Site icon Vistara News

Bottle gourd benefits: ಚರ್ಮದ ಸಮಸ್ಯೆಗಳಿಗೆ ಸೋರೆಕಾಯಿಯಲ್ಲಿ ಉತ್ತರ ಕಂಡುಕೊಳ್ಳಿ!

bottle gourd

ಚರ್ಮದ ಆರೋಗ್ಯಕ್ಕೆ (skin care) ಹಲವಾರು ಕಾಸ್ಮೆಟಿಕ್‌ ಪ್ರಾಡಕ್ಟ್‌ಗಳನ್ನು ನೀವು ನಿತ್ಯವೂ ಬಳಸುತ್ತಿರಬಹುದು. ಅದರ ಥರಹೇವಾರಿ ಜಾಹಿರಾತಿಗೆ ಮರುಳಾಗಿ ಆಗಾಗ ಬೇರೆ ಬೇರೆ ವಸ್ತುಗಳನ್ನು ತರಿಸಿಕೊಂಡು ನಿಮ್ಮ ಚರ್ಮಕ್ಕೆ ಯಾವುದು ಹೊಂದುತ್ತದೆ ಎಂದು ಪರೀಕ್ಷಿಸುವ ಕಸರತ್ತನ್ನೂ ನೀವು ನಡೆಸಿರಬಹುದು. ಬಹುತೇಕ ವಸ್ತುಗಳು ಜಾಹಿರಾತಿನಲ್ಲಿ ತೋರಿಸಿದಂತೆ ಯಾವ ಫಲವನ್ನೂ ನಿಮಗೆ ಕೊಡದೆ ನಿರಾಸೆಯನ್ನೇ ಹೊತ್ತು ತಂದಿರಬಹುದು. ಅಷ್ಟೇ ಅಲ್ಲ, ಚರ್ಮಕ್ಕೆ ಒಳ್ಳೆಯದೆಂದು ಹಲವಾರು ಫೇಸ್‌ಪ್ಯಾಕ್‌ಗಳನ್ನೋ, ಪೇಸ್ಟ್‌ಗಳನ್ನೋ, ಪುಡಿಯನ್ನೋ ಮನೆಯಲ್ಲೇ ಮಾಡಿ ನೀವು ಹಚ್ಚಿಕೊಂಡಿರಬಹುದು. ಅದರಿಂದ ತಕ್ಕಮಟ್ಟಿನ ಪ್ರಯೋಜನವೂ ನಿಮಗೆ ಸಿಕ್ಕಿರಬಹುದು. ಕೆಲವರಿಗೆ ಅತ್ಯುತ್ತಮ ಪ್ರಯೋಜನವೂ ಕಾಸ್ಮೆಟಿಕ್‌ಗಳಿಂದಲೂ, ಮನೆಮದ್ದಿನಿಂದಲೂ ಸಿಕ್ಕಿರಬಹುದು. ಆದರೆ, ಇವೆಲ್ಲವುಗಳ ಜೊತೆಗೆ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಲು ಅತ್ಯುತ್ತಮ ಆಹಾರವನ್ನೂ ಸೇವಿಸುವುದು ಬಗಹಳ ಮುಖ್ಯ. ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ ಹಾಗೂ ಹಲವು ಆಹಾರಗಳಿಂದ ದೂರವಿರುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಇಂತಹ ಚರ್ಮಸ್ನೇಹಿ ಆಹಾರಗಳ ಪೈಕಿ ಸೋರೆಕಾಯಿಯೂ ಒಂದು ಎಂಬುದು ನಿಮಗೆ ಗೊತ್ತೇ?

ಹೌದು. ಸೋರೆಕಾಯಿ, ಅತ್ಯಂತ ಸರಳ ತರಕಾರಿ. ಇದಕ್ಕೊಂದು ಅದರದ್ದೇ ಆದ ಗಾಢ ರುಚಿಯೇ ಇಲ್ಲ ಎಂದು ನಿಮಗೆ ಅನಿಸಿ ಸೋರೆಕಾಯಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದೊಂದು ಸರಳ ತರಕಾರಿಯಾದರೂ ಅತ್ಯಂತ ಆರೋಗ್ಯಕರ (bottle gourd benefits) ಹಾಗೂ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಹೊತ್ತಿರುವ ತರಕಾರಿ. ಹಾಗಾದರೆ ಬನ್ನಿ, ಸೋರೆಕಾಯಿಯಿಂದ ನಮ್ಮ ಚರ್ಮಕ್ಕೆ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.

1. ಸೋರೆಕಾಯಿಯಲ್ಲಿ ಅತ್ಯಂತ ಹೆಚ್ಚು ನೀರಿನ ಅಂಶವಿದೆ. ಇದರಲ್ಲಿ ಶೇಕಡಾ ೯೦ಕ್ಕಿಂತ ಹೆಚ್ಚು ನೀರಿನ ಅಂಶವಿದ್ದು, ಇದು ಚರ್ಮಕ್ಕೆ ಅಗತ್ಯವಾಗಿ ಬೇಕಾದ ನೀರನ್ನು ಪೂರೈಸುವ ಮೂಲಕ ಚರ್ಮವನ್ನು ನಯವಾಗಿರಿಸುತ್ತದೆ.

