Site icon Vistara News

Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

Bird Flu

Bird Flu

ನವದೆಹಲಿ: ದೇಶದಲ್ಲಿ H9N2 ವೈರಸ್‌ ಸೋಂಕಿನಿಂದ ಹರಡುವ ಹಕ್ಕಿ ಜ್ವರ (Bird Flu)ದ ಎರಡನೇ ಪ್ರಕರಣ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿಗೆ H9N2 ವೈರಸ್‌ ಸೋಂಕಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆಗಳು, ಹೆಚ್ಚಿನ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದಿಂದಾಗಿ ಮಗುವನ್ನು ಫೆಬ್ರವರಿಯಲ್ಲಿ ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಇದೀಗ ಮೂರು ತಿಂಗಳ ನಂತರ ಮಗುವನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ಹೇಳಿದೆ.

ಮಗು ತನ್ನ ಮನೆಯಲ್ಲಿದ್ದ ಕೋಳಿಗಳೊಂದಿಗೆ ಒಡನಾಟ ಹೊಂದಿತ್ತು. ಅದಾಗ್ಯೂ ಹಕ್ಕಿಜ್ವರ ಲಕ್ಷಣಗಳಿರುವ ಬೇರೆ ಪ್ರಕರಣ ಯಾವುದೂ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಭಾರತದಿಂದ ವರದಿಯಾದ ಎರಡನೇ H9N2 ವೈರಸ್‌ ಸೋಂಕಿನ ಪ್ರಕರಣವಾಗಿದ್ದು, 2019ರಲ್ಲಿ ಮೊದಲನೆಯ ಪ್ರಕರಣ ಕಂಡು ಬಂದಿತ್ತು. H9N2 ವೈರಸ್ ಸಾಮಾನ್ಯವಾಗಿ ಕಡಿಮೆ ಪ್ರಮಾಣದ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಆದರೆ ನಿರ್ಲಕ್ಷ್ಯ ಮಾಡುವುದು ಸಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಆತಂಕ ಸೃಷ್ಟಿಸಿದ ಚೀನಾ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಎಚ್‌9ಎನ್‌2 (ಏವಿಯನ್ ಇನ್ಫ್ಲುಯೆನ್ಸ ವೈರಸ್-ಹಕ್ಕಿ ಜ್ವರದ ವೈರಾಣು) ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಕಂಡುಬಂದು ಆತಂಕ ಸೃಷ್ಟಿಯಾಗಿತ್ತು. ಚೀನಾದಲ್ಲಿ ಮಾನವರಲ್ಲಿ ಎಚ್‌9ಎನ್‌2 ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಹಕ್ಕಿ ಜ್ವರದ ವಿರುದ್ಧ ಸನ್ನದ್ಧತಾ ಕ್ರಮಗಳ ಬಗ್ಗೆ ಚರ್ಚಿಸಲು ʻಡಿಜಿಎಚ್ಎಸ್ʼ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತ್ತು. ಭಾರತದಲ್ಲಿಯೂ ಸೋಂಕು ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Health Update: ಮಕ್ಕಳಲ್ಲಿ ಹೆಚ್ಚುತ್ತಿದೆ ಜ್ವರ ಬಾಧೆ; ಮುನ್ನೆಚ್ಚರಿಕೆ ಇರಲಿ, ಆತಂಕ ಬೇಡ

ಅಪಾಯಕಾರಿ ಎಚ್5ಎನ್1 ಹಕ್ಕಿ ಜ್ವರ

ಇನ್ನು ಕೆಲವು ದಿನಗಳ ಹಿಂದೆ ಕೋವಿಡ್ ಸಾಂಕ್ರಾಮಿಕಕ್ಕಿಂತ ಅಪಾಯಕಾರಿಯಾಗಿರುವ ಎಚ್5ಎನ್1 ಹಕ್ಕಿ ಜ್ವರದ (H5N1 bird flu) ಕುರಿತು ಪಿಟ್ಸ್‌ಬರ್ಗ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದರು. ಆರೋಗ್ಯ ತಜ್ಞರು ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ 100 ಪಟ್ಟು ವೇಗವಾಗಿ ಎಚ್5ಎನ್1 ಹಕ್ಕಿ ಜ್ವರದ ಹರಡುವ ಅಪಾಯವಿದೆ ಎಂದು ಹೇಳಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಹಕ್ಕಿಜ್ವರ ಸಾಂಕ್ರಾಮಿಕ ರೋಗವು ವೇಗವಾಗಿ ಹರಡಲಿದ್ದು, ಹೆಚ್ಚಿನ ಸಾವು, ನೋವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಇದು ಜಾಗತಿಕವಾಗಿ ಮತ್ತೊಂದು ಸಾಂಕ್ರಾಮಿಕದ ಅಪಾಯವನ್ನು ಉಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪಿಟ್ಸ್‌ಬರ್ಗ್‌ನ ಪ್ರಮುಖ ಪಕ್ಷಿ ಜ್ವರ ಸಂಶೋಧಕ ಡಾ. ಸುರೇಶ್ ಕೂಚಿಪುಡಿ, ʼʼಬ್ರೀಫಿಂಗ್‌ನಲ್ಲಿ ಎಚ್5ಎನ್1 ಪಕ್ಷಿ ಜ್ವರವು ಮಾನವ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳಿಗೂ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವೇಗವಾಗಿ ಈ ಸೋಂಕು ಸಾಂಕ್ರಾಮಿಕ ರೋಗವಾಗುವ ಅಪಾಯವಿದೆ. ಹೀಗಾಗಿ ಶೀಘ್ರದಲ್ಲೇ ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ರೋಗವನ್ನು ಹರಡಲು ಈ ವೈರಸ್‌ ಕಾರಣವಾಗಬಹುದುʼʼ ಎಂದು ಹೇಳಿದ್ದರು.

Exit mobile version