ಮಧ್ಯಾಹ್ನ ಊಟವಾದ ಮೇಲೆ ಸಣ್ಣದೊಂದು ನಿದ್ದೆ ಹೊಡೆಯುವುದು ಮನೆಯಲ್ಲಿರುವ ಎಲ್ಲ ಮಂದಿಗೂ ಒಂದು ಸಹಜವಾದ ಅಷ್ಟೇ ಖುಷಿಕೊಡುವ ಒಂದು ಅಭ್ಯಾಸ. ಮಧ್ಯಾಹ್ನದ ನಿದ್ದೆ ಒಳ್ಳೆಯದಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ ಇದು ಅಭ್ಯಾಸವಾಗಿಬಿಟ್ಟಿರುತ್ತದೆ. ಇನ್ನು ಕಚೇರಿಯಲ್ಲಿ ಕೆಲಸ ಮಾಡುವ ಮಂದಿಗೆ ಈ ಸೌಲಭ್ಯ ಸಿಗುವುದಿಲ್ಲವಾದ್ದರಿಂದ ರಾತ್ರಿ ಮನೆಗೆ ಬಂದ ಮೇಲೆ, ಊಟದ ನಂತರ ಸುಸ್ತಾಗಿ ಮಲಗಿಬಿಡುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಒಂದು ಚಂದನೆಯ ಊಟ, ಜೊತೆಗೊಂದು ನಿದ್ದೆ ಎಂಬುದನ್ನು ಯೋಚನೆಯೇ ಎಲ್ಲರಿಗೂ ಖುಷಿಯನ್ನು ಕೊಡುವಂಥದ್ದು. ಆದರೆ, ಹಾಗೆ ನೋಡಿದರೆ, ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸ ಖಂಡಿತ ಅಲ್ಲ. ಮಧ್ಯಾಹ್ನವಿರಬಹುದು, ರಾತ್ರಿಯೇ ಇರಬಹುದು, ಊಟದ ನಂತರ ಒಂದ್ಹತ್ತು ನಿಮಿಷ ಸುಮ್ಮನೆ ಕೂತು ನಂತರ ಒಂದ್ಹತ್ತು ನಿಮಿಷದ ಲಘುವಾದ ನಡಿಗೆಯ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತವೆ ಅಧ್ಯಯನಗಳು. ಹಾಗಾದರೆ ಬನ್ನಿ, ಊಟದ ನಂತರದ ಹಗುರವಾದ (Benefits Of Walk After Meal ) ನಡಿಗೆಯಿಂದಾಗುವ ಲಾಭಗಳೇನು ಎಂಬುದನ್ನು ತಿಳಿಯೋಣ.
ಜೀರ್ಣಕ್ರಿಯೆಗೆ ಪ್ರಚೋದನೆ
ಊಟವಾದ ತಕ್ಷಣ ನಡೆಯುವುದರಿಂದ ಸಿಗುವ ಅತ್ಯುತ್ತಮ ಲಾಭವೆಂದರೆ ಸರಿಯಾದ ಜೀರ್ಣಕ್ರಿಯೆಗೆ ಪ್ರಚೋದನೆ ಸಿಗುವುದು. ಹೌದು. ಕರುಳು, ಜಠರ ಮತ್ತಿತರ ಜೀರ್ಣಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಂಗಾಂಗಗಳ ಮಾಂಸಖಂಡಗಳಿಗೆ ನಡಿಗೆಯಿಂದ ಚುರುಕು ಮುಟ್ಟಿದಂತಾಗಿ, ಪಚನಕ್ರಿಯೆ ವೇಗವಾಗಿ ಆಗುತ್ತದೆ. ಈ ಅಂಗಾಂಶಗಳು ಜಡತ್ವದಿಂದ ಮೇಲೆದ್ದು ತಮ್ಮ ಕೆಲಸವನ್ನು ಚುರುಕಾಗಿ ಮಾಡುತ್ತವೆ. ಊಟವಾದ ಮೇಲಿನ ಹಗುರವಾದ ನಡಿಗೆಯೂ ಸಾಕು, ಓಡುವುದು, ಜಾಗಿಂಗ್ ಮಾಡುವುದು ಇತ್ಯಾದಿಗಳ ಅಗತ್ಯವಿಲ್ಲ. ನಿಧಾನವಾದ, ನಿಮ್ಮ ಸಹಜವಾದ ೧೫ ನಿಮಿಷಗಳ ನಡಿಗೆಯೂ ಸಾಕು. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಿ ಹೊಟ್ಟೆಯುಬ್ಬರ, ಮಲಬದ್ಧತೆ, ಅಸಿಡಿಟಿ, ಹೊಟ್ಟೆಯ ಸಮಸ್ಯೆ ಇರುವ ಮಂದಿಗೂ ಸಾಕಷ್ಟು ಲಾಭವಾಗುತ್ತದೆ.