2. ಸೋರೆಕಾಯಿ ದೇಹದಲ್ಲಿರುವ ವಿಷಕಾರಕಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುವುದರಿಂದ ಚರ್ಮದ ಸಮಸ್ಯೆಗಳಾದ ಮೊಡವೆ ಕಜ್ಜಿಗಳು ಬರುವುದಿಲ್ಲ. ಇಂತಹ ಸಮಸ್ಯೆ ಇದ್ದವರಿಗೂ ಇದು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಇದು ದೇಹವನ್ನು ಡಿಟಾಕ್ಸ್‌ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗಿ, ಎಲ್ಲ ಬಗೆಯ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವಲ್ಲಿಯೂ ಸಹಾಯವಾಗುತ್ತದೆ.

3. ವಯಸ್ಸಾಗುವಿಕೆಯ ಪ್ರಭಾವ ಚರ್ಮದಲ್ಲಿ ಕಾಣುವುದನ್ನೂ ಇದು ಕಡಿಮೆ ಮಾಡುತ್ತದೆ.  ಇದರಲ್ಲಿರುವ ವಿಟಮಿನ್‌ ಸಿ ಚರ್ಮದ ಮೇಲೆ ಸುಕ್ಕುಗಳಾಗುವುದನ್ನು ತಡೆಯುತ್ತದೆ. ಇದರಲ್ಲಿ ಝಿಂಕ್‌ ಕೂಡಾ ಹೆಚ್ಚಿರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

4. ಸೋರೆಕಾಯಿಯಲ್ಲಿರುವ ವಿಟಮಿನ್‌ ಸಿ ಕೊಲಾಜೆನ್‌ ಉತ್ಪಾದನೆಯನ್ನು ಪ್ರಚೋದಿಸುವುದರಿಂದ ಚರ್ಮದಲ್ಲಿ ವಿಶೇಷ ಕಾಂತಿ ತರಲು ಇದು ನೆರವಾಗುತ್ತದೆ. ಹಾಗಾಗಿ ಫಳಪಳ ಹೊಳೆವ ಚರ್ಮ ನಿಮಗೆ ಬೇಕಿದ್ದರೆ ಸೋರೆಕಾಯಿ ತಿನ್ನಿ.

ಇದನ್ನೂ ಓದಿ: Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!

5. ಸೋರೆಕಾಯಿಯಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ. ಇದರಲ್ಲಿರುವ ಆಲ್ಕಲೈನ್‌ ಗುಣ ದೇಹದ ಉರಿಯೂತವನ್ನು ಕಡಿಮೆಗೊಳಿಸುವ ತಾಕತ್ತು ಹೊಂದಿದೆ. ಸೋರೆಕಾಯಿ ರಸವನ್ನು ಅಥವಾ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚುವುದರಿಂದಲೂ ಉತ್ತಮ ಫಲ ಕಾಣಬಹುದು.

ಕೇವಲ ಚರ್ಮ ಮಾತ್ರವಲ್ಲ, ಸೋರೆಕಾಯಿ, ಕೂದಲ ಆರೋಗ್ಯಕ್ಕೂ ಅತ್ಯಂತ ಒಳ್ಳೆಯದು. ನಿಯಮಿತವಾಗಿ ಸೋರೆಕಾಯಿ ಸೇವನೆ ಮಾಡುವುದರಿಂದ ಕೂದಲು ಹಾಗೂ ಚರ್ಮದ ಆರೋಗ್ಯದಲ್ಲಿ ಗಮನೀಯ ಬೆಳವಣಿಗೆ ಕಾಣಬಹುದು. ಸೋರೆಕಾಯಿಯನ್ನು ಜ್ಯೂಸ್‌ ಮಾಡಿ ಕುಡಿಯುವುದರಿಂದ, ಚಟ್ನಿ ಮಾಡಿ ಸೇವಿಸುವುದರಿಂದ, ದೋಸೆ, ರಾಯಿತ, ಸಲಾಡ್‌ ಅಥವಾ ಸೋರೆಕಾಯಿಯ ಬಗೆಬಗೆಯ ಅಡುಗೆಗಳನ್ನು ನಿತ್ಯವೂ ಮಾಡುವ ಮೂಲಕ ಸೋರೆಕಾಯಿಯನ್ನು ನಿತ್ಯಾಹಾರ ಕ್ರಮದಲ್ಲಿ ಅಳವಡಿಸುವ ಮೂಲಕ ಸೋರೆಕಾಯಿಯ ಆರೋಗ್ಯಕರ ಲಾಭಗಳನ್ನು ಪಡೆಯಬಹುದು. 

ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!

Exit mobile version