Site icon Vistara News

Brain eating amoeba | ಮೆದುಳು ತಿನ್ನುವ ಅಮೀಬಾ! ಏನಿದು ವಿಚಿತ್ರ ಕಾಯಿಲೆ?

Brain eating amoeba

ವಿಶ್ವದ ವಿವಿಧ ದೇಶಗಳಲ್ಲಿ ಆಗಾಗ ಸುದ್ದಿ ಮಾಡುವ ನಗ್ಲೆರಿಯ ಫೌಲೆರಿ ಅಥವಾ ʻಮೆದುಳು ಮೆಲ್ಲುವ ಅಮೀಬಾʼ ಸೋಂಕಿನಿಂದಾಗಿ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಹಲವು ತಿಂಗಳ ಕಾಲ ಥಾಯ್ಲೆಂಡ್‌ನಲ್ಲಿದ್ದ 50ರ ಆಸುಪಾಸಿನ ಆ ವ್ಯಕ್ತಿ, ದಕ್ಷಿಣ ಕೊರಿಯಾಗೆ ಆಗಮಿಸಿದ ನಂತರ ಮೃತಪಟ್ಟಿದ್ದಾನೆ.

ಥಾಯ್ಲೆಂಡ್‌ನಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ತಂಗಿದ್ದ ಆತ ಡಿಸೆಂಬರ್‌ 10ರಂದು ದಕ್ಷಿಣ ಕೊರಿಯಾಗೆ ಆಗಮಿಸಿದ ಮಾರನೇ ದಿನವೇ ಅನಾರೋಗ್ಯಕ್ಕೆ ಒಳಗಾಗಿದ್ದ. ಜ್ವರ, ತಲೆನೋವು, ವಾಂತಿಯೊಂದಿಗೆ ಕುತ್ತಿಗೆ ಜಡವಾಗಿ ಮಾತಾಡಲು ಕಷ್ಟವಾಗತೊಡಗಿತು. ತಕ್ಷಣವೇ ಆತನನ್ನು ತುರ್ತುಚಿಕಿತ್ಸೆಗೆ ದಾಖಲಿಸಲಾಗಿತ್ತು. ಮೆನಿಂಜೈಟಿಸ್‌ ಲಕ್ಷಣಗಳಿಗಾಗಿ ಅವರಿಗೆ ಚಿಕಿತ್ಸೆ ನೀಡಲಾದರೂ ಸುಮಾರು ೧೧ ದಿನಗಳ ನಂತರ ಆತ ಮೃತಪಟ್ಟ.

ಈ ಅಮೀಬಾ ಪ್ರವೇಶ ಮಾಡುವುದು ಹೇಗೆ?

ಮೆದುಳು ತಿನ್ನುವ ಅಮೀಬಾದ ಮೂರು ಬೇರೆಬೇರೆ ಸೋಂಕುಗಳಿಗಾಗಿ ವಂಶವಾಹಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದೀಗ ಮೆದುಳು ಜ್ವರದ ಮಾದರಿ ಆ ವ್ಯಕ್ತಿಯಲ್ಲಿ ದೃಢಪಟ್ಟಿದ್ದು, ಈ ಸೋಂಕು ಆತನಿಗೆ ತಗುಲಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಇದು ದಕ್ಷಿಣ ಕೊರಿಯಾದಿಂದ ವರದಿಯಾದ ಮೊದಲ ಪ್ರಕರಣವಿದು. ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ.

ಅಮೆರಿಕದ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಮಾಹಿತಿಯ ಪ್ರಕಾರ, ಮಣ್ಣು, ಕೆರೆ, ನದಿ ಮತ್ತಿತರ ಜಲಮೂಲಗಳಲ್ಲಿ ನಗ್ಲೇರಿಯ ಫೌಲರಿ ಇರುವುದಕ್ಕೆ ಸಾಧ್ಯ. ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಷ್ಟ. ಬಲುಬೇಗನೇ ಮೆದುಳಿಗೇರುವ ಈ ಸೋಂಕಿನಿಂದಾಗಿ ಚಿಕಿತ್ಸೆಗೆ ಸ್ಪಂದಿಸುವುದಕ್ಕೂ ಕೆಲವೊಮ್ಮೆ ರೋಗಿಗಳಿಗೆ ಹೆಚ್ಚಿನ ಸಮಯ ದೊರೆಯುವುದಿಲ್ಲ.

ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ಬಗ್ಗೆ ಆಧಾರಗಳಿಲ್ಲ. ಹಾಗೆಯೇ ಯಾವುದೇ ಲಸಿಕೆಗಳು ಸಹ ಲಭ್ಯವಿಲ್ಲ. ಆದರೆ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಿ, ರೋಗಿಗಳ ಪ್ರಾಣ ರಕ್ಷಣೆ ಮಾಡಿದ ಅಪರೂಪದ ಉದಾಹರಣೆಯಿದೆ. 1962ರಿಂದ ಈವರೆಗೆ 154 ಮಂದಿಗೆ ಅಮೆರಿಕದಲ್ಲಿ ಈ ಸೋಂಕು ತಗುಲಿದ್ದು, ಕೇವಲ ನಾಲ್ವರು ಬದುಕುಳಿದಿದ್ದಾರೆ.

ಇದನ್ನೂ ಓದಿ| Saffron benefits | ಆರೋಗ್ಯಕರ ಜೀವನಕ್ಕೆ ಬೇಕೇ ಬೇಕು ಕೇಸರಿಯ ರಂಗು!

Exit mobile version