Site icon Vistara News

Black Pepper Benefits: ಮಳೆಗಾಲದಲ್ಲಿ ಬೆಚ್ಚಗಿಡಲು ಬೇಕೇ ಬೇಕು ಸರ್ವಗುಣ ಸಂಪನ್ನ ಕರಿಮೆಣಸು!

black pepper benefits

ಕರಿಮೆಣಸು (black pepper) ಎಂಬ ಮಸಾಲೆ ಪದಾರ್ಥ ನಮ್ಮ ಮಸಾಲೆ ಡಬ್ಬಿಗಳಲ್ಲಿ (indian spices) ಸಾಮಾನ್ಯವಾಗಿ ಇರುವಂಥದ್ದೇ. ಖಾರವಾಗಿರುವ ಜೊತೆಗೆ ಇದರಲ್ಲಿರುವ ವಿಶೇಷ ರುಚಿ ಹಾಗೂ ಘಮದ ಕಾರಣದಿಂದಾಗಿ ಇದನ್ನು ಕೆಲವು ಅಡುಗೆಗಳಲ್ಲಿ ಬಳಸುವುದರ ಜೊತೆಗೆ ನಾವು ಆರೋಗ್ಯಕರ (black pepper benefits) ಲಾಭಗಳಿಗಾಗಿಯೂ ಬಳಸುತ್ತೇವೆ. ತಲೆತಲಾಂತರಗಳಿಂದ ಸಾವಿರಾರು ವರ್ಷಗಳ ಹಿಂದಿನಿಂದಲೇ ನಮ್ಮ ಹಿರಿಯರು, ಕರಿಮೆಣಸನ್ನು ಹಲವಾರು ಬಗೆಯ ಮನೆಮದ್ದುಗಳಿಗೂ ಬಳಸುತ್ತಲೇ ಬಂದಿದ್ದಾರೆ. ಇಂದಿಗೂ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಶೀತ, ಕಫ ನೆಗಡಿ ಮತ್ತಿತರ ಸಾಮಾನ್ಯ ತೊಂದರೆಗಳಿಗೆ ಕರಿಮೆಣಸಿನ ಕಷಾಯ ಇತ್ಯಾದಿಗಳನ್ನು ಸೇವಿಸುವುದೂ ಸಾಮಾನ್ಯ. ಹಾಗಾದರೆ ಬನ್ನಿ, ಕರಿಮೆಣಸಿನ ಸರ್ವಗುಣಗಳನ್ನೂ ತಿಳಿಯುವ ಮೂಲಕ ಆರೋಗ್ಯಕ್ಕೆ ಇದರಿಂದಾಗುವ ಲಾಭಗಳನ್ನು (black pepper health benefits) ತಿಳಿಯೋಣ ಬನ್ನಿ.

1. ಜೀರ್ಣಕ್ರಿಯೆ ಚುರುಕಾಗಿಸುತ್ತದೆ: ಕರಿಮೆಣಸು ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳ ಹಾಗೂ ಜೀರ್ಣರಸಗಳ ಉತ್ಪತ್ತಿಯನ್ನು ಪ್ರಚೋದಿಸುವುದರಿಂದ ಜೀರ್ಣಕ್ರಿಯೆ ಚುರುಕಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ಜೀರ್ಣದ ಸಮಸ್ಯೆಗಳಾದ ಹೊಟ್ಟೆ ಉಬ್ಬರಿಸುವಿಕೆ ಗ್ಯಾಸ್‌, ಮಲಬದ್ಧತೆ ಇಂತಹ ಸಮಸ್ಯೆಗಳೂ ಇದರಿಂದ ಪರಿಹಾರವಾಗುತ್ತದೆ. ಅಷ್ಟೇ ಅಲ್ಲ, ಇದು ಪೋಷಕಾಂಶಗಳನ್ನು ದೇಹ ಸಮರ್ಥ ರೀತಿಯಲ್ಲಿ ಹೀರಿಕೊಳ್ಳಲೂ ಕೂಡಾ ಸಹಾಯ ಮಾಡುತ್ತದೆ.

2. ಕರಿಮೆಣಸಿನಲ್ಲಿ ವಿಟಮಿನ್‌ ಸಿ, ಎ, ಫ್ಲೇವನಾಯ್ಡ್‌ ಹಾಗೂ ಕೆರಾಟಿನಾಯ್ಡ್‌ಗಳೂ ಸೇರಿದಂತೆ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದೆ. ಈ ಆಂಟಿ ಆಕ್ಸಿಡೆಂಟ್‌ಗಳು ದೇಹವನ್ನು ರೋಗಗಳು ಬರದಂತೆ ಕಾಪಾಡುತ್ತವೆ ಅಷ್ಟೇ ಅಲ್ಲ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

3. ಕರಿಮೆಣಸನ್ನು ಆಹಾರದ ರೂಪದಲ್ಲಿ ತೆಗೆದುಕೊಂಡಾಗ ದೇಹ ವಿಟಮಿನ್‌ ಬಿ, ಸಿ, ಸೆಲೆನಿಯಮ್‌, ಬೀಟಾ ಕೆರೊಟಿನ್‌ನಂತಹ ಪೋಷಕಾಂಶಗಳೆಲ್ಲ ಸರಿಯಾದ ಪ್ರಮಾಣದಲ್ಲಿ ಆಹಾರದಿಂದ ಹೀರಲ್ಪಡುತ್ತವೆ. ಕರಿಮೆಣಸಿನಲ್ಲಿರುವ ಪೈಪರಿನ್‌ ಎಂಬ ಅಂಶಕ್ಕೆ ಈ ವಿಶೇಷ ಗುಣವಿದ್ದು, ಅದು ಆಹಾರದಲ್ಲಿರುವ ಪೋಷಕಾಂಶ ದೇಹದಲ್ಲಿ ಸರಿಯಾಗಿ ಬಳಕೆಯಾಗುವುದಂತೆ ನೋಡಿಕೊಳ್ಳುತ್ತದೆ.

