Site icon Vistara News

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

Brain Tumour In Kids

ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ಎದುರಿಸುವವರು ಬಹಳಷ್ಟು ಆರೋಗ್ಯದ ಸಮಸ್ಯೆಗಳಿಗೂ ತುತ್ತಾಗುವಂತಾಗುತ್ತದೆ. ಹಲವಾರು ಪ್ರಕರಣಗಳಲ್ಲಿ ಶರೀರದ ಅಂಗಾಂಗಗಳ ಕ್ಷಮತೆಯೂ ಕುಸಿಯುವಂತಾಗುತ್ತದೆ. ಮಕ್ಕಳಲ್ಲಿ ಇಂಥ ಪ್ರಕರಣಗಳು ಎದುರಾದಾಗ, ವಯಸ್ಕರಲ್ಲಿ ಕಾಣುವ ಲಕ್ಷಣಗಳು ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೀತಿ ಭಿನ್ನವಾಗಿಯೇ ಇರುತ್ತದೆ. ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಕಾಣಿಸಿಕೊಂಡಿದೆ, ಗಡ್ಡೆ ಎಷ್ಟು ದೊಡ್ಡದಿದೆ ಮುಂತಾದವುಗಳ ಮೇಲೆ ಗೋಚರಿಸುವ ಲಕ್ಷಣಗಳು ವ್ಯತ್ಯಾಸವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದಕ್ಕೆ ಬೇಕಾಗಿ, ಒಂದಿಷ್ಟು (Brain Tumour In Kids) ವಿವರಗಳು ಇಲ್ಲಿವೆ.

ತಲೆನೋವು

ಇದರರ್ಥ ತಲೆ ನೋವು ಬಂದಾಗಲೆಲ್ಲ ಮೆದುಳಿನಲ್ಲಿ ಗಡ್ಡೆಯಿದೆ ಎಂದಲ್ಲ. ತಲೆನೋವು ತರಹೇವಾರಿ ಕಾರಣಗಳಿಗೆ ಬರಬಹುದು. ಆದರೆ ಟ್ಯೂಮರ್‌ ಇರುವಂಥ ಸಂದರ್ಭದಲ್ಲಿ ತಲೆನೋವಿಗೊಂದು ಪ್ರತ್ಯೇಕ ಸ್ವರೂಪವಿರುತ್ತದೆ. ಮೈಗ್ರೇನ್‌, ಆಸಿಡಿಟಿ ಮುಂತಾದ ಸಂದರ್ಭಗಳಲ್ಲಿ ಬರುವ ತಲೆನೋವಿಗಿಂತ ಇದು ಬೇರೆಯಾಗಿರುತ್ತದೆ. ಅಂದರೆ, ಬೆಳಗ್ಗೆ ಏಳುತ್ತಿದ್ದಂತೆ ತಲೆನೋವು ಪ್ರಾರಂಭವಾಗುವುದು, ರಾತ್ರಿ ಮಲಗಿದಾಗ ತಲೆನೋವು ಹೆಚ್ಚುವುದು- ಇಂಥ ಲಕ್ಷಣಗಳು ಗೋಚರಿಸಿದರೆ, ವೈದ್ಯರಲ್ಲಿ ಹೋಗಲೇಬೇಕು.

ದೃಷ್ಟಿ ಮಂದವಾಗುವುದು

ಹಲವು ರೀತಿಯ ಟ್ಯೂಮರ್‌ಗಳು ದೃಷ್ಟಿಯನ್ನು ಮಂದವಾಗಿಸುತ್ತವೆ. ಗೆಜೆಟ್‌ಗಳ ಭರಾಟೆಯಲ್ಲಿ ಮಕ್ಕಳ ದೃಷ್ಟಿ ಕ್ಷೀಣಿಸುವುದು ಅಸಹಜ ಅಲ್ಲ ಎನ್ನುವುದು ಹೌದಾದರೂ, ನೇತ್ರ ತಜ್ಞರಲ್ಲಿ ಸಮಾಲೋಚನೆ ಅಗತ್ಯವಿದೆ. ಬೆಳಕಿಗೆ ಕಣ್ಣು ಬಿಡಲಾಗದಿರುವುದು, ಯಾವುದನ್ನೂ ಕೇಂದ್ರೀಕರಿಸಲು ದೃಷ್ಟಿ ಸಹಕರಿಸದಿರುವುದು- ಇವೆಲ್ಲ ಟ್ಯೂಮರ್‌ನಿಂದಾಗಿ ದೃಷ್ಟಿ ನರದ ಮೇಲೆ ಬೀಳುತ್ತಿರುವ ಒತ್ತಡದ ಲಕ್ಷಣಗಳಾಗಿರಬಹುದು.

