Site icon Vistara News

Healthy teeth | ಬಾಯಿ ಬಿಟ್ಟು ನಗಬೇಕಿದ್ದರೆ ನಿಮ್ಮ ದಂತಾರೋಗ್ಯ ಹೀಗೆ ಕಾಪಾಡಿಕೊಳ್ಳಿ!

Healthy teeth

ಸರ್ವರೋಗಕ್ಕೂ ನಗು ಮದ್ದಾಗಬಲ್ಲದೇ? ರೋಗವನ್ನು ಗುಣಪಡಿಸುವಷ್ಟು ಅಲ್ಲದಿದ್ದರೂ, ಉಪಶಮನ ಮಾಡುವಂಥ ಮದ್ದಂತೂ ಹೌದೇಹೌದು ನಗು. ಆ ನಗುವಿಗೇ ರೋಗ ಬಂದರೆ? ನಮ್ಮ ಬಾಯಿಯ ಆರೋಗ್ಯ ಸರಿಯಾಗಿಲ್ಲದಿದ್ದರೆ ನಗು ತುಟ್ಟಿಯಾಗುವ ಎಲ್ಲಾ ಸಾಧ್ಯತೆಯೂ ಇದೆ. ಒಂದು ಅಂದಾಜಿನ ಪ್ರಕಾರ, ಶೇ. ೫೦ರಷ್ಟು ಮಂದಿ ಒಂದಿಲ್ಲೊಂದು ರೀತಿಯ ಹಲ್ಲು-ಒಸಡುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹಲ್ಲಿನ ಹುಳುಕು ಮತ್ತು ಒಸಡಿನ ರೋಗಗಳು ಹೆಚ್ಚಿನ ಜನರನ್ನು ಬಾಧಿಸುತ್ತಿವೆ. ಆದರೂ ದಂತವೈದ್ಯರ ಬಳಿ ಹೋಗುವುದು ಅಗತ್ಯ ಎಂದು ಎಷ್ಟೋ ಜನ ಭಾವಿಸುವುದೇ ಇಲ್ಲ. ಇಂಥ ಕೆಲವು ಸರಳ ಕ್ರಮಗಳಿಂದ ಬಾಯಿಯ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ.

ಹಲ್ಲುಗಳ ಮೇಲೆ ಬೆಳೆಯುವ ಹಳದಿ ಪದರ ಫ್ಲೇಕ್‌ ಹೆಚ್ಚಿನ ಸಮಸ್ಯೆಗಳ ಮೂಲ. ಈ ಫ್ಲೇಕ್‌ ಹೆಚ್ಚಿದಂತೆ ಹಲ್ಲು ಮತ್ತು ಒಸಡುಗಳನ್ನು ಬೆಸೆಯುವ ಭಾಗ ಊದಿಕೊಂಡು ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ. ಒಸಡುಗಳಲ್ಲಿ ಊತದಿಂದಾಗಿ ಈ ಭಾಗವನ್ನು ಸರಿಯಾಗಿ ಉಜ್ಜಲಾಗದೆ ಆಹಾರ ಕಣಗಳು ಅಲ್ಲಲ್ಲೇ ಉಳಿಯುವಂತಾಗುತ್ತದೆ. ಇದು ನೇರವಾಗಿ ದಂತಕ್ಷಯಕ್ಕೆ ಕಾರಣವಾಗುತ್ತದೆ. ಕೆಲವರಿಗೆ ಇಂಥ ಸಮಸ್ಯೆಗಳು ಆನುವಂಶಿಕವಾಗಿ ಬರುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೆ ನಮ್ಮ ಜೀವನಶೈಲಿ ದೊಡ್ಡಮಟ್ಟದಲ್ಲಿ ನಮ್ಮ ದಂತಾರೋಗ್ಯವನ್ನು ನಿರ್ಧರಿಸುತ್ತದೆ. ಪದೇಪದೆ ಏನಾದರೂ ಬಾಯಾಡುವುದು, ಆನಂತರ ಬಾಯಿಯ ಶುಚಿತ್ವದ ಬಗ್ಗೆ ಗಮನ ಕೊಡದಿರುವುದು, ಆಹಾರದಲ್ಲಿ ಸರಿಯಾದ ಪೋಷಕಾಂಶಗಳು ಇಲ್ಲದಿರುವುದು…ಇಂಥ ಎಲ್ಲಾ ಕಾರಣಗಳಿಂದ ಬಾಯಿಯ ಆರೋಗ್ಯ ಕೆಡುವುದು ನಿಶ್ಚಿತ.

ಒಸಡುಗಳು ಊದಿಕೊಂಡಿದ್ದಾಗ ಉಗುರು ಬಿಸಿ ನೀರಿನಲ್ಲಿ ಪದೇಪದೆ ಬಾಯಿ ಮುಕ್ಕಳಿಸುವುದು ಸರಳ ಉಪಶಮನ. ಉಪ್ಪು ನೀರಿನ ಗಾರ್ಗಲ್‌ ಸಹ ಪರಿಣಾಮ ನೀಡಬಹುದು. ಬಾಯಿಯ ಸಂಪೂರ್ಣ ಪ್ಲೋಸಿಂಗ್‌ನಿಂದ (ಸ್ವಚ್ಛ ದಾರದಿಂದ ಎಲ್ಲಾ ಹಲ್ಲುಗಳ ನಡುವನ್ನು ಶುಚಿಗೊಳಿಸುವುದು) ಬಹಳಷ್ಟು ಸಮಸ್ಯೆಗಳ ಉದ್ಭವವನ್ನು ತಡೆಯಬಹುದು. ಕ್ಯಾರೆಟ್‌, ಸೇಬು ಮುಂತಾದ ಆಹಾರಗಳು ಒಸಡಿನ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿ.

