಯಾಲರಿಗಳನ್ನು ದೇಹಕ್ಕೆ ಕೊಡುತ್ತದೆ. ಇದರಿಂದ ತೂಕ ಇಳಿಸುವ ಸನ್ನಾಹದಲ್ಲಿ ಇರುವವರಿಗೆ ಇದು ಸೂಕ್ತವಾದ ಹಣ್ಣು. ಬೇಸಿಗೆಯಲ್ಲಿ ನಿರ್ಜಲೀಕರಣ ಆಗದಂತೆ ತಡೆಯಲು ಇಂಥ ರಸಭರಿತ ಹಣ್ಣುಗಳು ಉಪಯುಕ್ತ ಕೊಡುಗೆಯನ್ನು ನೀಡುತ್ತವೆ. ಸಮೃದ್ಧವಾಗಿರುವ ನಾರಿನಂಶವು ನಮ್ಮ ಜೀರ್ಣಾಂಗಗಳ ಆರೋಗ್ಯ ರಕ್ಷಣೆಗೆ ನೆರವು ನೀಡುತ್ತದೆ; ಮಲಬದ್ಧತೆಯಂಥ ವಿಕಾರಗಳನ್ನು ಹೋಗಲಾಡಿಸುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್‌ ಅಂಶದಿಂದಾಗಿ ರಕ್ತ ಸಂಚಾರ ಸರಾಗ ಆಗುವಂತೆ ಮಾಡುತ್ತದೆ. ಕಿಡ್ನಿಗಳ ಕ್ಷಮತೆಯನ್ನು ಹೆಚ್ಚಿಸಿ, ಅವುಗಳ ಆರೋಗ್ಯವನ್ನೂ ರಕ್ಷಿಸುತ್ತದೆ.

#image_title

ಹಲಸಿನ ಹಣ್ಣು

ಒಂದು ಹಲಸಿನ ಹಣ್ಣು ಅಕ್ಕಪಕ್ಕದ ಮನೆಯವರ ಬಾಯಲ್ಲೂ ನೀರೂರಿಸಬಲ್ಲದು, ಅಷ್ಟು ಪರಿಮಳವನ್ನು ಸೂಸುತ್ತದೆ. ಇದರ ಸತ್ವಗಳು ಸಹ ಪರಿಮಳಕ್ಕೆ ಸಾಟಿಯಾಗುವಂಥವು. ದೇಹದಲ್ಲಿರುವ ಹೆಚ್ಚುವರಿ ಸೋಡಿಯಂ ಅಂಶವನ್ನು ನಿಯಂತ್ರಿಸುವುದರಿಂದ ರಕ್ತದೊತ್ತಡ ಕಡಿಮೆ ಮಾಡಲು ಅನುಕೂಲ. ಈ ಸಾಧ್ಯತೆ ಪೊಟಾಶಿಯಂಗಿದೆ. ಹಲಸಿನ ಹಣ್ಣಿನಲ್ಲಿ ಪೊಟಾಶಿಯಂ ಅಂಶ ಸಮೃದ್ಧವಾಗಿದೆ. ಹಾಗಾಗಿ ಇದು ಹೃದಯದ ಮಿತ್ರ. ನಾರಿನಂಶ ಸಿಕ್ಕಾಪಟ್ಟೆ ಇರುವ ಈ ಹಣ್ಣು ಮಲಬದ್ಧತೆಯನ್ನು ದೂರ ಮಾಡಬಲ್ಲದು.

ಕಿತ್ತಳೆ

ಇದರ ಬಣ್ಣ, ಪರಿಮಳ, ರುಚಿ ಎಲ್ಲವೂ ಅನನ್ಯ. ಇದರಲ್ಲಿ ತುಂಬಿರುವ ವಿಟಮಿನ್‌ ಸಿ ಸತ್ವವು ರೋಗ ನಿರೋಧಕತೆಗೆ ಮತ್ತು ಚರ್ಮದ ಆರೋಗ್ಯಕ್ಕೆ ಪುಷ್ಟಿಯನ್ನು ಒದಗಿಸುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಕಾರಿ. ಅದರಲ್ಲೂ ಕಿತ್ತಲೆಯ ಸಿಪ್ಪೆಗಳಲ್ಲಿರುವ ಸತ್ವವು ಕೊಲೆಸ್ಟ್ರಾಲ್‌ ಕತ್ತರಿಸಲು ಇನ್ನೂ ಉತ್ತಮ ಎನ್ನುತ್ತವೆ ಅಧ್ಯಯನಗಳು. ಇದರ ಬೀಟಾ ಕ್ಯಾರೊಟಿನ್‌ ಅಂಶವು ಕಣ್ಣಿನ ಆರೋಗ್ಯ ರಕ್ಷಣೆಗೆ ಪೂರಕ.

Exit mobile version