ವಾಂತಿ, ಹೊಟ್ಟೆ ತೊಳೆಸುವುದು

ಫ್ಲೂ ಮಾದರಿಯ ಲಕ್ಷಣಗಳ ಜೊತೆಗೆ ಅತೀವ ತಲೆನೋವಿದೆ ಎಂದರೆ- ಎಚ್ಚರ ಅಗತ್ಯ. ಸಿಕ್ಕಾಪಟ್ಟೆ ಹೊಟ್ಟೆ ತೊಳೆಸುವುದು, ವಾಂತಿ ಕಂಡುಬರಬಹುದು. ಮೆದುಳಿನ ಒಂದು ನಿಗದಿತ ಜಾಗದಲ್ಲಿ ಟ್ಯೂಮರ್‌ ಬೆಳೆದು ದೊಡ್ಡದಾಗುತ್ತಿದ್ದರೆ ಇಂಥ ಲಕ್ಷಣಗಳು ಕಾಣುವುದು ಸಾಮಾನ್ಯ.

ಕಿವಿ ಕೇಳದಿರುವುದು

ಅತಿಯಾಗಿ ಇಯರ್‌ಫೋನ್‌ ಬಳಕೆಯ ಪ್ರಭಾವ ಎಂದು ಭಾವಿಸಿ, ಕಿವಿ ಕೇಳದ ಸಮಸ್ಯೆಯನ್ನು ನಿರ್ಲಕ್ಷಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಶ್ರವಣ ನರಗಳ ಮೇಲಿನ ಅತೀವ ಒತ್ತಡದಿಂದ ತೀವ್ರ ಕಿವಿನೋವು, ಕಿವಿ ಕೇಳುವುದು ಕಡಿಮೆಯಾದಂತೆ ಅನಿಸುವುದು ಸಾಮಾನ್ಯ. ಒಳಗಿವಿಯಿಂದ ಮೆದುಳಿಗೆ ಸಂದೇಶ ರವಾನಿಸುವ ಈ ನರಗಳು ಶ್ರವಣ ಸಾಮರ್ಥ್ಯ ಸರಿಯಾಗಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂಥ ಸಂದರ್ಭದಲ್ಲೂ ಮೆದುಳಿನ ಟ್ಯೂಮರ್‌ ಇಲ್ಲ ಎಂಬುದನ್ನು ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳಬೇಕು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

ಅಪಸ್ಮಾರ

ಇದು ಸಹ ಅತ್ಯಂತ ಸಾಮಾನ್ಯವಾದ ಲಕ್ಷಣ. ಮೆದುಳಿನ ಟ್ಯೂಮರ್‌ ಇರುವವರಲ್ಲಿ ಶೇ. 40ರಷ್ಟು ಜನರಿಗೆ ಒಮ್ಮೆಯಾದರೂ ಅಪಸ್ಮಾರ ಕಾಣುವುದು ಸಹಜ ಎನ್ನುತ್ತಾರೆ ನರರೋಗ ತಜ್ಞರು. ಕೆಲವೊಮ್ಮೆ ಇದನ್ನು ಟ್ಯೂಮರ್‌ನ ಪ್ರಾಥಮಿಕ ಲಕ್ಷಣವೆಂದು ಗ್ರಹಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ನರರೋಗ ತಜ್ಞರಲ್ಲಿ ಸಮಾಲೋಚನೆ ಅಗತ್ಯ.
ಇಂಥ ಯಾವುದೇ ಸೂಚನೆಗಳು ಕಂಡುಬಂದಲ್ಲಿ ವೈದ್ಯರಲ್ಲಿ ತುರ್ತು ಸಮಾಲೋಚನೆ ಅಗತ್ಯ. ಇದಕ್ಕೆ ಹಲವಾರು ಸುತ್ತಿನ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಸ್ಕ್ಯಾನಿಂಗ್‌ನಿಂದ ಹಿಡಿದು ಬಯಾಪ್ಸಿಯವರೆಗೂ ಪರೀಕ್ಷೆಗಳ ಅಗತ್ಯ ಬರಬಹುದು. ಆದರೆ ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾದರೆ ಶರೀರಕ್ಕೆ ಹೆಚ್ಚಿನ ಹಾನಿಯಾಗದಂತೆ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚುತ್ತದೆ.

Exit mobile version