ಮಧುಮೇಹಕ್ಕೆ ಮದ್ದು
ಮಧುಮೇಹ ಇರುವ ಮಂದಿಗೆ ಊಟದ ನಂತರದ ವಾಕಿಂಗ್ ಬಹಳ ಒಳ್ಳೆಯದು. ಯಾಕೆಂದರೆ, ಈ ಸಂದರ್ಭದ ನಡಿಗೆಯಿಂದ ಮದುಮೇಹಿಗಳ ದೇಹಕ್ಕೆ ಕೂಡಲೇ ಸಕ್ಕರೆ ಏರುವ ಪರಿಣಾಮ ಕೊಂಚ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವ ಮೂಲಕ ಸಕ್ಕರೆಯ ಪ್ರಮಾಣ ದೇಹಕ್ಕೆ ರಕ್ತಕ್ಕೆ ಒಡನೆಯೇ ಸೇರದು. ಇದರಿಂದ ಸಕ್ಕರೆಯ ಮಟ್ಟದ ದಿಢೀರ್ ಏರಿಕೆಯ ಸಮಸ್ಯೆ ಬಾರದು.
ತೂಕ ಇಳಿಸಲು ಸಹಕಾರಿ
ತೂಕ ಇಳಿಸುವ ಮಂದಿಗೆ ಈ ಅಭ್ಯಾಸ ಬಹಳ ಒಳ್ಳೆಯದು. ಕ್ಯಾಲರಿ ಬರ್ನ್ ಮಾಡಲು, ಊಟವಾದ ತಕ್ಷಣ ನಡೆಯುವುದರಿಂದ ಸಾಕಷ್ಟು ಲಾಭವಿದೆ. ಕೇವಲ ತೂಕವಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಅಷ್ಟೇ ಅಲ್ಲ, ಮಾನಸಿಕ ಆರೋಗ್ಯ, ಹೃದಯದ ಆರೋಗ್ಯವೂ ಇದರಿಂದ ವೃದ್ಧಿಯಾಗುತ್ತದೆ. ಮಾಂಸಖಂಡಗಳ ಹಾಗೂ ಎಲುಬಿನ ಆರೋಗ್ಯ ವೃದ್ಧಿಸುತ್ತದೆ.
ಬಿಪಿ ನಿಯಂತ್ರಣಕ್ಕೆ ಸಹಕಾರಿ
ರಕ್ತದೊತ್ತಡದ ಸಮಸ್ಯೆ ಇರುವ ಮಂದಿಗೂ ಊಟದ ನಂತರದ ನಡಿಗೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ.
ಒಳ್ಳೆಯ ನಿದ್ದೆಗೆ ಪೂರಕ
ಒಳ್ಳೆಯ ನಿದ್ದೆ ಬೇಕಾ? ಹಾಗಾದರೆ, ನಿತ್ಯವೂ ಊಟದ ನಂತರ ವಾಕ್ ಮಾಡಿ. ಹೌದು. ಊಟವಾದ ನಂತರ ೧೫-೨೦ ನಿಮಿಷಗಳ ಹಗುರವಾದ ನಡಿಗೆಯಿಂದ, ಊಟ ಬೇಘ ಕರಗುತ್ತದೆ. ಜೊತೆಗೆ ಹೊಟ್ಟೆ ಹಗುರವಾಗುತ್ತದೆ. ಸುಖವಾದ, ಸೊಂಪಾದ ನಿದ್ದೆ ನಿಮಗೆ ಬರುತ್ತದೆ. ಇದರಿಂದ ಮಾರನೇ ದಿನ ಏಳುವಾಗ ನೀವು ಫ್ರೆಶ್ಶಾಗಿರುತ್ತೀರಿ. ತಾಜಾತನದಿಂದ ನೀವು ಮಾರನೇ ದಿನದ ಕೆಲಸವನ್ನು ಉಲ್ಲಾಸದಿಂದ ಮಾಡುವ ಶಕ್ತಿ, ಚೈತನ್ಯ ನಿಮ್ಮದಾಗುತ್ತದೆ.
ವಾಕ್ ಮಾಡುವಾಗ ನೀವು ಒಂದೇ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಊಟವಾದ ತಕ್ಷಣ ನಡಿಗೆ ಆರಂಭಿಸಬೇಡಿ. ಊಟದ ನಂತರ ಹತ್ತರಿಂದ 15 ನಿಮಿಷಗಳ ಗ್ಯಾಪ್ ಕೊಡಿ. ನಂತರ 10-15 ನಿಮಿಷ ಸಣ್ಣದೊಂದು ವಾಕ್ ಮಾಡಿ. ದೂರ ಅಲ್ಲದಿದ್ದರೂ, ಮನೆಯಲ್ಲೇ, ಮನೆಯ ಅಂಗಳದಲ್ಲೇ ಸುಮ್ಮನೆ ವೃತ್ತಾಕಾರದಲ್ಲಿ ನಡೆಯಬಹುದು. ಜೊತೆಗೆ ವೇಗವಾಗಿ ನಡೆಯುವುದು ಈ ಸಂದರ್ಭ ಸಲ್ಲದು. ನಿಧಾನವಾಗಿ ನಡೆದರೆ ಈ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ನಿಯಮಿತವಾಗಿ ಈ ಅಭ್ಯಾಸವನ್ನು ಇಟ್ಟುಕೊಂಡರೆ, ಲಾಭಗಳನ್ನು ಕಂಡುಕೊಳ್ಳುವಿರಿ.
ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!