Site icon Vistara News

Winter Vegetable: ಕಪ್ಪು ಕ್ಯಾರೆಟ್‌ ಎಂಬ ಸರ್ವಗುಣ ಸಂಪನ್ನ: ಇದು ಚಳಿಗಾಲದ ಸ್ಪೆಷಲ್!

Winter Vegetable Black Carrot

ನಿಮಗೆ ಕ್ಯಾರೆಟ್‌ (Winter Vegetable) ನೋಡಿ ತಿಂದು ಗೊತ್ತಿದೆ ನಿಜ. ಎಲ್ಲ ಕಾಲದಲ್ಲೂ ಕಾಣಸಿಗುವ ಕೇಸರಿ ಬಣ್ಣದ ಕ್ಯಾರೆಟ್ಟು, ಕೊಂಚ ಸಿಹಿ ರುಚಿಯ ಹಾಗೂ ಚಳಿಗಾಲದಲ್ಲಿ ಮಾರುಕಟ್ಟೆಗೆ ದಾಂಗುಡಿಯಿಡುವ ಕೆಂಪಗಿನ ಡೆಲ್ಲಿ ಕ್ಯಾರೆಟ್ಟು ಎಲ್ಲರೂ ಸಾಮಾನ್ಯವಾಗಿ ನೋಡಿರುವ ತಿಂದಿರುವ ಕ್ಯಾರೆಟ್ಟುಗಳು. ಆದರೆ, ಕ್ಯಾರೆಟ್ಟಿನಲ್ಲಿ ಹಲವು ಬಗೆಗಳಿವೆ. ಕಪ್ಪು, ಬಿಳಿ ಹಾಗೂ ಹಳದಿ ಬಣ್ಣದ ಕ್ಯಾರೆಟ್ಟುಗಳೂ ಇವೆ! ಅದರಲ್ಲೂ ಭಾರತದಲ್ಲಿ, ಹಲವೆಡೆ ಕಪ್ಪು ಬಣ್ಣದ ಕ್ಯಾರೆಟ್ಟು ಚಳಿಗಾಲದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ ಎಂಬುದು ಗೊತ್ತೇ?
ಹೌದು. ಕಪ್ಪು ಕ್ಯಾರೆಟ್‌, ಅತ್ಯಂತ ಅಪರೂಪವಾದ ಕ್ಯಾರೆಟ್‌ ತಳಿ. ಭಾರತದ ಕೆಲವೆಡೆ ಇದನ್ನು ಬೆಳೆಯಲಾಗುತ್ತದೆ. ಇದು ಸಾಮಾನ್ಯ ಕ್ಯಾರೆಟ್‌ನಿಂದ ಹೇಗೆ ಭಿನ್ನ ಅಂತೀರಾ? ರುಚಿಯಲ್ಲಿ, ಗಾತ್ರದಲ್ಲಿ, ಆಕಾರದಲ್ಲಿ, ಘಮದಲ್ಲಿ ಕಪ್ಪು ಕ್ಯಾರೆಟ್‌ ಸಾಮಾನ್ಯ ಕೇಸರಿ/ಕೆಂಪು ಕ್ಯಾರೆಟ್‌ನಂತೆಯೇ ಆದರೂ ಪೋಷಕಾಂಶದ ವಿಚಾರಕ್ಕೆ ಬಂದರೆ ಇದು ದೈತ್ಯ ಪ್ರತಿಭೆ. ಸಾಮಾನ್ಯ ಕ್ಯಾರೆಟ್‌ಗಿಂತಲೂ ದುಪ್ಪಟ್ಟು ಪೋಷಕಾಂಶಗಳಿರುವ ಈ ಕ್ಯಾರೆಟ್ಟನ್ನು ನೀವು ಸಾಮಾನ್ಯ ಕ್ಯಾರೆಟ್ಟಿನಲ್ಲಿ ಏನೇನು ಮಾಡಬಹುದೋ ಅದೆಲ್ಲವನ್ನೂ ಮಾಡಬಹುದಾದರೂ, ಇದರಿಂದ ಏನೇ ಮಾಡಿದರೂ ಅಡುಗೆ ಕಪ್ಪು. ಎಷ್ಟು ಕಪ್ಪು ಎಂದರೆ, ನೇರಳೆಗಪ್ಪು ಗಾಢ ಬಣ್ಣ. ಸಲಾಡ್‌ನಿಂದ ಹಿಡಿದು, ಹಲ್ವಾದವರೆಗೆ ಕಪ್ಪು ಕ್ಯಾರೆಟ್‌ನಲ್ಲಿ ಎಲ್ಲವನ್ನೂ ಮಾಡಬಹುದು. ಬನ್ನಿ, ಕಪ್ಪು ಕ್ಯಾರೆಟ್‌ನಿಂದ ಏನೇನು ಲಾಭಗಳಿವೆ ಎಂಬುದನ್ನು ತಿಳಿಯೋಣ.