ದೇಹದ ಇನ್ಸುಲಿನ್ ಮಟ್ಟ ಮತ್ತು ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹತೋಟಿಯಲ್ಲಿ ಇಡುವುದು ಮುಖ್ಯ. ಇವುಗಳು ಸಹ ಒಸಡಿನ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ. ಸಮಸ್ಯೆಗಳು ತಲೆದೋರಿದರೆ ಮೊದಲು ದಂತವೈದ್ಯರನ್ನು ಕಾಣಿ. ತೊಂದರೆ ಹೆಚ್ಚಾಗಿ, ದುಬಾರಿ ಚಿಕಿತ್ಸೆಗಳೇ ಗತಿ ಎನ್ನುವವರೆಗೆ ಕಾಯದಿರಿ. ಆರಂಭದಲ್ಲೇ ಪರಿಹರಿಸಿಕೊಳ್ಳಿ.‌‌

ಇದನ್ನೂ ಓದಿ | Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ

ದಂತ ಅಥವಾ ಒಸಡುಗಳಲ್ಲಿ ಯಾವುದೇ ರೀತಿಯ ಸೋಂಕುಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ. ಇದಕ್ಕೆ ಕೆಲವೊಮ್ಮೆ ಪ್ರತಿಜೈವಿಕ ಔಷಧಿಗಳು (antibiotics) ಅಥವಾ ಪ್ರತ್ಯೇಕ ಮೌತ್‌ವಾಷ್‌ಗಳನ್ನು ವೈದ್ಯರು ಸೂಚಿಸಬಹುದು. ಈ ಸಂದರ್ಭದಲ್ಲಿ ಬಾಕ್ಟೀರಿಯ ಸೋಂಕು ತಡೆಗಟ್ಟುವುದು ಮುಖ್ಯ. ಇದಲ್ಲದೆಯೇ, ಕೆಲವೊಮ್ಮೆ ಮಾಮೂಲಿಯಾಗಿ ಔಷಧಿ ಅಂಗಡಿಗಳಲ್ಲಿ ದೊರೆಯುವ ಮೌತ್‌ವಾಷ್‌ಗಳು ಸಹ ಬಾಯಿಯ ಆರೋಗ್ಯಕ್ಕೆ ಸಹಕಾರಿ. ಅವುಗಳನ್ನು ಬಳಸುವ ಬಗ್ಗೆ ವೈದ್ಯರಲ್ಲಿ ಕೇಳಿ.

ವೈದ್ಯರು ಮೊದಲು ಕೇಳುವ ಪ್ರಶ್ನೆ- ʻಸರಿಯಾಗಿ ಹಲ್ಲುಜ್ಜುತ್ತಿದ್ದೀರಾ?ʼ ಇದು ಎಲ್ಲಕ್ಕಿಂತ ಪ್ರಾಥಮಿಕವಾದದ್ದು. ನಿಮ್ಮ ಬ್ರಷ್‌ ಸರಿಯಾಗಿದೆಯೇ? ಈ ಬ್ರಷ್‌ ಗುಚ್ಛಗಳು ಮೃದುವಾಗಿ ಮತ್ತು ನೇರವಾಗಿ ಇರಬೇಕು. ಹಳೆಯದಾಗಿ, ಒರಟಾಗಿ, ಬಾಯಗಲಿಸಿಕೊಂಡ ಬ್ರಷ್‌ನಿಂದ ಸ್ವಚ್ಛತೆ ಹೇಗೆ ಸಾ‍ಧ್ಯ? ನಮ್ಮ ದಂತ ಸಾಲಿಗೆ ಅಂದಾಜು ೪೫ ಡಿಗ್ರಿ ಕೋನದಲ್ಲಿ ಬರುವ ಗುಚ್ಛಗಳಿದ್ದರೆ, ಆ ಬ್ರಷ್‌ ಪರಿಣಾಮಕಾರಿ. ಹೆಚ್ಚಿನ ವೈದ್ಯರು ಹಲ್ಲುಜ್ಜುವ ಕ್ರಮವನ್ನೂ ತಮ್ಮ ರೋಗಿಗಳಿಗೆ ತಿಳಿಸುವ ವಾಡಿಕೆಯನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ ವರ್ಷಕ್ಕೊಮ್ಮೆ ದಂತವೈದ್ಯರನ್ನು ಭೇಟಿಮಾಡುವ ಕ್ರಮ ಸೂಕ್ತ.

ಸಿಗರೇಟ್‌ ಅಭ್ಯಾಸವಿದೆಯೇ? ಹಾಗಿದ್ದರೆ ನಿಮ್ಮ ಒಸಡುಗಳು ಹಾಳಾಗಲೇಬೇಕು! ಒಸಡು ಹಾಳಾಗುವುದರಿಂದ ಹಲ್ಲುಗಳು ಹೇಗೆ ಸರಿಯಿರಲು ಸಾಧ್ಯ? ನಿಕೋಟಿನ್‌ನಿಂದಾಗಿ ಒಸಡುಗಳಿಗೆ ರಕ್ತ ಸಂಚಾರ ಕುಂಠಿತಗೊಳ್ಳುತ್ತದೆ. ಧೂಮಪಾನ ಬಿಟ್ಟವರಲ್ಲಿ ಒಸಡುಗಳ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ದಾಖಲಿಸಲಾಗಿದೆ.

ಇದನ್ನೂ ಓದಿ | Cancer cure | ಕ್ಯಾನ್ಸರ್‌ಗೆ ತುತ್ತಾಗಲು ಮೂರೇ ಮೂರು ಕಾರಣಗಳು

Exit mobile version