4. ಕರಿಮೆಣಸಿನಲ್ಲಿರುವ ಪೈಪರಿನ್‌ ಎಂಬ ಅಂಶದಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳು ಹೇರಳವಾಗಿವೆ. ಇವು ದೇಹವನ್ನು ಕೆಲವು ರೋಗಗಳಿಂದ ರಕ್ಷಿಸುವುದಷ್ಟೇ ಅಲ್ಲ, ಮುಖ್ಯವಾಗಿ ಸಂಧಿವಾತ, ಅಸ್ತಮಾ ಹಾಗೂ ಕೆಲವೊಂದು ಬಗೆಯ ಚರ್ಮದ ಸಮಸ್ಯೆಗಳು ಬರದಂತೆಯೂ ಕಾಪಾಡುತ್ತವೆ.

5. ತೂಕ ಇಳಿಸಲು ಇಷ್ಟಪಡುವ ಮಂದಿಗೆ ಕರಿಮೆಣಸಿನಿಂದ ಸಾಕಷ್ಟು ಲಾಭಗಳಿವೆ. ಇದು ಜೀರ್ಣಕ್ರಿಯೆಯನ್ನು ಚುರುಕಾಗಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಪೈಪರಿನ್‌ ಎಂಬ ಅಂಶವು ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವ ಮೂಲಕ ಕ್ಯಾಲರಿ ಕರಗಿಸಲು ಸಹಾಯ ಮಾಡುತ್ತದೆ.

6. ಕರಿಮೆಣಸು ಉಸಿರಾಟದ ತೊಂದರೆ ಇರುವ ಮಂದಿಗೆ ಬಹಳ ಒಳ್ಳೆಯದು. ಕಫ, ಎದೆಕಟ್ಟಿದಂತಾಗುವ ಸಮಸ್ಯೆ, ಉಸಿರಾಡಲು ಕಷ್ಟವಾಗುವುದು, ಸೈನಸ್‌ ಇತ್ಯಾದಿ ಸಮಸ್ಯೆಗಳಿಂದ ಕಷ್ಟ ಪಡುವ ಮಂದಿಗೆ ಕರಿಮೆಣಸು ಪರಿಹಾರ ನೀಡುತ್ತದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳು ಶೀತ, ನೆಗಡಿಯಂತಹ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!

7. ನರಮಂಡಲದ ಆರೋಗ್ಯಕ್ಕೂ ಕರಿಮೆಣಸು ಬಹಳ ಒಳ್ಳೆಯದು ಎಂದು ಇತ್ತೀಚೆಗಿನ ಕೆಲವು ಸಂಶೋಧನೆಗಳು ಹೇಳಿವೆ. ಕರಿಮೆಣಸಿನಲ್ಲಿರುವ ಪೈಪರಿನ್‌ ನ್ಯೂರೋ ಟ್ರಾನ್ಸ್‌ಮಿಟರ್‌ಗಳಾದ ಸೆರೆಟೋನಿನ್‌ ಹಾಗೂ ಡೋಪಮೈನ್‌ಗಳ ಮಟ್ಟವನ್ನು ಏರಿಸುವಲ್ಲಿ ಸಹಾಯ ಮಾಡುತ್ತದೆ. ಈ ಎರಡೂ ನ್ಯೂರೋಟ್ರಾನ್ಸ್‌ಮಿಟರುಗಳು ನಮ್ಮ ಸಂತೋಷ ಹಾಗೂ ಖುಷಿಯನ್ನು ಹೆಚ್ಚಿಸುವಂತಹುಗಳು. ಹಾಗಾಗಿ ಮಾನಸಿಕ ಆರೋಗ್ಯಕ್ಕೂ ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮಿದುಳಿನ ಅಂಗಾಂಶಗಳ ಬೆಳವಣಿಗೆಗೂ ಇದು ಸಹಾಯ ಮಾಡುವ ಮೂಲಕ ಜ್ಞಾಪಕ ಶಕ್ತಿಗೂ ಇದು ಒಳ್ಳೆಯದು.

ಮುಖ್ಯವಾಗಿ, ಕರಿಮೆಣಸಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿದ್ದರೂ, ಅತಿಯಾಗಿ ಇದರ ಸೇವನೆ ಒಳ್ಳೆಯದಲ್ಲ. ಹಿತಮಿತವಾಗಿ ನಿತ್ಯಾಹಾರದಲ್ಲಿ ಸೇವಿಸುವುದರಿಂದ ಉತ್ತಮ ಲಾಭಗಳನ್ನು ಪಡೆಯಬಹುದು.

ಇದನ್ನೂ ಓದಿ: Health Tips For Monsoon: ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದು ಹೇಗೆ?

Exit mobile version