ಆಂಥೋಸಯನಿನ್‌ ಎಂಬ ಪೋಷಕಾಂಶ

ಇದರ ಈ ಬಣ್ಣಕ್ಕೆ ಪ್ರಮುಖ ಕಾರಣ ಇದರಲ್ಲಿರುವ ಆಂಥೋಸಯನಿನ್‌ ಎಂಬ ಪೋಷಕಾಂಶ. ಈ ಪೋಷಕಾಂಶವೇ ಕಪ್ಪು ಕ್ಯಾರೆಟ್‌ನನ್ನು ಭಿನ್ನವಾಗಿಸುವುದು! ನೇರಳೆ ಬಣ್ಣದ ಬಹುತೇಕ ಎಲ್ಲ ತರಕಾರಿ ಹಣ್ಣುಗಳಲ್ಲಿ ಆಂಥೋಸಯನಿನ್‌ ಇರುತ್ತದೆ. ಬಿಳಿ ಹಾಗೂ ಹಳದಿ ಬಣ್ಣದ ಕ್ಯಾರೆಟ್‌ನಲ್ಲಿ ಬೀಟಾ ಕೆರಟಿನ್‌ ಇದೆ. ಈ ಆಂಥೋಸಯನಿನ್‌ ಇರುವ ಕಪ್ಪು ಬಣ್ಣದ ಕ್ಯಾರೆಟ್ಟನ್ನು ರುಚಿ ಹಾಗೂ ಬಣ್ಣಕ್ಕಿಂತಲೂ ಪ್ರಮುಖವಾಗಿ ಅವುಗಳಿಂದಾಗುವ ಆರೋಗ್ಯಕರ ಲಾಭಗಳಿಗಾಗಿ ನಾವು ಅವುಗಳನ್ನು ಸೇವಿಸಲೇಬೇಕು.

ಕ್ಯಾರೆಟ್ಟು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ನಿಮಗೆ ಗೊತ್ತು. ಆದರೆ, ಕಪ್ಪು ಕ್ಯಾರೆಟ್ಟು ಈ ಗುಣದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ. ಇದರಲ್ಲಿ ಆಂಥೋಸಯನಿನ್‌ ಕೂಡಾ ಹೆಚ್ಚು ಪ್ರಮಾಣದಲ್ಲಿರುವುದರಿಂದ ಕಣ್ಣಿನ ಹಲವು ತೊಂದರೆಗಳಿಗೆ ಇದರಲ್ಲಿ ಉತ್ತರವಿದೆ. ಕಣ್ಣಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡಿ, ಕಣ್ಣನು ಸ್ವಚ್ಛವಾಗಿಯೂ ಇದು ಇರಿಸುತ್ತದೆ. ದೃಷ್ಟಿದೋಷಗಳಿಗೂ ಇದು ಒಳ್ಳೆಯದು. ಕಣ್ಣಿನ ಪೊರೆ, ವಯಸ್ಸಾದವರ ಕಣ್ಣಿನ ತೊಂದರೆಗಳಿಗೂ ಇದು ಬಹಳ ಒಳ್ಳೆಯದು.

ತೂಕ ಇಳಿಸಲು ಕೂಡಾ ಈ ಕ್ಯಾರೆಟ್‌ ಅತ್ಯುತ್ತಮ ಆಹಾರ. ಇದರಲ್ಲಿ ವಿಟಮಿನ್‌ ಹಾಗೂ ಖನಿಜಾಂಶಗಳು ಹೇರಳವಾಗಿದ್ದು, ಕಡಿಮೆ ಕ್ಯಾಲರಿಯಿರುವ ಆಹಾರ. ಹೀಗಾಗಿ, ಇದು ಎಲ್ಲ ಪೋಷಕಾಂಶಗಳನ್ನು ನೀಡಿ, ತೂಕ ಹೆಚ್ಚಾಗದಂತೆ ಕಾಪಾಡುತ್ತದೆ.

ನಾರಿನಂಶ ಅತ್ಯಂತ ಹೆಚ್ಚಿರುವ ಕಪ್ಪು ಕ್ಯಾರೆಟ್ಟು ಜೀರ್ಣಕ್ರಿಯೆಗೂ ಒಳ್ಳೆಯದು. ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಅದನ್ನು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸಿ, ಮಧುಮೇಹದ ಸಮಸ್ಯೆಗೂ ಪರಿಣಾಮಕಾರಿ. ಕೊಲೆಸ್ಟೆರಾಲ್‌ ಅನ್ನೂ ಇದು ಕಡಿಮೆಗೊಳಿಸುತ್ತದೆ.

ಇದರಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ ಹಾಘೂ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು ಇದು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟು, ಉರಿಯೂತ ಮತ್ತಿತರ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇದನ್ನು ಸಲಾಡ್‌, ಜ್ಯೂಸ್‌, ಕಂಜಿ, ಹಲ್ವಾ ಮತ್ತಿತರ ಆಯ್ಕೆಗಳ ಮೂಲಕ ಹೊಟ್ಟೆ ಸೇರುವಂತೆ ಮಾಡಬಹುದು.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Exit mobile version