Site icon Vistara News

Blood Donors Day 2022: ಯಾರ್ಯಾರು ರಕ್ತದಾನ ಮಾಡಬಾರದು?

blood donation

ನೀವು ರಕ್ತದಾನ ಮಾಡುತ್ತಿದ್ದೀರಿ ಎಂದರೆ ಆಪತ್ತಿನಲ್ಲಿರುವ ಒಬ್ಬ ಮನುಷ್ಯನ ಜೀವ ಉಳಿಸಿದ್ದೀರಿ ಎಂದರ್ಥ. ಕಳೆದೆರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ರಕ್ತದಾನ ಕಡಿಮೆಯಾಗಿರುವುದರಿಂದ, ಈಗ ರಕ್ತದ ಅವಶ್ಯಕತೆ ಬಹಳ ಇದೆ. ರಕ್ತದಾನ ದಿನ (ಜೂ.13) ಹಿನ್ನೆಲೆಯಲ್ಲಿ ಯಾರು ರಕ್ತದಾನ ಮಾಡಬಹುದು, ಯಾರು ಮಾಡಬಾರದು ಎಂಬುದರ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ ಬನ್ನಿ.

ಮಹತ್ವ ಮತ್ತು ಥೀಮ್
ವಿಶ್ವ ರಕ್ತದಾನಿಗಳ ದಿನವನ್ನು ಪ್ರತಿ ವರ್ಷ ಜೂನ್ 14ರಂದು ಆಚರಿಸಲಾಗುತ್ತದೆ. ಈ ದಿನ ರಕ್ತದಾನದ ಮಹತ್ವದ ಬಗ್ಗೆ ಗಮನ ಸೆಳೆಯಲು ಆದ್ಯತೆ ನೀಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು 2004ರಲ್ಲಿ ಪ್ರಾರಂಭಿಸಿತು.

ಈ ವರ್ಷದ ಥೀಮ್- ‌ʼರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಪ್ರಯತ್ನಕ್ಕೆ ಕೈಜೋಡಿಸಿ ಜೀವ ಉಳಿಸಿ’ ಎಂಬುದಾಗಿದೆ. ಇದು ರಕ್ತದಾನಿಗಳ ಸಂಖ್ಯೆಯನ್ನು ಹೆಚ್ಚಿಸುವ ತುರ್ತಿನ ಬಗ್ಗೆ ಗಮನಹರಿಸುತ್ತದೆ.

ದಾನ ಮಾಡಿದ ರಕ್ತವನ್ನು ದೀರ್ಘಕಾಲದ ಅನಾರೋಗ್ಯ ಮತ್ತು ತೊಡಕುಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಬೆಂಬಲ ನೀಡಲು ಬಳಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ರಕ್ತದಾನದ ಪ್ರಾಮುಖ್ಯತೆ ಮತ್ತು ತುರ್ತು ಗಮನಾರ್ಹವಾಗಿ ಹೆಚ್ಚಾಗಿದೆ. ರಕ್ತದ ಕೊರತೆಯು ಹೆಚ್ಚು ಕಳವಳಕ್ಕೆ ಕಾರಣವಾಗಿರುವುದರಿಂದ, ನಾವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.

ಯಾರು ರಕ್ತದಾನ ಮಾಡಲು ಸಾಧ್ಯವಿಲ್ಲ?

ಒಬ್ಬರು ರಕ್ತದಾನ ಮಾಡಲು ಬಯಸಿದಷ್ಟು, WHO ನಿಗದಿಪಡಿಸಿದ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ರಕ್ತವನ್ನು ದಾನ ಮಾಡಲು ಯೋಗ್ಯವಲ್ಲದ ವ್ಯಕ್ತಿಯಿಂದ ಪಡೆದರೆ, ಅದು ರಕ್ತವನ್ನು ಒದಗಿಸುವ ವ್ಯಕ್ತಿಯ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ, ಯಾರು ರಕ್ತದಾನ ಮಾಡಬಹುದು ಅಥವಾ ಮಾಡಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಅನಾನಸು ಆರೋಗ್ಯ: ಬರೀ ಹೊಟ್ಟೆಗಲ್ಲ, ಚರ್ಮಕ್ಕೂ ಕೂದಲಿಗೂ ಬೆಸ್ಟ್

ಯಾವಾಗ ನೀವು ರಕ್ತದಾನ ಮಾಡಬಾರದು? 10 ಕಾರಣಗಳು ಇಲ್ಲಿವೆ:

  1. ಇತ್ತೀಚೆಗೆ ರಕ್ತದಾನ ಮಾಡಿರುವುದು.
    ವೈದ್ಯರ ಸಲಹೆಯಂತೆ ದಾನಿಯು 2 ತಿಂಗಳು ಅಥವಾ 56 ದಿನಗಳಲ್ಲಿ ಒಮ್ಮೆ ಮಾತ್ರ ರಕ್ತದಾನ ಮಾಡಬಹುದಾಗಿದೆ. ದಾನಿಯ ಉತ್ತಮ ಆರೋಗ್ಯ ಮತ್ತು ಸುರಕ್ಷತೆಗೆ ಇದು ಅವಶ್ಯಕವಾಗಿದೆ.
  2. ಗರ್ಭಿಣಿ
    ಗರ್ಭಿಣಿಯರು ರಕ್ತದಾನ ಮಾಡಲು ಅರ್ಹರಲ್ಲ. ಗರ್ಭಿಣಿಯರು ಅನುಭವಿಸಬಹುದಾದ ಸಾಮಾನ್ಯ ಕೊರತೆಗಳಲ್ಲಿ ರಕ್ತಹೀನತೆ ಒಂದಾಗಿದೆ. ಗರ್ಭಿಣಿಯರು ರಕ್ತದಾನ ಮಾಡಿದರೆ ಕಬ್ಬಿಣಾಂಶದ ಕೊರತೆಯ ಅಪಾಯಗಳು ಹೆಚ್ಚಾಗಬಹುದು.
  3. ಯಾವುದಾದರೂ ಚುಚ್ಚುಮದ್ದು (ಇಂಜೆಕ್ಷನ್) ಹಾಕಿಸಿಕೊಂಡಿದ್ದರೆ.
    ಕಳೆದ 3 ತಿಂಗಳುಗಳಲ್ಲಿ ನೀವು ಯಾವುದೇ ರೀತಿಯ ಚುಚ್ಚುಮದ್ದು ಪಡೆದಿದ್ದರೆ, ನೀವು ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ.
  4. ಜ್ವರ ಅಥವಾ ಶೀತ
    ನಿಮಗೆ ಜ್ವರವಿದ್ದರೆ ಅಥವಾ ನೀವು ಶೀತ- ಜ್ವರದಿಂದ ಬಳಲುತ್ತಿದ್ದರೆ, ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ. ಹಾಗಿದ್ದರೂ, ನಿಮ್ಮ ಆರೋಗ್ಯ ಉತ್ತಮವಿದ್ದು ಸದೃಢರಾಗಿರುವಾಗ ರಕ್ತದಾನ ಮಾಡಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ.
  5. ತಾಜಾ ಹಚ್ಚೆಗಳು
    ಇಂಜೆಕ್ಷನ್‌ನಂತೆಯೇ, ನೀವು ಕಳೆದ 3 ತಿಂಗಳುಗಳಲ್ಲಿ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರೆ, ನೀವು ರಕ್ತದಾನ ಮಾಡುವಂತಿಲ್ಲ.
  6. ಕಡಿಮೆ ತೂಕ
    ನೀವು ಕಡಿಮೆ ತೂಕ ಹೊಂದಿದ್ದರೆ, ಅಂದರೆ, ನೀವು 110 ಪೌಂಡ್/ 50 ಕೆಜಿಗಿಂತ ಕಡಿಮೆ ಇದ್ದರೆ, ರಕ್ತದಾನ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ, ರಕ್ತದಾನ ಮಾಡಿದರೆ ದಾನಿಗಳಿಗೆ ತೀವ್ರ ಹಾನಿಯಾಗಬಹುದು.
  7. ವಯಸ್ಸು
    ಕನಿಷ್ಠ 17 ವರ್ಷ ಮೇಲ್ಪಟ್ಟವರು ಮಾತ್ರ ರಕ್ತದಾನ ಮಾಡಲು ಅರ್ಹರು. ಗರಿಷ್ಠ ವಯಸ್ಸಿಗೆ ಸಂಬಂಧಿಸಿದಂತೆ, (ನೀವು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಹೊರತು) ಯಾವುದೇ ನಿರ್ಬಂಧಗಳಿಲ್ಲ.
  8. ಅಧಿಕ ಅಥವಾ ಕಡಿಮೆ ಬಿಪಿ
    ನೀವು ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಹೊಂದಿದ್ದರೆ, ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ. ಕಡಿಮೆ ಬಿಪಿ ಹೊಂದಿರುವ ಜನರು ರಕ್ತದಾನದ ನಂತರ ಅಸ್ವಸ್ಥರಾಗುವ ಅಪಾಯವಿರುತ್ತದೆ.
  9. ಕ್ಷಯರೋಗ
    ನೀವು ಕ್ಷಯರೋಗದಿಂದ ಬಳಲುತ್ತಿದ್ದರೆ, ರಕ್ತದಾನ ಮಾಡಲು ಅರ್ಹರಾಗುವುದಿಲ್ಲ. ಕ್ಷಯರೋಗವು ದಾನಿಗಳ ದೇಹದಿಂದ ಸ್ವೀಕರಿಸುವವರ ರಕ್ತಕ್ಕೆ ಸುಲಭವಾಗಿ ವರ್ಗಾವಣೆಯಾಗುತ್ತದೆ.
  10. ಏಡ್ಸ್
    ಟಿಬಿಯಂತೆಯೇ, ಏಡ್ಸ್ ಕೂಡ ದಾನಿಯ ದೇಹದಿಂದ ಸ್ವೀಕರಿಸುವವರಿಗೆ ವರ್ಗಾವಣೆಯಾಗಬಹುದು.

ಕೊನೆಯದಾಗಿ- ನೀವು ರಕ್ತದಾನ ಮಾಡುವ ಮೊದಲು, ರಕ್ತದಾನ ಮಾಡಲು ಯೋಗ್ಯರೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಿಕೊಳ್ಳಿ. ರಕ್ತ ವರ್ಗಾವಣೆಯು ದಾನಿ ಮತ್ತು ಸ್ವೀಕರಿಸುವವರಿಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಬಂಧಗಳು ಅವಶ್ಯಕವಾಗಿದೆ. ಅವುಗಳನ್ನು ಯಾವತ್ತೂ ಲಘುವಾಗಿ ತೆಗೆದುಕೊಳ್ಳಬಾರದು.

ಇದನ್ನೂ ಓದಿ: ಫಾಸ್ಟ್ ಫುಡ್ v/s ಸ್ಲೋ ಪುಡ್‌: ಅವಸರ v/s ಆರೋಗ್ಯ

Exit mobile version